ಬಳಂಜ: ದ.ಕ.ಜಿ.ಪಂ. ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವ ಕಾರ್ಯಕ್ರಮವು ಡಿಸೆಂಬರ್ ತಿಂಗಳಲ್ಲಿ ನಡೆಯಲಿದ್ದು ಶಾಲೆಗೆ 75 ವರ್ಷ ತುಂಬುವ ಸವಿ ನೆನಪಿಗಾಗಿ ಇದೇ ಶಾಲೆಯಲ್ಲಿ ಕಲಿತು ಇಂದು ಯುವ ಉದ್ಯಮಿಯಾಗಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಕೊಡುಗೈ ದಾನಿ ಅಶ್ವಥ್ ಹೆಗ್ಡೆ ಬಳಂಜ ಅವರು ಸುಮಾರು 15 ಲಕ್ಷ ರೂಪಾಯಿ ವೆಚ್ಚದಲ್ಲಿ ಪ್ರಾಥಮಿಕ ಶಾಲೆ ಮತ್ತು ಪ್ರೌಢ ಶಾಲೆಯ ಎಲ್ಲಾ ಕೊಠಡಿಗಳಿಗೆ ಟೈಲ್ಸ್ ಅಳವಡಿಕೆ ಮತ್ತು ಶಾಲಾ ಆವರಣಕ್ಕೆಇಂಟರ್ ಲಾಕ್ ಅಳವಡಿಸಿಕೊಟ್ಟಿದ್ದು ಊರಿನ ಎಲ್ಲಾ ವಿದ್ಯಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
ಇಡೀ ಶಾಲೆಗೆ ಟೈಲ್ಸ್ ಮತ್ತು ಶಾಲಾ ಮುಂಭಾಗದಲ್ಲಿ ಇಂಟರ್ ಲಾಕ್ ಅಳವಡಿಸಿಕೊಟ್ಟ ನಮ್ಮೂರಿನ ಹೆಮ್ಮೆಯ ಯುವ ಉದ್ಯಮಿಗಳು, ಕೊಡುಗೈ ದಾನಿಗಳು ಆಗಿರುವ ಅಶ್ವಥ್ ಹೆಗ್ಡೆಯವರ ಅದ್ಬುತ ಸೇವೆ ಇಡೀ ಊರಿಗೆ ಮಾದರಿ ಕಾರ್ಯಕ್ರಮ. ಅಶ್ವಥ್ ಹೆಗ್ಡೆಯವರ ಸಹಕಾರದಿಂದಾಗಿ ಅಮೃತ ಮಹೋತ್ಸವ ಸಂಭ್ರಮದಲ್ಲಿರುವ ಬಳಂಜ ಶಾಲೆಯು ಸುಂದರವಾಗಿ ಕಂಗೊಳಿಸುತ್ತಿದೆ. ಸರಕಾರಕ್ಕೂ ಮಾಡಲಾಗದ ಕೆಲಸವನ್ನು ಇದೇ ಶಾಲೆಯಲ್ಲಿ ಕಲಿತು ಇಂದು ಜಾಗತಿಕ ಮಟ್ಟದಲ್ಲಿ ಉದ್ಯಮಿಯಾಗಿ ಬೆಳೆಯುತ್ತಿರುವ ಅಶ್ವಥ್ ಹೆಗ್ಡೆಯವರು15 ಲಕ್ಷಕ್ಕೂ ಹೆಚ್ಚು ಹಣವನ್ನು ಭರಿಸಿ ಮಾಡಿ ತೋರಿಸಿದ್ದಾರೆ ಅಂದರೆ ಎಲ್ಲರೂ ಹೆಮ್ಮೆ ಪಡಬೇಕು.
