ಬೆಳ್ತಂಗಡಿ: ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಕೆರೆಕಟ್ಟೆ ಸುತ್ತಮುತ್ತಲಿನ ಅರಣ್ಯದಲ್ಲಿ ನ.೨೯ರಂದು ಮಧ್ಯರಾತ್ರಿ ಟಾರ್ಚ್ ಬೆಳಕು ಕಾಣಿಸಿದ ಹಿನ್ನೆಲೆಯಲ್ಲಿ ನಕ್ಸಲ್ ನಿಗ್ರಹ ಪಡೆಯವರು ತೀವ್ರ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕೊಪ್ಪ ತಾಲೂಕಿನ ಮುಂಡಗಾರು ಲತಾ, ಕಳಸ ತಾಲೂಕಿನ ಬಾಳೆಹೊಳೆಯ ವನಜಾಕ್ಷಿ, ಬೆಳ್ತಂಗಡಿ ತಾಲೂಕಿನ ವೇಣೂರು ಗ್ರಾಮದ ಸುಂದರಿ, ರಾಯಚೂರು ಮೂಲದ ಜಯನ್ ಯಾನೆ ಜಯಣ್ಣ, ಶೃಂಗೇರಿ ತಾಲೂಕಿನ ಹಿತ್ತಲಮನೆಯ ರವೀಂದ್ರ ಸಹಿತ ಕೆಲವು ನಕ್ಸಲರು ಕಾಡಿನಲ್ಲಿ ಅಡಗಿರುವ ಅನುಮಾನದ ಹಿನ್ನೆಲೆಯಲ್ಲಿ ತೀವ್ರ ಕಾರ್ಯಾಚರಣೆ ನಡೆಸಲಾಗುತ್ತಿದೆ. ನಕ್ಸಲ್ ತಂಡದ ನಾಯಕನಾಗಿದ್ದ ವಿಕ್ರಂಗೌಡ ಎನ್‌ಕೌಂಟರ್ ಬಳಿಕ ಈ ತಂಡಕ್ಕೆ ಮುಂಡಗಾರು ಲತಾ ನಾಯಕಿಯಾಗಿದ್ದಾಳೆಯೇ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ನಕ್ಸಲರ ತಂಡ ದಕ್ಷಿಣ ಕನ್ನಡ, ಶಿವಮೊಗ್ಗ ಅಥವಾ ಕೊಡಗು ಭಾಗಕ್ಕೆ ತೆರಳಿರಬಹುದು ಎಂಬ ಶಂಕೆಯ ಮೇರೆಗೂ ಕಾರ್ಯಾಚರಣೆ ಮುಂದುವರಿದಿದೆ. ವೇಣೂರಿನ ಸುಂದರಿ ವಿವಿಧ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದವಳು. ಬಡ ಕುಟುಂಬದ ಸುಂದರಿ ತನ್ನ ಹೋರಾಟದ ಮೂಲಕ ನಕ್ಸಲ್ ನಾಯಕರ ಸಂಪರ್ಕ ಪಡೆದು ಭೂಗತಳಾಗಿದ್ದಾಳೆ. ಆ ನಂತರ ನಕ್ಸಲ್ ಚುಟುವಟಿಕೆಯಲ್ಲಿ ಸಕ್ರಿಯವಾಗಿದ್ದಾಳೆ. ಅವಳ ಪತ್ತೆಗೆ ಪೊಲೀಸ್ ಇಲಾಖೆ ಲುಕೌಟ್ ನೊಟೀಸ್ ಜಾರಿಗೊಳಿಸಿದೆ. ಅಲ್ಲದೆ ಸುಂದರಿಯನ್ನು ಸೆರೆ ಹಿಡಿಯಲು ಹರಸಾಹಸ ಪಡುತ್ತಿದೆ.
