






ಬೆಳ್ತಂಗಡಿ: ಮಂಗಳೂರು ಹಾಗೂ ಕೇರಳ ರಾಜ್ಯಕ್ಕೆ ೫.೨೦ ಕೋಟಿ ರೂ ಮೌಲ್ಯದ ಎಂಡಿಎಂಎ ಪೂರೈಕೆಗೆ ಸಿದ್ಧತೆ ನಡೆಸಿದ್ದ ಆರೋಪದಡಿ ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದ ಮುಹಮ್ಮದ್ ಅಲ್ಪಾಜ್ (೨೮) ಹಾಗೂ ಉಜಿರೆ ಸಮೀಪದ ಹಳೆಪೇಟೆ ಲಾಯಿಲ ವಿವೇಕನಂದ ನಗರದ ಮುಹಮ್ಮದ್ ಮುಸ್ತಫಾ (೨೮) ಎಂಬವರನ್ನು ಮಂಗಳೂರು ಅಪರಾಧ ಪತ್ತೆದಳದ ಪೊಲೀಸರು ಬಾಗಲಕೋಟೆಯಲ್ಲಿ ಬಂಧಿಸಿದ್ದಾರೆ.
ಜೂ.೨೫ರಂದು ಮಂಗಳೂರು ಸುರತ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಕುಳಾಯಿಗುಡ್ಡೆ ವಾಟರ್ ಟ್ಯಾಂಕ್ ಬಳಿ ಸಾರ್ವಜನಿಕರಿಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಅಣ್ಣಪ್ಪ ಸ್ವಾಮಿ ಅಲಿಯಾಸ್ ಮನು ಎಂಬಾತನನ್ನು ದಸ್ತಗಿರಿ ಮಾಡಿ ೧೫.೧೭ ಗ್ರಾಂ ಎಂಡಿಎಂಎ ವಶಪಡಿಸಲಾಗಿತ್ತು.


ಅಣ್ಣಪ್ಪ ಸ್ವಾಮಿಗೆ ಮಾದಕ ವಸ್ತು ಪೂರೈಕೆ ಮಾಡುವ ಜಾಲ ಹಿಡಿದ ಪೊಲೀಸರಿಗೆ ಅಲ್ಪಾಜ್ ಮತ್ತು ಮುಸ್ತಾಫಾ ಎಂಬಿಬ್ಬರ ಮಾಹಿತಿ ಲಭಿಸಿದೆ. ಅಲ್ಪಾಜ್ ಈ ಜಾಲದ ಪ್ರಮುಖ ಕೊಂಡಿಯಾಗಿದ್ದು ಈತ ಮುಸ್ತಾಫಾನೊಂದಿಗೆ ಸೇರಿಕೊಂಡು ದೆಹಲಿಯಿಂದ ಮಾದಕ ವಸ್ತು ಖರೀದಿಸಿ ಬೆಂಗಳೂರಿಗೆ ಹೋಗುತ್ತಿರುವ ಖಚಿತ ಮಾಹಿತಿ ದೊರೆತಿದೆ. ತಕ್ಷಣ ಕಾರ್ಯಾಚರಣೆಗಿಳಿದ ಮಂಗಳೂರು ನಗರ ಸಿಸಿಬಿ ಘಟಕದ ಅಧಿಕಾರಿ ಮತ್ತು ಸಿಬ್ಬಂದಿ ಬುಧವಾರ ಬಾಗಲಕೋಟೆ ಜಿಲ್ಲೆಯ ಹುನಗುಂದ ಎಂಬಲ್ಲಿನ ಲಾಡ್ಜ್‌ಗೆ ದಾಳಿ ನಡೆಸಿ ಮಾದಕ ವಸ್ತುವಿನ ಜತೆಗೆ ಆರೋಪಿಗಳನ್ನು ರೆಡ್ ಹ್ಯಾಂಡಾಗಿ ಬಂಧಿಸಿದ್ದಾರೆ. ಬಂಧಿತರಿಂತ ಎಂಡಿಎಂಎ ಜತೆ ಬ್ಯಾಗ್ ಮತ್ತು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಮುಹಮ್ಮದ್ ಅಲ್ಪಾಜ್ ವಿರುದ್ಧ ೨೦೨೪ರಲ್ಲಿ ಕೊಣಾಜೆ ಪೊಲೀಸ್ ಠಾಣೆ ಹಾಗೂ ೨೦೨೬ರಲ್ಲಿ ಉರ್ವ ಪೊಲೀಸ್ ಠಾಣೆಯಲ್ಲಿ ಎಂಡಿಎಂಎ ಮಾರಾಟದ ಪ್ರಕರಣಗಳು ದಾಖಲಾಗಿದೆ.
ಬೆಂಗಳೂರನ್ನು ಕೇಂದ್ರವಾಗಿಸಿಕೊಂಡಿದ್ದರು: ಆರೋಪಿಗಳು ದಿಲ್ಲಿಯಿಂದ ಮಾದಕವಸ್ತು ಖರೀದಿಸಿಕೊಂಡು ಕಾರಿನಲ್ಲಿ ಬೆಂಗಳೂರಿಗೆ ಬರುತ್ತಿದ್ದರು. ಬೆಂಗಳೂರು ನಗರವನ್ನು ಕೇಂದ್ರವಾಗಿಸಿಕೊಂಡು ದ.ಕ., ಉಡುಪಿ ಜಿಲ್ಲೆ ಮತ್ತು ಕೇರಳ ರಾಜ್ಯದ ಕಾಸರಗೋಡು ಸಹಿತ ವಿವಿಧೆಡೆಗಳಿಗೆ ಮಾದಕ ವಸ್ತು ಪೂರೈಕೆ ಮಾಡುತ್ತಿರುವುದು ತನಿಖೆಯಿಂದ ತಿಳಿದು ಬಂದಿದೆ.









