


ಉಜಿರೆ: ಬೆನಕ ಆಸ್ಪತ್ರೆ( NABH ಪುರಸ್ಕೃತ) ವತಿಯಿಂದ ಉಜಿರೆಯ ವಿಶೇಷ ಮಕ್ಕಳ ಸಾನಿಧ್ಯ ಕೇಂದ್ರಲ್ಲಿ ಅ. 21ರಂದು ಸಂಭ್ರಮ ಮತ್ತು ಸಡಗರದಿಂದ ದೀಪಾವಳಿಯನ್ನು ಆಚರಿಸಲಾಯಿತು.
ಕಾರ್ಯಕ್ರಮವನ್ನು ಬೆನಕ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಗೋಪಾಲಕೃಷ್ಣ ಹಾಗೂ ಡಾ. ಭಾರತಿ ದಂಪತಿಗಳು ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಡಾ. ಗೋಪಾಲಕೃಷ್ಣ ಅವರು ಮಾತನಾಡಿ, ದೀಪಾವಳಿ ಎಂದರೆ ಕೇವಲ ಪಟಾಕಿ, ಬೆಳಕು, ಸಿಹಿ ಅಷ್ಟೇ ಅಲ್ಲ — ಅದು ಸ್ನೇಹ, ಹಂಚಿಕೊಳ್ಳುವಿಕೆ ಮತ್ತು ಕೃತಜ್ಞತೆಯ ಹಬ್ಬ. ಈ ಮಕ್ಕಳು ತಮ್ಮ ನಿಷ್ಕಲ್ಮಶ ನಗು ಮತ್ತು ಪ್ರಾಮಾಣಿಕ ಹೃದಯದಿಂದ ಈ ಹಬ್ಬದ ಅರ್ಥವನ್ನು ನಮಗೆ ತೋರಿಸಿದ್ದಾರೆ.
ಬೆನಕ ಆಸ್ಪತ್ರೆ ಸದಾ ಆರೋಗ್ಯ ಸೇವೆಯ ಜೊತೆಗೆ ಸಮಾಜದ ಎಲ್ಲ ವರ್ಗದವರಿಗೂ ಸ್ಪಂದಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಇಂದಿನ ಈ ದೀಪಾವಳಿ ಸಂಭ್ರಮವು ಆ ಸಾಮಾಜಿಕ ಬದ್ಧತೆಯ ಇನ್ನೊಂದು ಉದಾಹರಣೆ. ನಿಮ್ಮೆಲ್ಲರ ಹೃದಯದಲ್ಲಿ ಬೆಳಕಿನಂತೆ ಸಂತೋಷ, ಆರೋಗ್ಯ ಮತ್ತು ಶಾಂತಿ ಸದಾ ತುಂಬಿರಲಿ ಎಂದು ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷರಾದ ಮಂಗಳೂರು ಸಾನಿಧ್ಯ ಕೇಂದ್ರದ ನಿರ್ದೇಶಕರಾದ ಡಾ. ವಸಂತ ಕುಮಾರ್ ಶೆಟ್ಟಿ ಅವರು ಮಾತನಾಡಿ ಸಾನಿಧ್ಯ ಕೇಂದ್ರದ ಮಕ್ಕಳು ಹೆತ್ತವರಿಗೆ ವರವೇ ಹೊರತು ಶಾಪವಲ್ಲ. ಅವರ ಪ್ರತಿಭೆಯನ್ನು ಗುರುತಿಸಿ, ಸೂಕ್ತ ಕೌಶಲ್ಯ ತರಬೇತಿಯನ್ನು ನೀಡಿ, ಸಮಾಜದ ಮುಖ್ಯವಾಹಿನಿಗೆ ತರಬಹುದೆಂದು ನುಡಿದರು.


ಬೆನಕ ಆಸ್ಪತ್ರೆಯ ಡಾ. ಆದಿತ್ಯ ರಾವ್, ಡಾ. ಅಂಕಿತಾ ಜಿ. ಭಟ್, ಡಾ. ರೋಹಿತ್ ಜಿ. ಭಟ್ ಹಾಗೂ ಡಾ. ನವ್ಯಾ, ಆಸ್ಪತ್ರೆಯ ಸಿಬ್ಬಂದಿಗಳು ಈ ಮಕ್ಕಳೊಂದಿಗೆ ಪಟಾಕಿ ಸಿಡಿಸಿ ಹಬ್ಬದ ಸಂಭ್ರಮವನ್ನು ಹಂಚಿಕೊಂಡರು.
ಆನಂತರ ಸಾನಿಧ್ಯ ಕೇಂದ್ರದ ಮಕ್ಕಳು ತಯಾರಿಸಿದ ಕರಕುಶಲ ವಸ್ತುಗಳನ್ನು ವೀಕ್ಷಿಸಿ, ಅವರ ಕಲೆ ಮತ್ತು ಪ್ರತಿಭೆಯನ್ನು ಮನಸಾರೆ ಮೆಚ್ಚಿದರು. ಕಾರ್ಯಕ್ರಮದ ಕೊನೆಯಲ್ಲಿ ಸಾನಿಧ್ಯ ಸಂಸ್ಥೆಯ ಮಕ್ಕಳು ಹಾಗೂ ಸಿಬ್ಬಂದಿಗಳಿಗೆ ಸಿಹಿ ವಿತರಣೆ ನಡೆಸಲಾಯಿತು. ಈ ಕಾರ್ಯಕ್ರಮದ ಮೂಲಕ ಬೆನಕ ಆಸ್ಪತ್ರೆ ಆರೋಗ್ಯ ಸೇವೆಯ ಜೊತೆಗೆ ಸಮಾಜದ ಪ್ರತಿ ವರ್ಗದವರೊಂದಿಗೆ ಸಂತೋಷ ಹಂಚಿಕೊಳ್ಳುವ ಸಂದೇಶವನ್ನು ನೀಡಿತು. ಪ್ರಾರಂಭದಲ್ಲಿ ಸಾನಿಧ್ಯ ಕೇಂದ್ರದ ಸಂಚಾಲಕ ರೋಷನ್ ಸೀಕ್ವೇರಾ ಅವರು ಎಲ್ಲರನ್ನು ಸ್ವಾಗತಿಸಿದರು.










