






ಬೆಳ್ತಂಗಡಿ: ಗ್ರಾಹಕರ ಉಳಿತಾಯ ಹಣವನ್ನು ಸ್ವಂತಕ್ಕೆ ಬಳಸಿ ವಂಚನೆ ಮತ್ತು ನಂಬಿಕೆ ದ್ರೋಹ ಎಸಗಿದ ವಿಚಾರಕ್ಕೆ ಸಂಬಂಧಿಸಿ ವೇಣೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಆರೋಪೊಯಾಗಿದ್ದ ಶಿರ್ತಾಡಿ ಗ್ರಾಮದ ಎಂ. ದಿನೇಶ್ (೫೦) ಎಂಬಾತನಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ೪ ವರ್ಷ ಜೈಲು ಶಿಕ್ಷೆ ಮತ್ತು ೩೦ ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಶಿರ್ತಾಡಿ ಶಾಖಾ ಅಂಚೆ ಕಚೇರಿಯಲ್ಲಿ ಅಂಚೆ ಪಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಎಂ.ದಿನೇಶ್ ೨೦೦೮ರ ಜನವರಿಂದ ಡಿ.೩೧ರ ವರೆಗೆ ಅಂಚೆ ಕಚೇರಿಗೆ ಗ್ರಾಹಕರು ಉಳಿತಾಯ ಹಾಗೂ ಆರ್‌ಡಿ ಹಣವನ್ನು ಗ್ರಾಹಕರ ಖಾತೆ ಪುಸ್ತಕದಲ್ಲಿ ಬರೆದು ಅಂಚೆ ಇಲಾಖೆಗೆ ಜಮೆ ಮಾಡದೆ ಒಟ್ಟು ೧೯,೯೦೬ ರೂ. ತನ್ನ ಸ್ವಂತಕ್ಕೆ ಉಪಯೋಗಿಸಿಕೊಂಡಿದ್ದಾನೆ.


ಖಾತೆಗೆ ಜಮಾ ಮಾಡಲು ನೀಡಿದ ಅಂಚೆ ಇಲಾಖೆಗೆ ಹಾಗೂ ಗ್ರಾಹಕರಿಗೆ ಸೇರಿದ ಹಣವನ್ನು ದುರುಪಯೋಗ ಪಡಿಸಿಕೊಂಡು ಇಲಾಖೆಗೆ ನಂಬಿಕೆ ದ್ರೋಹ ಮತ್ತು ವಂಚನೆ ಮಾಡಿದ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಬೆಳ್ತಂಗಡಿಯ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಆತನನ್ನು ನ್ಯಾಯಾಲಯ ದೋಷಮುಕ್ತಗೊಳಿಸಿತ್ತು.
ಈ ತೀರ್ಪಿನ ವಿರುದ್ಧ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಲಾಗಿತ್ತು. ಇದರ ವಿಚಾರಣೆ ಪೂರ್ಣಗೊಳಿಸಿದ ಮಂಗಳೂರು ನ್ಯಾಯಾಲಯದ ನ್ಯಾಯಾಧೀಶರು ಬೆಳ್ತಂಗಡಿ ನ್ಯಾಯಾಲಯದ ತೀರ್ಪನ್ನು ರದ್ದುಗೊಳಿಸಿ ಜು.೧೬ರಂದು ತೀರ್ಪು ನೀಡಿದ್ದಾರೆ. ಅಪರಾಧಿ ದಿನೇಶ್‌ಗೆ ಭಾ.ದಂ.ಸಂ ಕಲಂ ೪೦೯ರ ಅಪರಾಧಕ್ಕೆ ೪ ವರ್ಷಗಳ ಕಾಲ ಕಾರಾಗೃಹ ಶಿಕ್ಷೆ ಮತ್ತು ೨೦ ಸಾವಿರ ರೂ. ದಂಡ ಮತ್ತು ಕಲಂ ೪೨೦ರ ಅಪರಾಧಕ್ಕೆ ೨ ವರ್ಷಗಳ ಕಾಲ ಕಾರಾಗೃಹ ಶಿಕ್ಷೆ ಮತ್ತು ೧೦ ಸಾವಿರ ರೂ. ದಂಡ ವಿಧಿಸಲಾಗಿದೆ. ಸರಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಕೆ. ಬದರಿನಾಥ ನಾಯರಿ ವಾದ ಮಂಡಿಸಿದ್ದರು.








