

ಧರ್ಮಸ್ಥಳ: ನಾವೆಲ್ಲಾ ಶ್ರೀ ಕ್ಷೇತ್ರ ಧರ್ಮಸ್ಥಳದ ಜೊತೆ ಇದ್ದೀವಿ. ಅದಕ್ಕೋಸ್ಕರ ನಾವು ಮಾ. 27ರಂದು ನೇತ್ರಾವತಿ ಸ್ನಾನಘಟ್ಟದ ಮೈದಾನದಲ್ಲಿ ಸಮಾವೇಶ ನಡೆಸುತ್ತಿದ್ದೇವೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಕೇಶವ ಬೆಳಾಲು ಹೇಳಿದರು.
ಧರ್ಮಸ್ಥಳದ ಪಾರಿಜಾತ ಹೋಟೆಲ್ ನಲ್ಲಿ ಪತ್ತಿಕಾ ಗೋಷ್ಠಿ ನಡೆಸಿದ ಧರ್ಮಸ್ಥಳ ಹಿತರಕ್ಷಣಾ ವೇದಿಕೆ ” ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧವಾಗಿ 2012 ರಲ್ಲಿ ವ್ಯವಸ್ಥಿತ ಸಂಚು ರೂಪುಗೊಂಡಿದ್ದು 2013ರಲ್ಲಿ ಇದು ಅತಿರೇಕಕ್ಕೆ ಮುಟ್ಟಿ ಕ್ಷೇತ್ರದ ಹೆಸರನ್ನು ಹಾಳು ಮಾಡುವ ನಿಟ್ಟಿನಲ್ಲಿ ಹಾಗೂ ಹೋರಾಟದ ನೆಪವನ್ನು ಒಡ್ಡಿ ಹಣ ಸಂಪಾದಿಸಲು ಒಂದು ಸಮಿತಿ ರಚನೆಯಾಗಿ ಮಾಧ್ಯಮ ಹಾಗೂ ಸಾರ್ವಜನಿಕ ಸಭೆಯನ್ನು ದುರುಪಯೋಗಪಡಿಸುತ್ತಾ ಕೆಲಸವನ್ನು ಪ್ರಾರಂಭಿಸಿದೆ. ಕ್ರಮೇಣವಾಗಿ ಈ ಒಂದು ಹುನ್ನಾರಕ್ಕೆ ಕೆಲವೊಂದು ಹಿತಾಶಕ್ತಿಗಳು ಕೈ ಜೋಡಿಸಿ ದೇಶ-ವಿದೇಶಗಳಿಂದ ಹಣ ಕ್ರೋಢೀಕರಿಸುವ ಸಂಚು ನಡೆದಿದೆ. ಕೆಲವೊಂದು ದುಷ್ಟ ಶಕ್ತಿಗಳು ಇದರ ಹಿಂದೆ ಪೂಜ್ಯ ಹೆಗ್ಗಡೆಯವರ ಚಾರಿತ್ರ್ಯ ಹರಣ ಮಾಡುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದೆ. ಈಗಾಗಲೇ ಈ ವಿಚಾರದ ಬಗ್ಗೆ ಅತೀ ಉದ್ದವಾದ 2 ಕಂತುಗಳು ಮುಗಿದಿದ್ದು ಇದೀಗ 3ನೇ ಕಂತಿನ ಹಾರಾಟವು ಪ್ರಾರಂಭವಾಗಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವೀಡಿಯೋಗಳನ್ನು ಗಮನಿಸಿದರೆ ಈ ಸಂಚಿನ ಹಿಂದಿರುವ ದುರುದ್ದೇಶವೇನೆಂಬುದು ಅರ್ಥವಾಗುತ್ತಿದೆ.
