ಮಡಂತ್ಯಾರು ವಲಯ ಬಂಟರ ಸಂಘದ ವತಿಯಿಂದ ಮನೆ ದುರಸ್ತಿ

0

ಮಡಂತ್ಯಾರು: ಕಳೆದ ಫೆಬ್ರವರಿ ತಿಂಗಳಲ್ಲಿ ಬೀಸಿದ ಅನಿರೀಕ್ಷಿತ ಗಾಳಿ ಮಳೆಗೆ ನಮ್ಮ ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಕೆಲವು ಮನೆಗಳಿಗೆ ಹಾನಿಯಾಗಿತ್ತು. ಈ ಪೈಕಿ ಒಂದು ಮನೆ ಬಂಟ ಮಹಿಳೆಗೆ ಸೇರಿದೆ ಎಂಬ ವಿಚಾರವನ್ನು ತಿಳಿದು, ಪಡಂಗಡಿ ಗ್ರಾಮ ಸಮಿತಿಯ ಅಧ್ಯಕ್ಷ ದಿವಾಕರ ಶೆಟ್ಟಿ ಹಂಕರಜಾಲ್, ಮಡಂತ್ಯಾರ್ ವಲಯ ಅಧ್ಯಕ್ಷ ದಿವಾಕರ ಶೆಟ್ಟಿ ಕಂಗ್ಗಿತ್ತಿಲು, ವಲಯದ ಕಾರ್ಯದರ್ಶಿ ಹರ್ಷ ನಾರಾಯಣ ಶೆಟ್ಟಿ, ನೆತ್ತರ ಹಾಗೂ ಕೆಲವು ಬಂಟ ಯುವಕರೊಂದಿಗೆ ಅನಾಹುತ ನಡೆದ ಸ್ಥಳಕ್ಕೆ ಬಂಟರ ಸಂಘ ಬೆಳ್ತಂಗಡಿ ಅಧ್ಯಕ್ಷ ಬಿ. ಜಯಂತ ಶೆಟ್ಟಿ ಭೇಟಿ ನೀಡಿದ್ದರು.

ನಾವು ಯಾರೂ ಊಹಿಸಲಾಗದ ಸ್ಥಿತಿಯಲ್ಲಿ ಓರ್ವ ಬಂಟ ಮಹಿಳೆ ಬದುಕುತ್ತಿರುವ ಆಘಾತಕಾರಿ ವಿಚಾರ ತಿಳಿದು ಬಂತು. ಪಡಂಗಡಿ ಗ್ರಾಮದ ಒಂದು ಗುಡ್ಡದ ತುದಿಯಲ್ಲಿ ಸರಕಾರ ನೀಡಿರುವ 94 ಸಿ ಸ್ಥಳದಲ್ಲಿ, ಅಡುಗೆ ಕೋಣೆ ಇಲ್ಲದ, ಶೌಚಾಲಯವಿಲ್ಲದ, ಗ್ಯಾಸ್ ಕನೆಕ್ಷನ್ ಇಲ್ಲದ, ಗೋಡೆಗಳಿಗೆ ಸಾರಣೆ ಕಾಣದ ಸಿಮೆಂಟ್ ಸೀಟು ಹಾಕಿದ ಶೆಡ್ಡಿನಲ್ಲಿ ಕಳೆದ 9 ವರ್ಷಗಳಿಂದ ಸೇಸಮ್ಮ ಶೆಟ್ಟಿ ಎಂಬ ಒಂಟಿ ಮಹಿಳೆ ವಾಸಿಸುತ್ತಿದ್ದರು. ಈ ಶೆಡ್ಡಿನ ಸಿಮೆಂಟ್ ಶೀಟ್ ಗಳು ಸಂಪೂರ್ಣವಾಗಿ ಗಾಳಿಗೆ ಹಾರಿ ಹೋಗಿ ಸೇಸಮ್ಮ ಶೆಟ್ಟಿಯವರು ಅಂಗಳದಲ್ಲಿ ನಿಲ್ಲುವಂತಾಗಿತ್ತು. ಸೇಸಮ್ಮ ಶೆಟ್ಟಿ ಅವರ ಸಮಸ್ಯೆಗೆ ಸ್ಪಂದಿಸಿದ ಮಡಂತ್ಯಾರ್ ವಲಯ ಬಂಟರ ಸಂಘದವರು ಮನೆ ದುರಸ್ತಿ ಕಾಮಗಾರಿಯನ್ನು ಕೈಗೆತ್ತಿಕೊಂಡರು. ಕೇವಲ 45 ದಿನಗಳ ಅವಧಿಯೊಳಗೆ, ಅಡುಗೆ ಕೋಣೆ, ಗ್ಯಾಸ್ ಕನೆಕ್ಷನ್, ಶೌಚಾಲಯ, ಟೈಲ್ಸ್ ಹಾಕಿದ ನೆಲ, ಇತ್ಯಾದಿ ಸೌಕರ್ಯಗಳನ್ನು ಒಳಗೊಂಡ, ಸುಣ್ಣ ಬಣ್ಣ ಬಳಿದ ಚಿಕ್ಕದಾದ ಸುಂದರ ಮನೆಯೊಂದನ್ನು ನಿರ್ಮಿಸಿಕೊಟ್ಟರು. ಮಾತ್ರವಲ್ಲದೆ ಎ. 23ರಂದು ಗೃಹಪ್ರವೇಶ ಕಾರ್ಯಕ್ರಮವನ್ನೂ ನಡೆಸಿಕೊಟ್ಟು ಸಂಭ್ರಮಿಸಿದರು.

ಈ ಮನೆ ದುರಸ್ತಿ ಕಾರ್ಯಕ್ಕಾಗಿ ರೂ. 96,500 /- ವೆಚ್ಚ ತಗಲಿದ್ದು, ಈ ಪೈಕಿ ರೂಪಾಯಿ 26,000/- ವನ್ನು ದಿವ್ಯ ಶೆಟ್ಟಿ, ಗುಜೊಟ್ಟು ಇವರ ಅಧ್ಯಕ್ಷತೆಯ ವಲಯ ಬಂಟರ ಮಹಿಳಾ ಘಟಕದವರು ಸಂಗ್ರಹಿಸಿ ಕೊಟ್ಟು ಸಹಕರಿಸಿದರು. ಮಡಂತ್ಯಾರ್ ವಲಯ ಬಂಟರ ಈ ಮಾದರಿ ಕಾರ್ಯಕ್ರಮಕ್ಕೆ ಬಂಟರ ಸಂಘ ಬೆಳ್ತಂಗಡಿ ಅಧ್ಯಕ್ಷ ಬಿ. ಜಯಂತ ಶೆಟ್ಟಿ ಅಭಿನಂದನೆ ಸಲ್ಲಿಸಿದರು.

LEAVE A REPLY

Please enter your comment!
Please enter your name here