ಮಾ. 30-ಎ. 6: ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನಮ್ ದಲ್ಲಿ 65ನೇ ವರ್ಷದ ಶ್ರೀ ರಾಮ ತಾರಕ ಮಂತ್ರ ಸಪ್ತಾಹ ಜಾತ್ರಾ ಮಹೋತ್ಸವ – ಪತ್ರಿಕಾಗೋಷ್ಠಿ

0

ಧರ್ಮಸ್ಥಳ : ಶ್ರೀ ಗುರುದೇವ ಮಠ ದೇವರಗುಡ್ಡ, ಧರ್ಮಸ್ಥಳ ನಿತ್ಯಾನಂದ ನಗರ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ 65ನೇ ವರ್ಷದ ಶ್ರೀ ರಾಮತಾರಕ ಮಂತ್ರ ಸಪ್ತಾಹ, ಪ್ರತಿಷ್ಠಾ ಜಾತ್ರೋತ್ಸವ ಹಾಗೂ ಮಹಾ ಬ್ರಹ್ಮ ರಥೋತ್ಸವ ಜಗದ್ಗುರು ಶ್ರೀ ಆತ್ಮಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯ ಸ್ಮರಣೆಯೊಂದಿಗೆ ಮಾ.30ರಿಂದ ಎ. 6ರವರೆಗೆ ನಡೆಯಲಿದೆ ಎಂದು ಕ್ಷೇತ್ರದ ಪೀಠಾಧೀಶ ಮಹಾಮಂಡಲೇಶ್ವರ 1008 ಶ್ರೀ ಸ್ವಾಮಿ ಸದ್ಗುರು ಬ್ರಹ್ಮಾನಂದ ಸರಸ್ವತಿ ಮಹಾರಾಜ ಹೇಳಿದರು.

ಅವರು ಶ್ರೀರಾಮ ಕ್ಷೇತ್ರದಲ್ಲಿ ಮಾ. 22ರಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಜಿಲ್ಲಾ ಉಸ್ತುವಾರಿ ಸಚಿವರು, ಉಭಯ ಜಿಲ್ಲೆಯ ಶಾಸಕರು, ಮಂತ್ರಿಗಳು, ಕ್ಷೇತ್ರದ ಟ್ರಸ್ಟಿಗಳು, ನಾನಾ ಸಂಘ ಸಂಸ್ಥೆಯ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಮಾ. 30ರಂದು ಬೆಳಿಗ್ಗೆ ಗಂಟೆ 9:30 ಕ್ಕೆ ಶ್ರೀರಾಮ ತಾರಕ ಮಂತ್ರ ಸಪ್ತಾಹ ಹಾಗೂ ಜಾತ್ರೋತ್ಸವದ ಉದ್ಘಾಟನೆ, ಶ್ರೀ ಸಿದ್ಧಿ ವಿನಾಯಕ ಮತ್ತು ಕ್ಷೇತ್ರ ಪಾಲ ಗಣಪತಿ ದೇವರ ಬಲಿ ಉತ್ಸವ ಜರಗಲಿದೆ.
ಮಾ. 31ರಂದು ಬೆಳಿಗ್ಗೆ ವೈದಿಕ ಕಾರ್ಯಕ್ರಮಗಳು, ರಾತ್ರಿ 8 ಗಂಟೆಗೆ ಸದ್ಗುರು ಶ್ರೀ ನಿತ್ಯಾನಂದ ಸ್ವಾಮಿ, ಬ್ರಹ್ಮಶ್ರೀ ನಾರಾಯಣ ಗುರು ಮತ್ತು ಶಿರಡಿ ಸಾಯಿಬಾಬಾ ಗುರುಗಳ ಉತ್ಸವ ಮೂರ್ತಿಯ ಬಲಿ ಉತ್ಸವ, ಏ.1ರಂದು ಬೆಳಿಗ್ಗೆ ವೈದಿಕ ಕಾರ್ಯಕ್ರಮಗಳು, ರಾತ್ರಿ 8 ಗಂಟೆಗೆ ಶ್ರೀರಾಮದೇವರ ರಜತ ಪಾಲಕಿ ಉತ್ಸವ, ಏ.2ರಂದು ಬೆಳಿಗ್ಗೆ ವೈದಿಕ ಕಾರ್ಯಕ್ರಮಗಳು, ರಾತ್ರಿ 8 ಗಂಟೆಗೆ ಶ್ರೀ ಅನ್ನಪೂರ್ಣೇಶ್ವರಿ ದೇವಿಯ ಬಲಿ ಉತ್ಸವ ಮತ್ತು ಪುಷ್ಪ ರಥೋತ್ಸವ ಜರಗಲಿದೆ.

ಏ.3ರಂದು ಬೆಳಿಗ್ಗೆ ವೈದಿಕ ಕಾರ್ಯಕ್ರಮಗಳು, ರಾತ್ರಿ 8 ಗಂಟೆಗೆ ಶ್ರೀ ದುರ್ಗಾಪರಮೇಶ್ವರಿ ದೇವಿ ಮೂರ್ತಿ ಬಲಿ ಉತ್ಸವ, ಚಂದ್ರಮಂಡಲೋತ್ಸವ, ಏ.4ರಂದು ಬೆಳಿಗ್ಗೆ ವೈದಿಕ ಕಾರ್ಯಕ್ರಮಗಳು, ರಾತ್ರಿ 7 ರಿಂದ ಬಲಿಮೂರ್ತಿ ಬಲಿ ಉತ್ಸವ ಬೆಳ್ಳಿ ರಥೋತ್ಸವ, ಏ. 5ರಂದು ಬೆಳಿಗ್ಗೆ ವೈದಿಕ ಕಾರ್ಯಕ್ರಮಗಳು, ಸಂಜೆ 5:00 ಗಂಟೆಗೆ ತ್ಯಾಗ ಶಾಲಾ ಪ್ರವೇಶ ಭಗವದ್ ವಾಸುದೇವ ಪುಣ್ಯಾಹ, ಪ್ರಧಾನ ಹೋಮಗಳು, ರಾತ್ರಿ 8 ಗಂಟೆಗೆ ದತ್ತಾತ್ರೇಯ ಮೂರ್ತಿ ಮತ್ತು ಶ್ರೀ ಆಂಜನೇಯ ದೇವರ ಮೂರ್ತಿ ಬಲಿ ಉತ್ಸವ ಮತ್ತು ಶ್ರೀ ಹನುಮಾನ್ ರಥೋತ್ಸವ ಜರಗಲಿದೆ.

ಏ.6ರಂದು ಬೆಳಿಗ್ಗೆ 9:30ಕ್ಕೆ ಶ್ರೀರಾಮ ತಾರಕ ಮಂತ್ರ ಯಜ್ಞ ಮಂಗಳಂ, ಮಧ್ಯಾಹ್ನ ಪಾಲಕಿ ಬಲಿ, ಉತ್ಸವ, ರಾತ್ರಿ 7ರಿಂದ ರಕ್ತೇಶ್ವರಿ ಮತ್ತು ಗುಳಿಗ ದೈವಗಳ ನೇಮೋತ್ಸವ ರಾತ್ರಿ 10 ಗಂಟೆಗೆ ಮಹಾ ಬ್ರಹ್ಮ ರಥೋತ್ಸವ ಜರಗಲಿದೆ.

ಏ.8ರಂದು ಆದಿ ಪಜಿರಡ್ಕದಲ್ಲಿ ಶ್ರೀ ದೇವಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ರಾತ್ರಿ ಸನ್ಯಾಸಿ ಪಂಜುರ್ಲಿ ಮತ್ತು ಕಲ್ಲುರ್ಟಿ – ಪಂಜುರ್ಲಿ ದೈವಗಳ ನೇಮೋತ್ಸವ ನಡೆಯಲಿದೆ. ಜಾತ್ರೋತ್ಸವದ ಅಂಗವಾಗಿ ಮಾ. 30 ರಿಂದ ಏ. 6ರ ತನಕ 65ನೇ ವರ್ಷದ ಅಹೋರಾತ್ರಿ ಶ್ರೀರಾಮ ತಾರಕ ಮಂತ್ರ ಭಜನೆ ನಡೆಯಲಿದೆ ಎಂದು ಹೇಳಿದರು.

