ಕಣಿಯೂರು: ಖೋಟಾ ನೋಟು ಮುದ್ರಣದ ಕಟ್ಟಡಕ್ಕೆ ಪೊಲೀಸ್ ದಾಳಿ, ಏಳು ಮಂದಿ ಬಂಧನ-ನೋಟು ಮುದ್ರಣಕ್ಕೆ ಸಂಬಂಧಿಸಿದ ಸೊತ್ತುಗಳು ವಶ

0

ಬೆಳ್ತಂಗಡಿ: ಕಣಿಯೂರು ಗ್ರಾಮದ ಅಡೆಂಜದಲ್ಲಿರುವ ಕಟ್ಟಡವೊಂದರಲ್ಲಿ ನಕಲಿ ನೋಟುಗಳನ್ನು ಮುದ್ರಿಸುತ್ತಿದ್ದ ಜಾಲವನ್ನು ಪತ್ತೆ ಹಚ್ಚಿರುವ ಪೊಲೀಸರು ನೋಟು ಮುದ್ರಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಏಳು ಮಂದಿಯನ್ನು ಬಂಧಿಸಿ ನೋಟು ಮುದ್ರಣಕ್ಕೆ ಸಂಬಂಧಿಸಿದ ಯಂತ್ರ ಮತ್ತು ಪರಿಕರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಪುತ್ತೂರು ಕಸಬಾ ಗ್ರಾಮದ ಇಬ್ರಾಹಿಂ (೬೦), ಕಾಸರಗೋಡು ಜಿಲ್ಲೆಯ ಚಂಗುಲ ಗ್ರಾಮದ ಶರೀಫ್ (೫೧), ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಸಂದೀಪ ಪುಂಡಲೀಕ ಶೋಳಂಬಿ (೩೦), ಕಾಸರಗೋಡು ಜಿಲ್ಲೆಯ ಆಮೂರು ಗ್ರಾಮದ ಮಹಮ್ಮದ್ ನಬಾಸ್ (೩೭), ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಸಲ್ಮಾನ್ ಫಾರೀಸ್ (೨೫), ಬೆಳ್ತಂಗಡಿ ತಾಲೂಕಿನ ಉರುವಾಲು ಗ್ರಾಮದ ಸಿರಾಜುದ್ದೀನ್ (೩೪) ಮತ್ತು ಬೆಳ್ತಂಗಡಿ ತಾಲೂಕಿನ ಪುತ್ತಿಲ ಗ್ರಾಮದ ಇರ್ಷಾದ್ (೩೧) ಬಂಧಿತರು. ಉಪ್ಪಿನಂಗಡಿ ಪೊಲೀಸ್ ಠಾಣಾ ಎಸ್.ಐ. ಸುತೇಶ್ ಕೆ.ಪಿ. ಅವರಿಗೆ ಬಂದ ಖಚಿತ ಮಾಹಿತಿಯೊಂದಿಗೆ ಜು.೧೫ರಂದು ರಾತ್ರಿ ಸುಮಾರು ೧೧:೩೦ಕ್ಕೆ ಈ ಕಟ್ಟಡಕ್ಕೆ ದಾಳಿ ನಡೆಸಿದ ಪೊಲೀಸ್ ತಂಡ ೫೦೦ ರೂಪಾಯಿ ಮುಖಬೆಲೆಯ ಒಂದು ನೋಟು, ೫೦೦ ರೂಪಾಯಿ ಮುಖ ಬೆಲೆಯ ನೋಟುಗಳಂತೆ ಕಾಣುವ ಎ-೪ ಸೈಜ್‌ನ ೨೧ ಹಾಳೆಗಳು, ಗಣಕ ಯಂತ್ರ, ಝರಾಕ್ಸ್ ಯಂತ್ರ, ಸೀಲ್ ಸೇರಿದಂತೆ ಇತರೆ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ. ೧೦೩/೨೦೨೬ರಡಿ ಕಲಂ ೧೭೮ ಬಿಎನ್‌ಎಸ್ ೨೦೨೩ರಂತೆ ಪ್ರಕರಣ ದಾಖಲಾಗಿದೆ.

ಈ ಜಾಲವನ್ನು ಪತ್ತೆ ಹಚ್ಚುವಲ್ಲಿ ಉಪ್ಪಿನಂಗಡಿ ಪೊಲೀಸ್ ಠಾಣಾ ಉಪನಿರೀಕ್ಷಕ ಸುತೇಶ್ ಕೆ.ಪಿ. ಅವರಿಗೆ ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಬಿಂದುಮಣಿ ಆರ್.ಎನ್., ಕೊಡಗು ಜಿಲ್ಲಾ ಪೊಲೀಸ್ ಸಿಬ್ಬಂದಿಗಳಾದ ಯೋಗೀಶ್ ಬಿ., ನಿರಂಜನ್ ಎಂ.ಎನ್., ದ.ಕ. ಜಿಲ್ಲಾ ಪೊಲೀಸ್ ವಿಶೇಷ ಘಟಕದ ನಿರೀಕ್ಷಕರಾದ ನಂದಕುಮಾರ್, ಎ.ಎಸ್.ಐ. ದೀಪಕ್, ಸಿಬ್ಬಂದಿಗಳಾದ ಪ್ರತೀಶ್ ಮತ್ತು ರವೂಫ್ ಸಹಕರಿಸಿದ್ದರು.

ಕುಪ್ಪೆಟ್ಟಿ-ಬಂದಾರು ರಸ್ತೆಯ ಮಧ್ಯದಲ್ಲಿರುವ ಪ್ರದೇಶ: ಸುತ್ತಮುತ್ತ ಬೇರೆ ಮನೆಗಳಿಲ್ಲ ಕುಪ್ಪೆಟ್ಟಿ-ಬಂದಾರು ರಸ್ತೆಯ ಮಧ್ಯದಲ್ಲಿ ಬರುವ ಬೆಳ್ತಂಗಡಿ ತಾಲೂಕಿನ ಆಡೆಂಜ ಜನ ವಸತಿ ಕಡಿಮೆ ಇರುವ ಪ್ರದೇಶವಾಗಿದೆ. ಬೀಜದ ಹಾಡಿಯಂತೆ ಸುತ್ತಲೂ ಮರಗಿಡಗಳಿಂದ ತುಂಬಿಕೊಂಡಿದೆ. ಮುಖ್ಯ ರಸ್ತೆಯಿಂಡ ಸುಮಾರು ೫೦ ಮೀಟರ್ ದೂರಕ್ಕೆ ಮಾಪಳ್ಳ ನಿವಾಸಿ ಇದ್ರೀಸ್ ಎಂಬವರಿಗೆ ಸೇರಿದ ಈ ಎರಡಂತಸ್ತಿನ ಕಟ್ಟಡವಿದೆ. ಈ ಕಟ್ಟಡ ಪರಿಸರದ ಸುತ್ತಮುತ್ತ ಬೇರಾವುದೇ ಮನೆಗಳಿಲ್ಲ. ಕಟ್ಟಡದ ಎದುರಿಗೆ ಪಾಳು ಬಿದ್ದ ಬೀಜದ ಫ್ಯಾಕ್ಟರಿ ಹಾಗೂ ಇಂಟರ್‌ಲಾಕ್ ಫ್ಯಾಕ್ಟರಿ ಇದೆ. ಕಟ್ಟಡದ ಪರಿಸರದ ಸುತ್ತ ಮುತ್ತ ಮರಗಿಡಗಳು ತುಂಬಿದ ಪ್ರದೇಶವಿದೆ. ಈ ಕಟ್ಟಡದಲ್ಲಿರುವ ನಾಲ್ಕು ಮನೆಗಳಲ್ಲಿ ಕೆಳ ಅಂತಸ್ತಿನಲ್ಲಿರುವ ಎರಡು ಮನೆಗಳನ್ನು ಹಾಗೂ ಮೇಲಂತಸ್ತಿನಲ್ಲಿರುವ ಒಂದು ಮನೆಯನ್ನು ಖೋಟಾನೋಟು ದಂಧೆಕೋರರು ಬಾಡಿಗೆಗೆ ಪಡೆದಿದ್ದರು. ಈ ಮೂರು ಮನೆಗಳನ್ನು ಖೋಟಾ ನೋಟುಗಳ ಮುದ್ರಣಕ್ಕೆ ಬಳಸಿಕೊಂಡಿದ್ದರು. ಇದರಲ್ಲಿ ಒಂದು ಮನೆಯೊಳಗೆ ಬೃಹತ್ ಪ್ರಿಂಟರ್ ಹಾಗೂ ಮತ್ತೊಂದು ಮನೆಯಲ್ಲಿ ಸಣ್ಣ ಪ್ರಿಂಟರ್ ಇಟ್ಟಿದ್ದರು. ಇನ್ನೊಂದು ಮನೆಯೊಳಗೆ ನೋಟನ್ನು ಪ್ರಿಂಟ್ ಮಾಡಿದ ಬಳಿಕ ಒಣಗಿಸಲು ಹಗ್ಗ ಕಟ್ಟಿ ಅದಕ್ಕೆ ಕ್ಲಿಪ್‌ಗಳನ್ನು ಸಿಕ್ಕಿಸಿ ವ್ಯವಸ್ಥೆ ಮಾಡಿಕೊಂಡಿದ್ದರು. ಈ ಕಟ್ಟಡದ ಮೇಲಂತಸ್ತಿನಲ್ಲಿರುವ ಒಂದು ಮನೆಯಲ್ಲಿ ಸ್ಥಳೀಯವಾಗಿ ಕೆಲಸ ಮಾಡುವ ವ್ಯಕ್ತಿಯೋರ್ವರು ಒಬ್ಬರೇ ವಾಸವಾಗಿದ್ದರು. ಇನ್ನುಳಿದ ಮೂರು ಮನೆಗಳನ್ನು ಆರೋಪಿಗಳು ತಮ್ಮ ಕೆಲಸಕ್ಕೆ ಉಪಯೋಗಿಸಿಕೊಂಡಿದ್ದರು. ಇವರು ಇಲ್ಲಿ ಬಾಡಿಗೆಗಿದ್ದರೂ ಸ್ಥಳೀಯರಿಗೆ ಇವರ್‍ಯಾರ ಮುಖ ಪರಿಚಯವೇ ಇರಲಿಲ್ಲ. ಇವರು ಮನೆಯಲ್ಲಿದ್ದರೂ ಹೆಚ್ಚಾಗಿ ಹೊರಗೆ ಕಾಣಿಸಿಕೊಳ್ಳುತ್ತಿರಲಿಲ್ಲ. ಅವರು ಮನೆಯೊಳಗೆ ಇದ್ದರೂ ಮನೆಗಳ ಬಾಗಿಲು ಯಾವಾಗಲೂ ಹಾಕಿಕೊಂಡಿರುತ್ತಿತ್ತು.
ನಾವು ದನವನ್ನು ಕಟ್ಟಲು ಈ ಪರಿಸರಕ್ಕೆ ಬಂದಾಗ ಮನೆಯೊಳಗೆ ಮಾತನಾಡುವುದು ಕೇಳುತ್ತಿದ್ದರೂ ಹೊರಗೆ ಮಾತ್ರ ಯಾರೂ ಬರುತ್ತಿರಲಿಲ್ಲ. ಇವರು ಇಲ್ಲಿಗೆ ಬಾಡಿಗೆಗೆ ಬರುವ ಮೊದಲು ಒಂದು ಫ್ಯಾಮಿಲಿ ಇಲ್ಲಿ ವಾಸವಾಗಿತ್ತು. ಅವರು ಹೋದ ಬಳಿಕ ಇವರು ಬಾಡಿಗೆಗೆ ಬಂದದ್ದು. ಇವರು ಯಾರು? ಏನು ಕೆಲಸ? ಅಂತನೂ ನಮಗೆ ಗೊತ್ತಿರಲಿಲ್ಲ. ಈ ಕಟ್ಟಡದ ಮೇಲಂತಸ್ತಿನ ಒಂದು ಮನೆಯಲ್ಲಿದ್ದವರದ್ದು ನಮಗೆ ಗೊತ್ತು. ಅವರು ಅಲ್ಲಿದ್ದುಕೊಂಡು ದಿನಾ ಸ್ಥಳೀಯವಾಗಿ ಕೆಲಸಕ್ಕೆ ಹೋಗುತ್ತಿದ್ದರು ಎನ್ನುತ್ತಾರೆ ಸ್ಥಳೀಯರು. ಈ ಕಟ್ಟಡದ ಒಂದು ಬದಿಯಲ್ಲಿ ಕೆಲವು ನೋಟುಗಳನ್ನು ಬೆಂಕಿಹಾಕಿ ಉರಿಸಿದ ಕುರುಹು ಕಂಡು ಬರುತ್ತಿದ್ದು ೫೦೦ ರೂ. ಮುಖಬೆಲೆಯ ಕೆಲವು ನೋಟುಗಳನ್ನು ಸಣ್ಣ ಸಣ್ಣ ಚೂರುಗಳನ್ನಾಗಿ ಹರಿದು ಕಟ್ಟಡದ ಹೊರಗೆ ಎಸೆದಿರುವುದು ಕಂಡು ಬಂದಿದೆ. ಪೊಲೀಸರ ದಾಳಿ ಸಂದರ್ಭ ಇವರು ನೋಟುಗಳನ್ನು ಹರಿದು ಕಿಟಕಿಯಿಂದ ಹೊರಗೆಸೆದಿರಬಹುದಾದ ಸಾಧ್ಯತೆಯೂ ಇದೆ.

ದುಬೈಯಿಂದ ಬಂದು ಇಲ್ಲಿ ದಂಧೆ!: ಆರೋಪಿಗಳಲ್ಲಿ ಕೆಲವರು ಈ ಹಿಂದೆ ದುಬೈಯಲ್ಲಿದ್ದು ಅಲ್ಲಿಯೇ ಖೋಟಾ ನೋಟು ಮುದ್ರಿಸುವ ಯೋಜನೆ ರೂಪಿಸಿ ಊರಿಗೆ ಬಂದಿದ್ದರು. ಶರೀಫ್, ಸಂದೀಪ, ನಬಾಸ್ ವಿದೇಶದಲ್ಲಿದ್ದವರು. ಇಬ್ರಾಹಿಂ ಈ ಹಿಂದೆ ಕೂಡ ಖೋಟಾ ನೋಟು ಮುದ್ರಿಸಲು ಯತ್ನಿಸಿದ್ದು ೨೦೦೪ರಲ್ಲಿ ಈತನ ವಿರುದ್ಧ ಬಂಟ್ವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇವರು ಈ ಹಿಂದೆಯೂ ಖೋಟಾ ನೋಟು ಮುದ್ರಿಸಿದ್ದರು.

ಅತ್ಯಾಧುನಿಕ ಯಂತ್ರಗಳ ಬಳಕೆ: ಯು ಟ್ಯೂಬ್ ನೋಡಿ ಕಲಿಕೆ!
ಆರೋಪಿಗಳು ಎಷ್ಟೇ ಪಳಗಿದ್ದರೂ ತಂತ್ರಜ್ಞಾನಗಳು ಬದಲಾಗುವ ಸಂದರ್ಭದಲ್ಲಿ ಅದರ ಕುರಿತು ಅವರಿಗೂ ತಿಳುವಳಿಕೆ ಬೇಕಾಗುತ್ತದೆ. ಅದೇ ರೀತಿ ಅಡೆಂಜದ ಖೋಟಾ ನೋಟು ದಂಧೆಯಲ್ಲೂ ಆರೋಪಿಗಳು ಯುಟ್ಯೂಬ್ ನೋಡಿ ಯಂತ್ರಗಳ ಬಳಕೆಯನ್ನು ತಿಳಿಯುತ್ತಿದ್ದರು. ಹೀಗಾಗಿ ಅವರ ದಂಧೆ ನಿಧಾನಗತಿಯಲ್ಲಿ ಸಾಗುತ್ತಿತ್ತು. ನೋಟುಗಳ ತಯಾರಿಗಾಗಿ ಬೆಂಗಳೂರು, ಮುಂಬಯಿ, ಕೇರಳ ಭಾಗದಿಂದ ಯಂತ್ರಗಳನ್ನು ತರಿಸಿಕೊಂಡಿದ್ದ ದಂಧೆಕೋರರು ಒಂದಷ್ಟು ಬಂಡವಾಳವನ್ನೂ ಸುರಿದಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಪ್ರಕರಣದ ಮಾಸ್ಟರ್ ಮೈಂಡ್ ಪುತ್ತೂರಿನ ಇಬ್ರಾಹಿಂ ಆಗಿದ್ದು ಆತ ಈ ದಂಧೆಯಲ್ಲಿ ಎಕ್ಸ್‌ಪರ್ಟ್ ಆಗಿದ್ದಾನೆ. ಇತರ ಆರೋಪಿಗಳ ಜತೆ ಸೇರಿ ಆತನೇ ಯೋಜನೆ ರೂಪಿಸಿಕೊಂಡಿದ್ದ ಎಂದು ಮಾಹಿತಿ ಲಭ್ಯವಾಗಿದೆ. ನೋಟುಗಳು ಒಮ್ಮೆ ಹೊರಗೆ ಬಂದಿದ್ದರೆ ಯಾವುದೇ ಅನುಮಾನ ಬಾರದ ರೀತಿಯಲ್ಲೇ ಚಲಾವಣೆಗೊಂಡು ಅಲ್ಲೋಲ ಕಲ್ಲೋಲ ಸೃಷ್ಟಿಸುವ ಸಾಧ್ಯತೆ ಇತ್ತು. ಹೀಗಾಗಿ ದಂಧೆಯನ್ನು ಬೇಧಿಸಿದ ಪೊಲೀಸರು ಕುರಿತು ಪ್ರಶಂಸೆ ವ್ಯಕ್ತವಾಗಿದೆ.

ಸ್ಥಳೀಯ ಸಿರಾಜುದ್ದೀನ್ ಕೈವಾಡ: ಖೋಟಾ ನೋಟು ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾಗಿರುವ ಉರುವಾಲು ಗ್ರಾಮದ ಸಿರಾಜುದ್ದೀನ್ ಎಂಬಾತನ ಕೈವಾಡ ಪ್ರಮುಖವಾಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಮನೆಯನ್ನು ಬಾಡಿಗೆಗೆ ಪಡೆದು ಈ ಕೃತ್ಯಕ್ಕೆ ಸಿರಾಜುದ್ದೀನ್ ನೀಡಿದ್ದ. ಸಾಮಾನ್ಯವಾಗಿ ಯಾರಿಗಾದರೂ ಮಾಲಕರು ತಮ್ಮ ಮನೆಯನ್ನು ಬಾಡಿಗೆಗೆ ಕೊಡಬೇಕಾದರೆ ಅದಕ್ಕೆ ಸ್ಥಳೀಯರೊಬ್ಬರ ಸಹಕಾರ ಬೇಕಾಗುತ್ತದೆ. ಈ ಪ್ರಕರಣದಲ್ಲಿ ಸ್ಥಳೀಯ ನಿವಾಸಿ ಉರುವಾಲಿನ ಸಿರಾಜುದ್ದೀನ್ ಈ ಕಾರ್ಯ ಮಾಡಿದ್ದ. ಆತ ಮಾಲಕರ ಬಳಿ ಮಾತನಾಡಿ ಮನೆ ಕೊಡಿಸಿರುವ ಜತೆಗೆ ಆರೋಪಿಗಳು ಮನೆಯಲ್ಲಿದ್ದ ಸಂದರ್ಭ ಅವರಿಗೆ ಬೇಕಾದ ಊಟ ತಿಂಡಿ ಇತರ ಸೊತ್ತುಗಳನ್ನು ಪೂರೈಕೆ ಮಾಡುತ್ತಿದ್ದ. ಆರೋಪಿಗಳು ಈ ಮನೆಗೆ ೧೫ ದಿನಗಳಿಗೊಮ್ಮೆ ಬಂದು ಕೆಲವು ದಿನ ಇದ್ದು ಹೋಗುತ್ತಿದ್ದರು. ಈ ಸಂದರ್ಭ ಅವರು ಹೊರಗಡೆ ಓಡಾಡುತ್ತಿರಲಿಲ್ಲ. ಹೀಗಾಗಿ ಅವರಿಗೆ ಬೇಕಾದ ಅಗತ್ಯ ವಸ್ತುಗಳನ್ನು ಸಿರಾಜುದ್ದೀನ್ ತಂದು ಕೊಡುತ್ತಿದ್ದ. ಆದರೆ ಖೋಟಾ ನೋಟು ದಂಧೆಗೆ ಬೇಕಾದ ಸೊತ್ತುಗಳನ್ನು ಇತರ ಆರೋಪಿಗಳು ತರುತ್ತಿದ್ದರು ಎಂದು ಪೊಲೀಸ್ ತನಿಖೆಯಲ್ಲಿ ಗೊತ್ತಾಗಿದೆ. ನಕಲಿ ನೋಟು ತಯಾರಿಕೆಯ ದಂಧೆಯಲ್ಲಿ ಪ್ರತಿ ಆರೋಪಿಗಳು ಒಂದೊಂದು ವಿಚಾರದಲ್ಲಿ ನುರಿತರಾಗಿದ್ದು ಪ್ರಮುಖ ಆರೋಪಿ ಇಬ್ರಾಹಿಂ ಹೊರತುಪಡಿಸಿದರೆ ಉಳಿದ ಆರೋಪಿಗಳ ವಿರುದ್ಧ ಗಂಭೀರವಾದ ಪ್ರಕರಣಗಳಿಲ್ಲ ಎನ್ನಲಾಗಿದೆ.

ಪ್ರಮುಖ ಆರೋಪಿ ಇಬ್ರಾಹಿಂ ೨೦೦೪ರ ದಾಸಕೋಡಿ ಪ್ರಕರಣದಲ್ಲೂ ಭಾಗಿಯಾಗಿದ್ದ-ಅಂದು ೧೦೦ ರೂ.. ಇಂದು ೫೦೦!
ಕಣಿಯೂರು ಗ್ರಾಮದ ಅಡೆಂಜದ ಖೋಟಾ ನೋಟು ದಂಧೆಗೆ ಸಂಬಂಧಿಸಿ ಬಂಧಿತನಾಗಿರುವ ಪ್ರಕರಣದ ಪ್ರಮುಖ ಆರೋಪಿ ಪುತ್ತೂರಿನ ಇಬ್ರಾಹಿಂ ೨೦೦೪ರಲ್ಲಿ ಬಂಟ್ವಾಳದ ಬಾಳಿಲದ ದಾಸಕೋಡಿಯಲ್ಲಿ ಪತ್ತೆಯಾದ ಖೋಟಾ ನೋಟು ದಂಧೆಯ ಆರೋಪಿಯಾಗಿದ್ದ ಎಂಬ ವಿಚಾರ ಬೆಳಕಿಗೆ ಬಂದಿದೆ. ೨೦೦೪ರ ಆ. ೩೧ರಂದು ಈ ಪ್ರಕರಣ ಬೆಳಕಿಗೆ ಬಂದಿದ್ದು ಅದೇ ದಿನ ಪೊಲೀಸರು ದಾಸಕೋಡಿಯ ಮನೆಯೊಂದಕ್ಕೆ ದಾಳಿ ನಡೆಸಿ ಖೋಟಾ ನೋಟು ಹೊಂದಿದ್ದ ಇಬ್ಬರನ್ನು ಬಂಧಿಸಿದ್ದರು. ದಾಸಕೋಡಿಯ ಶಾಂತಪ್ಪ ಆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು ಆತನ ಜತೆಗೆ ಇಬ್ರಾಹಿಂ ಸಹಿತ ಇತರ ೯ ಮಂದಿ ಆರೋಪಿಗಳು ಭಾಗಿಯಾಗಿದ್ದರು ಎಂಬುದು ಬಂಟ್ವಾಳ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಅಂದಿನ ಪ್ರಕರಣದಲ್ಲಿ ಪೊಲೀಸರು ಇಬ್ರಾಹಿಂನನ್ನು ಪುತ್ತೂರಿನ ಬೊಳುವಾರಿನಲ್ಲಿ ಬಂಧಿಸಿ ಆತನಿಂದ ೧೦೦ರ ಮುಖಬೆಲೆಯ ಸುಮಾರು ೩೫ ನೋಟುಗಳನ್ನು ವಶಪಡಿಸಿಕೊಂಡಿದ್ದರು.ಬಳಿಕ ಪ್ರಕರಣದ ಇತರ ಆರೋಪಿಗಳನ್ನು ನೆಕ್ಕಿಲಾಡಿ, ಮೂಲ್ಕಿ, ವಿಟ್ಲ ಜಂಕ್ಷನ್, ಕಲ್ಲಡ್ಕ ಮೊದಲಾದ ಕಡೆಗಳಿಂದ ಬಂಧಿಸಿ ಅವರಿಂದ ಖೋಟಾ ನೋಟುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಆರೋಪಿಗಳ ವಿಚಾರಣೆ ನಡೆಸಿ ಪ್ರಕರಣಕ್ಕೆ ಸಂಬಂಧಿಸಿ ಶಿಕ್ಷೆ ಅನುಭವಿಸಿ ಹೊರ ಬಂದಿದ್ದರು ಎಂಬುದು ತನಿಖೆಯಿಂದ ತಿಳಿದು ಬಂದಿದೆ. ಅಡೆಂಜ ಪ್ರಕರಣದಲ್ಲಿ ಬಂಧಿತನಾಗಿರುವ ಪ್ರಮುಖ ಆರೋಪಿ ಇಬ್ರಾಹಿಂ ೬೦ರ ಹರೆಯದವನಾಗಿದ್ದು ೨೦೦೪ರಲ್ಲೂ ಆತ ಖೋಟಾ ನೋಟು ದಂಧೆಯಲ್ಲೇ ಇದ್ದುದರಿಂದ ಹೆಚ್ಚು ಪಳಗಿರುವ ಸಾಧ್ಯತೆ ಇದೆ. ದಾಸಕೋಡಿಯಲ್ಲಿ ಅಂದು ಆತನ ಬಳಿ ೧೦೦ರ ನಕಲಿ ನೋಟುಗಳು ಪತ್ತೆಯಾಗಿದ್ದು ಈಗ ೫೦೦ರ ನಕಲಿ ನೋಟುಗಳನ್ನು ಮುದ್ರಿಸುವ ದಂಧೆಯಲ್ಲಿ ತೊಡಗಿದ್ದಾನೆ ಎಂಬುದು ಬೆಳಕಿಗೆ ಬಂದಿದೆ.

ನಾಲ್ವರು ಮತ್ತೆ ಪೊಲೀಸ್ ಕಸ್ಟಡಿಗೆ ಮೂವರು ನ್ಯಾಯಾಂಗ ಬಂಧನಕ್ಕೆ: ಪೊಲೀಸ್ ಕಸ್ಟಡಿ ಅವಧಿ ಮುಕ್ತಾಯಗೊಂಡ ಕಾರಣ ಜು.೨೧ರಂದು ಸಂಜೆ ಆರೋಪಿಗಳನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ಈ ವೇಳೆ ಹೆಚ್ಚಿನ ತನಿಖೆಗಾಗಿ ಇಬ್ರಾಹಿಂ, ಸಂದೀಪ್, ಸಿರಾಜುದ್ದೀನ್ ಮತ್ತು ಇರ್ಷಾದ್‌ನನ್ನು ಜು. ೨೬ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ನ್ಯಾಯಾಧೀಶ ಮನು ಬಿ.ಕೆ. ಆದೇಶಿಸಿದ್ದಾರೆ. ಶರೀಫ್ ಅಲಿಯಾಸ್ ಶರೀಫ್ ಮಹಮ್ಮದ್ ಕುಂಞ, ಮಹಮ್ಮದ್ ನಬಾಸ್ ಮತ್ತು ಸಲ್ಮಾನ್ ಫಾರೀಸ್‌ನನ್ನು ಆ. ೧ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಡಿವೈಎಸ್‌ಪಿ ರೋಹಿಣಿ ಸಿ.ಕೆ., ಉಪ್ಪಿನಂಗಡಿ ವೃತ್ತ ನಿರೀಕ್ಷಕ ನಾಗರಾಜ್ ಎಚ್.ಇ., ಎಪಿಪಿ ದಿವ್ಯರಾಜ್ ಹೆಗ್ಡೆ ಪುತ್ತೂರು ಮತ್ತು ಆರೋಪಿಗಳ ಪರ ವಕೀಲರಾದ ಪ್ರಶಾಂತ್ ಎಂ., ವೈ ಶಾಮ್ ಭಟ್, ಆಸ್ಮಾ, ಸಿರಾಜ್ ನ್ಯಾಯಾಲಯದಲ್ಲಿ ಹಾಜರಿದ್ದರು.

ಕೊಡಗು ಪೊಲೀಸರಿಗೆ ಸಿಕ್ಕಿತ್ತು ಮಾಹಿತಿ!: ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಅಡೆಂಜದಲ್ಲಿ ಖೋಟಾ ನೋಟು ಮುದ್ರಣವಾಗುತ್ತಿರುವ ಬಗ್ಗೆ ಕೊಡಗು ಜಿಲ್ಲಾ ಪೊಲೀಸರಿಗೆ ಮಾಹಿತಿ ದೊರೆತಿತ್ತು. ಈ ಮಾಹಿತಿಯ ಆಧಾರದಲ್ಲಿ ಉಪ್ಪಿನಂಗಡಿ ಠಾಣಾ ಪೊಲೀಸರ ನೇತೃತ್ವದಲ್ಲಿ ಪೊಲೀಸರ ತಂಡ ಮಿಂಚಿನ ದಾಳಿ ನಡೆಸಿದ್ದು ಇವರಿಗೆ ತಪ್ಪಿಸಿಕೊಳ್ಳಲು ಸಾಧ್ಯವಾಗದಂತಹ ಯೋಜನೆ ರೂಪಿಸಿತ್ತು. ಏಕಾಏಕಿ ತಡರಾತ್ರಿ ನಡೆದ ಪೊಲೀಸ್ ದಾಳಿಯ ಸಂದರ್ಭ ಮನೆಯೊಳಗೆ ನೋಟು ಮುದ್ರಣದ ತಯಾರಿಯಲ್ಲಿದ್ದ ಏಳು ಮಂದಿ ಆರೋಪಿಗಳೂ ಲಾಕ್ ಆಗಲು ಸಾಧ್ಯವಾಯಿತು. ಇವರು ರಾತ್ರಿ ಹೊತ್ತು ನೋಟು ಮುದ್ರಣ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಆರು ದಿನ ಪೊಲೀಸ್ ಕಸ್ಟಡಿ ವಿಧಿಸಿದ್ದ ಬೆಳ್ತಂಗಡಿ ಕೋರ್ಟ್ ಉಪ್ಪಿನಂಗಡಿ ಠಾಣಾ ಪೊಲೀಸರು ಜು.೧೬ರಂದು ಸಂಜೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಆರೋಪಿಗಳ ಆರೋಗ್ಯ ತಪಾಸಣೆ ನಡೆಸಿದ ನಂತರ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯ ಆರೋಪಿಗಳನ್ನು ಜು.೨೧ರ ಸಂಜೆ ೬ ಗಂಟೆಯವರೆಗೆ ಪೊಲೀಸ್ ಕಸ್ಟಡಿಗೊಪ್ಪಿಸಿ ಆದೇಶಿಸಿತ್ತು. ಪ್ರಾಸಿಕ್ಯೂಷನ್ ಪರ ಎಪಿಪಿ ದಿವ್ಯರಾಜ್ ಹೆಗ್ಡೆ ಪುತ್ತೂರು ಅವರು ನ್ಯಾಯಾಲಯಕ್ಕೆ ಹಾಜರಾಗಿದ್ದರು. ಬುಧವಾರ ರಾತ್ರಿ ಸುಮಾರು ೧೧:೩೦ ಗಂಟೆಗೆ ಪೊಲೀಸರು ಅಡೆಂಜದ ಕಟ್ಟಡಕ್ಕೆ ದಾಳಿ ನಡೆಸಿದ್ದು ಕಟ್ಟಡದ ಇಂಚಿಂಚನ್ನೂ ಬಿಡದೆ ಪರಿಶೀಲಿಸಿ ಎಲ್ಲಾ ವಸ್ತುಗಳ ಮಹಜರು ನಡೆಸಿದ್ದಾರೆ. ರಾತ್ರಿ ಇಡೀ ಇಲ್ಲೇ ಇದ್ದ ಪೊಲೀಸರು ಇಲ್ಲಿಂದ ಮಹಜರು ಪ್ರಕ್ರಿಯೆಗಳನ್ನೆಲ್ಲಾ ಮುಗಿಸಿ ತೆರಳುವಾಗ ಬೆಳಗ್ಗೆ ಸುಮಾರು ೬ ಗಂಟೆಯಾಗಿತ್ತು. ಈ ಪ್ರಕರಣ ಭೇದಿಸಿದ ಪೊಲೀಸರ ಕಾರ್ಯವೈಖರಿಗೆ ಸಾರ್ವಜನಿಕ ವಲಯದಿಂದ ಶ್ಲಾಘನೆ ವ್ಯಕ್ತವಾಗಿದೆ. ಬೆಳ್ತಂಗಡಿ ಪೊಲೀಸ್ ಉಪವಿಭಾಗದ ಡಿವೈಎಸ್ಪಿ ರೋಹಿಣಿ ಸಿ.ಕೆ. ಹಾಗೂ ಉಪ್ಪಿನಂಗಡಿ ಪೊಲೀಸ್ ವೃತ್ತ ನಿರೀಕ್ಷಕ ನಾಗರಾಜ್ ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಮಹಮ್ಮದ್ ಇದ್ರೀಸ್‌ರ ಮನೆಯಲ್ಲಿ ಎರಡು ತಿಂಗಳ ಹಿಂದೆ ಬಾಡಿಗೆಗೆ ಬಂದು ಯೋಜನೆ ರೂಪಿಸಿದ್ದರು: ಖೋಟಾ ನೋಟು ದಂಧೆಕೋರರು ಸುಮಾರು ೨ ತಿಂಗಳ ಹಿಂದೆ ಈ ಮನೆಯನ್ನು ಬಾಡಿಗೆಗೆ ಪಡೆದಿದ್ದರು. ಈ ಮನೆ ಮುಖ್ಯರಸ್ತೆಯಿಂದ ಸುಮಾರು ೨೦೦ ಮೀ. ಒಳಭಾಗದಲ್ಲಿದ್ದು ಸುತ್ತಮುತ್ತ ಯಾವುದೇ ಮನೆಗಳಿಲ್ಲ ಎಂಬುದನ್ನು ತಿಳಿದುಕೊಂಡೇ ಅವರು ಈ ಮನೆ ಪಡೆದಿದ್ದಾರೆ ಎನ್ನಲಾಗಿದೆ. ಕಣಿಯೂರು ಗ್ರಾಮದ ಅಡೆಂಜದಲ್ಲಿರುವ ೪ ಮನೆಗಳ ಈ ವಸತಿ ಸಂಕೀರ್ಣ ಮಹಮ್ಮದ್ ಇದ್ರೀಸ್ ಎಂಬವರಿಗೆ ಸೇರಿದ್ದಾಗಿದೆ. ಅವರು ಕೆಲವು ಸಮಯದ ಹಿಂದೆ ಇಲ್ಲಿ ಜಾಗ ಖರೀದಿಸಿ ವಸತಿ ಸಂಕೀರ್ಣ ನಿರ್ಮಿಸಿದ್ದರು. ಅವರ ಮನೆ ಸ್ವಲ್ಪ ದೂರದಲ್ಲಿದೆ. ಈ ವಸತಿ ಸಂಕೀರ್ಣದ ಮೂರು ಮನೆಗಳನ್ನು ಆರೋಪಿಗಳು ಬಾಡಿಗೆಗೆ ಪಡೆದಿದ್ದರು. ಒಂದು ಮನೆಯಲ್ಲಿ ಮೊದಲಿನಿಂದಲೂ ಕೂಲಿ ಕಾರ್ಮಿಕರೋರ್ವರು ಬಾಡಿಗೆಗೆ ಇದ್ದು ಅವರಿಗೆ ಹತ್ತಿರದ ಮನೆಯಲ್ಲಿ ಯಾರಿದ್ದಾರೆ ಎಂಬ ಮಾಹಿತಿ ಇರಲಿಲ್ಲ. ಮನೆ ಬಾಡಿಗೆಗೆ ಪಡೆದ ಬಳಿಕ ಆರೋಪಿಗಳು ಯಾರಿಗೂ ಗೊತ್ತಾಗದಂತೆ ಒಂದೊಂದೇ ಯಂತ್ರೋಪಕರಣಗಳನ್ನು ತಂದಿರಿಸಿ ಖೋಟಾ ನೋಟು ಮುದ್ರಣ ಆರಂಭಿಸಿದ್ದರು. ರಾತ್ರಿ ವೇಳೆ ಸ್ಥಳೀಯರು ಮೀನು ಹಿಡಿಯಲು ಇದೇ ಮನೆಯ ಪಕ್ಕದಿಂದ ಸಾಗುತ್ತಿದ್ದರೂ ಅವರಿಗೆ ಯಾವುದೇ ಸಂಶಯ ಬಂದಿರಲಿಲ್ಲ.

ಪೈಂಟರ್‌ಗಳೆಂದು ಬಾಡಿಗೆಗೆ ಪಡೆದರು: ಕಾಯರ್ಪಾಡಿ ಸಮೀಪದ ಮಾಪಳ್ಳ ನಿವಾಸಿ ಇದ್ರೀಸ್ ಎಂಬವರಿಗೆ ಸೇರಿದ ಮನೆ ಇದಾಗಿದ್ದು ಇವರು ಇರುವ ಸ್ವಂತ ಮನೆಗೂ ಬಾಡಿಗೆಗೆ ನೀಡಿದ ಈ ಮನೆಗೂ ಸುಮಾರು ಮೂರು ಕಿ.ಮೀ. ದೂರವಿದೆ. ಖೋಟಾ ನೋಟು ಪ್ರಕರಣದಲ್ಲಿ ಆರೋಪಿಗಳಾಗಿರುವ ಬೆಳ್ತಂಗಡಿ ತಾಲೂಕು ಉರುವಾಲು ಗ್ರಾಮದ ಸಿರಾಜುದ್ದೀನ್ ಹಾಗೂ ಮತ್ತೋರ್ವ ಸುಮಾರು ಮೂರು ತಿಂಗಳ ಹಿಂದೆ ಇವರ ಬಳಿ ಬಾಡಿಗೆ ಮನೆ ಕೇಳಿಕೊಂಡು ಬಂದಿದ್ದರು. ಇವರಲ್ಲಿ ತಾವು ಪೈಂಟಿಂಗ್ ಕೆಲಸ ಮಾಡುವವರು ಎಂದು ಹೇಳಿಕೊಂಡಿದ್ದರು. ಅವರಲ್ಲಿ ಸಿರಾಜ್ ಒಂದು ಮನೆ ಪಡೆದರೆ, ಎರಡು ಮನೆಯನ್ನು ಮತ್ತೋರ್ವ ಬಾಡಿಗೆಗೆ ಪಡೆದಿದ್ದ. ಬಾಡಿಗೆ ಮನೆಯ ಮಾಲಕರು ಕೆಳಗಿನ ಎರಡು ಮನೆಗಳಿಗೆ ೪,೫೦೦ ರೂ. ಹಾಗೂ ೫೦೦೦ ರೂ. ಮತ್ತು ಮೇಲಿನ ಮನೆಗೆ ೪೦೦೦ ಬಾಡಿಗೆ ವಿಧಿಸಿ ಅದಕ್ಕೆ ಬಾಡಿಗೆ ಕರಾರುಪತ್ರ ಮಾಡಿಕೊಂಡು ಮನೆಯನ್ನು ಇವರಿಗೆ ಬಾಡಿಗೆಗೆ ನೀಡಿದ್ದರು. ಬಳಿಕದ ದಿನಗಳಲ್ಲಿ ಆರೋಪಿಗಳು ಒಬ್ಬೊಬ್ಬರಾಗಿ ಈ ಮನೆಯೊಳಗೆ ಸೇರಿಕೊಂಡು ಖೋಟಾ ನೋಟು ಮುದ್ರಣ ದಂಧೆ ಆರಂಭಿಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಖೋಟಾ ನೋಟು ಹೊರಗೆ ಚಲಾಯಿಸಿದ್ದರೇ?: ೫೦೦ ರೂ. ಮುಖಬೆಲೆಯ ಒಂದು ನೋಟು ಬಿಟ್ಟರೆ ಮತ್ತೆ ಸಿಕ್ಕಿದ್ದು ನೋಟಿನ ಒಂದು ಬದಿಯನ್ನು ಮಾತ್ರ ಮುದ್ರಿಸಿಡಲಾಗಿದ್ದ ಎ೪ ಶೀಟಿನ ಕಾಗದಗಳು. ಇವರು ಖೋಟಾ ನೋಟು ಮುದ್ರಣಕ್ಕೆ ತಯಾರಿ ನಡೆಸುತ್ತಿದ್ದರೇ ಅಥವಾ ಈ ಮೊದಲೇ ಖೋಟಾ ನೋಟು ತಯಾರಿಸಿ ಹೊರಗೆ ಚಲಾಯಿಸಿದ್ದಾರೆಯೇ ಎಂಬ ಬಗ್ಗೆ ಪೊಲೀಸ್ ತನಿಖೆ ನಡೆದಿದೆ.

LEAVE A REPLY

Please enter your comment!
Please enter your name here