ಗಡಿಪಾರು ಆದೇಶದ ಅವಧಿ ಮುಕ್ತಾಯವಾದ ಕೂಡಲೇ ಮಹೇಶ್ ಶೆಟ್ಟಿ ಪ್ರತ್ಯಕ್ಷ! ಕಲಾವಿದರನ್ನು ನಿಂದಿಸಿದ ಆರೋಪ-ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ಹಾಜರು

0

ಬೆಳ್ತಂಗಡಿ:ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡಿಪಾರು ಮಾಡಿ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತರು ಮೂರು ಬಾರಿ ಆದೇಶ ಹೊರಡಿಸಿದ್ದರೂ ಪೊಲೀಸರಿಗೆ ಸಿಗದೆ ಚಳ್ಳೆಹಣ್ಣು ತಿನ್ನಿಸಿದ್ದ ರಾಷ್ಟ್ರೀಯ ಹಿಂದು ಜಾಗರಣ ವೇದಿಕೆ ಮತ್ತು ಪ್ರಜಾಪ್ರಭುತ್ವ ವೇದಿಕೆಯ ಮುಖ್ಯಸ್ಥ ಮಹೇಶ್ ಶೆಟ್ಟಿ ತಿಮರೋಡಿ ಅವರು ಗಡಿಪಾರು ಆದೇಶದ ಅವಧಿ ಮುಕ್ತಾಯವಾದ ಕೂಡಲೇ ಪ್ರತ್ಯಕ್ಷರಾಗಿದ್ದಾರೆ.
ಪದೇ ಪದೇ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುತ್ತಿರುವ ಮತ್ತು ರೌಡಿಶೀಟರ್ ಆಗಿರುವ ಉಜಿರೆ ಗ್ರಾಮದ ತಿಮರೋಡಿ ನಿವಾಸಿ ಮಹೇಶ್ ಶೆಟ್ಟಿ(೫೭) ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ಗಡಿಪಾರು ಮಾಡುವಂತೆ ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ ಸಲ್ಲಿಸಿದ್ದ ಮನವಿಯ ಹಿನ್ನೆಲೆಯಲ್ಲಿ ವಾದ ಪ್ರತಿವಾದ ಆಲಿಸಿದ್ದ ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಅವರು ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಒಂದು ವರ್ಷದ ಅವಧಿಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದರು. ಬಳಿಕ ಮಹೇಶ್ ಶೆಟ್ಟಿ ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು. ತಾಂತ್ರಿಕ ಕಾರಣದಿಂದ ಗಡಿಪಾರು ಆದೇಶಕ್ಕೆ ತಾತ್ಕಾಲಿಕ ತಡೆ ನೀಡಿದ್ದ ಹೈಕೋರ್ಟ್ ನ್ಯಾಯಮೂರ್ತಿಗಳು ಅರ್ಜಿಯನ್ನು ಸಹಾಯಕ ಆಯುಕ್ತರಿಗೆ ಹಿಂತಿರುಗಿಸಿದ್ದರು. ಬಳಿಕ ಹೈಕೋರ್ಟ್ ಮಾರ್ಗಸೂಚಿಯಂತೆ ಪರಿಷ್ಕೃತ ಆದೇಶ ಹೊರಡಿಸಿದ್ದ ಸಹಾಯಕ ಆಯುಕ್ತರು ಮಹೇಶ್ ಶೆಟ್ಟಿ ಅವರನ್ನು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಒಂಬತ್ತು ತಿಂಗಳ ಅವಧಿಗೆ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದರು. ಇದನ್ನು ಪ್ರಶ್ನಿಸಿ ತಿಮರೋಡಿ ಪುನಃ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್‌ನಲ್ಲಿ ವಾದ ಪ್ರತಿವಾದ ನಡೆದು ಬಳಿಕ ಅರ್ಜಿ ಸಹಾಯಕ ಆಯುಕ್ತರಿಗೆ ಹಿಂತಿರುಗಿತ್ತು.