ರಾಜ್ಯ ಮಟ್ಟದಲ್ಲಿ ಹೆಸರನ್ನು ಪಡೆದಿರುವ ಶ್ರೀ ಉಮಾಮಹೇಶ್ವರ ಯುವಕ ಮಂಡಲದ ಕಟ್ಟಡ ದುರಸ್ತಿಯನ್ನು ಸಹ ಮಾಡಿಸುತ್ತಿದ್ದಾರೆ. ಈಗಾಗಲೇ ಹಲವು ಜನರ ಪ್ರಯತ್ನದಿಂದಾಗಿ ಶಾಲೆಗೆ ಬೇರೆ ಬೇರೆ ರೀತಿಯ ಕೊಡುಗೆ ಮತ್ತು ಮೂಲಭೂತ ಸೌಲಭ್ಯಗಳು ಸಿಕ್ಕಿರುವುದನ್ನು ನಾವು ಮರೆಯುವಂತಿಲ್ಲ. ಸಮಾಜ ಸೇವಕ ಹರೀಶ್ ವೈ. ಚಂದ್ರಮ ಅವರ ನೇತೃತ್ವದ ಹಳೆ ವಿದ್ಯಾರ್ಥಿ ಸಂಘ, ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಪಿ.ಕೆ., ಕಾರ್ಯಾಧ್ಯಕ್ಷ ಸುರೇಶ್ ಶೆಟ್ಟಿ ಕುರೆಲ್ಯ ಅವರ ನೇತೃತ್ವದ ಸಮಿತಿ ಹಾಗೂ ಶಾಲಾ ಮೇಲುಸ್ತುವಾರಿ ಸಮಿತಿ ಮತ್ತು ಊರ ವಿದ್ಯಾಭಿಮಾನಿಗಳ ಸಹಕಾರದಿಂದ ಶಾಲೆಯ ಅಮೃತ ಮಹೋತ್ಸವವನ್ನು ಅದ್ಭುತ ರೀತಿಯಲ್ಲಿ ಆಚರಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಮನೋಹರ್ ಬಳಂಜ ಅವರ ಅಧ್ಯಕ್ಷತೆಯ ಬಳಂಜ ಶಿಕ್ಷಣ ಟ್ರಸ್ಟ್ ಮೂಲಕ ಉತ್ತಮ ರೀತಿಯಲ್ಲಿ ಇಂಗ್ಲಿಷ್ ಮಾಧ್ಯಮ ಶಾಲೆ ನಡೆಯುತ್ತಿದ್ದು, ಸರಕಾರವೂ ಈ ವರ್ಷ ಟ್ರಸ್ಟ್ ನವರ ಪ್ರಯತ್ನದ ಫಲವಾಗಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ಮಂಜೂರು ಮಾಡಿದ್ದು ನಮ್ಮೂರಿನ ಮುಂದಿನ ಭವಿಷ್ಯದ ವಿದ್ಯಾರ್ಥಿಗಳ ಸುಯೋಗ. ಇದಕ್ಕೆಲ್ಲಾ ಪೂರಕ ಎಂಬಂತೆ ಅಶ್ವಥ್ ಹೆಗ್ಡೆಯವರು ದೊಡ್ಡ ಮೊತ್ತದ ಹಣವನ್ನು ವಿನಿಯೋಗಿಸಿ ಶಾಲೆಯನ್ನು ಎಲ್ಲರೂ ಕಣ್ಣೆತ್ತಿ ನೋಡುವಂತೆ ಮಾಡಿದ್ದು ಮಾತ್ರವಲ್ಲದೆ ಬಳಂಜ ದೇವಸ್ಥಾನದ ಅಭಿವೃದ್ಧಿ ಕೆಲಸಗಳಿಗೂ ಕೈ ಜೋಡಿಸಿದ್ದು, ತಾಲೂಕಿನ ಹಲವಾರು ಮಂದಿ ಬಡ, ಅಶಕ್ತ ಕುಟುಂಬಗಳ ಅನಾರೋಗ್ಯ, ಮನೆ ನಿರ್ಮಾಣ ಮುಂತಾದ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸಿ ಆರ್ಥಿಕ ನೆರವನ್ನು ನೀಡಿದ್ದಾರೆ.