ಬಂಗ್ಲೆಗುಡ್ಡೆಯಲ್ಲಿ ಯೂ ಟ್ಯೂಬರ್ಸ್‌ನಿಂದ ವೀಡಿಯೋ ಚಿತ್ರೀಕರಣ-ಅಕ್ರಮವಾಗಿ ಪ್ರವೇಶಿಸಿ ಚಿತ್ರೀಕರಿಸಲಾಗಿದೆ-ಅರಣ್ಯ ಇಲಾಖೆಯಿಂದ ಕೇಸು ದಾಖಲುಸ್ಥಳೀಯರು ಮತ್ತು ಯೂ ಟ್ಯೂಬರ್ಸ್‌ನಿಂದ ದೂರು- ಪ್ರತಿದೂರು

0

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ನೇತ್ರಾವತಿ ಬಳಿಯ ಬಂಗ್ಲೆಗುಡ್ಡೆ ರಕ್ಷಿತಾರಣ್ಯದಲ್ಲಿ ಇಬ್ಬರು ಯೂ ಟ್ಯೂಬರ್ಸ್ ವೀಡಿಯೋ ಮಾಡುತ್ತಿದ್ದ ವೇಳೆ ಸ್ಥಳೀಯರು ಪ್ರಶ್ನಿಸಿದ ವೇಳೆ ವಾಗ್ವಾದ ನಡೆದು ಯೂ ಟ್ಯೂಬರ್ಸ್ ಇಬ್ಬರನ್ನು ಪೊಲೀಸರಿಗೆ ಒಪ್ಪಿಸಿರುವ ಘಟನೆ ಸೆ.೨೧ರಂದು ನಡೆದಿದೆ. ಬಳಿಕ ಸ್ಥಳೀಯರು ಹಾಗೂ ಯೂ ಟ್ಯೂಬರ್ಸ್ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಿಸದ ಹಿನ್ನಲೆಯಲ್ಲಿ ಅವರನ್ನು ಬಿಡುಗಡೆಗೊಳಿಸಲಾಗಿದೆ. ನಂತರದ ಬೆಳವಣಿಗೆಯಲ್ಲಿ ಸ್ಥಳೀಯರು ಮತ್ತು ಯೂಟ್ಯೂಬರ್ಸ್ ದೂರು-ಪ್ರತಿದೂರು ನೀಡಿದ್ದಾರೆ. ಈ ಮಧ್ಯೆ ರಕ್ಷಿತಾರಣ್ಯಕ್ಕೆ ಅಕ್ರಮ ಪ್ರವೇಶಗೈದ ಆರೋಪದಡಿ ಯೂಟ್ಯೂಬರ್‌ಗಳಾದ ಯುನೈಟೆಡ್ ಮೀಡಿಯಾದ ಅಭಿಷೇಕ್ ಹಾಗೂ ಬಿಎಲ್ ಆರ್ ಪೋಸ್ಟ್‌ನ ಶ್ರೇಯಸ್ ವಿರುದ್ಧ ಅರಣ್ಯ ಇಲಾಖೆ ನ್ಯಾಯಾಲಯದ ಅನುಮತಿ ಪಡೆದು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದೆ.
ಸ್ಥಳೀಯನಿಂದ ಯೂ ಟ್ಯೂಬರ್ಸ್ ವಿರುದ್ಧ ದೂರು: ಘಟನೆಗೆ ಸಂಬಂಧಿಸಿ ಸ್ಥಳೀಯ ನಿವಾಸಿ ನಿತಿನ್ ಸಫಲ್ಯ ಅವರು ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಸಾಮೂಹಿಕ ಹೆಣ ಹೂತು ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಸ್ಥಳವಾದ ಬಂಗ್ಲೆ ಗುಡ್ಡದ ಮೀಸಲು ಅರಣ್ಯ ಪ್ರದೇಶಕ್ಕೆ ಅನುಮಾನಾಸ್ಪದ ರೀತಿಯಲ್ಲಿ ಪ್ರವೇಶಿಸಿ ಅಕ್ರಮ ಚಟುವಟಿಕೆ ನಡೆಸಿರುವ ಕುರಿತು ಹಾಗೂ ಯಾವುದೇ ಸಾಕ್ಷ್ಯ, ವಸ್ತುಗಳಲ್ಲಿ ಹಸ್ತಕ್ಷೇಪ ಅಥವಾ ಸಾಕ್ಷ್ಯಕ್ಕೆ ಹಾನಿ ಮಾಡುವ ಪ್ರಯತ್ನ ನಡೆದಿದೆಯೇ ಎಂಬುದರ ಕುರಿತು ತನಿಖೆ ನಡೆಸಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.
ಸೆ. ೨೦ರಂದು ಬಂಗ್ಲೆಗುಡ್ಡದ ಮೀಸಲು ಅರಣ್ಯ ಪ್ರದೇಶದೊಳಗೆ ಕೆಲವು ವ್ಯಕ್ತಿಗಳು ಅನುಮಾನಾಸ್ಪದ ರೀತಿಯಲ್ಲಿ ಚಟುವಟಿಕೆ ನಡೆಸುತ್ತಿರುವುದಾಗಿ ಯಾತ್ರಿಕರೊಬ್ಬರು ನಮಗೆ ತಿಳಿಸಿದರು. ಈ ಮಾಹಿತಿ ಪಡೆದ ನಾನು ಹಾಗೂ ನನ್ನೊಂದಿಗೆ ಇದ್ದ ಕೆಲವು ವ್ಯಕ್ತಿಗಳು ಬಂಗ್ಲೆಗುಡ್ಡದ ಸ್ಥಳಕ್ಕೆ ತೆರಳಿದೆವು. ಈ ವೇಳೆ ಅನುಮಾನಾಸ್ಪದ ರೀತಿಯ ಚಟುವಟಿಕೆಗಳಲ್ಲಿ ತೊಡಗಿರುವುದನ್ನು ಗಮನಿಸಿದೆವು.