ಕ್ಷೇತ್ರದ ಹೆಸರು ಕೆಡಿಸುವ ಈ ಸಂಚಿನ ವೀಡಿಯೋದಲ್ಲಿ ಕೋಟಿಗಟ್ಟಲೆ ಸಂಪಾದಿಸುವ ಉದ್ದೇಶವಿದೆ. ಈ ತನಕ ನಮ್ಮ ಧರ್ಮಸ್ಥಳ ಗ್ರಾಮಸ್ಥರು ಸುಮ್ಮನಿದ್ದಾರೆಂದು ಭಾವಿಸಿ ಈ ದುಷ್ಟ ಶಕ್ತಿಗಳು ಮುಂದೆ ಹೆಜ್ಜೆ ಇಡುತ್ತಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ ಅಂದರೆ ಅದು ಒಂದು ದೇವಸ್ಥಾನ ಮಾತ್ರವಲ್ಲ ಅದು ನಮ್ಮ ಅಸ್ಮಿತೆ, ನಮ್ಮ ನಂಬಿಕೆ, ನಮ್ಮ ಶ್ರದ್ದೆ. ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಈ ಷಡ್ಯಂತ್ರ ಕೇವಲ ಒಂದು ದೇವಸ್ಥಾನದ ವಿರುದ್ಧದ ಷಡ್ಯಂತ್ರ ಎಂದು ನಾವು ಭಾವಿಸುವುದಿಲ್ಲ. ಬದಲಾಗಿ ಒಂದು ಇಡೀ ಸಂಸ್ಕೃತಿಯ ಮೇಲಿನ ಅಪಚಾರ, ಒಂದು ಪರಂಪರೆಯ ಮೇಲಿನ ದಾಳಿ, ಒಂದು ಸಮಾಜಮುಖಿ ಕಾರ್ಯಗಳ ವಿರುದ್ಧದ ಅಡ್ಡಿಯೆಂದು ಭಾವಿಸುತ್ತೇವೆ. ಕ್ಷೇತ್ರಕ್ಕೆ ಆಗುತ್ತಿರುವ ಅಪಚಾರ ಇಡೀ ಊರಿನ ಜನರ ಮನಸ್ಸನ್ನು ಘಾಸಿಗೊಳಿಸಿದ್ದು ತಡೆದುಕೊಳ್ಳಲು ಅಸಾಧ್ಯವಾಗುತ್ತದೆ. ಜೊತೆಗೆ ದೇವಸ್ಥಾನದ ವಿಷಯದಲ್ಲಿ 2 ಸಮುದಾಯಗಳ ಮಧ್ಯೆ ಕಂದಕವನ್ನು ನಿರ್ಮಿಸುತ್ತಿರುವುದು ಭವಿಷ್ಯದಲ್ಲಿ ತುಂಬಾ ಅಪಾಯಕಾಗಿಯಾಗಿ ಪರಿಗಣಿಸುತ್ತಿದೆ ಎಂದು ನಾವು ಮನಗಂಡಿದ್ದೇವೆ. ಹಾಗಾಗಿ ಇದೆಲ್ಲದಕ್ಕೂ ಕಡಿವಾಣ ಹಾಕಲು ನಾವು ಕಟೀಬದ್ಧರಾಗಿದ್ದೇವೆ. ನಮ್ಮ ತಾಳ್ಮೆಯ ಮಿತಿ ಮೀರಿರುವ ಕಾರಣ ಇದನ್ನು ಮುಂದುವರೆಸಲು ಬಿಡುವುದಿಲ್ಲ ಎಂಬುದನ್ನು ತಿಳಿಯಪಡಿಸಲು ಮಾ. 27ರ ಗುರುವಾರದಂದು ಧರ್ಮಸ್ಥಳ ಗ್ರಾಮಸ್ಥರೆಲ್ಲರೂ ಸೇರಿ ಧರ್ಮಸ್ಥಳ ಗ್ರಾಮ ಹಿತರಕ್ಷಣಾ ವೇದಿಕೆಯ ಮುಖಾಂತರ ಶ್ರೀ ಮಂಜುನಾಥ ಸ್ವಾಮಿ ಮತ್ತು ಶ್ರೀ ಧರ್ಮ ದೇವತೆಗಳ ಆಶೀರ್ವಾದವನ್ನು ಪಡೆದು ಶ್ರೀ ಅಣ್ಣಪ್ಪ ಸ್ವಾಮಿಯ ಬೆಟ್ಟದ ಬುಡದಲ್ಲಿ ಎಲ್ಲರೂ ಸೇರಿ ಶ್ರೀ ಅಣ್ಣಪ್ಪ ಸ್ವಾಮಿಯಲ್ಲಿ ಪ್ರಾರ್ಥನೆ ಮಾಡಿ ಅಲ್ಲಿಂದ ನೇತ್ರಾವತಿ ಸ್ನಾನಘಟ್ಟದ ಬಳಿ ಇರುವ ಮೈದಾನಕ್ಕೆ ಪಾದಯಾತ್ರೆಯನ್ನು ಕೈಗೊಂಡಿದ್ದೇವೆ. ತದ ನಂತರ ನಮ್ಮ ಸಮಾವೇಶ 10 ಗಂಟೆಯಿಂದ ನಡೆಯಲಿದ್ದು, ಈ ಸಮಯದಲ್ಲಿ ಎಲ್ಲಾ ಅಭಿಮಾನಿಗಳು, ಕ್ಷೇತ್ರದ ಭಕ್ತರು ಭಾಗವಹಿಸುವುದರೊಂದಿಗೆ ಊರ ಪರವೂರ ಭಕ್ತರು, ಕ್ಷೇತ್ರದ ಅಭಿಮಾನಿಗಳು, ಫಲಾನುಭವಿಗಳು ಕೂಡಾ ಭಾಗವಹಿಸಬೇಕೆಂಬುದಾಗಿ ವಿನಂತಿ ಮಾಡಿದೆ.
ಮಾತು ಮುಂದುವರೆಸಿದ ಕೇಶವ ಗೌಡ ಅವರು,”ಕಳೆದ ಕೆಲ ದಿನಗಳಿಂದ ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಯೂಟ್ಯೂಬ್, ಫೇಸ್‌ಬುಕ್ ಸಹಿತ ಸಾಮಾಜಿಕ ಜಾಲತಾಣಗಳಲ್ಲಿ, ತೀರಾ ಅವಹೇಳನಕಾರಿಯಾದ ಆಧಾರರಹಿತ ಮಾಹಿತಿಗಳು (ಪೋಸ್ಟ್) ಹರಿದಾಡುತ್ತಿದೆ. ಇದರಿಂದ ನಮ್ಮ ಗ್ರಾಮದ ಘನತೆಗೆ ಹಾನಿಯಾಗಿದೆ. ಇಲ್ಲಿ ಮುಖ್ಯವಾಗಿ ಸೌಜನ್ಯಾ ಪ್ರಕರಣ ಮುಂದಿರಿಸಿ, ಕ್ಷೇತ್ರದ ತೇಜೋವಧೆ ಮಾಡಲಾಗುತ್ತಿದೆ. ನಾವು ಮತ್ತೆ ಮತ್ತೆ ಹೇಳ್ತಿವೆ; ‘ಸೌಜನ್ಯಾ ಪ್ರಕರಣಕ್ಕೂ ಕ್ಷೇತ್ರಕೂ ಯಾವುದೇ ಸಂಬಂಧವಿಲ್ಲ, ವಿನಾಕಾರಣ ಪೂರ್ವಾಗ್ರಹಪೀಡಿತರಾಗಿ ಕೆಲ ಸ್ಥಾಪಿತ ಹಿತಾಸಕ್ತಿಗಳು ಸೌಜನ್ಯಾ ಪ್ರಕರಣದಲ್ಲಿ ಕ್ಷೇತ್ರದ ತೇಜೋವಧೆ ಮಾಡುತ್ತಿದ್ದಾರೆ. ಇವರ ಈ ಕುಕೃತ್ತು ಧರ್ಮಸ್ಥಳ ಗ್ರಾಮದವರಾದ ನಮಗೂ ಮುಜುಗರ ತರುವಂತೆ ಮಾಡಿದೆ. ಸೌಜನ್ಯಾ ಪ್ರಕರಣದ ನಿಷ್ಪಕ್ಷಪಾತ ತನಿಖೆಗೆ ನಾವು ಧರ್ಮಸ್ಥಳ ಗ್ರಾಮದ ನಿವಾಸಿಗರು ಆರಂಭದಿಂದಲೂ ಆಗ್ರಹಿಸುತ್ತಾ ಬಂದಿದ್ದೇವೆ; ಆದರೆ ಇದೇ ವಿಚಾರವನ್ನು ಮುಂದಿಟ್ಟು ಸಂವಿಧಾನಬಾಹಿರವಾಗಿ ಕ್ಷೇತ್ರದ ತೇಜೋವಧೆ ಮಾಡುವುದನ್ನು ನಾವು ಧರ್ಮಸ್ಥಳ ಗ್ರಾಮಸ್ಥರು ಉಗ್ರವಾಗಿ ಖಂಡಿಸುತ್ತೇವೆ.
ಸಾಮಾಜಿಕ ಜಾಲತಾಣಗಳಲಿ, ಕ್ಷೇತ್ರದ ಬಗ್ಗೆ ಆಗುತ್ತಿರುವ ಅಪಪ್ರಚಾರಗಳಿಂದ ನಾವು ಧರ್ಮಸ್ಥಳ ಗ್ರಾಮಸ್ಥರು ಎಲ್ಲಿ ಹೋದರೂ ಮುಜುಗರದ ಸನ್ನಿವೇಶ ಎದುರಿಸುವಂತಾಗಿದೆ. ಒಂದು ಸುಳ್ಳನ್ನು ನೂರು ಬಾರಿ ಹೇಳಿದಾಗ ಸತ್ಯ ಎಂಬುದು ಸುಳ್ಳಿನ ಬಲೆಗೆ ಸಿಲುಕಿ ಸುಳ್ಳೇ ಸತ್ಯವಾಗಿ ಕಾಣುವ ಅಪಾಯವಿದೆ. ಅದಕ್ಕಾಗಿ ನಾವು ಈ ಪತ್ರಿಕಾಗೋಷ್ಠಿ ಕರೆದಿದ್ದೇವೆ.
