ಬೆಳ್ತಂಗಡಿ: ಕಾಲೇಜ್ ವಿದ್ಯಾರ್ಥಿನಿ ತನ್ನ ಮನೆಯಲ್ಲಿ ಇಲಿಪಾಷಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿನಿ ತಾಯಿ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿರುವ ಬೆಳ್ತಂಗಡಿ ಪೊಲೀಸ್ ಠಾಣೆಯ ಅಧಿಕಾರಿಗಳು ಆರೋಪಿ ಯುವಕನ ಪತ್ತೆಗಾಗಿ ಬಲೆ ಬೀಸಿದ್ದಾರೆ.
ಪ್ರಕರಣದ ವಿವರ: ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದ ನಿವಾಸಿ 17 ವರ್ಷದ ಪಿಯುಸಿ ವಿದ್ಯಾರ್ಥಿನಿಯನ್ನು ಚಾರ್ಮಾಡಿ ಗ್ರಾಮದ ಪ್ರವೀಣ್ ಗೌಡ ಎಂಬಾತ ಸಾಮಾಜಿಕ ಜಾಲತಾಣದ ಮುಖಾಂತರ ಪರಿಚಯ ಮಾಡಿಕೊಂಡಿದ್ದ. ಬಳಿಕ ಮದುವೆಯಾಗುವುದಾಗಿ ನಂಬಿಸಿದ್ದ. ವಿದ್ಯಾರ್ಥಿನಿ ತಾಯಿ ಜೊತೆ ನನ್ನನ್ನು ಪ್ರವೀಣ್ ಜೊತೆ ಮದುವೆ ಮಾಡಿಕೊಡಿ ಎಂದು ಹೇಳಿದ್ದಾಳೆ.
ಯುವಕ ಆಕೆಯ ಜೊತೆ ಬೇರೆ ಬೇರೆ ಕಡೆಗಳಿಗೆ ಸುತ್ತಾಡಿ ಫೋಟೋ ತೆಗೆಸಿಕೊಂಡಿದ್ದ. ಬಳಿಕ ಏಕಾಏಕಿ ನಾನು ನಿನ್ನನ್ನು ಮದುವೆಯಾಗುವುದಿಲ್ಲ ಎಂದು ಹೇಳಿದ್ದ. ಸತ್ತರೆ ಸಾಯಿ. ನಾನು ನಿನ್ನನ್ನು ಮದುವೆಯಾಗಲ್ಲ ಎಂದು ಹೇಳಿ ಮೋಸ ಮಾಡಿದ್ದ. ಇದರಿಂದ ನೊಂದ ವಿದ್ಯಾರ್ಥಿನಿ ನ.೨೦ರಂದು ರಾತ್ರಿ ಮನೆಯಲ್ಲಿ ಅಂಗಡಿಯಿಂದ ತಂದಿದ್ದ ಇಲಿಪಾಷಣ ಪೇಸ್ಟ್ ಸೇವಿಸಿದ್ದಾಳೆ. ಮನೆಮಂದಿಗೆ ವಿಚಾರ ತಿಳಿದು ಉಜಿರೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ನ.೨೬ರಂದು ಚಿಕಿತ್ಸೆಗೆ ಸ್ಪಂದಿಸದೆ ಆಕೆ ಸಾವನ್ನಪ್ಪಿದ್ದಾಳೆ. ಈ ಬಗ್ಗೆ ವಿದ್ಯಾರ್ಥಿನಿ ತಾಯಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಚಾರ್ಮಾಡಿ ಗ್ರಾಮದ ಮರಂಗಾಯಿ ನಿವಾಸಿ ಪ್ರವೀಣ್ (22) ವಿರುದ್ಧ ದೂರಿನಲ್ಲಿ ಆರೋಪ ಹೊರಿಸಿದ್ದಾರೆ. ಅದರಂತೆ ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಕರಣದ ಬಳಿಕ ಪ್ರವೀಣ್ ತನ್ನ ಮೊಬೈಲ್ ಫೋನ್ ಸ್ವಿಚ್ಛ ಆಫ್ ಮಾಡಿ ಪರಾರಿಯಾಗಿದ್ದಾನೆ. ಆತನ ಬಂಧನಕ್ಕೆ ಬೆಳ್ತಂಗಡಿ ಠಾಣಾ ಇನ್ಸ್ಪೆಕ್ಟರ್ ಸುಬ್ಬಾಪುರ್ ಮಠ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ವಿದ್ಯಾರ್ಥಿನಿ ಮೊಬೈಲ್ ಫೋನ್ನಲ್ಲಿತ್ತು ಮಾಹಿತಿ :