ಅಲ್ಲಿದ್ದ ವ್ಯಕ್ತಿಗಳನ್ನು ಯುನೈಟೆಡ್ ಮೀಡಿಯಾದ ಅಭಿಷೇಕ್ ಮತ್ತು ಬಿಎಲ್‌ಆರ್ ಪೋಸ್ಟ್‌ನ ಶ್ರೇಯಸ್ ಎಂದು ಗುರುತಿಸಿದೆವು. ಅವರು ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಸ್ಥಳವಾಗಿರುವ ಬಂಗ್ಲೆ ಗುಡ್ಡದ ಮೀಸಲು ಅರಣ್ಯ ಪ್ರದೇಶದಲ್ಲಿ ಯಾವ ಕಾರಣಕ್ಕಾಗಿ ಹಾಜರಿದ್ದರು ಎಂಬುದರ ಬಗ್ಗೆ ನಮಗೆ ಅನುಮಾನ ಉಂಟಾಗಿ ನಾವು ಅವರ ಬಳಿ ತೆರಳಿ ಅವರು ಸದರಿ ಮೀಸಲು ಅರಣ್ಯ ಪ್ರದೇಶಕ್ಕೆ ಪ್ರವೇಶಿಸಲು ಅರಣ್ಯ ಇಲಾಖೆ ಅಥವಾ ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರದಿಂದ ಯಾವುದೇ ಅನುಮತಿ ಅಥವಾ ಅಧಿಕೃತ ಪರವಾನಗಿ ಪಡೆದಿದ್ದಾರೆಯೇ ಎಂದು ವಿಚಾರಿಸಿದೆವು ಮತ್ತು ಅಂತಹ ಅನುಮತಿ ಇದ್ದಲ್ಲಿ ಅದನ್ನು ತೋರಿಸುವಂತೆ ಕೇಳಿದೆವು.ಅಲ್ಲದೆ ಅಭಿಷೇಕ್ ಮತ್ತು ಶ್ರೇಯಸ್ ಅವರು ಸಾಮೂಹಿಕ ಹೆಣ ಹೂತು ಹಾಕುವ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳೊಂದಿಗೆ ನಿಕಟ ಸಂಪರ್ಕ, ಪರಿಚಯ ಹೊಂದಿದ್ದಾರೆ ಎಂಬ ಮಾಹಿತಿ ನಮಗೆ ಲಭ್ಯವಾಗಿದೆ. ಆದ್ದರಿಂದ ಸಾಮೂಹಿಕ ಹೆಣ ಹೂತು ಹಾಕಿರುವ ಪ್ರಕರಣ ನ್ಯಾಯಾಲಯದಲ್ಲಿ ಬಾಕಿಯಿರುವಾಗ ಈ ವ್ಯಕ್ತಿಗಳು ಸ್ಥಳಕ್ಕೆ ಬಂದಿರುವುದು ಸ್ಥಳೀಯರಲ್ಲಿ ಅನುಮಾನ ಹೆಚ್ಚಿಸಿದೆ.