ಈ ಮಧ್ಯೆ ಮಹೇಶ್ ಶೆಟ್ಟಿ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಪೊಲೀಸ್ ಇಲಾಖೆಗೆ ಸೂಚಿಸಿತ್ತು. ಪುತ್ತೂರು ಸಹಾಯಕ ಆಯುಕ್ತರ ನ್ಯಾಯಾಲಯದಲ್ಲಿ ಮತ್ತೆ ವಿಚಾರಣೆ ನಡೆದು ಅಂತಿಮವಾಗಿ ಮಹೇಶ್ ಶೆಟ್ಟಿ ಅವರನ್ನು ಆರು ತಿಂಗಳ ಅವಧಿಗೆ ಮಾನ್ವಿ ತಾಲೂಕಿಗೆ ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿತ್ತು. ಮಹೇಶ್ ಶೆಟ್ಟಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರೂ ತಡೆಯಾಜ್ಞೆ ಸಿಕ್ಕಿರಲಿಲ್ಲ. ಈ ಹಿನ್ನಲೆಯಲ್ಲಿ ಮೂರನೇ ಬಾರಿಯೂ ಪೊಲೀಸರ ಕೈಗೆ ಸಿಗದೆ ಮಹೇಶ್ ಶೆಟ್ಟಿ ತಿಮರೋಡಿ ಭೂಗತರಾಗಿದ್ದರು. ಮೂರು ಬಾರಿ ಗಡಿಪಾರು ಆದೇಶ ಆದಾಗಲೂ ಮಹೇಶ್ ಶೆಟ್ಟಿ ಅವರನ್ನು ವಶಕ್ಕೆ ಪಡೆದು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡಿಪಾರು ಮಾಡಿ ಬರಲು ಪೊಲೀಸರು ಪ್ರಯತ್ನಿಸಿದ್ದರು. ಆದರೆ ಮಹೇಶ್ ಶೆಟ್ಟಿ ಪೊಲೀಸರ ಕೈಗೆ ಸಿಕ್ಕಿರಲಿಲ್ಲ. ಪೊಲೀಸರು ಮಹೇಶ್ ಶೆಟ್ಟಿ ಮನೆಗೆ ನೋಟೀಸ್ ಅಂಟಿಸಿದ್ದರಲ್ಲದೆ ಉಜಿರೆಯಲ್ಲಿ ಧ್ವನಿವರ್ಧಕದ ಮೂಲಕ ಉದ್ಘೋಷಣೆ ಮಾಡಿದ್ದರು. ಅಲ್ಲದೆ ಮಧ್ಯರಾತ್ರಿಯೂ ಸೇರಿದಂತೆ ಹಲವು ಬಾರಿ ಮಹೇಶ್ ಶೆಟ್ಟಿ ಅವರ ಮನೆಗೆ ಪೊಲೀಸರ ದಂಡೇ ದಾಳಿ ಮಾಡಿತ್ತು. ಆದರೆ ಅವರು ಪತ್ತೆಯಾಗಿರಲಿಲ್ಲ. ಮಹೇಶ್ ಶೆಟ್ಟಿ ಅವರ ಆಪ್ತರನ್ನು ಸಂಪರ್ಕಿಸಿ ಅವರ ಮೂಲಕ ಬಲೆಗೆ ಬೀಳಿಸಲು ಪ್ರಯತ್ನ ನಡೆಸಲಾಗಿತ್ತು. ಜತೆಗೆ ಮಹೇಶ್ ಶೆಟ್ಟಿ ಅವರು ಆಶ್ರಯ ಪಡೆದಿರಬಹುದಾದ ಸ್ಥಳಗಳನ್ನು ಪಟ್ಟಿ ಮಾಡಿ ಹಲವೆಡೆಗೆ ಪೊಲೀಸರು ತೆರಳಿದ್ದರು. ಕೊನೇಯ ಅಸ್ತ್ರವಾಗಿ ಮಹೇಶ್ ಶೆಟ್ಟಿ ಅವರನ್ನು ಮನವೊಲಿಸಿ ಕೆಲವು ದಿನಗಳಿಗಾದರೂ ಗಡಿಪಾರು ಮಾಡಿ ಬರಬೇಕು ಎಂಬ ಪ್ರಯತ್ನ ನಡೆದಿತ್ತು. ಆದರೆ ಯಾವ ಪ್ರಯತ್ನವೂ ಫಲ ಕೊಟ್ಟಿರಲಿಲ್ಲ. ಗಡಿಪಾರು ಆದೇಶದ ಅವಧಿ ಮುಕ್ತಾಯವಾಗಲು ಇನ್ನು ಕೇವಲ ಮೂರು ದಿನ ಇರುವುದರಿಂದ ಉಜಿರೆಯ ಕುಂಜರ್ಪದಲ್ಲಿ ತನ್ನದೇ ನೇತೃತ್ವದ ರಾಷ್ಟ್ರೀಯ ಹಿಂದು ಜಾಗರಣ ವೇದಿಕೆಯ ವತಿಯಿಂದ ನಡೆಯುವ ಸಾರ್ವಜನಿಕ ಗಣೇಶೋತ್ಸವಕ್ಕೆ ಮಹೇಶ್ ಶೆಟ್ಟಿ ಆಗಮಿಸಬಹುದು ಎಂಬ ಮಾಹಿತಿಯ ಮೇರೆಗೆ ಮೂರು ದಿನದ ಕಾರ್ಯಕ್ರಮದ ವೇಳೆಯೂ ಪೊಲೀಸ್ ಇಲಾಖೆ ಪಹರೆ ಏರ್ಪಡಿಸಿತ್ತು.

