ಬೆಳ್ತಂಗಡಿ: ಸುದ್ದಿ ಬಿಡುಗಡೆ ದೀಪಾವಳಿ ವಿಶೇಷ ಸಂಚಿಕೆ-೨೦೨೪ರಲ್ಲಿ ಓದುಗರಿಗೆ ಹಮ್ಮಿಕೊಳ್ಳಲಾಗಿದ್ದ ಅದೃಷ್ಟ ಕೂಪನ್ ಡ್ರಾ ಮತ್ತು ಸಂಚಿಕೆಯ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಸಮಾರಂಭ ಡಿ. ೨ರಂದು ಸುದ್ದಿ ಬಿಡುಗಡೆ ಕಚೇರಿಯಲ್ಲಿ ನಡೆಯಿತು. ಬೆಳ್ತಂಗಡಿ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ ಉಪಾಧ್ಯಕ್ಷರಾದ ನೋಟರಿ ವಕೀಲ ಭಗೀರಥ ಜಿ. ಅವರು ಪ್ರಥಮ ಕೂಪನ್ ಡ್ರಾ ಮಾಡಿದರು. ಬಳಿಕ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿದ ಅವರು ಮಾತನಾಡಿ ಸುದ್ದಿ ಬಿಡುಗಡೆ ಪತ್ರಿಕೆ ಕಳೆದ ೩೮ ವರ್ಷಗಳಿಂದ ಗ್ರಾಮೀಣ ಬರಹಗಾರರಿಗೆ ಉತ್ತಮ ಅವಕಾಶ ನೀಡುತ್ತಿದೆ. ಪತ್ರಿಕೆ ಹಾಗೂ ಪ್ರತಿ ವರ್ಷ ಹೊರ ತರುತ್ತಿರುವ ದೀಪಾವಳಿ ವಿಶೇಷ ಸಂಚಿಕೆಯಲ್ಲಿ ಸುದ್ದಿ ಬಳಗದವರು ಬರೆಯಲು ಅವಕಾಶ ನೀಡುತ್ತಿರುವುದರಿಂದ ಹಲವು ಮಂದಿ ಲೇಖಕರಾಗಿ, ಸಾಹಿತಿಗಳಾಗಿ ಗುರುತಿಸಿಕೊಂಡಿದ್ದಾರೆ ಎಂದರು. ಸುದ್ದಿ ಬಿಡುಗಡೆ ಪತ್ರಿಕೆಯ ಗೌರವ ಪ್ರತಿನಿಧಿಯಾಗಿರುವ ಹಿರಿಯ ಪತ್ರಕರ್ತ ಸಾಣೂರು ಶ್ರೀನಿವಾಸ ತಂತ್ರಿ ಮಾತನಾಡಿ ಪ್ರತಿವರ್ಷ ದೀಪಾವಳಿ ವಿಶೇಷ ಸಂಚಿಕೆಯಲ್ಲಿ ತಾಲೂಕಿನ ಹಲವು ಬರಹಗಾರರಿಗೆ ಅವಕಾಶ ಲಭಿಸಿದೆ. ವಿವಿಧ ಸ್ಪರ್ಧೆಗಳ ಮೂಲಕ ಓದುಗರಿಗೆ ವಿಶೇಷ ಬಹುಮಾನ ಸಿಗುವಂತೆ ಸುದ್ದಿ ಬಿಡುಗಡೆ ಮಾಡುತ್ತಾ ಬಂದಿದೆ ಎಂದರು. ಸುದ್ದಿ ಬಿಡುಗಡೆ ಸಂಪಾದಕ ಸಂತೋಷ್ ಕುಮಾರ್ ಶಾಂತಿನಗರ ಮಾತನಾಡಿ ಕಳೆದ 40 ವರ್ಷಗಳಿಂದ ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರಾದ ಡಾ.ಯು.