






ಬೆಳ್ತಂಗಡಿ: ಧರ್ಮಸ್ಥಳ ಗ್ರಾಮ ಮತ್ತು ಆಸುಪಾಸಿನಲ್ಲಿ ಅತ್ಯಾಚಾರಕ್ಕೀಡಾಗಿ ಕೊಲೆಯಾದವರ ಮೃತದೇಹಗಳನ್ನು ಕಾನೂನು ಬಾಹಿರವಾಗಿ ಹೂತು ಹಾಕಿಸಲಾಗಿದೆ ಎಂದು ದಾಖಲಾಗಿರುವ ಪ್ರಕರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳವನ್ನು `ಸಂತ್ರಸ್ತ? ಎಂದು ಪರಿಗಣಿಸಬೇಕು ಎಂದು ಒತ್ತಾಯಿಸಿ ಶ್ರೀಕ್ಷೇತ್ರ ಧರ್ಮಸ್ಥಳದ ಪರವಾಗಿ ಸಲ್ಲಿಕೆಯಾಗಿರುವ ಅರ್ಜಿಗೆ ಸಂಬಂಧಿಸಿ ಖ್ಯಾತ ವಕೀಲ ಸಿ.ವಿ. ನಾಗೇಶ್ ಅ.೩ರಂದು ಬೆಳ್ತಂಗಡಿ ನ್ಯಾಯಾಲಯದಲ್ಲಿ ಸುಧೀರ್ಘ ವಾದ ಮಂಡಿಸಿದ್ದಾರೆ.
ಬುರುಡೆ ಪ್ರಕರಣ ಎಂದೇ ಕರೆಸಿಕೊಳ್ಳುತ್ತಿರುವ ಈ ಕೇಸ್ಗೆ ಸಂಬಂಧಿಸಿ ವಿಶೇಷ ತನಿಖಾ ತಂಡ ನಡೆಸುತ್ತಿರುವ ತನಿಖೆಯ ವಿಚಾರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಯಾವ ರೀತಿ ಹಾನಿಯಾಗಿದೆ ಮತ್ತು ಯಾವ ಕಾರಣಕ್ಕೆ ಶ್ರೀ ಕ್ಷೇತ್ರವನ್ನು ಸಂತ್ರಸ್ತ ಎಂದು ಪರಿಗಣಿಸಬೇಕು ಎಂಬುದನ್ನು ಸಿ.ವಿ. ನಾಗೇಶ್ ಅವರು ಬೆಳ್ತಂಗಡಿ ಪ್ರಧಾನ ವ್ಯವಹಾರಿಕ ನ್ಯಾಯಾಧೀಶರು ಹಾಗೂ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯದ ನ್ಯಾಯಾಧೀಶ ರಾಮಲಿಂಗಪ್ಪ ರೆಡ್ಡಿ ಅವರ ಮುಂದೆ ಎಳೆ ಎಳೆಯಾಗಿ ವಿವರಿಸಿದರು.
೧೨:೩೦ರಿಂದ ೨:೧೦ರವರೆಗೆ ಹಾಗೂ ಸಂಜೆ ೩ ಗಂಟೆಯಿಂದ ೩:೪೫ರವರೆಗೆ ಸಿ.ವಿ. ನಾಗೇಶ್ ಸುಧೀರ್ಘ ವಾದ ಮಂಡನ ಮಾಡಿದ್ದಾರೆ. ಸಿ.ವಿ. ನಾಗೇಶ್ ಅವರ ವಾದವನ್ನು ಆಲಿಸಿದ ನ್ಯಾಯಾಧೀಶರು ಮುಂದಿನ ವಿಚಾರಣೆಯನ್ನು ನ.೭ಕ್ಕೆ ಮುಂದೂಡಿದ್ದಾರೆ. ಧರ್ಮಸ್ಥಳದ ಪರ ಖ್ಯಾತ ವಕೀಲರಾದ ರಾಜಶೇಖರ ಹಿಲ್ಯಾರ್, ಮಹೇಶ್ ಕಜೆ, ಸುಬ್ರಹ್ಮಣ್ಯ ಕುಮಾರ್ ಅಗರ್ತ, ರತ್ನವಮ್ಮ ಬುಣ್ಣನ್, ಸುನೀಲ್, ಪ್ರದೀಪ್, ಸಚಿನ್, ಸನತ್, ಹರೀಶ್, ಪ್ರತೀಕ್ಷಾ, ತಸ್ಯ, ಪ್ರಕರಣದ ಆರಂಭದಲ್ಲಿ ಸಾಕ್ಷಿ ದೂರುದಾರನಾಗಿದ್ದು ಆ ಬಳಿಕ ಪ್ರಮುಖ ಆರೋಪಿಯಾಗಿ ಪರಿವರ್ತಿಸಲ್ಪಟ್ಟಿರುವ ಚಿನ್ನಯ್ಯ ಹಾಗೂ ಆತನ ಪರ ವಕೀಲರಾದ ಚಂದನ್, ಶ್ರೀ ಕ್ಷೇತ್ರ ಧರ್ಮಸ್ಥಳವನ್ನು ಸಂತ್ರಸ್ತ ಎಂದು ಪರಿಗಣಿಸಲು ಕೋರಿ ಸಲ್ಲಿಕೆಯಾಗಿರುವ ಅರ್ಜಿಗೆ ಆಕ್ಷೇಪಣೆ ಸಲ್ಲಿಸಿರುವ ರಾಷ್ಟ್ರೀಯ ಹಿಂದು ಜಾಗರಣ ವೇದಿಕೆಯ ಮುಖ್ಯಸ್ಥ ಮಹೇಶ್ ಶೆಟ್ಟಿ ತಿಮರೋಡಿ ಪರ ವಕೀಲರಾದ ವಿಜಯ ವಾಸು ಪೂಜಾರಿ, ಸಿರಾಜುದ್ದೀನ್ ಜೋಗಿಬೆಟ್ಟು, ಎಸ್ಐಟಿ ಅಧಿಕಾರಿಗಳು, ಎಸ್ಐಟಿ ಪರ ವಕೀಲರಾಗಿರುವ ಸಹಾಯಕ ಸರಕಾರಿ ಅಭಿಯೋಜನ ದಿವ್ಯರಾಜ್ ಹೆಗ್ಡೆ ಪುತ್ತೂರು, ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಮುಖ್ಯಸ್ಥ ಮಹೇಶ್ ಶೆಟ್ಟಿ ತಿಮರೋಡಿ, ಅವರ ಸಹೋದರ ಮೋಹನ್ ಶೆಟ್ಟಿ ಉಜಿರೆ, ಮನೋಜ್ ಕುಂಜರ್ಪ, ಗಣೇಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.


ಧರ್ಮಸ್ಥಳದ ಪರ ವಾದ ಪೂರ್ಣವಾಗಿದೆ: ಮಹೇಶ್ ಕಜೆ: ನ್ಯಾಯಾಲಯದಲ್ಲಿ ವಾದ ಮಂಡನೆಯಾದ ಬಳಿಕ ಶ್ರೀ ಕ್ಷೇತ್ರ ಧರ್ಮಸ್ಥಳ ಪರ ವಕೀಲ ಮಹೇಶ್ ಕಜೆ ಅವರು ಸುದ್ದಿ ಬಿಡುಗಡೆಯೊಂದಿಗೆ ಮಾತನಾಡಿ ಮೂರನೇ ಬಾರಿಗೆ ಈ ಪ್ರಕರಣದಲ್ಲಿ ನ್ಯಾಯಾಲಯದ ಮುಂದೆ ಕಲಾಪ ನಡೆದಿದೆ. ಪ್ರಮುಖವಾಗಿ ನ್ಯಾಯವಾದಿ ಸಿ.ವಿ. ನಾಗೇಶ್ ಅವರು ಬೆಳ್ತಂಗಡಿ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದಾರೆ. ದೂರುದಾರರ ಜೊತೆಯಲ್ಲಿ ಶ್ರೀ ಕ್ಷೇತ್ರ ಕೂಡಾ ಪ್ರಕರಣದಲ್ಲಿ ಪಾಲ್ಗೊಳ್ಳಲು ಅವಕಾಶ ಕೊಡಬೇಕೆಂದು ಕೇಳಿಕೊಂಡ ಅಪ್ಲಿಕೇಶನ್ ಇದು. ಬಹಳ ವಿಸ್ತ್ತೃತವಾದ ವಿಮರ್ಶೆಗಳು ನಡೆದಿದೆ. ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ಉಲ್ಲೇಖಿತ ಪ್ರಕರಣಗಳ ಹಿನ್ನೆಲೆಯಲ್ಲಿ ವಾದ ಮಂಡನೆ ಆಗಿದೆ. ಅವರ ಪರವಾಗಿ ದೂರುದಾರರಾಗಿ ರಾಜ್ಯ ಸರಕಾರ ಇರುವಾಗ ಈ ಮಧ್ಯದಲ್ಲಿ ಶ್ರೀ ಕ್ಷೇತ್ರದ ವತಿಯಿಂದ ಇವರು ಕೂಡಾ ಸಂತ್ರಸ್ತ ಎಂಬ ಹಿನ್ನೆಲೆಯಲ್ಲಿ ಬರಬಹುದೇ ಎಂಬ ಪ್ರಶ್ನೆ ಇರುವಂತಹದ್ದು. ಕಾನೂನಿನ ಚೌಕಟ್ಟಿನಲ್ಲಿ ಸಂತ್ರಸ್ತ ಎಂಬ ಪದಕ್ಕೆ ಬಹಳ ವಿಸ್ತೃತವಾದ ವ್ಯಾಖ್ಯಾನವಿದೆ. ಯಾರು ಅಪಮಾನಕ್ಕೆ ಒಳಪಡುತ್ತಾನೆಯೋ, ಯಾರ ಮೇಲೆ ಸುಳ್ಳು ದೂರು ಹಾಕಿರುತ್ತಾರೋ ಆ ಸಂದರ್ಭದಲ್ಲಿ ಅವರಿಗೆ ಕೂಡಾ ನ್ಯಾಯಾಲಯದಲ್ಲಿ ಬಂದು ಪಾಲ್ಗೊಳ್ಳುವಿಕೆಯನ್ನು ಕೇಳುವ ಅವಕಾಶವಿರುತ್ತದೆ ಎಂದು ಹೇಳಿದರು. ಹೊಸದಾದ ಪರಿವರ್ತನೆಯನ್ನು ಗಮನಿಸುವುದಾದರೆ ಈಗಾಗಲೇ ಎಸ್ಐಟಿಯವರು ಒಂದು ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಆ ವರದಿಯಲ್ಲಿರುವ ಮೂಲ ದೂರಿನಲ್ಲಿ ಶ್ರೀ ಕ್ಷೇತ್ರದ ವತಿಯಿಂದ ಕ್ರೈಮ್ ಆಗಿದೆ ಎಂಬ ಆರೋಪವಿತ್ತು. ಆರೋಪಗಳು ಸುಳ್ಳು ಎಂಬುದು ವರದಿಯಲ್ಲಿ ಅತ್ಯಂತ ಸ್ಪಷ್ಟ ಎಂದು ಉಲ್ಲೇಖವಾಗಿದೆ. ಆ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರವು ಮತ್ತಷ್ಟು ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಂಡಿದ್ದು ನ್ಯಾಯಾಲಯ ಅದರ ಬಗ್ಗೆ ಆದೇಶ ನೀಡಲಿದೆ. ಮೊದಲು ನಡೆದ ವಾದದ ಪುನರಾವರ್ತಿತ ಭಾಗವಾಗಿ ಇಂದು ವಾದ ಮಂಡನೆ ಆಗಿದೆ. ಆದರೆ ಹಿಂದೆ ವಾದ ಮಂಡನೆ ಮಾಡುವಾಗ ಎಸ್ಐಟಿಯವರು ಮಧ್ಯಂತರ ವರದಿಯನ್ನು ಮಾತ್ರ ಸಲ್ಲಿಸಿದ್ದರು. ಈಗ ಅಂತಿಮ ವರದಿಯನ್ನು ಸಲ್ಲಿಸಿದ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರದ ಪರವಾಗಿ ಯಾಕಾಗಿ ಬರಬೇಕು, ಯಾವ ರೀತಿಯಾಗಿ ಮುಂದುವರೆಯಬೇಕು, ಯಾವ ಆಧಾರದಲ್ಲಿ ಬರಬೇಕು ಹಾಗೂ ಎಷ್ಟರ ಮಟ್ಟಿಗೆ ಪಾಲ್ಗೊಳ್ಳಲು ಅವಕಾಶ ಇದೆ ಎಂಬುದರ ಬಗ್ಗೆ ವಾದ ಮಂಡನೆ ನಡೆಸಲಾಗಿದೆ. ಕ್ಷೇತ್ರದ ಪರವಾಗಿ ನಮ್ಮ ವಾದ ಮಂಡನೆ ಪೂರ್ಣವಾಗಿದೆ. ನ.೭ಕ್ಕೆ ಮತ್ತೆ ಕಲಾಪ ಮುಂದುವರಿಯಲಿದೆ. ಎಸ್ಐಟಿ ಪರವಾಗಿ, ಸರಕಾರದ ಪರವಾಗಿ ಯಾವಾಗ ವಾದ ಮಂಡನೆಯಾಗಲಿದೆ ಹಾಗೂ ಮುಂದಿನ ಬೆಳವಣಿಗೆಯನ್ನು ತಿಳಿದು ಅಗತ್ಯವಿದ್ದರೆ ನಾವು ವಾದ ಮಂಡಿಸಲಿzವೆ ಎಂದು ಮಹೇಶ್ ಕಜೆ ತಿಳಿಸಿದರು.









