ಸಿಪಿಐಎಂನಿಂದ `ಸರಕಾರಿ ಆಸ್ಪತ್ರೆಗಳನ್ನು ರಕ್ಷಿಸಿ-ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸಿ’ ಹೋರಾಟ-ಕೋಣಗಳ ಆರೋಗ್ಯಕ್ಕೆ ತೋರಿಸುವ ಕಾಳಜಿಯನ್ನು ಸರಕಾರ ಜನರಿಗೆ ತೋರಿಸುತ್ತಿಲ್ಲ: ಕಾಟಿಪಳ್ಳ

0

ಬೆಳ್ತಂಗಡಿ: ಕಂಬಳದ ಕೋಣಗಳ ಆರೋಗ್ಯ ತೋರಿಸುವ ಕಾಳಜಿಯನ್ನು ಸರಕಾರ ಜನ ಸಾಮಾನ್ಯರ ಆರೋಗ್ಯಕ್ಕೆ ತೋರಿಸುತ್ತಿಲ್ಲ ಎಂದು ಸಿಪಿಐಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಹೇಳಿದರು. ಸಿಪಿಐಎಂ ಬೆಳ್ತಂಗಡಿ ತಾಲೂಕು ನೇತೃತ್ವದಲ್ಲಿ ಅ.೬ರಂದು ಬೆಳ್ತಂಗಡಿ ತಾಲೂಕು ಕಚೇರಿ ಎದುರು ನಡೆದ `ಸರಕಾರಿ ಆಸ್ಪತ್ರೆಗಳನ್ನು ರಕ್ಷಿಸಿ ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸಿ’ ಎಂಬ ಹೋರಾಟವನ್ನು ಉದ್ಘಾಟಿಸಿ ಅವರು ಮಾತಾಡಿದರು.
ಉತ್ತಮ ಆರೋಗ್ಯದ ನಿರೀಕ್ಷೆ ಇದೆ: ಸರಕಾರಿ ಆಸ್ಪತ್ರೆಗಳಲ್ಲಿ ಸುವ್ಯವಸ್ಥಿತ ಸೌಲಭ್ಯಗಳು ಇರುವಂತೆ ಮಾಡಬೇಕು. ನುರಿತ ವೈದ್ಯರುಗಳು ಇರಬೇಕು. ಜೊತೆಗೆ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ತಾಲೂಕು ಆಸ್ಪತ್ರೆ ಸ್ಥಾಪನೆ ಆಗಬೇಕು. ಪ್ರತ್ಯೇಕ ತಾಲೂಕಿನ ಕೂಗಿನ ಹಿಂದೆ ಉತ್ತಮ ಆರೋಗ್ಯದ ನಿರೀಕ್ಷೆಯೂ ಇದೆ ಎಂದು ಹೇಳಿದ ಮುನೀರ್ ಕಾಟಿಪಳ್ಳ ಅವರು ನಮ್ಮ ಜಿಲ್ಲೆಗೆ ಸರಕಾರಿ ಮೆಡಿಕಲ್ ಕಾಲೇಜು ಬೇಕು ಎಂಬ ಕೂಗಿಗೆ ಹಲವು ವರ್ಷಗಳಾದರೂ ಇನ್ನೂ ಈಡೇರಿಕೆ ಆಗಿಲ್ಲ. ಆದರೆ ಆವಾಗ ಕೇವಲ ೨ ಇದ್ದ ಖಾಸಗಿ ಮೆಡಿಕಲ್ ಕಾಲೇಜು ೧೨ ಆಗಲು ಪರವಾನಿಗೆ ನೀಡಿರುವುದು ಸರಕಾರದ ಸಾಧನೆಯೇ ಎಂದು ಪ್ರಶ್ನಿಸಿದರು.
ಬೆಂಗಳೂರು ಮಹಾನಗರ ಹೊರತು ಪಡಿಸಿದರೆ ಅತ್ಯಂತ ಎರಡನೇ ದೊಡ್ಡ ತೆರಿಗೆ ನೀಡುವ ಜಿಲ್ಲೆ ನಮ್ಮದಾದರೂ ನಮ್ಮ ಜಿಲ್ಲೆಗೆ ಇನ್ನೂ ಜಯದೇವ ಹೃದಯ ಸಂಬಂಧಿ ಚಿಕಿತ್ಸೆ ಆಸ್ಪತ್ರೆ, ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ಸ್ಥಾಪನೆ ಮಾಡಿಲ್ಲ. ಆದರೆ ಮೈಸೂರು, ಕಲ್ಬುರ್ಗಿ, ಮೊದಲಾದ ಕಡೆ ಮಾತ್ರ ಸ್ಥಾಪಿಸಲಾಗಿದೆ ಎಂದು ಮುನೀರ್ ಕಾಟಿಪಳ್ಳ ಹೇಳಿದರು.

ಸಿಪಿಐಎಂ ತಾಲೂಕು ಸಮಿತಿ ಸದಸ್ಯ ಲಕ್ಷ್ಮಣ ಗೌಡ ಸ್ವಾಗತಿಸಿ ಶ್ಯಾಮರಾಜ್ ಪಟ್ರಮೆ ವಂದಿಸಿದರು. ಸಿಪಿಐಎಂ ತಾಲೂಕು ಮುಖಂಡರಾದ ಜಯಶ್ರೀ, ಧನಂಜಯ, ಸುಕುಮಾರ್, ಅಜಿ.ಎಂ.ಜೋಸ್, ಆಶಾ ಸಂಘದ ಜಿಲ್ಲಾಧ್ಯಕ್ಷೆ ದೇವಕಿ , ಕಾರ್ಮಿಕ ಮುಖಂಡರಾದ ರಾಮಚಂದ್ರ, ಪುಷ್ಪ, ಅಶ್ವಿತ, ಶಾಜಿ, ನಯನ ಕುಮಾರಿ, ಮಹಿಳಾ ಸಂಘದ ಪ್ರಮುಖರಾದ ಕಿರಣಪ್ರಭ, ಕುಮಾರಿ, ವಿದ್ಯಾರ್ಥಿ ನಾಯಕ ವಿನುಶ ರಮಣ, ಯುವಜನ ನಾಯಕರಾದ ಅಧಿತಿ, ಜಯಂತ ಮೊದಲಾದವರು ನೇತೃತ್ವ ವಹಿಸಿದ್ದರು.

ತಾಲೂಕು ಆಸ್ಪತ್ರೆಗೆ ವೈದ್ಯರು, ನರ್ಸ್‌ಗಳು ನೇಮಕ ಆಗಬೇಕು: ಬಿ.ಎಂ. ಭಟ್: ಸಿಪಿಐಎಂ ಬೆಳ್ತಂಗಡಿ ತಾಲೂಕು ಕಾರ್ಯದರ್ಶಿ ಬಿ.ಎಂ.ಭಟ್ ಮಾತನಾಡಿ ಬೆಳ್ತಂಗಡಿ ತಾಲೂಕು ಆಸ್ಪತ್ರೆಗೆ ಸಾಕಷ್ಟು ವೈದ್ಯರು ಮತ್ತು ನರ್ಸ್‌ಗಳು ನೇಮಕವಾಗಬೇಕು. ಕನಿಷ್ಠ ಸ್ಕ್ಯಾನಿಂಗ್ ವ್ಯವಸ್ಥೆ ಇಲ್ಲದ ನಮ್ಮ ಆಸ್ಪತ್ರೆಯಲ್ಲಿ ಮೂಲಭೂತ ಸವಲತ್ತುಗಳೂ ಇಲ್ಲ ಎಂದು ಹೇಳಿದರು. ಕೇರಳದ ಎಡರಂಗ ಗ್ರಾಮದ ಆಸ್ಪತ್ರೆಯಲ್ಲಿರುವ ಸುವ್ಯವಸ್ಥೆಯನ್ನಾದರೂನಮ್ಮ ತಾಲೂಕು ಆಸ್ಪತ್ರೆಗೆ ಒದಗಿಸಿ ಎಂದು ಹೇಳಿದ ಅವರು ನಮ್ಮ ಶಾಸಕರು, ಸಂಸದರು, ಸಚಿವರು ಅನಾರೋಗ್ಯವಾದಾಗ ಸರಕಾರಿ ಆಸ್ಪತ್ರೆಗಳಲ್ಲಿ ಔಷಧಿ ಪಡೆಯದೆ ಖಾಸಗಿ ಆಸ್ಪತ್ರೆಗೆ ಕಡೆ ವಾಲುತ್ತಿದ್ದಾರೆ. ಸರಕಾರಿ ಆಸ್ಪತ್ರೆಗಳ ಮೇಲೆ ಸರಕಾರಕ್ಕೇ ನಂಬಿಕೆ ಇಲ್ಲದಂತಾಗಿದೆ ಎಂದು ಹೇಳಿದರು.

LEAVE A REPLY

Please enter your comment!
Please enter your name here