
ಗೇರುಕಟ್ಟೆ: ಕಳಿಯ ಗ್ರಾಮ ವ್ಯಾಪ್ತಿಯ ಪರಪ್ಪು, ಮುಳ್ಳಗುಡ್ಡೆ, ಬಟ್ಟೆ ಮಾರು, ಪೆಳತ್ತಳಿಕೆ, ಬೊಳ್ಳುಕಲ್ಲು, ಕಲ್ಕುರ್ಣಿ, ಎರುಕಡಪ್ಪು ಮುಂತಾದ ಪ್ರದೇಶಗಳಲ್ಲಿ ಮೇ. 2ರಂದು ಸುರಿದ ವಿಪರೀತ ಗಾಳಿ ಮಳೆಗೆ ಹಲವರ ಮನೆಗಳ ಮೇಲೆ ತೆಂಗಿನ ಮರ, ಅಡಿಕೆ ಮರ ಇತರ ಜಾತಿಯ ಮರಗಳು ಬಿದ್ದು ತುಂಬಾ ಹಾನಿಯಾಗಿದೆ. ಅಡಿಕೆ ಮರ ಬಿದ್ದು ಕೃಷಿಗೆ ಹಾನಿಯಾಗಿದೆ. ಹಲವು ಕಡೆ ರಸ್ತೆಗಳ ಮೇಲೆ ಮರ ಮತ್ತು ವಿದ್ಯುತ್ ಕಂಬಗಳು ಬಿದ್ದು ಸಂಪರ್ಕ ಕಡಿತಗೊಂಡಿತ್ತು. ಸುಮಾರು ಕಡೆಗಳಲ್ಲಿ ವಿದ್ಯುತ್ ಕಂಬಗಳು ತುಂಡಾಗಿ ಮನೆಗಳ ಮೇಲೆ ಮತ್ತು ರಸ್ತೆಗೆ ಬಿದ್ದು ಹಾನಿಯಾಗಿದೆ.

ಸ್ಥಳೀಯ ಯುವಕರು ಜಾತಿ ಮತ ಬೇಧ ಮರೆತು ಒಗ್ಗಟ್ಟಿನಲ್ಲಿ ರಸ್ತೆಗಳ ಮೇಲೆ ಬಿದ್ದ ಮರ ಮತ್ತು ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾದರು. ಮಾಹಿತಿ ತಿಳಿದ ಕೂಡಲೇ ಸ್ಥಳೀಯ ಪಂಚಾಯತ್ ಸದಸ್ಯ ಅಬ್ದುಲ್ ಕರೀಮ್ ಹಾನಿಯಾದ ಎಲ್ಲಾ ಪ್ರದೇಶಗಳಿಗೆ ಭೇಟಿ ನೀಡಿ ಕಂದಾಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಮೆಸ್ಕಾಂ ಅಭಿಯಂತರರನ್ನು ಸಂಪರ್ಕಿಸಿ ಹಾನಿಯಾಗಿ ಮನೆ ಮತ್ತು ರಸ್ತೆ ಮೇಲೆ ಬಿದ್ದ ವಿದ್ಯುತ್ ಕಂಬಗಳನ್ನು ತಕ್ಷಣ ತೆರವುಗೊಳಿಸಿ ಸರಿಪಡಿಸುವಂತೆ ತಿಳಿಸಿದರು. ಪಂಚಾಯತ್ ಕಾರ್ಯದರ್ಶಿ ಕುಂಙ ಕೆ., ಸಿಬ್ಬಂದಿ ರವಿ ಹೆಚ್., ಮಾಜಿ ಗ್ರಾಮ ಪಂಚಾಯತ್ ಸದಸ್ಯ ಪ್ರದೀಪ್, ಶ್ರೀನಿವಾಸ್ ಬೆರ್ಕೆತ್ತೋಡಿ ಮತ್ತು ಸ್ಥಳೀಯರು ಭೇಟಿ ನೀಡಿದರು.