ಆದರೆ ಸಾವಿರಾರು ಮಂದಿ ಸಮ್ಮುಖದಲ್ಲಿ ವಿಜ್ರಂಭಣೆಯಿಂದ ಗಣೇಶೋತ್ಸವ ಮತ್ತು ಶೋಭಾಯಾತ್ರೆ ನಡೆದಿದ್ದರೂ ಮಹೇಶ್ ಶೆಟ್ಟಿ ಬಂದಿರಲಿಲ್ಲ. ವಿಶೇಷವೆಂದರೆ ಗಡಿಪಾರು ಆದೇಶದ ಅವಧಿ ಮುಕ್ತಾಯವಾಗುತ್ತಿದ್ದಂತೆಯೇ ಸೆ.೧೭ರಂದು ಮಹೇಶ್ ಶೆಟ್ಟಿ ಉಜಿರೆಯಲ್ಲಿ ಪ್ರತ್ಯಕ್ಷವಾಗಿದ್ದರು. ಮಾತ್ರವಲ್ಲದೆ ತಿಮರೋಡಿ ಬೀಡಿನಲ್ಲಿ ನೂರಾರು ಮಂದಿಯೊಂದಿಗೆ ಬಹಿರಂಗ ಸಭೆ ನಡೆಸಿದ್ದರು. ಆ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಮತ್ತೊಮ್ಮೆ ಅವರನ್ನು ಗಡಿಪಾರು ಮಾಡುವ ಪ್ರಯತ್ನ ನಡೆಯುತ್ತದೆಯೇ ಅಥವಾ ಇದನ್ನು ಕೈ ಬಿಡಲಾಗುತ್ತದೆಯೇ ಎಂದು ಚರ್ಚೆ ನಡೆಯುತ್ತಿದೆ.
ಪುತ್ತೂರು ಮಹಿಳಾ ಠಾಣೆಗೆ ಹಾಜರು: ಸೆ.೨೧ರಂದು ರಾತ್ರಿ ಮಹೇಶ್ ಶೆಟ್ಟಿ ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ.

ಮಂಗಳೂರಿನ ಖಾಸಗಿ ಟಿ.ವಿ.ಯಲ್ಲಿ ಪ್ರಸಾರವಾಗಿದ್ದ ಯಕ್ಷಗಾನದ ಎಪಿಸೋಡ್‌ನಲ್ಲಿ `ಬುರುಡೆ ಗ್ಯಾಂಗ್’ ಎಂದು ಉಲ್ಲೇಖಿಸಲಾಗಿದೆ ಎಂಬ ಕಾರಣಕ್ಕೆ ಯಕ್ಷಗಾನ ಕಲಾವಿದ ಪ್ರಜ್ವಲ್ ಕುಮಾರ್ ಗುರುವಾಯನಕೆರೆ ಅವರಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದ ವೇಳೆ ಯಕ್ಷಗಾನ ಕಲಾವಿದ ದಿನೇಶ್ ಕೋಡಪದವು ಅವರ ತಾಯಿ ಲೀಲಾವತಿ ಅವರ ಕುರಿತು ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಸಿ ಮಾತನಾಡಿದ ಆರೋಪದಡಿ ಪುತ್ತೂರು ಮಹಿಳಾ ಠಾಣೆಯಲ್ಲಿ ದಾಖಲಾಗಿರುವ ಕೇಸ್‌ಗೆ ಸಂಬಂಧಿಸಿ ಮಹೇಶ್ ಶೆಟ್ಟಿ ತಿಮರೋಡಿ ಅವರಿಗೆ ಹೈಕೋರ್ಟ್ ಷರತ್ತುಬದ್ದ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು.
ಈ ನಡುವೆ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತರು ಹೊರಡಿಸಿದ್ದ ಗಡಿಪಾರು ಆದೇಶದ ಅವಧಿ ಮುಕ್ತಾಯಗೊಂಡ ಬೆನ್ನಲ್ಲೇ ತನ್ನ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿ ಮಹೇಶ್ ಶೆಟ್ಟಿ ತಿಮರೋಡಿ ಅವರು ಮಹಿಳಾ ಪೊಲೀಸ್ ಠಾಣೆಗೆ ಸೆ.೧೯ರಂದು ಹಾಜರಾಗಿದ್ದರು. ಆದರೆ ಆ ಸಂದರ್ಭ ಇನ್‌ಸ್ಪೆಕ್ಟರ್ ಸುನಿಲ್ ಕುಮಾರ್ ಅವರು ಠಾಣೆಯಲ್ಲಿ ಇರದೇ ಇದ್ದುದರಿಂದ ಸೆ.೨೧ರಂದು ರಾತ್ರಿ ಮಹೇಶ್ ಶೆಟ್ಟಿ ತಿಮರೋಡಿ ಮಹಿಳಾ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ. ಈ ವೇಳೆ ಅವರ ಹೇಳಿಕೆಗಳನ್ನು ವಿಡಿಯೋ ದಾಖಲೆ ಮಾಡಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here