ಅವರು ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ಭೌತಿಕ ಸಾಕ್ಷ್ಯ, ವಸ್ತು ಅಥವಾ ಇತರ ಸಾಕ್ಷ್ಯಗಳನ್ನು ಹುಡುಕಲು, ಸ್ಥಳಾಂತರಿಸಲು, ಬದಲಾಯಿಸಲು, ತೆಗೆದು ಹಾಕಲು, ಹಾನಿಗೊಳಿಸಲು ಅಥವಾ ಯಾವುದೇ ರೀತಿಯಲ್ಲಿ ಸಾಕ್ಷ್ಯದಲ್ಲಿ ಹಸ್ತಕ್ಷೇಪ ಮಾಡಲು ಪ್ರಯತ್ನಿಸಿದ್ದಾರೆಯೇ ಮತ್ತು ಸಾಕ್ಷಿ ನಾಶ ಮಾಡಲು ಬಂದಿದ್ದರೆ ಎಂಬ ಅನುಮಾನದಿಂದ ಧರ್ಮಸ್ಥಳ ಪೊಲೀಸರಿಗೆ ಮಾಹಿತಿ ನೀಡಿದೆವು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಯೂ ಟ್ಯೂಬರ್ ಅಭಿಷೇಕ್‌ನಿಂದ ಹಲ್ಲೆ, ಜಾತಿನಿಂದನೆಯ ದೂರು: ಬಂಗ್ಲೆಗುಡ್ಡೆಯಲ್ಲಿ ವೀಡಿಯೋ ಚಿತ್ರೀಕರಣ ನಡೆಸುತ್ತಿದ್ದ ಯೂ ಟ್ಯೂಬರ್ ಅಭಿಷೇಕ್ ಘಟನೆಯ ಕುರಿತು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ದೂರು ನೀಡಿದ್ದಾರೆ. ಬಂಗ್ಲೆಗುಡ್ಡೆ ಅರಣ್ಯ ಪ್ರದೇಶದಲ್ಲಿ ತನ್ನ ಮೇಲೆ ಗುಂಪಾಗಿ ಹಲ್ಲೆ ನಡೆಸಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆಯೊಡ್ಡಿ ಮೊಬೈಲ್ ಕಸಿದು ಅದರಲ್ಲಿದ್ದ ಮಾಹಿತಿ ಡಿಲೀಟ್ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ತನಗೆ ಹಿಂದೆ ಹಲ್ಲೆ ನಡೆಸಿದ ಆರೋಪಿಗಳೇ ಮರು ಹಲ್ಲೆ ನಡೆಸಿದ್ದಾರೆ.

ತಾನು ಮತ್ತೊಬ್ಬ ಪತ್ರಕರ್ತ/ಮಾಧ್ಯಮ ಪ್ರತಿನಿಧಿಯೊಂದಿಗೆ ಬಂಗ್ಲೆಗುಡ್ಡೆ ಅರಣ್ಯ ಪ್ರದೇಶಕ್ಕೆ ಧರ್ಮಸ್ಥಳ ಗ್ರಾಮದ ಪ್ರಕರಣಕ್ಕೆ ಸಂಬಂಧಿಸಿದ ಸ್ಥಳ, ಘಟನೆಗಳ ಕುರಿತು ವೀಡಿಯೊ ಚಿತ್ರೀಕರಣ ಮಾಡಲು ತೆರಳಿದ್ದಾಗ ಸುಮಾರು ೨೦ಕ್ಕೂ ಹೆಚ್ಚು ಸ್ಥಳೀಯ ವ್ಯಕ್ತಿಗಳು ನಮ್ಮನ್ನು ಸುತ್ತುವರಿದರು. ನಮ್ಮ ಮೇಲೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುತ್ತಾ ಬೆದರಿಕೆ ಹಾಕಿ ನಮ್ಮೊಂದಿಗೆ ದೈಹಿಕವಾಗಿ ದುರ್ವರ್ತನೆ ನಡೆಸಿದರು. ಆ ಗುಂಪಿನಲ್ಲಿದ್ದ ಸುಮಾರು ೪-೫ ಮಂದಿ ವ್ಯಕ್ತಿಗಳು ನನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿ ಹೊಡೆದಿದ್ದಾರೆ.

ಕೆಲವರು ನನ್ನ ಮೇಲೆ ೦೬-೦೮-೨೦೨೫ರಂದು ಹಲ್ಲೆ ನಡೆಸಿದ ಆರೋಪಿಗಳಾಗಿದ್ದು ಅವರನ್ನು ಗುರುತಿಸಬಲ್ಲೆ. ಹಲ್ಲೆ ಸಂದರ್ಭ ಪರಿಶಿಷ್ಟ ಜಾತಿಗೆ ಸೇರಿದ ನನ್ನ ಮೇಲೆ ಜಾತಿ ನಿಂದನೆ ಮಾಡಿದ್ದು ಕೊಲೆ ಬೆದರಿಕೆ ಹಾಕಿದ್ದಾರೆ. ನಂತರ ಆ ಗುಂಪಿನವರು ನಮ್ಮನ್ನು ಬಲವಂತವಾಗಿ ತಮ್ಮ ವಾಹನಕ್ಕೆ ಹತ್ತಿಸಿ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ಜೊತೆಗೆ ತಮ್ಮಲ್ಲಿದ್ದ ಮೊಬೈಲ್ ಕಸಿದುಕೊಂಡು ಅದರಲ್ಲಿದ್ದ ವೀಡಿಯೋಗಳನ್ನು ಡಿಲೀಟ್ ಮಾಡಿದ್ದಾರೆ. ಆದ್ದರಿಂದ ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here