ವಿದ್ಯಾರ್ಥಿನಿ ಆತ್ಮಹತ್ಯೆ ಬಳಿಕ ಮನೆ ಮಂದಿ ಆಕೆಯ ಮೊಬೈಲ್ ಫೋನ್ ಪರಿಶೀಲನೆ ಮಾಡಿದ್ದು ಈ ವೇಳೆ ಇಬ್ಬರ ನಡುವೆ ನಡೆದ ಮೆಸೇಜ್, ವಿಡಿಯೋ ಕರೆ ಮಾಡಿದ ಚಾಟ್ ಲಿಸ್ಟ್, ತಿರುಗಾಡಿದ ಫೋಟೋಗಳು ಹಾಗೂ ಇನ್ನಿತರ ವಿಚಾರಗಳು ಪತ್ತೆಯಾಗಿದೆ. ವಿದ್ಯಾರ್ಥಿನಿ ಜೊತೆ ಯುವಕ ನ.೨೫ರವರೆಗೂ ಸಂಪರ್ಕದಲ್ಲಿದ್ದು ಮೆಸೇಜ್ ಮೂಲಕ ಮಾತನಾಡಿದ್ದಾನೆ. ಈ ವೇಳೆ ನನಗೆ ನೀನು ಬೇಕು, ನನ್ನಿಂದ ನಿನ್ನನ್ನು ಮರೆತು ಬಿಡಲು ಸಾಧ್ಯವಾಗುತ್ತಿಲ್ಲ. ನನ್ನನ್ನು ಮದುವೆಯಾಗು ಎಂದು ವಿದ್ಯಾರ್ಥಿನಿ ಪರಿಪರಿಯಾಗಿ ಕೇಳಿದ್ದಾಳೆ. ಇದೆಲ್ಲ ಮೆಸೇಜ್ ಹಾಗೆಯೇ ಮೊಬೈಲ್ನಲ್ಲಿದೆ. ಇದೀಗ ಮಗಳ ಸಾವಿಗೆ ನ್ಯಾಯ ಬೇಕು ಅಂತಾ ವಿದ್ಯಾರ್ಥಿನಿ ತಾಯಿ ಕಣ್ಣೀರು ಹಾಕುತ್ತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಗೆಳೆತನ:
ಕಳೆದ ಏಂಟು ತಿಂಗಳ ಹಿಂದೆ ವಿದ್ಯಾರ್ಥಿನಿ ಹಾಗೂ ಯುವಕನ ನಡುವೆ ಇನ್ಸ್ಟಾಗ್ರಾಂ ಮೂಲಕ ಪರಿಚಯವಾಗಿದೆ. ಬಳಿಕ ಮದುವೆಯಾಗುವುದಾಗಿ ವಿದ್ಯಾರ್ಥಿನಿಗೆ ಯುವಕ ಕೊರಗಜ್ಜನ ಮೇಲೆ ಪ್ರಮಾಣ ಮಾಡಿ ಹೇಳಿದ್ದ ಎನ್ನಲಾಗಿದೆ. ಈ ವಿಚಾರವನ್ನು ತನ್ನ ತಾಯಿ ಜೊತೆ ಮೂರು ತಿಂಗಳ ಹಿಂದೆ ವಿದ್ಯಾರ್ಥಿನಿ ತಿಳಿಸಿದ್ದಾಳೆ. ನನಗೆ ಆತನ ಜೊತೆ ಮದುವೆ ಮಾಡಿಕೊಡಿ ಎಂದು ತಾಯಿ ಬಳಿ ಕೇಳಿದ್ದಾಳೆ. ಈ ವಿಚಾರವಾಗಿ ತಾಯಿ ನಿನಗೆ ವಯಸ್ಸು ಆಗಿಲ್ಲ. ನಿನ್ನ ವಿದ್ಯಾಭ್ಯಾಸ ಮುಗಿದ ಬಳಿಕ ಮದುವೆ ಮಾಡುವ ಎಂದು ಬುದ್ಧಿ ಮಾತು ಹೇಳಿದ್ದಾರೆ. ಯುವಕನ ಜೊತೆ ತಾಯಿಗೆ ಮಾತನಾಡಲು ಮಗಳು ಹೇಳಿದ್ದರಿಂದ ಎರಡು ಬಾರಿ ಮೊಬೈಲ್ನಲ್ಲಿ ಮಾತನಾಡಿದ್ದು ವಯಸ್ಸು ಆಗಲಿ, ಆಮೇಲೆ ಮದುವೆ ಮಾಡುವ ಎಂದಿದ್ದಾರೆ. ಅದಕ್ಕೆ ತಾಯಿ ಓಕೆ ಅಂದು ಸುಮ್ಮನಿದ್ದರು. ಬಳಿಕ ಇವರಿಬ್ಬರು ದೇವಸ್ಥಾನ, ಇತರ ಕಡೆ ರಜೆ ಸಮಯದಲ್ಲಿ ತಿರುಗಾಡಿದ್ದಾರೆ. ಅದಕ್ಕೆ ಸಾಕ್ಷಿಯಂತೆ ಜೊತೆಯಲ್ಲಿ ಸೆಲ್ಪಿ, ಫೋಟೋ ಕೂಡ ತೆಗೆದು ಕೊಂಡಿದ್ದಾರೆ. ಇದು ಮೊಬೈಲ್ನಲ್ಲಿದೆ ಎಂದು ತಿಳಿದು ಬಂದಿದೆ.
ವಿದ್ಯಾರ್ಥಿನಿಯ ಹುಟ್ಟುಹಬ್ಬ ಕಳೆದ ತಿಂಗಳು ೨೩ರಂದು ಇತ್ತು. ಈ ವೇಳೆ ಯುವಕ ವಿದ್ಯಾರ್ಥಿನಿಯ ಫೋಟೋ ಸ್ಟೇಟಸ್ ಹಾಕಿ ಶುಭಾಶಯ ಸಲ್ಲಿಸಿದ್ದ. ಅದನ್ನು ಆತನ ಸಂಬಂಧಿಗಳು ನೋಡಿದ್ದಾರೆ. ಅವರು ಬಡ ಕುಟುಂಬದ ಸಂಬಂಧ ಬೇಡ ಎಂದು ಯುವಕನ ಮನೆಯವರಲ್ಲಿ ಹೇಳಿ ಸಂಬಂಧ ಮುರಿಯುವಂತೆ ಮಾಡಿದ್ದಾರೆ. ಹಾಗಾಗಿ ವಿದ್ಯಾರ್ಥಿನಿ ಜೊತೆ ಮದುವೆಯಾಗುವುದಿಲ್ಲ ಎಂದು ಪ್ರವೀಣ್ ಗೌಡ ಹೇಳಿದ್ದ ಎಂದು ಮಾಹಿತಿ ಲಭ್ಯವಾಗಿದೆ.