ಬುರುಡೆ ಪ್ರಕರಣ: ಧರ್ಮಸ್ಥಳ ಕ್ಷೇತ್ರಕ್ಕೆ ಕಳಂಕ ತರಲು ೨೦೦ ಕೋಟಿ ರೂ ಷಡ್ಯಂತ್ರ-ಡಾ. ಹೆಗ್ಗಡೆಯವರನ್ನು ಜೈಲಿಗೆ ಕಳುಹಿಸಲು ೫೦ ಲಕ್ಷ ರೂ. ನೀಡುವುದಾಗಿ ಆಮಿಷ -ಮಾಸ್ಕ್‌ಮ್ಯಾನ್ ಚಿನ್ನಯ್ಯ ಹೈಕೋರ್ಟ್‌ಗೆ ಸಲ್ಲಿಸಿದ ರಿಟ್ ಅರ್ಜಿಯಲ್ಲಿ ಗಂಭೀರ ಆರೋಪ

0

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವು ಪ್ರಕರಣಗಳ ಕುರಿತ ತನಿಖೆಯನ್ನು ಶೀಘ್ರ ಪೂರ್ಣಗೊಳಿಸಬೇಕು, ಶ್ರೀ ಕ್ಷೇತ್ರ ಧರ್ಮಸ್ಥಳ, ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬದ ಬಗ್ಗೆ ವ್ಯವಸ್ಥಿತ ಪಿತೂರಿ ನಡೆಸಿರುವವರ ವಿರುದ್ಧ ಕ್ರಮ ಕೈಗೊಂಡು ತನಿಖೆಯ ಅಂತಿಮ ವರದಿ ಸಲ್ಲಿಸಲು ವಿಶೇಷ ತನಿಖಾ ದಳಕ್ಕೆ ನಿರ್ದೇಶನ ನೀಡಬೇಕು ಎಂದು ಪ್ರಕರಣದ ಮೂಲ ಆರೋಪಿಯಾಗಿರುವ ಮಾಸ್ಕ್‌ಮ್ಯಾನ್ ಸಿ.ಎನ್. ಚೆನ್ನಯ್ಯ ಹೈಕೋರ್ಟ್‌ಗೆ ಸಲ್ಲಿಸಿರುವ ರಿಟ್ ಅರ್ಜಿಯಲ್ಲಿ ಹಲವು ಗಂಭೀರ ಆರೋಪ ಮಾಡಿದ್ದಾರೆ.
ಖ್ಯಾತ ಬಹುಭಾಷಾ ನಟ ಪ್ರಕಾಶ್‌ರಾಜ್, ಸೌಜನ್ಯ ಪರ ಹೋರಾಟಗಾರರಾದ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ವಿಠಲ ಗೌಡ ಪಾಂಗಳ, ಜಯಂತ್ ಟಿ., ಯೂ ಟ್ಯೂಬರ್‌ಗಳಾದ ಸಮೀರ್ ಎಂ.ಡಿ. ಮತ್ತು ಅಜಯ್ ಅಂಚನ್ ಅವರು ಈ ಷಡ್ಯಂತ್ರದ ಪ್ರಮುಖ ರೂವಾರಿಗಳು ಎಂದು ಚಿನ್ನಯ್ಯ ರಿಟ್ ಅರ್ಜಿಯಲ್ಲಿ ತಿಳಿಸಿದ್ದಾರೆ. ಜತೆಗೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಕಳಂಕ ತರಲು ಒಟ್ಟು ೨೦೦ ಕೋಟಿ ರೂಪಾಯಿಯ ಬಜೆಟ್‌ನಲ್ಲಿ ಷಡ್ಯಂತ್ರ ರೂಪಿಸಲಾಗಿತ್ತು.
ಈ ಪ್ರಕರಣದಲ್ಲಿ ತನ್ನೊಬ್ಬನನ್ನೇ ಬಲಿಪಶು ಮಾಡಲಾಗಿದ್ದು ಪಿತೂರಿ ನಡೆಸಿದವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಆದ್ದರಿಂದ ಈ ನಿಟ್ಟಿನಲ್ಲಿ ಶೀಘ್ರ ಕ್ರಮ ಕೈಗೊಳ್ಳಲು ಎಸ್‌ಐಟಿಗೆ ನಿರ್ದೇಶಿಸಬೇಕು ಎಂದು ಕೋರಿ ಮಂಡ್ಯ ಮೂಲದವರಾಗಿದ್ದು ಪ್ರಸ್ತುತ ಧರ್ಮಸ್ಥಳ ಗ್ರಾಮದಲ್ಲಿ ವಾಸ್ತವ್ಯ ಹೊಂದಿರುವ ಸಿ.ಎನ್. ಚಿನ್ನ ಯಾನೆ ಚಿನ್ನಯ್ಯ (೫೦) ಅವರು ಹಿರಿಯ ವಕೀಲ ವಿವೇಕ್ ಸುಬ್ಬಾರೆಡ್ಡಿ ಅವರ ಮೂಲಕ ಸಲ್ಲಿಸಿರುವ ರಿಟ್ ಅರ್ಜಿಯನ್ನು ತಿಳಿಸಿದ್ದಾರೆ.
ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಜೂ. ೧೧ರಂದು ವಿಚಾರಣೆ ನಡೆಸಿ ಪ್ರತಿವಾದಿಗಳಾದ ರಾಜ್ಯ ಗೃಹ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಎಸ್‌ಐಟಿ ಮುಖ್ಯಸ್ಥರು ಹಾಗೂ ಧರ್ಮಸ್ಥಳ ಠಾಣಾ ಪೊಲೀಸರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಜೂ. ೨೯ಕ್ಕೆ ಮುಂದೂಡಿದ್ದಾರೆ. ಅರ್ಜಿಯ ವಿಚಾರಣೆ ಬಳಿಕ ಈ ವಿಚಾರಗಳು ಬಹಿರಂಗವಾಗಿದೆ. ನಂತರ ಈ ವಿಷಯ ದೇಶಾದ್ಯಂತ ಭಾರೀ ಸಂಚಲನಕ್ಕೆ ಕಾರಣವಾಗಿದೆ.
ಚಿನ್ನಯ್ಯ ರಿಟ್ ಅರ್ಜಿಯಲ್ಲಿ ಹಲವು ವಿಚಾರ: ಧರ್ಮಸ್ಥಳದಲ್ಲಿ ಈ ಹಿಂದೆ ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ನನ್ನನ್ನು ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ವಿಠಲ ಗೌಡ, ಜಯಂತ್ ಟಿ. ಮತ್ತಿತರರು ಸಂಪರ್ಕಿಸಿದ್ದರು. ಧರ್ಮಸ್ಥಳದಲ್ಲಿ ಸಾವಿರಾರು ಹೆಣಗಳನ್ನು ಹೂಳಲಾಗಿದೆ ಎಂದು ಸುಳ್ಳು ಹೇಳಿಕೆ ನೀಡುವಂತೆ ಅವರು ನನಗೆ ಒತ್ತಡ ಹೇರಿದ್ದರು. ಬೆಂಗಳೂರಿನ ಸ್ಯಾಟಲೈಟ್ ಬಸ್ ನಿಲ್ದಾಣದ ಬಳಿಯಿಂದ ನನ್ನನ್ನು ಜಯಂತ್ ಅವರು ಅವರ ಮನೆಗೆ ಕರೆದೊಯ್ದು ಅಲ್ಲಿ ಅಯ್ಯಪ್ಪ ಸ್ವಾಮಿ ಟವಲ್ ಮೇಲೆ ಮಾನವನ ತಲೆಬುರುಡೆ, ಮಣ್ಣು ಮತ್ತು ಅರ್ಧ ಬಾಟಲಿ ನೀರನ್ನು ಇಟ್ಟು ತಲೆ ಬುರುಡೆಯನ್ನು ಕೈಯಲ್ಲಿ ಹಿಡಿಯುವಂತೆ ಹೇಳಿ ಹೆದರಿಸಿದ್ದರು. ತಲೆ ಬುರುಡೆ ಮುಟ್ಟುವ ರೀತಿಯಲ್ಲಿ ಫೋಟೋಗಳನ್ನು ತೆಗೆದಿದ್ದರು. ಅನಂತರ ವಕೀಲರ ಕಚೇರಿಗೆ ಕರೆದೊಯ್ದಿದ್ದರು ಎಂದು ಚಿನ್ನಯ್ಯ ಹೈಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ವಿವರಿಸಿದ್ದಾರೆ.
ಮಹೇಶ್ ಶೆಟ್ಟಿ ಮನೆಯಲ್ಲಿ ಕೂಡಿ ಹಾಕಲಾಗಿತ್ತು: ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ನನ್ನನ್ನು ಕೂಡಿ ಹಾಕಲಾಗಿತ್ತು. ರಾತ್ರಿ ವೇಳೆ ಗಿರೀಶ್ ಮಟ್ಟಣ್ಣವರ್ ಹಾಸಿಗೆ ಮೇಲೆ ಮಲಗುತ್ತಿದ್ದರೆ ನನ್ನನ್ನು ನೆಲದ ಮೇಲೆ ಮಲಗಿಸಿ ಅವರ ಕೈಕಾಲು ಹಾಗೂ ತಲೆ ಮಸಾಜ್ ಮಾಡುವಂತೆ ಒತ್ತಾಯಿಸಲಾಗುತ್ತಿತ್ತು. ತಪ್ಪಿಸಿಕೊಂಡು ಹೋಗದಂತೆ ಪ್ರದೀಪ್ ಎಂಬವರು ಕಾವಲು ಕಾಯುತ್ತಿದ್ದರು. ಮಂಗಳೂರಿನ ಯೂಟ್ಯೂಬ್ ಚಾನೆಲ್‌ನ ಅಜಯ್ ಅಂಚನ್ ಹಾಗೂ ಯೂಟ್ಯೂಬರ್ ಸಮೀರ್ ಎಂ.ಡಿ. ಎಂಬವರು ನನ್ನಿಂದ ಬಲವಂತವಾಗಿ ೩೦-೩೫ ವೀಡಿಯೋ ಹೇಳಿಕೆಗಳನ್ನು ಚಿತ್ರೀಕರಿಸಿಕೊಂಡಿದ್ದರು ಎಂದು ಚಿನ್ನಯ್ಯ ಸಲ್ಲಿಸಿರುವ ಅರ್ಜಿಯಲ್ಲಿ ವಿವರಿಸಲಾಗಿದೆ.
