
ಧರ್ಮಸ್ಥಳ: ನಾವೆಲ್ಲ ಸುಖವನ್ನು, ಶಾಂತಿಯನ್ನು ಪಡೆಯಬೇಕಾದರೆ ಧರ್ಮವನ್ನು ಅನುಸರಿಸಬೇಕಾಗುತ್ತದೆ. ಸುಖಸ್ಯಂ ಮೂಲಂ ಧರ್ಮ ಎಂಬಂತೆ ಹಿಂದೆ ರುಷಿ ಮುನಿಗಳು ಸಮಾಜದಲ್ಲಿ ಎಲ್ಲರೂ ಸುಖ ನೆಮ್ಮದಿ ಕಾಣಬೇಕೆಂದು ಹಲವಾರು ದೇವಾಲಯವನ್ನು ನಿರ್ಮಿಸಿ ಧರ್ಮವನ್ನು ಉಳಿಸುವ ಕಾಯಕ ಮಾಡಿದ್ದಾರೆ. ಈ ಪರಂಪರೆಯನ್ನು ನಾವೆಲ್ಲರೂ ಉಳಿಕೊಳ್ಳುವ ಪಯತ್ನ ಮಾಡಬೇಕಾಗಿ ಎಂದು ಶ್ರೀರಾಮ ಕ್ಷೇತ್ರ ಮಹಾ ಸಂಸ್ಥಾನದ ಮಠಾಧೀಶರು 1008 ಮಹಾ ಮಂಡಲೇಶ್ವರ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ನುಡಿದರು.

ಅವರು ಭಟ್ಕಳದ ತಲಗೋಡಿನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ನೂತನ ಗರ್ಭಗುಡಿಯ ಶಿಲಾನ್ಯಾಸ ನೆರವೇರಿಸಿ ಆಶೀರ್ವಚನ ನೀಡಿದರು. ನಾವೆಲ್ಲರೂ ಆಧ್ಯಾತ್ಮಿಕತೆ ಧಾರ್ಮಿಕತೆಯನ್ನು ಮೈಗೂಡಿಸಿಕೊಳ್ಳಲು ಸಮಾಜದಲ್ಲಿ ದೇವಾಲಯವನ್ನು ನಿರ್ಮಿಸಬೇಕಾಗಿದೆ. ಭಗವಂತನಲ್ಲಿ ನಾವೆಲ್ಲರೂ ಪೂರ್ತಿ ಶರಣಾದರೆ ದೇವಾಲಯಗಳೂ ತನ್ನಿಂದ ತಾನೆ ನಿರ್ಮಾಣಗೊಳ್ಳುತ್ತದೆ. ಭಕ್ತರಿಂದಲೇ ಭಗವಂತನು ನಿರ್ಮಿಸಿಕೊಳ್ಳುತ್ತಾರೆ. ಅದಕ್ಕೆ ಕಾಲ ಕೂಡಿ ಬರಬೇಕು ಎಂದರು. ಅತಿ ಶೀಘ್ರದಲ್ಲೇ ದೇವಾಲಯ ನಿರ್ಮಾಣ ಆಗಲಿದ್ದು ಇದಕ್ಕೆ ಎಲ್ಲ ಸಧ್ಬಕ್ತರು ತಮ್ಮನ್ನು ತಾವು ಈ ಪುಣ್ಯ ಕಾರ್ಯದಲ್ಲಿ ತೊಡಗಿಸಿ ಕೊಳ್ಳಬೇಕು ಎಂದು ಸ್ವಾಮೀಜಿ ಹೇಳಿದರು.
ಕರ್ನಾಟಕ ಸರಕಾರದ ಮೀನುಗಾರಿಕೆ, ಬಂದರು ಸಚಿವ ಮಂಕಾಳ ಎಸ್. ವೈದ್ಯ ಮಾತನಾಡಿ ಈ ಭಾಗದದಲ್ಲಿ ನಾನು ಹಲವಾರು ಬಾರಿ ಬಂದಿದ್ದೇನೆ. ಇಲ್ಲಿನ ಶಕ್ತಿ ದೇವತೆಯ ಆಶೀರ್ವಾದದಿಂದ ನನಗೆ ರಾಜಕೀಯವಾಗಿ ಏಳಿಗೆ ಕಂಡಿದ್ದೇನೆ. ಈ ದೇವಸ್ಥಾನದ ನಿರ್ಮಾಣ ಅತೀ ಶೀಘ್ರದಲ್ಲಿ ಆಗಲಿದೆ ಎಂದರು.
ಮಾಜಿ ಶಾಸಕ ಸುನೀಲ್ ನಾಯ್ಕ ಮಾತನಾಡಿ ಈ ಕ್ಷೇತ್ರದ ದೇವಿಯ ಶಕ್ತಿಯು ಅಪಾರವಾದದ್ದು ಈ ಪುಣ್ಯ ಕ್ಷೇತ್ರವನ್ನು ಅಭಿವೃದ್ದಿ ಮಾಡಬೇಕೆಂದು ಈ ಭಾಗದ ಹಿರಿಯರು ಹಲವು ವರ್ಷಗಳ ಹಿಂದೆಯೇ ಚಿಂತನೆ ನಡೆಸಿದ್ದರು. ಅದಕ್ಕೆ ಈಗ ಕಾಲ ಕೂಡಿಬಂದಿದೆ ಎಂದರು. ದೇವಸ್ಥಾನದ ಅಭಿವೃದ್ದಿ ಸಮಿತಿಯ ಟ್ರಸ್ಟಿ ತಿಮ್ಮಯ್ಯ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಕರಿಯಪ್ಪ ನಾಯ್ಕ ವಹಿಸಿದ್ದರು. ವೇದಿಕೆಯಲ್ಲಿ ದೇವಸ್ಥಾನಕ್ಕೆ ಜಾಗ ನೀಡಿದ ಕುಟುಂಬದವರನ್ನು, ಅರ್ಚಕರನ್ನು ಹಾಗೂ ಶಿಲ್ಪಿಗಳನ್ನು ತಾಂಬೂಲ ನೀಡಿ ಗೌರವಿಸಲಾಯಿತು. ಸಭಾ ಕಾರ್ಯಕ್ರಮಕ್ಕೂ ಮೊದಲು ಶ್ರೀಗಳಿಗೆ ದೇವಸ್ಥಾನದ ಆಡಳಿತ ಮಂಡಳೀಯ ವತಿಯಿಂದ ಪಾದಪೂಜೆ ನೆರವೇರಿಸಲಾಯಿತು. ವಿಠಲ ನಾಯ್ಕ ಸ್ವಾಗತಿಸಿ ಕೆ.ಆರ್.ನಾಯ್ಕ ವಂದಿಸಿದರು.