ಒಟಿಪಿ ಕೊಟ್ಟು 67 ಸಾವಿರ ಕಳೆದುಕೊಂಡ ಮಹಿಳೆಗೆ ಜಾಗ ಕೊಟ್ಟು,ಮನೆ ಕಟ್ಟಿಕೊಟ್ಟ ಸಾಯಿರಾಮ್ ಫ್ರೆಂಡ್ಸ್ ಗುರುವಾಯನಕೆರೆ-ಕಲ್ಲಡ್ಕ ಪ್ರಭಾಕರ್ ಭಟ್,ಶಶಿಧರ್ ಶೆಟ್ಟಿಯವರಿಂದ ಉದ್ಘಾಟನೆ-ಸುದ್ದಿ ನ್ಯೂಸ್ ವರದಿ ಇಂಪ್ಯಾಕ್ಟ್

0


ಗುರುವಾಯನಕೆರೆ- ಬ್ಯಾಂಕ್ ಮ್ಯಾನೇಜರ್ ಹೆಸರಿನಲ್ಲಿ ಕರೆ ಮಾಡಿ ನಂಬಿಸಿ ಒಟಿಪಿ ಪಡೆದ ವಂಚಕನೋರ್ವ ಬಡಮಹಿಳೆ ವಸಂತಿಯವರ ಬ್ಯಾಂಕ್ ಖಾತೆಯಲ್ಲಿದ್ದ ಸಾಲ ಹಾಗೂ ವಿಧವಾವೇತನದ 67 ಸಾವಿರ ರೂಪಾಯಿ ಹಣ ದೋಚಿರುವ ಘಟನೆಯ ಬಗ್ಗೆ 2024ರ ಆಗಸ್ಟ್ 23ರಂದು ಸುದ್ದಿ ನ್ಯೂಸ್ ವರದಿ ಮಾಡಿತ್ತು. ಅಲ್ಲದೇ ಸುದ್ದಿ ಬಿಡುಗಡೆ ಪತ್ರಿಕೆಯಲ್ಲೂ ಕೂಡ ವಿಸ್ತೃತ ವರದಿ ಪ್ರಕಟಿಸಲಾಗಿತ್ತು. ಇದಕ್ಕೆ ಅಂದೇ ಸಾಯಿರಾಮ್ ಫ್ರೆಂಡ್ಸ್ ಗುರುವಾಯನಕೆರೆ ಸ್ಪಂದನೆ ನೀಡಿ ಹೊಸ ಮನೆ ಕಟ್ಟಿಕೊಡುವ ಭರವಸೆ ನೀಡಿದ್ದರು.