ತಿಮರೋಡಿ ಮನೆಯಿಂದ ಬುರುಡೆ: ಬೆಳ್ತಂಗಡಿ ನ್ಯಾಯಾಲಯಕ್ಕೆ ಕರೆದೊಯ್ಯುವಾಗ ನನ್ನನ್ನು ತಲೆಗೆ ಕಪ್ಪು ಬಟ್ಟೆ ಹಾಕಿ ಕರೆದೊಯ್ಯಲಾಗಿತ್ತು. ಈ ವೇಳೆ ತಿಮರೋಡಿ ಮನೆಯಿಂದ ತರಲಾದ ತಲೆ ಬುರುಡೆಯನ್ನು ಕೊಂಡೊಯ್ಯಲಾಗಿತ್ತು. ಕೋರ್ಟ್‌ನಲ್ಲಿ ಬಲವಂತವಾಗಿ ಸುಳ್ಳು ಸಾಕ್ಷ್ಯ ಹೇಳಿಸಲಾಗಿತ್ತು. ಅನಂತರ ನನಗೆ ಹಲವು ಬಾರಿ ಜೀವ ಬೆದರಿಕೆ ಹಾಕಲಾಗಿತ್ತು. ಬಳಿಕ ಪಶ್ಚಾತ್ತಾಪದ ಹಿನ್ನೆಲೆಯಲ್ಲಿ ಎಸ್‌ಐಟಿ ಅಧಿಕಾರಿಗಳ ಮುಂದೆ ಪಿತೂರಿಯ ಸಂಪೂರ್ಣ ಸತ್ಯವನ್ನು ಒಪ್ಪಿಕೊಂಡಿದ್ದೆ. ಅಧಿಕಾರಿಗಳು ನನ್ನನ್ನು ಕೋರ್ಟ್ ಮುಂದೆ ಹಾಜರುಪಡಿಸಿ ಅಲ್ಲಿ ನನ್ನ ಹೇಳಿಕೆ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ನನ್ನ ಮೇಲೆ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಅನಂತರ ೨೦೨೫ರ ಡಿಸೆಂಬರ್ ೧೮ರಂದು ಕೋಟ್೯ನಿಂದ ಜಾಮೀನು ಮಂಜೂರಾಯಿತು. ಜಾಮೀನಿನ ಪ್ರಮುಖ ಷರತ್ತಿನಂತೆ ಮಾಧ್ಯಮಗಳ ಮುಂದೆ ಮಾತನಾಡುವಂತಿರಲಿಲ್ಲ. ಇದರಿಂದಾಗಿ ಸಾರ್ವಜನಿಕರಿಗೆ ಸತ್ಯ ತಿಳಿಸಲು ಸಾಧ್ಯವಾಗುತ್ತಿಲ್ಲ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ. ಎಸ್‌ಐಟಿಯ ಪ್ರಾಥಮಿಕ ತನಿಖಾ ವರದಿಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್ ಸಹಿತ ಪಿತೂರಿದಾರರಾದ ಐವರನ್ನು ಹೆಸರಿಸಿದ್ದರೂ ಕಳೆದ ೯ ತಿಂಗಳುಗಳಿಂದ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಹಾಗೂ ಅಂತಿಮ ವರದಿ ಸಲ್ಲಿಸಿಲ್ಲ. ಪರಿಶಿಷ್ಟ ಜಾತಿಗೆ ಸೇರಿದ ನಾನು ಸಾಮಾಜಿಕ ಹಾಗೂ ಆರ್ಥಿಕವಾಗಿ ದರ್ಬಲ ವರ್ಗದವನಾಗಿzನೆ. ನನ್ನ ಈ ಪರಿಸ್ಥಿತಿಯನ್ನು ಲಾಭ ಪಡೆದು ಇತರ ಪಿತೂರಿದಾರರು ಸಂಚು ರೂಪಿಸಿದ್ದಾರೆ. ಇದರಿಂದ ನಾನೊಬ್ಬನೇ ಬಲಿಪಶುವಾಗಿ ಪ್ರಕರಣದಲ್ಲಿ ಸಿಲುಕಿ ಕಷ್ಟ ಅನುಭವಿಸುತ್ತಿರುವುದಾಗಿ ಚಿನ್ನಯ್ಯ ಅರ್ಜಿಯಲ್ಲಿ ಅಳಲು ತೋಡಿಕೊಂಡಿದ್ದಾರೆ.