ನಕ್ಸಲ್ ಬಾಧಿತ ಪ್ರದೇಶದಲ್ಲಿ ಕೂಂಬಿಂಗ್ ಚುರುಕು; ನಕ್ಸಲ್ ನಾಯಕ ವಿಕ್ರಂ ಗೌಡನ ಎನ್‌ಕೌಂಟರ್ ಕಾರ್ಯಾಚರಣೆ ಸಂದರ್ಭ ಪರಾರಿಯಾಗಿದ್ದ ನಕ್ಸಲರ ಪತ್ತೆಗೆ ಕೂಂಬಿಂಗ್ ಚುರುಕಾಗಿ ನಡೆಸಲಾಗುತ್ತಿದೆ. ಎಎನ್‌ಎಫ್‌ನ ಎಸ್.ಪಿ. ಜೀತೇಂದ್ರ ದಯಾಮ್ ಮಾರ್ಗದರ್ಶನದಲ್ಲಿ ನಾಡಾಲು, ಕೊಪ್ಪ, ಕೆರೆಕಟ್ಟೆ, ಕಬ್ಬಿನಾಲೆಯ ಅರಣ್ಯದಲ್ಲಿ ಪ್ರದೇಶದಲ್ಲಿ ಬಿಗು ಕಾರ್ಯಾಚರಣೆ ನಡೆಯುತ್ತಿದೆ. ಹೆಬ್ರಿ ವ್ಯಾಪ್ತಿ ಸಹಿತ ಇತರ ನಕ್ಸಲ್ ಪೀಡಿತ ಪ್ರದೇಶಗಳಾದ ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಗಡಿಭಾಗದಲ್ಲಿ ೫೦೦ಕ್ಕೂ ಅಧಿಕ ಸಿಬ್ಬಂದಿಗಳನ್ನು ಒಳಗೊಂಡ ತಂಡಗಳಿಂದ ಕಾರ್ಯಾಚರಣೆ ನಡೆಸಲಾಗುತ್ತಿದೆ. ನಕ್ಸಲ್ ನಿಗ್ರಹ ಕಾರ್ಯಾಚರಣೆ ಪ್ರಯುಕ್ತ ಮುಂಜಾಗ್ರತಾ ಕ್ರಮವಾಗಿ ಕೂಡ್ಲು ಫಾಲ್ಸ್‌ಗೆ ಡಿ.೪ರಂದು ಪ್ರವೇಶ ನಿಷೇಧಿಸಲಾಗಿತ್ತು.
ನ್ಯಾಯಾಂಗ ತನಿಖೆಗೆ ಆಗ್ರಹ: ನಕ್ಸಲ್ ನಾಯಕನಾಗಿದ್ದ ಆದಿವಾಸಿ ಮಲೆಕುಡಿಯ ಸಮುದಾಯದ ವಿಕ್ರಮ್ ಗೌಡರನ್ನು ನಕ್ಸಲ್ ನಿಗ್ರಹ ದಳದ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದ ಘಟನೆಯ ಎರಡು ದಿನಗಳ ಮೊದಲು ಆ ಪ್ರದೇಶದ ಆದಿವಾಸಿ ಮಲೆಕುಡಿಯ ಸಮುದಾಯದ ಮನೆಗಳ ನಿವಾಸಿಗಳನ್ನು ತೆರವು ಮಾಡಿದ್ದರೂ ಇಂದಿಗೂ ಅದನ್ನು ಆದಿವಾಸಿಗಳಿಗೆ ಬಿಟ್ಟು ಕೊಡದೆ ಅಸಂವಿಧಾನಿಕವಾಗಿ ನಡೆದುಕೊಳ್ಳುತ್ತಿರುವ ರಾಜ್ಯ ಸರ್ಕಾರದ ನಡೆ ಅತ್ಯಂತ ಖಂಡನೀಯ ಎಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಸಂಚಾಲಕ ಶೇಖರ್ ಲಾಯಿಲ ಮತ್ತು ಪ್ರಧಾನ ಕಾರ್ಯದರ್ಶಿ ಜಯಾನಂದ ಪಿಲಿಕಲ ಹೇಳಿಕೆ ನೀಡಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ಕಳೆದ ೧೩ ವರ್ಷಗಳ ನಂತರ ಅಮಾನವೀಯವಾಗಿ ಸಂಶಯಕ್ಕೆ ಎಡೆಮಾಡಿ ಕೊಟ್ಟ ಎನ್‌ಕೌಂಟರ್ ಹೆಸರಿನಲ್ಲಿ ನಡೆದ ಮಾನವ ಹತ್ಯೆಯ ಬಗ್ಗೆ ಇಂದಿಗೂ ರಾಜ್ಯ ಸರ್ಕಾರ ನ್ಯಾಯಾಂಗ ತನಿಖೆಗೆ ಆದೇಶ ಮಾಡದೆ ಮಾನವ ಹಕ್ಕುಗಳ ಉಲ್ಲಂಘನೆ ಮಾಡಿದೆ. ಜೊತೆಗೆ ಆದಿವಾಸಿಗಳನ್ನು ತೆರವು ಮಾಡಿದ ಎರಡು ದಿನಗಳ ಬಳಿಕ ಎನ್ ಕೌಂಟರ್ ಹೆಸರಿನಲ್ಲಿ ವಿಕ್ರಮ್ ಗೌಡನನ್ನು ಹತ್ಯೆ ಮಾಡಲಾಗಿದೆ. ಈ ಸಂಶಯವನ್ನು ನಿವಾರಿಸಲು ರಾಜ್ಯ ಸರ್ಕಾರ ನ್ಯಾಯಾಂಗ ತನಿಖೆ ನಡೆಸಬೇಕು. ಎನ್‌ಕೌಂಟರ್ ನಡೆದು 15 ದಿನಗಳಾದರೂ ಇಂದಿಗೂ ತಮ್ಮ ಮನೆಗಳಿಗೆ ಆದಿವಾಸಿಗಳ ಪ್ರವೇಶವನ್ನು ನಿಬಂಧಿಸಿರುವ ರಾಜ್ಯ ಸರ್ಕಾರದ ನಡೆ ಅತ್ಯಂತ ಅಮಾನವೀಯತೆಯ ಸಂಕೇತವಾಗಿದೆ.
ರಾಜ್ಯ ಸರ್ಕಾರವನ್ನು ಎಎನ್‌ಎಫ್ ಆಳ್ವಿಕೆ ಮಾಡುತ್ತಿದೆಯೋ ಅಥವಾ ರಾಜ್ಯ ಸರ್ಕಾರದ ಅಡಿಯಲ್ಲಿ ಎಎನ್‌ಫ್ ಕೆಲಸ ಮಾಡುತ್ತಿದೆಯೋ ಎಂಬ ಸಂಶಯ ಕಾಡುತ್ತಿದೆ. ರಾಜ್ಯದಲ್ಲಿ ಈ ಹಿಂದೆ ನಡೆದ ಯಾವುದೇ ಎನ್‌ಕೌಂಟರ್ ನಡೆಸುವ ಮೊದಲು ಯಾವುದೇ ಮನೆಯನ್ನು ತೆರವು ಮಾಡಿದ ಇತಿಹಾಸವಿಲ್ಲ. ಆದರೆ ವಿಕ್ರಮ್ ಗೌಡ ಎನ್‌ಕೌಂಟರ್‌ನಲ್ಲಿ ಮಾತ್ರ ಎನ್‌ಕೌಂಟರ್ ಮೊದಲು ಸ್ಥಳೀಯ ಮನೆಯವರನ್ನು ತೆರವು ಮಾಡಿದ ಎರಡು ದಿನಗಳ ನಂತರ ಎನ್‌ಕೌಂಟರ್ ನಡೆಸಿದ ಘಟನೆ ಸಂಶಯಕ್ಕೆ ಕಾರಣವಾಗಿದೆ. ಎನ್‌ಕೌಂಟರ್ ನಡೆದ ಸ್ಥಳಕ್ಕೆ ಪತ್ರಿಕೆ, ಟಿ.