ಓಟಿಪಿ ಹಣ ಕಳೆದುಕೊಂಡ ಗುರುವಾಯನಕೆರೆಯ ವಸಂತಿಯವರು ನಾಲ್ಕು ವರ್ಷದ ಹಿಂದೆ ಪತಿಯನ್ನು ಕಳೆದುಕೊಂಡು, ತನ್ನ ಜೀವನಕ್ಕಾಗಿ ಜ್ಯೂಸ್ ಸೆಂಟರ್ ನಲ್ಲಿ ಕೆಲಸ ಮಾಡುತ್ತಾ, ಬಾಡಿಗೆ ಮನೆಯಲ್ಲಿ ಕಷ್ಟದ ಜೀವನ ನಡೆಸುತ್ತಿದ್ದರು. ಪುತ್ರ ಪಿಯುಸಿ ಹಾಗೂ ಪುತ್ರಿ ಹೈಸ್ಕೂಲ್ ನಲ್ಲಿ ಓದುತ್ತಿದ್ದರು. ಈ ವೇಳೆ ವಸಂತಿಯವರ ಬೇರೆ ಬ್ಯಾಂಕ್ ನಿಂದ ಪಡೆದ ಸಾಲ 40,000 ಹಾಗೂ ವಿಧವಾ ವೇತನದಿಂದ ಬಂದ ಹಣ, ಮಕ್ಕಳಿಗೆ ಸಿಕ್ಕಿರುವ ಸ್ಕಾಲರ್ ಶಿಪ್ ಮೊತ್ತ ಎಲ್ಲವನ್ನು ಗುರುವಾಯನಕೆರೆಯ ಕೆನರಾ ಬ್ಯಾಂಕ್ ನ ಖಾತೆಯಲ್ಲಿಟ್ಟಿದ್ದರು. ಆ ಖಾತೆಯ ಹಣವನ್ನು ಆನ್ ಲೈನ್ ವಂಚಕರು ಓಟಿಪಿ ಕೇಳಿ ದೋಚಿದ್ದರು. ಈ ವರದಿಗೆಂದು ತೆರಳಿದ ವೇಳೆ ವಸಂತಿಯವರ ಕಷ್ಟದ ಜೀವನ, ಬದುಕಿನ ಸವಾಲು, ಬಾಡಿಗೆ ಮನೆಯ ಜೊತೆ ಮಕ್ಕಳದ ವಿಧ್ಯಾಬ್ಯಾಸದ ಬಗ್ಗೆ ವಿಸ್ತೃತ ವರದಿ ಮಾಡಿತು.
ಈ ವರದಿಗೆ ಕೂಡಲೇ ಸ್ಪಂಧಿಸಿದ ಗುರುವಾಯನಕೆರೆಯಲ್ಲಿ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಯುವಕರ ತಂಡ ಸಾಯಿರಾಮ್ ಫ್ರೆಂಡ್ಸ್ ,ವಸಂತಿಯವರ ಮನೆಗೆ ತೆರಳಿದ ಸಾಯಿರಾಮ್ ಫ್ರೆಂಡ್ಸ್ ಅವರಿಗೆ ಧೈರ್ಯ ತುಂಬಿದರು. ಇದೇ ವೇಳೆ ಸಾಯಿರಾಮ್ ಫ್ರೆಂಡ್ಸ್ ಶಕ್ತಿನಗರ ತಂಡ ವಸಂತಿಯವರಿಗೆ ಮನೆ ಕಟ್ಟಿಕೊಡಲು ನಿರ್ಧರಿಸಿದಾಗ, ದಾನಿಯೋರ್ವರು ಮನೆ ಕಟ್ಟಲು 4 ಸೆಂಟ್ಸ್ ಜಮೀನು ದಾನದ ರೂಪದಲ್ಲಿ ನೀಡಿದ್ದರು. ಓಡಿಲ್ನಾಳದ ಅಟಲ್ ಜೀ ನಗರದಲ್ಲಿ ದಾನಿ‌ ನೀಡಿದ ಜಾಗದಲ್ಲಿ ಸಾಯಿರಾಮ್ ಫ್ರೆಂಡ್ಸ್ ಮನೆ ನಿರ್ಮಿಸಿದ್ದು,ಇಂದು (ಅ.12) ಸಾಯಿರಾಮ್ ಫ್ರೆಂಡ್ಸ್ (ರಿ) ಶಕ್ತಿನಗರ ಗುರುವಾಯನಕೆರೆ ಇವರ ಪ್ರಥಮ ಆಶ್ರಯ ಯೋಜನೆ ಸಾಯಿರಾಮ್ ಓಡಿಲ್ನಾಳದ ಅಟಲ್ ಜೀ ನಗರದಲ್ಲಿ ನಿರ್ಮಿಸಿರುವ ಸಾಯಿರಾಮ್ ಮನೆಯ ಉದ್ಘಾಟನೆ ನೆರವೇರಿತು.
ಉದ್ಯಮಿ ನವಶಕ್ತಿ ಗುರುವಾಯನಕೆರೆಯ ಶಶಿಧರ್ ಶೆಟ್ಟಿ ಬರೋಡಾ ಮನೆಯ ಉದ್ಘಾಟನೆ ನೆರವೇರಿಸಿದರು. ಈ ವೇಳೆ ಮುಖ್ಯ ಅತಿಥಿಯಾಗಿ ಭಾಗಿಯಾದ, ಆರ್ ಎಸ್ ಎಸ್ ಕರ್ನಾಟಕ ದಕ್ಷಿಣ ಪ್ರಾಂತ ಆಹ್ವಾನಿತ ಕಾರ್ಯಕಾರಿಣಿ ಸದಸ್ಯರಾದ ಕಲ್ಲಡ್ಕ ಪ್ರಭಾಕರ ಭಟ್ ಸಾಯಿರಾಮ್ ಫ್ರೆಂಡ್ಸ್ ಕಾರ್ಯವನ್ನು ಶ್ಲಾಘಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಹರೀಶ್ ಪೂಂಜವಹಿಸಿದರೆ,
ಅತಿಥಿಗಳಾಗಿ ಎಕ್ಸೆಲ್ ವಿದ್ಯಾಸಂಸ್ಥೆಯ ಸುಮಂತ್ ಕುಮಾರ್ ಜೈನ್, ವಕೀಲರಾದ ಸುಬ್ರಹ್ಮಣ್ಯಕುಮಾರ್ ಅಗರ್ತ, ಶ್ರೀ ಕ್ಷೇತ್ರ ಅರಮಲೆಬೆಟ್ಟದ ಆಡಳಿತ ಮೋಕ್ತೇಸರರಾದ ಸುಕೇಶ್ ಕುಮಾರ್ ಕಡಂಬು, ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೋಸೈಟಿಯ ಅಧ್ಯಕ್ಷ ಅಜಿತ್ ಶೆಟ್ಟಿ ಕೊರ್ಯಾರು, ವೈಭವ ಹಾರ್ಡ್ ವೇರ್ಸ್ ನ ಸೀತಾರಾಮ ಶೆಟ್ಟಿ, ಶ್ರೀ ಮಣಿಕಂಠ ಶಾಮಿಯಾನದ ರವಿಪೂಜಾರಿ ಆದೇಲು, ಬೆಂಗಳೂರಿನಲ್ಲಿ ನೆಲೆಸಿರುವ ಪ್ರವೀಣ್ ಕುಮಾರ್, ಕುವೆಟ್ಟು ಗ್ರಾ.ಪಂ. ಉಪಾಧ್ಯಕ್ಷ ಗಣೇಶ್ ಕೆ, ಬಿಜೆಪಿ ಯುವ ಮೋರ್ಚಾ ಬೆಳ್ತಂಗಡಿ ಅಧ್ಯಕ್ಷ ಶಶಿರಾಜ್ ಶೆಟ್ಟಿ ಮುಂತಾದವರು ಭಾಗಿಯಾದರು.

LEAVE A REPLY

Please enter your comment!
Please enter your name here