ಅರ್ಜಿಯಲ್ಲಿ ಮನವಿ: ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಅಪರಾಧ ಸಂಖ್ಯೆ: ೩೯/೨೦೨೫ರ ಪ್ರಕರಣದಲ್ಲಿ ಅಂತಿಮ ವರದಿಯನ್ನು ಸಲ್ಲಿಸಲು ಹಾಗೂ ಪ್ರಾಥಮಿಕ ವಿಚಾರಣಾ ವರದಿಯಲ್ಲಿ ಹೆಸರಿಸಲಾದ ಪಿತೂರಿದಾರರ ವಿರುದ್ಧ ಕ್ರಮ ಕೈಗೊಳ್ಳಲು ಪ್ರತಿವಾದಿಯಾದ ಎಸ್‌ಐಟಿಗೆ ನಿರ್ದೇಶನ ನೀಡಬೇಕು. ಜತೆಗೆ ಪ್ರಕರಣದ ಒಳಸಂಚು, ತನಗೆ ನೀಡಲಾದ ದೈಹಿಕ ಮತ್ತು ಮಾನಸಿಕ ಕಿರುಕುಳ ಹಾಗೂ ಬೆದರಿಕೆಯ ಬಗ್ಗೆ ೨೦೨೫ರ ಡಿಸೆಂಬರ್ ೧೮ರಂದು ನೀಡಲಾದ ದೂರಿಗೆ ಸಂಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಲು ಧರ್ಮಸ್ಥಳ ಠಾಣಾ ಪೊಲೀಸರಿಗೆ ನಿರ್ದೇಶಿಸಬೇಕು. ಈ ಪ್ರಕರಣದ ತನಿಖೆಯನ್ನು ಶೀಘ್ರ ಪೂರ್ಣಗೊಳಿಸಿ ವಿಚಾರಣಾ ನ್ಯಾಯಾಲಯದ ಮುಂದೆ ಆದಷ್ಟು ಬೇಗ ಅಂತಿಮ ವರದಿಯನ್ನು ಸಲ್ಲಿಸುವಂತೆ ಎಸ್‌ಐಟಿಗೆ ನಿರ್ದೇಶಿಸಬೇಕು ಎಂದು ಚಿನ್ನಯ್ಯ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.
ಬಹುಭಾಷಾ ನಟ ಪ್ರಕಾಶ್‌ರಾಜ್ ಹೆಸರು ಉಲ್ಲೇಖ: ಕೇರಳದ ರೆಸಾರ್ಟ್ ಒಂದರಲ್ಲಿ ತಂಗಿದ್ದಾಗ ಗಿರೀಶ್ ಮಟ್ಟಣ್ಣವರ್ ಅವರು ಪ್ರಖ್ಯಾತ ಬಹುಭಾಷಾ ನಟ ಪ್ರಕಾಶ್‌ರಾಜ್ ಅವರಿಗೆ ಕರೆ ಮಾಡಿ ನನಗೆ ಮೊಬೈಲ್ ನೀಡಿದರು. ಪ್ರಕಾಶ್ ರಾಜ್ ಅವರು ತಮಿಳಿನಲ್ಲಿ ಮಾತನಾಡಿ ಗಿರೀಶ್ ಹೇಳಿಕೊಟ್ಟಂತೆ ಅಧಿಕಾರಿಗಳ ಮುಂದೆ ಹೇಳಿಕೆ ನೀಡು. ೨೯ರಂದು ಬಂದು ನಾನು ನಿನ್ನನ್ನು ಕಾಣುತ್ತೇನೆ ಮತ್ತು ಅಪ್ಪಿಕೊಳ್ಳುತ್ತೇನೆ ಎಂದು ಹೇಳಿದ್ದರೆಂದು ರಿಟ್ ಅರ್ಜಿಯಲ್ಲಿ ಚಿನ್ನಯ್ಯ ವಿವರಿಸಿದ್ದಾರೆ. ಬಹುಭಾಷಾ ನಟರಾಗಿ ಗುರುತಿಸಿಕೊಂಡಿರುವ ಪ್ರಕಾಶ್ ರೈ ಅವರ ಹೆಸರು ಬುರುಡೆ ಪ್ರಕರಣದಲ್ಲಿ ಇದೇ ಪ್ರಥಮ ಬಾರಿ ಥಳಕು ಹಾಕಿಕೊಂಡಿದ್ದು ಭಾರೀ ಚರ್ಚೆಗೆ ಗ್ರಾಸ ಒದಗಿಸಿದೆ.
ಕೇರಳ ಮತ್ತು ಚಿತ್ರದುರ್ಗದಿಂದ ಹಣ: ಪ್ರಕರಣದ ಸಂಬಂಧ ಇಷ್ಟು ದೊಡ್ಡ ಮಟ್ಟದ ಕಾನೂನು ಹೋರಾಟ ಮತ್ತು ತನಿಖೆಗಳಿಗೆ ಹಣ ಎಲ್ಲಿಂದ ಬರುತ್ತದೆ ಎಂದು ನಾನು ಮಹೇಶ್ ಶೆಟ್ಟಿ ಹಾಗೂ ಗಿರೀಶ್ ಅವರನ್ನು ಕೇಳಿದಾಗ ಮೊದಲು ಅದರ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದ್ದರು. ಆದರೆ ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ ಮತ್ತವರ ಕುಟುಂಬ ಸದಸ್ಯರ ವಿರುದ್ಧ ಸಾಕ್ಷ್ಯ ನುಡಿಯಲು ಒಪ್ಪಿದಾಗ ಕೇರಳದಿಂದ ಹಣ ಬರುತ್ತಿದೆ ಹಾಗೂ ಚಿತ್ರದುರ್ಗದ ರಮಾ ನಾಗರಾಜ್ ಎಂಬವರು ನಿಯಮಿತವಾಗಿ ಫಂಡಿಂಗ್ ಮಾಡುತ್ತಿದ್ದಾರೆ ಎಂದು ಬಹಿರಂಗಪಡಿಸಿದ್ದರು. ಅಲ್ಲದೆ ವೀರೇಂದ್ರ ಹೆಗ್ಗಡೆಯವರನ್ನು ಜೈಲಿಗೆ ಕಳುಹಿಸಲು ಸಹಕರಿಸಿದರೆ ೫೦ ಲಕ್ಷ ರೂ. ನೀಡುವುದಾಗಿ ಆಮಿಷ ಒಡ್ಡಲಾಗಿತ್ತು ಎಂದು ಚಿನ್ನಯ್ಯ ಅರ್ಜಿಯಲ್ಲಿ ವಿವರಿಸಿದ್ದಾರೆ.