ನಾವು ಧರ್ಮಸ್ಥಳ ಗ್ರಾಮಸ್ಥರು ಹೇಳುವುದಿಷ್ಟೇ, ಸೂಕ್ತ ಸಾಕ್ಷಾಧಾರಗಳಿಲ್ಲದೇ ಮನಬಂದಂತೆ ಮಾತನಾಡಿ, ಸುಳ್ಳು ಆರೋಪ ಹೊರಿಸಿ, ಕ್ಷೇತ್ರದ ಮಾನಹಾನಿ ಮಾಡುವ ಮೂಲಕ ಧರ್ಮಸ್ಥಳ ಗ್ರಾಮದ ನಿವಾಸಿಗಳಿಗೆ ಮುಜುಗರ ತರುತ್ತಿರುವ ಸ್ಥಾಪಿತ ಹಿತಾಸಕ್ತಿಗಳ ವಿರುದ್ಧವೂ ಅಗತ್ಯ ಕಾನೂನು ಕ್ರಮವಾಗಬೇಕು. ಸರಕಾರದ ಮುಂದೆ ಈ ಆಗ್ರಹವನ್ನು ಮುಂದಿರಿಸಿ ಮಾ. 27ರಂದು ಬೆಳಿಗ್ಗೆ 10 ಗಂಟೆಗೆ ನಮ್ಮ ಗ್ರಾಮವಾದ ಧರ್ಮಸ್ಥಳದಲ್ಲಿ ಒಂದು ದಿನದ ಹರತಾಳ ಮತ್ತು ಪ್ರತಿಭಟನಾ ಸಭೆ ನಡೆಸಲಿದ್ದೇವೆ. ಗುರುವಾರದಿಂದ ನಡೆಯುವ ಸಭೆಯು ಸಾಂಕೇತಿಕ ಮತ್ತು ಪ್ರಾರಂಭ. ಇನ್ನು ಮುಂದೆ ಯಾರೇ ಧರ್ಮಸ್ಥಳ ಗ್ರಾಮ, ಕ್ಷೇತ್ರದ ಬಗ್ಗೆ ಅವಹೇಳನೆ ಷಡ್ಯಂತ್ರಗಳನ್ನು ಮಾಡಿದಲ್ಲಿ ಯಾವ ಬೆಲೆ ತೆತ್ತಾದರೂ ನಮ್ಮ ಗ್ರಾಮದ, ನಮ್ಮ ಕ್ಷೇತ್ರದ, ಗೌರವ ಘನತೆ ಉಳಿಸುವಲ್ಲಿ ಬದ್ಧರಾಗಿದ್ದೇವೆ, ಸಿದ್ದರಾಗಿದ್ದೇವೆ ಎಂದು ಹೇಳಿದರು.
ಪತ್ರಿಕಾ ಗೋಷ್ಠಿಯಲ್ಲಿ ಹಿತರಕ್ಷಣಾ ವೇದಿಕೆ ಕಾರ್ಯದರ್ಶಿ ಧನಕೀರ್ತಿ ಆರಿಗ, ಸದಸ್ಯರುಗಳಾದ ಗ್ರಾ.ಪಂ. ಅಧ್ಯಕ್ಷೆ ವಿಮಲ, ಉಪಾಧ್ಯಕ್ಷ ಶ್ರೀನಿವಾಸ್ ರಾವ್, ಮಾಜಿ ಅಧ್ಯಕ್ಷ ಪ್ರಭಾಕರ್ ಪೂಜಾರಿ, ಧ.ಸ.ಸಂ.ಅಧ್ಯಕ್ಷ ಪ್ರೀತಮ್ ಡಿ., ಉದ್ಯಮಿ ಭವಾನಿ ಶಂಕರ್ ರಾವ್, ನೀಲಕಂಠ ಶೆಟ್ಟಿ, ಅಖಿಲೇಶ್, ಅಜಿತ್ ಕುಮಾರ್ ಜೈನ್, ಸುಧಾತ್ ಜೈನ್ ಉಪಸ್ಥಿತರಿದ್ದರು.