ಶಾಸಕ ಹರೀಶ್ ಪೂಂಜ ಮಾತನಾಡಿ ಸ್ವಾಮೀಜಿಗಳಿಗೆ ಮಹಾಮಂಡಲೇಶ್ವರ ಪದವಿ ಸಿಕ್ಕಿದ್ದು ನಮ್ಮ ದಕ್ಷಿಣ ಭಾರತಕ್ಕೆ ಹೆಮ್ಮೆಯ ವಿಚಾರವಾಗಿದೆ. ಜಾತ್ರೋತ್ಸವದಲ್ಲಿ ಎಲ್ಲಾ ಭಾಗಗಳ ಜನರು ಹೊರೆ ಕಾಣಿಕೆ ಸಮರ್ಪಣೆ ಮಾಡಲಿದ್ದಾರೆ ಎಂದು ಹೇಳಿದರು.

ಪತ್ರಿಕಾ ಗೋಷ್ಠಿಯಲ್ಲಿ ಶ್ರೀ ಕ್ಷೇತ್ರ ಗೆಜ್ಜೆಗಿರಿ ಕ್ಷೇತ್ರಡಳಿತ ಸಮಿತಿಯ ಗೌರವಾಧ್ಯಕ್ಷ ನಿವೃತ್ತ ಎಸ್. ಪಿ. ಪೀತಾಂಬಾರ ಹೇರಾಜೆ, ಶ್ರೀ ರಾಮ ಕ್ಷೇತ್ರ ಸೇವಾ ಸಮಿತಿಯ ಸಂಚಾಲಕ ಜಯಂತ ಕೋಟ್ಯಾನ್, ಧರ್ಮಸ್ಥಳ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶ್ರೀನಿವಾಸ ರಾವ್, ಅಭಿನಂದನ್ ಹರೀಶ್ ಕುಮಾರ್, ಜಿ. ಪ. ಮಾಜಿ ಸದಸ್ಯೆ ನಮಿತಾ, ಕ್ಷೇತ್ರದ ಟ್ರಷ್ಟಿ ತುಕಾರಾಮ ಸಾಲಿಯಾನ್ ಆರ್ಲ ಉಪಸ್ಥಿತರಿದ್ದರು.

ಜಾತ್ರೋತ್ಸವ ಸಮಾಲೋಚನಾ ಸಭೆ : 65 ನೇ ವರ್ಷದ ಶ್ರೀ ರಾಮ ತಾರಕ ಮಂತ್ರ ಸಪ್ತಾಹ ಮತ್ತು ಪ್ರತಿಷ್ಠಾ ಜಾತ್ರಾ ಮಹೋತ್ಸವ ಮತ್ತು ಮಹಾ ಬ್ರಹ್ಮ ರಥೋತ್ಸವದ ಯಶಸ್ವಿ ಅಂಗವಾಗಿ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಭಕ್ತರ ಸಮಾಲೋಚನಾ ಸಭೆ ನಡೆಯಿತು. ಸಭೆಯಲ್ಲಿ ಶ್ರೀ ರಾಮ ಕ್ಷೇತ್ರ ಸೇವಾ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ಭಕ್ತರು, ಊರವರು, ರಥ ಬೀದಿ ವ್ಯಾಪಾರಸ್ಥರು ಉಪಸ್ಥಿತರಿದ್ದು ಸಲಹೆ ಸೂಚನೆ ನೀಡಿದರು.

LEAVE A REPLY

Please enter your comment!
Please enter your name here