ಸೌಜನ್ಯ ಫೊಟೋ ಹಿಡಿದುಕೊಂಡು ಬಂದ ವಿಠಲ ಗೌಡ, ಸೂಚನೆ ಪಾಲಿಸುವಂತೆ ತಿಳಿಸಿದ ಮಹೇಶ್ ಶೆಟ್ಟಿ ತಿಮರೋಡಿ: ನಾನು ಮತ್ತು ನನ್ನ ಎರಡನೇ ಪತ್ನಿ ಮಲ್ಲಿಕಾ ಅವರು ೧೯೮೦ರಿಂದ ೨೦೧೪ರವರೆಗೆ ಧರ್ಮಸ್ಥಳದಲ್ಲಿ ನೈರ್ಮಲ್ಯ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದೆವು. ೨೦೧೪ನೇ ಸಾಲಿನಲ್ಲಿ ನನ್ನ ಸ್ವಂತ ಗ್ರಾಮವಾದ ಮಂಡ್ಯ ತಾಲೂಕಿನ ಕೆರಗೋಡು ಹೋಬಳಿಯ ಚಿಕ್ಕಬಳ್ಳಿಗೆ ಮರಳಿ ಬಂದು ಸುಮಾರು ಒಂದೂವರೆ ವರ್ಷ ಅಲ್ಲಿ ವಾಸಿಸತೊಡಗಿದ್ದೆ. ಆದಾಯ ಇಲ್ಲದಕ್ಕೆ ತಮಿಳುನಾಡಿನ ಸತ್ಯ ಮಂಗಲಂನ ಚಿಕ್ಕರಾಸನ್ ಪಾಳ್ಯದಲ್ಲಿರುವ ಪಿತ್ರಾರ್ಜಿತ ಆಸ್ತಿಯಿದ್ದ ಸ್ಥಳಕ್ಕೆ ತೆರಳಿ ಸುಮಾರು ಹತ್ತು ವರ್ಷ ವಾಸವಿದ್ದೆ. ಕೆ.ಪಿ.ಆರ್.ಮಿಲ್‌ನಲ್ಲಿ ಉದ್ಯೋಗದಲ್ಲಿದ್ದೆ. ೨೦೨೩-೨೪ನೇ ಸಾಲಿನಲ್ಲಿ ಉಜಿರೆ ಗ್ರಾಮ ಪಂಚಾಯಿತಿನಲ್ಲಿ ಕಸ ಸಂಗ್ರಹಣೆ ಮತ್ತು ವಿಲೇವಾರಿ ಕೆಲಸಕ್ಕೆ ಸೇರಿದೆ. ಹೀಗೆ ಕೆಲಸದಲ್ಲಿದ್ದಾಗ ಒಂದು ದಿನ ಸೌಜನ್ಯಾಳ ಫೋಟೋ ಹಿಡಿದುಕೊಂಡು ಬಂದ ವಿಠಲ ಗೌಡ ನನ್ನನ್ನು ಗುರುತಿಸಿ ಮಾತನಾಡಿಸಿದರು. ನಂತರ ವಿಠಲ್ ಗೌಡ ಕೆಲವು ಕೆಲಸ ಇದೆ ಎಂದು ತಿಳಿಸಿ ಮಹೇಶ್ ಶೆಟ್ಟಿ ತಿಮರೋಡಿ ಅವರ ಮನೆಗೆ ನನ್ನನ್ನು ಹಾಗೂ ಪತ್ನಿಯನ್ನು ಕರೆದುಕೊಂಡು ಹೋಗಿ ಪರಿಚಯಿಸಿದರು. ನಂತರ ಗಣೇಶ್ ಎಂಬ ವ್ಯಕ್ತಿ ನನ್ನ ಮತ್ತು ಪತ್ನಿಯ ಫೋಟೋ ತೆಗೆದರು. ಮಹೇಶ್ ಶೆಟ್ಟಿ ತಿಮರೋಡಿ ಅವರಲ್ಲಿ ಧರ್ಮಸ್ಥಳದಲ್ಲಿ ಅನೇಕ ಶವಗಳನ್ನು ದಹನ ಮಾಡಲಾಗಿದೆ ಮತ್ತು ಅಲ್ಲಿ ಸಾವಿರಾರು ಶವಗಳಿವೆ ಎಂದು ಹೇಳುವಂತೆ ನನಗೆ ವಿಠಲ ಗೌಡ ಸೂಚಿಸಿದರು. ಅಲ್ಲಿಂದ ಹೊರಟಾಗ ಮಹೇಶ್ ಶೆಟ್ಟಿ ತಿಮರೋಡಿ ನನಗೆ ೬೫೦೦ ನೋಟುಗಳ ಕಂತೆಯೊಂದನ್ನು ನೀಡಿದರು. ಆದರೆ ಸ್ವೀಕರಿಸಲು ನಿರಾಕರಿಸಿದೆ. ನಂತರ ನಾನು ತಮಿಳುನಾಡಿನ ಸತ್ಯಮಂಗಲಂಗೆ ಹಿಂದಿರುಗಿದೆ. ಸುಮಾರು ಆರು ತಿಂಗಳ ನಂತರ ತಿಮರೋಡಿ ನನಗೆ ಕರೆ ಮಾಡಿದರು. ವಿಧಾನಸೌಧದಲ್ಲಿ ಬಾಂಬ್ ಇಟ್ಟಿ ವ್ಯಕ್ತಿಯನ್ನು ಪರಿಚಯಿಸುತ್ತೇವೆ ಎಂದು ತಿಳಿಸಿ ಮಂಡ್ಯಕ್ಕೆ ಬರುವಂತೆ ಸೂಚಿಸಿದರು. ಪತ್ನಿಯ ಬ್ಯಾಂಕ್ ಖಾತೆಗೆ ೫೦೦೦ ರೂ ವರ್ಗಾಯಿಸಿದರು. ಅದರಂತೆ ಮಂಡ್ಯಕ್ಕೆ ತೆರಳಿದೆ. ಮಂಡ್ಯದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ವಿಠಲ ಗೌಡ, ಗಣೇಶ್ ಮತ್ತು ಇತರ ಇಬ್ಬರು ವ್ಯಕ್ತಿಗಳಿದ್ದರು. ಗಿರೀಶ ಮಟ್ಟಣ್ಣನವರ್ ಅವರು ಧರ್ಮಸ್ಥಳದಲ್ಲಿ ಶವಗಳನ್ನು ಸಮಾಧಿ ಮಾಡಲಾಗಿದೆ ಎಂದು ಆರೋಪಿಸಲಾದ ಸ್ಥಳಗಳ ಬಗ್ಗೆ ನನ್ನನ್ನು ಪ್ರಶ್ನಿಸಿದರು. ನಂತರ ವಿಠಲ ಗೌಡ ನನಗೆ ಬಂಗ್ಲೆಗುಡ್ಡೆ ಮತ್ತು ವಿಠಲ್ ಗೌಡ ಅವರ ಕಚೇರಿ ಸಮೀಪ ಶವಗಳನ್ನು ಸಮಾಧಿ ಮಾಡಲಾಗಿದೆ ಎನ್ನಲಾದ ಸ್ಥಳಗಳನ್ನು ಗುರುತಿಸುವಂತೆ ಪದೇ ಪದೇ ಕೋರಿದರು. ಇಂತಹ ಕೋರಿಕೆಗಳ ಉzಶವೇನೆಂದು ನಾನು ವಿಚಾರಿಸಿದಾಗ ಮಹೇಶ್ ಶೆಟ್ಟಿ ತಿಮರೋಡಿ ನನ್ನನ್ನು ತರಾಟೆಗೆ ತೆಗೆದುಕೊಂಡು ಪ್ರಶ್ನೆ ಕೇಳದೆ ಅವರ ಸೂಚನೆಗಳನ್ನು ಪಾಲಿಸುವಂತೆ ತಿಳಿಸಿದರು ಎಂದು ಅರ್ಜಿಯಲ್ಲಿ ಚಿನ್ನಯ್ಯ ತಿಳಿಸಿದ್ದಾರೆ.

