ಬೆಳ್ತಂಗಡಿ: ಗುರುವಾಯನಕೆರೆಯಲ್ಲಿ ಕಾರ್ಯಾಚರಿಸುತ್ತಿರುವ ತಾಲೂಕಿನ ಪ್ರತಿಷ್ಠಿತ ವಿಜಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಗೆ ಮುಂದಿನ 5 ವರ್ಷಗಳ ಅವಧಿಗೆ 16 ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಘದ ಆಡಳಿತ ಅವಧಿ ಮುಗಿದ ಹಿನ್ನೆಲೆಯಲ್ಲಿ ನೂತನ ನಿರ್ದೇಶಕರ ಆಯ್ಕೆಗಾಗಿ ಫೆ. 2 ರಂದು ಚುನಾವಣೆ ನಿಗದಿಯಾಗಿದ್ದು 16 ಮಂದಿ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆ ನಡೆದಿದೆ.
ಸಾಮಾನ್ಯ ಕ್ಷೇತ್ರದಿಂದ ಮಾಜಿ ಅಧ್ಯಕ್ಷ ಜಯರಾಮ ಶೆಟ್ಟಿ, ಉಪಾಧ್ಯಕ್ಷ ಎಂ. ಜಿ. ಶೆಟ್ಟಿ ಉಜಿರೆ, ಸೀತಾರಾಮ ಶೆಟ್ಟಿ, ಜಯಂತ ಶೆಟ್ಟಿ ಕುಂಟಿನಿ, ರಘುರಾಮ ಶೆಟ್ಟಿ ಸಾಧನಾ, ಪುಷ್ಪರಾಜ ಶೆಟ್ಟಿ, ಬಾಲಕೃಷ್ಣ ಪೂಂಜ, ಕೃಷ್ಣ ರೈ, ಜಯರಾಮ ಭಂಡಾರಿ, ಅಜಿತ್ ಕುಮಾರ್ ಕೊತ್ಯಾರು, ಮಂಜುನಾಥ ರೈ, ರಾಜು ಶೆಟ್ಟಿ, ಹಿಂದುಳಿದ ಬಿ ಕ್ಷೇತ್ರದಿಂದ ಪುರಂದರ ಶೆಟ್ಟಿ, ಜಯರಾಮ ಶೆಟ್ಟಿ ಮುಂಡಾಡಿ ಗುತ್ತು, ಮಹಿಳಾ ಕ್ಷೇತ್ರದಿಂದ ಸಾರಿಕಾ ಡಿ. ಆಳ್ವ ಧರ್ಮಸ್ಥಳ, ವಿಜಯ ಶೆಟ್ಟಿ ಉಜಿರೆ ಆಯ್ಕೆಯಾಗಿದ್ದಾರೆ.
ಪರಿಶಿಷ್ಟ ಜಾತಿ ಮೀಸಲು ಸ್ಥಾನ ಮತ್ತು ಪರಿಶಿಷ್ಟ ಪಂಗಡ ಮೀಸಲು ಸ್ಥಾನಕ್ಕೆ ಯಾವುದೇ ನಾಮಪತ್ರ ಸಲ್ಲಿಕೆಯಾಗದ ಕಾರಣ ಎರಡು ಸ್ಥಾನದ ನಿರ್ದೇಶಕರ ಆಯ್ಕೆ ನಡೆದಿಲ್ಲ. ಚುನಾವಣಾ ಪ್ರಕ್ರಿಯೆಯನ್ನು ರಿಟರ್ನಿಂಗ್ ಅಧಿಕಾರಿ ಪ್ರತಿಮಾ ಬಿ. ವಿ. ನೆರವೇರಿಸಿದರು. ಕಾರ್ಯನಿರ್ವಹಣಾಧಿಕಾರಿ ಸುಜಯ್ ಶೆಟ್ಟಿ ಸಹಕರಿಸಿದರು.