ಪಿ. ಶಿವಾನಂದರವರ ನೇತೃತ್ವದಲ್ಲಿ ಸುಳ್ಯ, ಪುತ್ತೂರು ಮತ್ತು ಬೆಳ್ತಂಗಡಿ ತಾಲೂಕಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸುದ್ದಿ ಬಿಡುಗಡೆ ಪತ್ರಿಕೆ ಮುದ್ರಣ ಮಾಧ್ಯಮ ಮಾತ್ರವಲ್ಲದೆ ವೆಬ್ ಮತ್ತು ಚಾನೆಲ್ ಕ್ಷೇತ್ರದಲ್ಲಿಯೂ ಸಾಧನೆ ಮಾಡುತ್ತಿದೆ. ಸುದ್ದಿ ಬಳಗದ ಬೆಳವಣಿಗೆಗೆ ಎಲ್ಲರ ಸಹಕಾರ ಮುಂದೆಯೂ ಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಿಕ್ಷಕ ಕೃಷ್ಣಪ್ಪ ಎಂ.ಕೆ. ಮಾತನಾಡಿ ಅನೇಕ ಪತ್ರಿಕೆಗಳು ಬಂದರೂ ಸುದ್ದಿ ಬಿಡುಗಡೆ ೩೮ ವರ್ಷಗಳಿಂದ ತನ್ನ ನಂಬಿಕೆಯನ್ನು ಅಚಲವಾಗಿ ಇಟ್ಟು ಕೊಂಡಿದೆ. ನಮ್ಮಂತಹ ಅದೆಷ್ಟೋ ಬರಹಗಾರರು ಸುದ್ದಿ ಬಿಡುಗಡೆಗೆ ಚಿರಋಣಿಯಾಗಿರಬೇಕು ಎಂದರು.
ಸರಸ್ವತಿ ಆರ್. ಭಟ್ ಅಂಡಿಂಜೆ ಮಾತನಾಡಿ ಸುದ್ದಿ ಬಿಡುಗಡೆ ಪ್ರಾರಂಭದಿಂದಲೂ ಓದುಗಳಾದ ನಾನು ಪ್ರತಿ ಗುರುವಾರ ಮನೆಗೆ ಪತ್ರಿಕೆ ಬರುವುದನ್ನು ಕಾಯುತ್ತೇನೆ. ಸುದ್ದಿ ಬಿಡುಗಡೆಯಲ್ಲಿ ಬರುವ ಗ್ರಾಮೀಣ ವರದಿ ನಮಗೆ ಸುತ್ತ ಮುತ್ತಲಿನ ವಿಚಾರಗಳನ್ನು ತಿಳಿಸುತ್ತದೆ. ದೀಪಾವಳಿ ವಿಶೇಷ ಸಂಚಿಕೆಗೂ ಲೇಖನ ಬರೆಯಲು ಅವಕಾಶ ಮಾಡಿಕೊಟ್ಟು ನಮ್ಮನ್ನು ಬರಹಗಾರರನ್ನಾಗಿ ಮಾಡಿದೆ ಎಂದರು.
ಫೋಟೋಗ್ರಾಪರ್ ಸಿಲ್ವಿಯಾ ಕೊಡ್ದೆರೋ ಅವರು ಮಾತನಾಡಿ ದೀಪಾವಳಿಯ ಸಂದರ್ಭದಲ್ಲಿ ಹೊರ ತರುವ ವಿಶೇಷ ಸಂಚಿಕೆಯ ಮೂಲಕ ನಮ್ಮಂತ ಅನೇಕ ಫೋಟೋ ಗ್ರಾಫರ್‌ಗಳಿಗೂ ಅವಕಾಶ ಸಿಕ್ಕಿದೆ. ದೀಪಾವಳಿ ಸಂಚಿಕೆಗೆ ಯಾವ ಯಾವ ಸ್ಪರ್ಧೆ ಇಟ್ಟಿದ್ದಾರೆ ಎಂಬುದನ್ನು ಆಸಕ್ತಿಯಿಂದ ನೋಡುತ್ತಾ ಅದಕ್ಕೆ ಬೇಕಾದ ಫೋಟೋ ತೆಗೆಯಲು ಸಿದ್ಧತೆ ನಡೆಸುತ್ತೇನೆ. ಮುಂದಿನ ದೀಪಾವಳಿ ಸಂಚಿಕೆಯಲ್ಲಿ ಅಜ್ಜಂದಿರಿಗೆ, ಅಜ್ಜಿಯಂದಿರಿಗೆ ಸ್ಪರ್ಧೆ ಏರ್ಪಡಿಸಬೇಕು ಎಂದರು. ಸ್ಪರ್ಧಾ ವಿಜೇತರಾದ ಸರಸ್ವತಿ ಆರ್. ಜೆ. ಅಂಡಿಂಜೆ, ಸಂಧ್ಯಾ ಪೋಸೋಳಿಕೆ ಮತ್ತಿತರರು ಅನಿಸಿಕೆ ವ್ಯಕ್ತಪಡಿಸಿದರು. ಸುದ್ದಿ ಬಿಡುಗಡೆ ಸಿಇಒ ಸಿಂಚನ ಊರುಬೈಲು, ಕಚೇರಿ ವ್ಯವಸ್ಥಾಪಕ ಮಂಜುನಾಥ ರೈ ಮತ್ತು ಚಾನಲ್ ವಿಭಾಗದ ಪ್ರೊಡಕ್ಷನ್ ಮುಖ್ಯಸ್ಥ ಪುಷ್ಪರಾಜ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹಿರಿಯ ವರದಿಗಾರ ಜಾರಪ್ಪ ಪೂಜಾರಿ ಬೆಳಾಲು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಅಕೌಂಟ್ಸ್ ವಿಭಾಗದ ಮುಖ್ಯಸ್ಥ ಪ್ರಸಾದ್ ವಿಜೇತರ ವಿವರ ವಾಚಿಸಿದರು. ಚಾನೆಲ್ ಮುಖ್ಯಸ್ಥ ದಾಮೋದರ ಡೊಂಡೋಲೆ ವಂದಿಸಿದರು.
ಕೂಪನ್ ಡ್ರಾ ವಿಜೇತರ ವಿವರ: ಸುದ್ದಿ ಬಿಡುಗಡೆ ದೀಪಾವಳಿ ವಿಶೇಷಾಂಕದ ಕೂಪನ್ ಡ್ರಾದಲ್ಲಿ ವಿಜೇತರಾಗಿರುವ ವಿಜೇತರ ವಿವಿರ: ರಾಮಚಂದ್ರ ಪೂಜಾರಿ ಉಜಿರೆ, ವಿಶ್ವನಾಥ ಪೂಜಾರಿ ಮೂಡುಕೋಡಿ, ಸುಧೀರ್ ಕೆ.ಎನ್. ಉರುವಾಲು, ಅನ್ನಪೂರ್ಣ ಯಂ. ಉಜಿರೆ, ವಿನುಶ ಪ್ರಕಾಶ್, ಮೋಹನ್ ಬಂಗೇರ ತೆಂಕಕಾರಂದೂರು, ಎಸ್.ಎಸ್. ಸ್ಕೇಲ್ ಬಜಾರ್ ಉಜಿರೆ, ಹರ್ಷ ಕೆ. ಗುರುವಾಯನಕೆರೆ, ಲಲಿತಾ ಬಿ. ನಾಯಕ್ ಕಡಿರುದ್ಯಾವರ, ವಸುಧೇಶ ಆರ್.ಫಾಟಕ್ ಸೋಮಂತ್ತಡ್ಕ, ನಿರ್ಮಲ್ ಕುಮಾರ್ ಜೈನ್ ಬಂದಾರು, ಲಕ್ಷ್ಮೀ ಆರ್. ಪೈ ಗೇರುಕಟ್ಟೆ, ಸುಮಯ್ಯ ಡಿ. ತೊಟತ್ತಾಡಿ, ಕೋಮಲಾಕ್ಷಿ ನೆರಿಯ, ವಿಶ್ವನಾಥ ಗೌಡ ಕಳೆಂಜ, ಶ್ರೀನಿಕಾ ಎನ್. ಎಸ್. ವೇಣೂರು, ಕಾವ್ಯ ಜೆ.ಎಸ್. ಬಂಟ್ವಾಳ, ವೃಕ್ಷ ಎಚ್. ಕಳೆಂಜ, ಎ. ತೇಜಸ್ ಉರುವಾಲು, ಸುನೀಲ್ ಕುಮಾರ್, ಅಭಿಷೇಕ್ ಕುತ್ಯಾರು, ನಿಶ್ಮಿತಾ ಕಡಿರುದ್ಯಾವರ, ರೂಪೇಶ್ ರೈ ಗೇರುಕಟ್ಟೆ, ಅಕ್ಷಯ್ ಕಾಮತ್ ಗುರುವಾಯನಕೆರೆ ಮತ್ತು ವಿಜಯ್‌ಚಂದ್ರ ಕಳೆಂಜ.