ದೆಹಲಿಗೆ ರೈಲಿನಲ್ಲಿ ಬಂದ ಬುರುಡೆ: ಸುಪ್ರೀಂಕೋರ್ಟ್ ನ್ಯಾಯಾಧೀಶರು ಅಪಹಾಸ್ಯ ಮಾಡುತ್ತಾರೆ ಎಂದ ಕೆ.ವಿ. ಧನಂಜಯ್: ಗಿರೀಶ್ ಮಟ್ಟಣ್ಣವರ್ ಕರೆ ಮಾಡಿ ಬೆಂಗಳೂರಿಗೆ ಮರಳಿ ಬರುವಂತೆ ಒತ್ತಾಯಿಸಿದರು. ನನ್ನ ಪತ್ನಿಯ ಬ್ಯಾಂಕ್ ಖಾತೆಗೆ ೫೦೦೦ ರೂ ವರ್ಗಾಯಿಸಿದರು. ಬೆಂಗಳೂರಿನಲ್ಲಿ ಗಿರೀಶ್ ಮಟ್ಟಣ್ಣವರ್ ಮತ್ತು ಸುಜಾತಾ ಭಟ್ ಎಂಬ ವೃದ್ಧ ಮಹಿಳೆ ಇದ್ದರು. ಎಲ್ಲರನ್ನು ದೆಹಲಿಗೆ ಕರೆದೊಯ್ದರು. ಈ ಮಧ್ಯೆ ಜಯಂತ್ ತಲೆಬುರುಡೆಯನ್ನು ಒಯ್ದು ರೈಲಿನಲ್ಲಿ ದೆಹಲಿ ತಲುಪಿದ್ದರು. ದೆಹಲಿ ತಲುಪಿದ ನಂತರ ಸುಪ್ರೀಂಕೋರ್ಟ್ ಸಮೀಪ ಕರೆದೊಯ್ದು ಆ ಪ್ರದೇಶದಲ್ಲಿ ಓಡಾಡುವಂತೆ ಸೂಚಿಸಿದರು. ಹಾಗೆಯೇ ಸಿಸಿಟಿವಿ ಕ್ಯಾಮೆರಾಗಳ ಮುಂದೆ ಕುಳಿತುಕೊಳ್ಳಲು ನಿರ್ದೇಶಿಸಿ ನಂತರ ಕೋಣೆಗೆ ಕರೆದೊಯ್ದರು. ಮಾರನೇ ದಿನ ವಕೀಲ ಕೆ.ವಿ. ಧನಂಜಯ ಅವರ ಕಾನೂನು ತಂಡದ ಸದಸ್ಯರನ್ನು ಭೇಟಿ ಮಾಡಲಾಯಿತು. ಗಿರೀಶ್ ಮಟ್ಟಣ್ಣವರ್ ತಲೆಬುರುಡೆಗೆ ಸಂಬಂಧಿಸಿದ ವಿಷಯ ಚರ್ಚಿಸಿದಾಗ ಧನಂಜಯ ಅವರು ಅಂತಹ ತಲೆಬುರುಡೆಯನ್ನು ಸುಪ್ರೀಂಕೋರ್ಟ್ ನ್ಯಾಯಾಧೀಶರ ಮುಂದೆ ತಂದರೆ ಅವರು ಅದನ್ನು ಅಪಹಾಸ್ಯ ಮಾಡಿ ತಿರಸ್ಕರಿಸುತ್ತಾರೆ ಎಂದು ಹೇಳಿ ತಲೆಬುರುಡೆಗೆ ಸಂಬಂಧಿಸಿದ ವಿಷಯವನ್ನು ಬೆಳ್ತಂಗಡಿಯಲ್ಲಿ ಮುಂದುವರಿಸಬೇಕೆಂದು ಸೂಚಿಸಿದರು ಎಂದು ಚಿನ್ನಯ್ಯ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

ಜಯಂತ್ ಟಿ. ಮನೆಗೆ ಕರೆದೊಯ್ದು ತಲೆ ಬುರುಡೆ ಕೊಟ್ಟರು!: ನನ್ನನ್ನು ಒಂದು ದಿನ ಕೇರಳದ ಕಾನತ್ತೂರುಗೆ ಕರೆದೊಯ್ದರು. ಬಳಿಕ ಕೇರಳದ ಕಣ್ಣೂರಿಗೆ, ಅಲ್ಲಿಂದ ಕೊಯಮತ್ತೂರಿಗೆ ಕಳುಹಿಸಿದರು. ಹದಿನೈದು ದಿನಗಳ ನಂತರ ತಿಮರೋಡಿ ಅವರು ಕರೆ ಮಾಡಿ ನನ್ನ ಖಾತೆಗೆ ಹಣ ಜಮೆ ಮಾಡಿರುವುದಾಗಿ ತಿಳಿಸಿ ಬೆಂಗಳೂರು ಬಸ್ ನಿಲ್ದಾಣಕ್ಕೆ ಬರಲು ಸೂಚಿಸಿದರು. ಬೆಂಗಳೂರಿಗೆ ತೆರಳಿದಾಗ ಜಯಂತ್ ತಮ್ಮ ಮನೆಗೆ ನನ್ನನ್ನು ಕರೆದೊಯ್ದರು. ಒಂದು ಪೆಟ್ಟಿಗೆ ತಂದು ಜಯಂತ್ ಅವರು ಒಂದು ಮಾನವ ತಲೆಬುರುಡೆ ತಂದರು. ಅರ್ಧ ತುಂಬಿದ ನೀರಿನ ಬಾಟಲ್ ಮತ್ತು ತಲೆಬುರುಡೆ ಕೈಯಲ್ಲಿ ಹಿಡಿದುಕೊಳ್ಳುವಂತೆ ತಿಳಿಸಿದರು. ನಾನು ಆಗ ಭಯಭೀತನಾದೆ. ಆದರೂ ಅವರ ಸೂಚನೆಯಂತೆ ತಲೆಬುರುಡೆಯನ್ನು ಮುಟ್ಟುವ ರೀತಿಯಲ್ಲಿ ಬಾಗಿದೆ. ಆಗ ಜಯಂತ್ ಫೋಟೋ ತೆಗೆದರು. ನಂತರ ನನ್ನನ್ನು ವಕೀಲರಾದ ಕೆ.