ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ಸಂಪರ್ಕ ಬೆಳೆಸಿ ವಂಚನೆ-ಮಾರಣಾಂತಿಕ ಹಲ್ಲೆ, ಕೊಲೆಗೆ ಯತ್ನ: ವಕೀಲನ ವಿರುದ್ಧ ಕೇಸ್ ದಾಖಲು

0

ಬೆಳ್ತಂಗಡಿ: ಮದುವೆಯಾಗುವುದಾಗಿ ನಂಬಿಸಿ ಮಹಿಳೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿ ಬಳಿಕ ಮದುವೆಯಾಗುವುದಿಲ್ಲವೆಂದು ವಂಚಿಸಿದ್ದಲ್ಲದೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಆರೋಪದಡಿ ಬೆಳ್ತಂಗಡಿಯ ಯುವ ವಕೀಲರೋರ್ವರ ವಿರುದ್ಧ ಬೆಂಗಳೂರು ನಗರದ ಬಾಗಳಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕರಂಬಾರು ಗ್ರಾಮದ ಕಟ್ಟಿಲೊಡಿ ನಿವಾಸಿ ಜಿತಿನ್ ಜಿಜೋ (೨೬) ಪ್ರಕರಣದ ಆರೋಪಿಯಾಗಿದ್ದಾರೆ.
ಪ್ರಕರಣ ದಾಖಲು: ಬೆಂಗಳೂರು ನಿವಾಸಿಯಾಗಿರುವ ೩೬ ವರ್ಷ ಪ್ರಾಯದ ದೂರುದಾರ ಮಹಿಳೆಗೆ ೨೦೨೧ರಲ್ಲಿ ಮದುವೆಯಾಗಿತ್ತು. ಮದುವೆಯಾದ ಮೇಲೆ ಪತಿಯ ವರ್ತನೆ ಸರಿ ಹೋಗದ ಕಾರಣ ಮಹಿಳೆ ಅವರ ಗಂಡನ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಈ ಮಹಿಳೆಗೆ ೨೦೨೫ರ ಫೆಬ್ರವರಿ ತಿಂಗಳಲ್ಲಿ ಯಲಹಂಕದಲ್ಲಿ ವಾಸವಿರುವ ಯುವ ವಕೀಲ ಜಿತಿನ್ ಜಿಜೊ ಅವರ ಪರಿಚಯವಾಗಿತ್ತು. ಬಳಿಕ ಮಹಿಳೆ ಜಿತಿನ್ ಅವರನ್ನು ತಮ್ಮ ವಕೀಲರಾಗಿ ನೇಮಿಸಿಕೊಂಡಿದ್ದರು.
ಆ ಸಮಯದಲ್ಲಿ ಒಬ್ಬರಿಗೊಬ್ಬರು ಪ್ರಕರಣದ ವಿಚಾರವಾಗಿ ಮಾತನಾಡುತ್ತಿದ್ದರು. ನಂತರ ಜಿತಿನ್ ಜಿಜೊಗೆ ಮಹಿಳೆ ಮೇಲೆ ಪ್ರೀತಿ ಹುಟ್ಟಿತ್ತು. ಈ ವಿಚಾರವನ್ನು ಮಹಿಳೆಗೆ ತಿಳಿಸಿದ್ದರು. ನನಗೆ ನಿನ್ನ ಮೇಲೆ ಪ್ರೀತಿ ಇದೆ. ನಾನು ನಿನ್ನ ಪ್ರಕರಣವನ್ನು ಬಗೆ ಹರಿಸಿ ನಿನ್ನ ಗಂಡನಿಂದ ನಿನಗೆ ಮುಕ್ತಿ ನೀಡಿ ನಿನ್ನನ್ನು ಮದುವೆಯಾಗುತ್ತೇನೆ. ನಿನ್ನನ್ನು ಬಿಟ್ಟು ಇರಲು ಆಗುತ್ತಿಲ್ಲ. ನಾನು ನಿನ್ನನ್ನು ಮದುವೆಯಾಗುತ್ತೇನೆಂದು ಹೇಳಿದ್ದ ಜಿತಿನ್ ಅವರು ನಾನು ಸಹ ನೀನು ವಾಸವಾಗಿರುವ ಏರಿಯಾದಲ್ಲಿ ವಾಸವಾಗಿರುತ್ತೇನೆ ಎಂದು ತಿಳಿಸಿದ್ದರು. ಬಳಿಕ ಮಹಿಳೆ ವಾಸವಾಗಿರುವ ಮನೆಯ ೩ನೇ ಮಹಡಿಯ ಮನೆಯನ್ನು ಬಾಡಿಗೆ ಪಡೆದುಕೊಂಡಿದ್ದರು. ಮಹಿಳೆ ಮನೆಯಲ್ಲಿರುವಾಗ ಆಗಾಗ ಅಲ್ಲಿಗೆ ಬರುತ್ತಿದ್ದ ಜಿತಿನ್ ಅವರು ಮಹಿಳೆಯ ಜೊತೆ ಹಲವಾರು ಬಾರಿ ಲೈಂಗಿಕ ಸಂಪರ್ಕ ಬೆಳೆಸಿದ್ದಾರೆ. ೨೦೨೬ರಲ್ಲಿ ಮಹಿಳೆಗೆ ಪತಿಯೊಂದಿಗೆ ವಿಚ್ಛೇದನ ಲಭಿಸಿದೆ. ಇದಾದ ಬಳಿಕ ಮಹಿಳೆ ಮೇಲೆ ಅನುಮಾನ ಪಟ್ಟು ಜಿತಿನ್ ಅವರು ನೀನು ಬೇರೆಯವರ ಜೊತೆ ಸಂಬಂಧ ಇಟ್ಟುಕೊಂಡಿದ್ದೀಯಾ ಎಂದು ಕೆಟ್ಟ ಪದಗಳಿಂದ ನಿಂದಿಸುತ್ತಿದ್ದರು. ಸೆ.೨ರಂದು ಮಹಿಳೆ ವಾಸವಾಗಿರುವ ಮನೆಗೆ ಬಂದಿದ್ದ ಜಿತಿನ್ ಅವರು ಮಹಿಳೆಯ ಮೊಬೈಲ್ ತೆಗೆದುಕೊಂಡು ಮಹಿಳೆ ಮತ್ತು ಜಿತಿನ್ ಜಿಜೊ ಅವರ ಮಧ್ಯೆ ನಡೆದಿರುವ ಎಲ್ಲಾ ವೈಯಕ್ತಿಕ ಸಂಭಾಷಣೆಗಳನ್ನು ಉzಶಪೂರ್ವಕವಾಗಿ ಅಳಿಸಿದ್ದಾರೆ. ಮಹಿಳೆ ಆ ಸಂದೇಶಗಳನ್ನು ಏಕೆ ಅಳಿಸಿದ್ದೀರಿ ಎಂದು ಪ್ರಶ್ನಿಸಿದಾಗ ಜಿತಿನ್ ಅತ್ಯಂತ ಹಿಂಸಾತ್ಮಕವಾಗಿ ನೀನು ಈಗ ಸಾಯಲೇ ಬೇಕು. ಇಲ್ಲದಿದ್ದರೆ ನನ್ನ ವಕೀಲ ವೃತ್ತಿಗೆ ಅವಮಾನ ಆಗುತ್ತದೆ.
ನಿನ್ನನ್ನು ಇಲ್ಲಿಯೇ ಕೊಲೆ ಮಾಡಿ ಬಿಡುತ್ತೇನೆ ಎಂದು ಹೇಳಿ ಮಹಿಳೆಯ ಮೈಮೇಲಿದ್ದ ಬಟ್ಟೆಯನ್ನು ಹರಿದು ಹಾಕಿ ಎದೆ, ಬೆನ್ನು, ಮುಖ ಹಾಗೂ ದೇಹದ ವಿವಿಧ ಭಾಗಗಳಿಗೆ ಕೈಯಿಂದ ನಿರಂತರವಾಗಿ ಹೊಡೆದಿದ್ದಾರೆ. ಮಹಿಳೆಯ ಮೈ ಕೈಗೆಲ್ಲಾ ಕಚ್ಚಿ ನಿನ್ನನ್ನು ಇಲ್ಲಿಯೇ ಕೊಲೆ ಮಾಡಿ ಬಿಡುತ್ತೇನೆ ಎಂದು ಬೆದರಿಸಿ ಅಲ್ಲಿಯೇ ಇದ್ದ ಸ್ಟಾಂಡ್ ಫ್ಯಾನ್ ತೆಗೆದುಕೊಂಡು ಮಹಿಳೆಗೆ ಹೊಡೆದು ನಂತರ ವೇಲ್ ತೆಗೆದುಕೊಂಡು ಅವರ ಕುತ್ತಿಗೆಯನ್ನು ಬಿಗಿದು ಉಸಿರುಗಟ್ಟಿಸಿ ಕೊಲ್ಲಲು ಪ್ರಯತ್ನಿಸಿದ್ದಾರೆ. ಆ ವೇಳೆ ಮಹಿಳೆ ಅವರಿಂದ ತಪ್ಪಿಸಿಕೊಂಡು ಅಲ್ಲಿಂದ ಓಡಿ ಹೋಗಿದ್ದಾರೆ.
ನಂತರ ಅಲ್ಲಿಂದ ಬಂದು ಹತ್ತಿರದಲ್ಲಿರುವ ಎನ್.ಆರ್.ಆರ್. ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡು ಬಳಿಕ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಸೆ.೩ರಂದು ಬೆಂಗಳೂರು ನಗರದ ಬಾಗಳಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೇಸು ದಾಖಲಾದ ನಂತರ ವಕೀಲ ಜಿತಿನ್ ಜಿಜೋ ಅವರು ತಲೆ ಮರೆಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here