ಶಕ್ತಿನಗರದ ವಿದ್ಯುತ್ ಘಟಕದ ಆವರಣದಲ್ಲಿ ಕಲ್ಲೇರಿಯ ಮುಸ್ತಾಕ್ ಮೃತಪಟ್ಟ ಪ್ರಕರಣ-೧೬ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕಾಶಿಪಟ್ಣದ ಇಬ್ರಾಹೀಂ ಲತೀಫ್ ಬಂಧನ

0

ಬೆಳ್ತಂಗಡಿ: ಕುವೆಟ್ಟು ಶಕ್ತಿನಗರದಲ್ಲಿರುವ ವಿದ್ಯುತ್ ಘಟಕದ ಆವರಣದಲ್ಲಿದ್ದ ಅಲ್ಯೂಮಿನಿಯಂ ಹಾಗೂ ಕಬ್ಬಿಣದ ಸೊತ್ತುಗಳನ್ನು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು ೧೬ ಕಳವು ಪ್ರಕರಣಗಳಲ್ಲಿ ಭಾಗಿಯಾದ ಆರೋಪಿ ಇಬ್ರಾಹೀಂ ಲತೀಫ್ (೩೬) ಎಂಬಾತನನ್ನು ಬೆಳ್ತಂಗಡಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಕಲ್ಲೇರಿಯ ಮುಸ್ತಾಕ್ ಈತನೊಂದಿಗೆ ಕಳವಿಗೆ ಹೋದ ಸಂದರ್ಭ ಆತನ ಕುತ್ತಿಗೆಗೆ ಕಬ್ಬಿಣದ ತಂತಿ ಸಿಲುಕಿ ಮೃತಪಟ್ಟಿರುವುದಾಗಿ ಲತೀಫ್ ವಿಚಾರಣೆ ವೇಳೆ ತಿಳಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಗುರುವಾಯನಕೆರೆಯ ವಿದ್ಯುತ್ ಘಟಕದ ಬಳಿ ಕೆಲವು ದಿನಗಳ ಹಿಂದೆ ಕಲ್ಲೇರಿ ಜನತಾ ಕಾಲೋನಿಯ ಮುಸ್ತಾಕ್ ಎಂಬಾತನ ಮೃತದೇಹ ಪತ್ತೆಯಾಗಿತ್ತು. ಅನುಮಾನಾಸ್ಪದವಾಗಿ ಮೃತದೇಹ ಪತ್ತೆಯಾದ ಕುರಿತು ಮುಸ್ತಾಕ್‌ನ ತಂದೆ ಷರೀಫ್ ನೀಡಿದ ದೂರಿನಂತೆ ಸಂಶಯಾಸ್ಪದ ಸಾವು ಪ್ರಕರಣ ದಾಖಲಾಗಿತ್ತು. ಮುಸ್ತಾಕ್‌ನನ್ನು ಕೊಲೆ ಮಾಡಲಾಗಿದೆ ಎಂದು ಷರೀಫ್ ಸಂಶಯ ವ್ಯಕ್ತಪಡಿಸಿದ್ದರು. ಪೊಲೀಸರು ತನಿಖೆ ತೀವ್ರಗೊಳಿಸುತ್ತಿದ್ದಂತೆಯೇ ವಿದ್ಯುತ್ ಘಟಕದ ಆವರಣದಿಂದ ಅಲ್ಯೂಮಿನಿಯಂ ವಯರ್‌ಗಳು ಕಳವಾಗಿರುವ ಕುರಿತು ಸಂಸ್ಥೆಯ ಮೆನೇಜರ್ ಪೊಲೀಸರಿಗೆ ದೂರು ನೀಡಿದ್ದರು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಕಾಶಿಪಟ್ಣ ನಿವಾಸಿ ಪಿ ಇಬ್ರಾಹಿಂ ಲತೀಫ್ (೩೬)ನನ್ನು ಬಂಧಿಸಿ ಆತನಿಂದ ೫೫೦ ಕೆ.ಜಿ. ಅಲ್ಯೂಮಿನಿಯಂ ವಯರ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಈತನನ್ನು ಹೆಚ್ಚಿನ ವಿಚಾರಣೆ ನಡೆಸಿದಾಗ ಕೆಲವು ದಿನಗಳ ಹಿಂದೆ ಮೃತಪಟ್ಟಿದ್ದ ಕಲ್ಲೇರಿಯ ಮುಸ್ತಾಕ್, ನಾನು ಹಾಗೂ ಇನ್ನೋರ್ವ ಸೇರಿ ಜೂ.೩೦ರಂದು ರಾತ್ರಿ ಶಕ್ತಿನಗರ ಎಂಬಲ್ಲಿರುವ ಸಂಸ್ಥೆಯ ಆವರಣದಿಂದ ಅಲ್ಯೂಮಿನಿಯಂ ಮತ್ತು ಕಬ್ಬಿಣದ ಸೊತ್ತುಗಳನ್ನು ಕಳವು ಮಾಡಿzವೆ. ಈ ವೇಳೆ ಆಕಸ್ಮಿಕವಾಗಿ ಮುಸ್ತಾಕ್‌ನ ಕುತ್ತಿಗೆಗೆ ಕಬ್ಬಿಣದ ತಂತಿ ಸಿಲುಕಿ ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದಾನೆ. ಬಂಧಿತ ಲತೀಫ್ ವಿರುದ್ಧ ವೇಣೂರು, ಉಪ್ಪಿನಂಗಡಿ, ಅರೆಹಳ್ಳಿ ಹಾಗೂ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಒಟ್ಟು ೧೬ ಕಳವು ಪ್ರಕರಣಗಳು ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ರಾಹಿಂ ಲತೀಫ್‌ನ ಬಂಧನದೊಂದಿಗೆ ಮುಸ್ತಾಕ್‌ನ ಸಂಶಯಾಸ್ಪದ ಸಾವಿನ ಕುರಿತ ಊಹಾಪೋಹಗಳಿಗೆ ಬಹುತೇಕ ತೆರೆ ಬಿದ್ದಿದೆ.

LEAVE A REPLY

Please enter your comment!
Please enter your name here