ವಿ.ಧನಂಜಯ ಅವರ ಕಚೇರಿಗೆ ಕರೆದುಕೊಂಡು ಹೋದರು. ಅಲ್ಲಿ ಓಜಸ್ವಿ ಗೌಡ ಎಂಬ ಇನ್ನೊಬ್ಬ ವಕೀಲರು ಇದ್ದರು. ಜಯಂತ್ ಅವರು ಓಜಸ್ವಿ ಗೌಡ ಅವರಿಗೆ ಪೆನ್‌ಡ್ರೈವ್ ನೀಡಿದರು. ಓಜಸ್ವಿ ಗೌಡ ಅದನ್ನು ಕಂಪ್ಯೂಟರ್‌ಗೆ ಕನೆಕ್ಟ್ ಮಾಡಿದರು. ಅದರಲ್ಲಿ ಇರುವ ದಾಖಲೆ, ಫೋಟೋ ನೋಡಿದಾಗ ನನಗೆ ತೀವ್ರ ಆಘಾತ ಆಯಿತು. ಬಳಿಕ ಗಿರೀಶ್ ಮಟ್ಟಣ್ಣನವರ್ ಬಂದು ತಮ್ಮ ಮನೆಯ ಸಮೀಪದ ಲಾಡ್ಜ್‌ನಲ್ಲಿ ಇರಿಸಿ ೫೦೦೦ ರೂ ನೀಡಿ ಮನೆಗೆ ಕಳುಹಿಸಿದರು ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಜೀವ ಬೆದರಿಕೆ: ಎಸ್‌ಐಟಿಗೆ ಚಿನ್ನಯ್ಯ ದೂರು: ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣದಲ್ಲಿ ಸಾಕ್ಷಿ ದೂರುದಾರನಾಗಿ ಬಂದು ಬಳಿಕ ಆರೋಪಿಯಾಗಿರುವ ಚಿನ್ನಯ್ಯ ತನಗೆ ಜೀವ ಬೆದರಿಕೆ ಇದೆ ಎಂದು ಆರೋಪಿಸಿ ವಿಶೇಷ ತನಿಖಾ ತಂಡಕ್ಕೆ ದೂರು ನೀಡಿದ್ದಾರೆ. ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ ಬಳಿಕ ತನಗೆ ಜೀವ ಬೆದರಿಕೆ ಹಾಗೂ ಮಾನಸಿಕ ಒತ್ತಡ ಹಾಕಲಾಗುತ್ತಿದೆ ಎಂದು ಚಿನ್ನಯ್ಯ ದೂರಿನಲ್ಲಿ ತಿಳಿಸಿದ್ದಾರೆ. ಬೆಳ್ತಂಗಡಿಯಲ್ಲಿರುವ ಎಸ್‌ಐಟಿ ಕಚೇರಿಗೆ ಸೋಮವಾರ ತನ್ನ ಪತ್ನಿ ರತ್ನಾ ಜತೆ ಆಗಮಿಸಿದ ಚಿನ್ನಯ್ಯ ನನಗೆ ಮತ್ತು ನನ್ನ ಕುಟುಂಬಕ್ಕೆ ಗಿರೀಶ್ ಮಟ್ಟಣ್ಣನವರ್ ಹಾಗೂ ಇತರರಿಂದ ಜೀವ ಬೆದರಿಕೆ ಇದೆ ಎಂದು ದೂರು ನೀಡಿದ್ದಾರೆ. ಗಿರೀಶ್ ಮಟ್ಟಣ್ಣವರ್, ಯುನೈಟೆಡ್ ಮೀಡಿಯಾದ ಅಭಿಷೇಕ್ ಅವರು ತನ್ನ ಅಳಿಯ ಪುರುಷೋತ್ತಮ ಹಾಗೂ ಕುಟುಂಬದ ಕೆಲವರಿಗೆ ಫೋನ್ ಮಾಡಿ ಹೈಕೋರ್ಟ್‌ಗೆ ರಿಟ್ ಅರ್ಜಿ ಹಾಕಿರುವ ಬಗ್ಗೆ ವಿಚಾರಿಸುತ್ತಿದ್ದಾರೆ. ಕರೆ ಮಾಡಿ ಮಾಹಿತಿಗಳನ್ನು ಕೇಳುತ್ತಿದ್ದಾರೆ. ಇವರಿಂದ ತಮಗೆ, ತಮ್ಮ ಕುಟುಂಬಕ್ಕೆ ಜೀವ ಬೆದರಿಕೆ ಇದೆ. ಆದ್ದರಿಂದ ಪೊಲೀಸ್ ರಕ್ಷಣೆ ನೀಡಬೇಕು. ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳ ಬೇಕು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಜೂ.೧೨ರಂದು ರಾತ್ರಿ ೯ರ ಸುಮಾರಿಗೆ ಅಭಿಷೇಕ್ ಎಂಬಾತ ನನ್ನ ಅಳಿಯ ಪುರುಷೋತ್ತಮ್ ಅವರ ಮೊಬೈಲ್ ಸಂಖ್ಯೆಗೆ ವಾಟ್ಸಾಪ್ ಕರೆ ಮಾಡಿ ನಾನು ಸಲ್ಲಿಸಿರುವ ರಿಟ್ ಅರ್ಜಿ ಕುರಿತು ವಿಚಾರಿಸಿದ್ದಲ್ಲದೆ ಈ ