ನಾಲ್ಕೂರು ಪಾಡಿಯಲ್ಲಿ ಅಸ್ಥಿಪಂಜರ ಪತ್ತೆಯಾದ ಪ್ರಕರಣ-ವೇಣೂರು ಠಾಣಾ ಪೊಲೀಸರಿಂದ ಮುಂದುವರಿದ ತನಿಖೆ-ಮರಣೋತ್ತರ ಪರೀಕ್ಷಾ ವರದಿಗೆ ಕಾಯುತ್ತಿರುವ ಪೊಲೀಸರು

0

ಬೆಳ್ತಂಗಡಿ: ನಾಲ್ಕೂರು ಗ್ರಾಮದ ಪಾಡಿ ಎಂಬಲ್ಲಿ ಸೆ.೨೮ರಂದು ಮಾನವನ ಅಸ್ಥಿಪಂಜರ ಪತ್ತೆಯಾದ ಘಟನೆಗೆ ಸಂಬಂಧಿಸಿದಂತೆ ವೇಣೂರು ಠಾಣಾ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಬಳಂಜ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಲ್ಕೂರು ಗ್ರಾಮದ ಪಾಡಿ ನಿವಾಸಿ ವಿನೋದ ಎಂಬವರ ಕೃಷಿ ತೋಟದ ಕಣಿಯ ಬಳಿ ತಲೆ ಬರುಡೆ, ಎಲುಬು, ವಸ್ತ್ರ ಸಹಿತ ಮಾನವನ ಅಸ್ಥಿಪಂಜರ ಸೆ.೨೮ರಂದು ಸಂಜೆ ಪತ್ತೆಯಾಗಿತ್ತು. ವಿನೋದ ಅವರ ಜಾಗವನ್ನು ನಾಲ್ಕೂರು ಗ್ರಾಮದ ಮಜ್ಜೆನಿಬೈಲು ಪಾಡಿ ನಿವಾಸಿ ಸುರೇಶ್ ಎಂಬವರು ನೋಡಿಕೊಳ್ಳುತ್ತಿದ್ದು ತೋಟವನ್ನು ಮೆಷಿನ್ ಮೂಲಕ ಸ್ವಚ್ಛ ಮಾಡುತ್ತಿರುವಾಗ ಅಸ್ಥಿಪಂಜರ ಪತ್ತೆಯಾಗಿತ್ತು. ಘಟನಾ ಸ್ಥಳಕ್ಕೆ ವೇಣೂರು ಠಾಣಾ ಪೊಲೀಸರು ಹಾಗೂ ಸೋಕೋ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಅಸ್ಥಿಪಂಜರ ಯಾರದ್ದು ಎಂದು ಗುರುತು ಪತ್ತೆ ಹಚ್ಚುವ ಕಾರ್ಯ ನಡೆಸುತ್ತಿರುವ ವೇಣೂರು ಠಾಣಾ ಪೊಲೀಸರು ಮೃತದೇಹದ ಮರಣೋತ್ತರ ಪರೀಕ್ಷೆಯ ವರದಿಗೆ ಕಾಯುತ್ತಿದ್ದಾರೆ. ಬಳಿಕ ವಿಧಿ ವಿಜ್ಞಾನ ಪ್ರಯೋಗಾಲಯದಿಂದ ಬರುವ ವರದಿಯ ಆಧಾರದಲ್ಲಿ ಪೊಲೀಸರು ಮುಂದಿನ ತನಿಖೆ ನಡೆಸಲಿದ್ದಾರೆ. ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ನಾಪತ್ತೆ ಪ್ರಕರಣಗಳ ಮಾಹಿತಿ ಪಡೆದುಕೊಂಡಿರುವ ಪೊಲೀಸರು ವಾರೀಸುದಾರರಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ. ಮೇಲ್ನೋಟಕ್ಕೆ ಈಗಾಗಲೇ ಈ ಅಸ್ಥಿಪಂಜರ ಯಾರದ್ದು ಎಂಬುದನ್ನು ಪೊಲೀಸರು ಅಂದಾಜಿಸಿದ್ದು ಅವರ ಮನೆಯವರ ಡಿಎನ್‌ಎ ಪರೀಕ್ಷೆ ನಡೆಸಲು ಮುಂದಾಗಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

LEAVE A REPLY

Please enter your comment!
Please enter your name here