


ಉಜಿರೆ: ಮಾದರಿ ವ್ಯಕ್ತಿಯಾಗಿ ರೂಪುಗೊಳ್ಳಲು ಅದರ ಹಿಂದೆ ಅನೇಕ ವರ್ಷಗಳ ಪರಿಶ್ರಮ, ದೃಢಸಂಕಲ್ಪ ಹಾಗೂ ಜನಸೇವೆ ಇರಬೇಕು. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಸಮಾಜಮುಖಿ ಕಾರ್ಯಗಳಿಂದಾಗಿ ನಿಜವಾದ ಮಾದರಿ ವ್ಯಕ್ತಿಯಾಗಿದ್ದಾರೆ ಎಂದು ಡಾ.ಹೆಗ್ಗಡೆ ಅವರ ಆಪ್ತಕಾರ್ಯದರ್ಶಿ ಎ. ವೀರು ಶೆಟ್ಟಿ ಹೇಳಿದರು.
ಅವರು ಉಜಿರೆಯ ಎಸ್.ಡಿ.ಎಂ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆದ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ 58ನೇ ಪಟ್ಟಾಭಿಷೇಕೋತ್ಸವದ ಪ್ರಯುಕ್ತ ನಡೆದ ‘ಪೂಜ್ಯ ಪಥ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
“ಶ್ರೀ ಕ್ಷೇತ್ರದ ಮದ್ಯವರ್ಜನ ಶಿಬಿರಗಳು ಅನೇಕ ಕುಟುಂಬಗಳಿಗೆ ಹೊಸ ಬದುಕು ನೀಡಿವೆ. ಸ್ವಚ್ಛತಾ ಆಂದೋಲನದ ಮೂಲಕ ಸ್ವಚ್ಛ ಮತ್ತು ಆರೋಗ್ಯಕರ ಸಮಾಜ ನಿರ್ಮಾಣದತ್ತ ಹೆಗ್ಗಡೆ ಅವರ ದೃಷ್ಟಿ ಇರುತ್ತದೆ. ಧರ್ಮೋತ್ಥಾನ ಟ್ರಸ್ಟ್ ಮುಖಾಂತರ ಐತಿಹಾಸಿಕ ಹಾಗೂ ಶಿಲಾಮಯ ದೇವಾಲಯಗಳಿಗೆ ಕಾಯಕಲ್ಪದ ಕಾರ್ಯ ನಡೆಯುತ್ತಿದೆ. ದೇಗುಲಗಳ ಅಭಿವೃದ್ಧಿಯ ನಂತರ ಅವುಗಳ ಸಂರಕ್ಷಣೆಯು ಕೂಡ ನಿರಂತರವಾಗಿ ನಡೆಯುತ್ತಿದೆ,” ಎಂದು ಹೇಳಿದರು.
“ಪ್ರಧಾನಿ ನರೇಂದ್ರ ಮೋದಿ ಅವರು ಹೆಗ್ಗಡೆ ಅವರಿಗೆ ನೀಡಿದ ರಾಜ್ಯಸಭಾ ಸದಸ್ಯತ್ವ ಅವರ ಸಾಮಾಜಿಕ ಸೇವೆಗೂ, ಮಾನವೀಯ ದೃಷ್ಟಿಗೂ ಸಿಕ್ಕ ಗೌರವವಾಗಿದೆ. ಭಕ್ತರ ಮತ್ತು ದೇವರ ಸಂಬಂಧವನ್ನು ಯಾರೂ ಮುರಿಯಲು ಸಾಧ್ಯವಿಲ್ಲ. ಲಕ್ಷಾಂತರ ಭಕ್ತರ ನೋವು-ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಹೆಗ್ಗಡೆ ಅವರು ಮಾತನಾಡುವ ಮಂಜುನಾಥನಂತಾಗಿದ್ದಾರೆ,” ಎಂದು ಶ್ಲಾಘಿಸಿದರು.


ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಸಂತೋಷ್ ಅವರು ಹೇಳಿದರು “ದಾನಗಳಲ್ಲಿ ಶ್ರೇಷ್ಠ ವಿದ್ಯಾದಾನ. ಇತರ ದಾನಗಳು ಕ್ಷಣಿಕವಾದರೂ ವಿದ್ಯಾದಾನದಿಂದ ಜೀವನ ಕಟ್ಟಿಕೊಳ್ಳಲು ಸಾಧ್ಯ. ಅತ್ಯಲ್ಪ ಶುಲ್ಕದಲ್ಲಿ ತಾಂತ್ರಿಕ ಶಿಕ್ಷಣ ನೀಡುವ ಉದ್ದೇಶದಿಂದ 2008ರಲ್ಲಿ ಡಾ.ಹೆಗ್ಗಡೆ ಅವರು ಸ್ಥಾಪಿಸಿದ ನಮ್ಮ ಪಾಲಿಟೆಕ್ನಿಕ್ ಗ್ರಾಮೀಣ ವಿದ್ಯಾರ್ಥಿಗಳಿಗೆ ವರದಾನವಾಗಿದೆ. ಕ್ಷೇತ್ರದ ಚತುರ್ವಿಧ ದಾನಗಳು – ಅನ್ನದಾನ, ವಿದ್ಯಾದಾನ, ವೈದ್ಯದಾನ, ಧರ್ಮದಾನ – ಸಮಾಜದ ಪ್ರಗತಿಯ ಶಕ್ತಿಸ್ಥಂಭಗಳಾಗಿವೆ,” ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಬಂಧಕ ಚಂದ್ರನಾಥ್ ಜೈನ್, ಗ್ರಂಥಪಾಲಕಿ ನಮಿತಾ ಶೆಟ್ಟಿ, ಎಸ್.ಡಿ.ಎಂ ಎಂಜಿನಿಯರಿಂಗ್ ಕಾಲೇಜಿನ ಪ್ರಿನ್ಸಿಪಾಲ್ ಡಾ.ಅಶೋಕ್ ಕುಮಾರ್ ಉಪಸ್ಥಿತರಿದ್ದರು.
ಪುಸ್ತಕ – ಸಾಕ್ಷಚಿತ್ರ ಪ್ರದರ್ಶನ ಗಮನಸೆಳೆಯಿತು: ‘ಪೂಜ್ಯರು ನಡೆದು ಬಂದ ಹಾದಿ’ ಎಂಬ ವಿಷಯಾಧಾರಿತ ಪ್ರದರ್ಶನದಲ್ಲಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರ ಬಾಲ್ಯದಿಂದ ಆರಂಭಿಸಿ ವಿವಾಹ, ರಾಷ್ಟ್ರಪತಿ ಪ್ರಶಸ್ತಿ, ದೇಶ-ವಿದೇಶ ಪ್ರವಾಸ, ಛಾಯಾಗ್ರಹಣ, ಗಣ್ಯರೊಂದಿಗೆ ಭೇಟಿಗಳು ಹಾಗೂ ವಿವಿಧ ಸಾಮಾಜಿಕ ಸೇವಾ ಕಾರ್ಯಗಳ ನೂರಾರು ಛಾಯಾಚಿತ್ರಗಳು ಪ್ರದರ್ಶಿಸಲ್ಪಟ್ಟವು. ಹೆಗ್ಗಡೆ ಅವರ ಕುರಿತ ಪುಸ್ತಕಗಳ ಪ್ರದರ್ಶನವೂ ನಡೆಯಿತು. ಜೊತೆಗೆ ಅವರ ಜೀವನಯಾನವನ್ನು ಒಳಗೊಂಡ ಸಾಕ್ಷ್ಯಚಿತ್ರ ಪ್ರದರ್ಶನವು ಪ್ರೇಕ್ಷಕರ ಮನ ಸೆಳೆಯಿತು.
ಉಪನ್ಯಾಸಕ ಈಶ್ವರ ಶರ್ಮ ಸ್ವಾಗತಿಸಿದರು. ಮಿಥುನ್ ಕುಮಾರ್ ಅತಿಥಿಗಳನ್ನು ಪರಿಚಯಿಸಿದರು. ಸಂಪತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ನಮಿತಾ ಶೆಟ್ಟಿ ವಂದಿಸಿದರು.