ವಿ. ಮಾಧ್ಯಮದವರಿಗೆ ಪ್ರವೇಶ ನೀಡದೆ, ಶವವನ್ನು ನೋಡಲು ಬಿಡದೆ ನಕ್ಸಲ್ ನಿಗ್ರಹದಳ ಅಸಂವಿಧಾನಿಕವಾಗಿ ನಡೆದುಕೊಂಡಿದೆ. ಮನೆಯೊಂದರಲ್ಲಿ ಎನ್‌ಕೌಂಟರ್ ನಡೆದಿದೆ ಎನ್ನುವ ಪೊಲೀಸ್ ಇಲಾಖೆ, ಎಫ್‌ಐಆರ್‌ನಲ್ಲಿ ಕಾಡಿನಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ವಿಕ್ರಮ್ ಗೌಡ ಸಾವನ್ನಪ್ಪಿದ್ದಾನೆ ಎಂದು ದಾಖಲಿಸಿರುವುದು ಶತಮಾನದ ಹಾಸ್ಯಾಸ್ಪದ ಸಂಗತಿಯಾಗಿದೆ. ಕಾಡಿನಲ್ಲಿ ಎನ್‌ಕೌಂಟರ್ ನಡೆದಿದ್ದು ನಿಜವಾದರೆ ಮಲೆಕುಡಿಯ ಸಮುದಾಯವನ್ನು ಅವರ ಮನೆಗಳಿಂದ ತೆರವು ಮಾಡಿದ್ಯಾಕೆ. ಎನ್‌ಕೌಂಟರ್ ನಡೆದ ೧೫ ದಿನಗಳ ಬಳಿಕವೂ ಅವರ ಮನೆಗಳಿಗೆ ತೆರಳಲು ಅವಕಾಶ ನೀಡದಿರುವುದು ಏಕೆ ಎಂಬ ಪ್ರಶ್ನೆ ಉದ್ಭವಿಸಿದೆ.
ರಾಜ್ಯ ಸರ್ಕಾರ ತಕ್ಷಣ ಮಧ್ಯಪ್ರವೇಶ ಮಾಡಿ ಆದಿವಾಸಿ ಮಲೆಕುಡಿಯ ಸಮುದಾಯದ ಮನೆಗಳಲ್ಲಿ ಅನಧಿಕೃತವಾಗಿ, ಕಾನೂನು ಬಾಹಿರವಾಗಿ ನೆಲೆಸಿರುವ ಎಎಎನ್‌ಫ್ ಸಿಬ್ಬಂದಿಗಳನ್ನು ತೆರವುಗೊಳಿಸಿ ಆದಿವಾಸಿಗಳನ್ನು ಸ್ವತಂತ್ರವಾಗಿ ಬದುಕಲು ಅವಕಾಶ ಮಾಡಿಕೊಡಬೇಕು ಮತ್ತು ನಾಗರಿಕ ಸಮಾಜದಲ್ಲಿ ಸಂಶಯಕ್ಕೆ ಎಡೆ ಮಾಡಿಕೊಟ್ಟಿರುವ ವಿಕ್ರಮ್ ಗೌಡ ಎನ್‌ಕೌಂಟರ್ ಬಗ್ಗೆ ತಕ್ಷಣ ನ್ಯಾಯಾಂಗ ತನಿಖೆ ನಡೆಸಬೇಕು ಹಾಗೂ ಎನ್ ಕೌಂಟರ್ ನಡೆಸಿದ ಎಎನ್‌ಫ್ ಸಿಬ್ಬಂದಿಗಳ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿ ಬಂಧಿಸಬೇಕು ಎಂದು ಶೇಖರ ಲಾಯಿಲ ಮತ್ತು ಜಯಾನಂದ ಪಿಲಿಕಲ ಒತ್ತಾಯಿಸಿದ್ದಾರೆ.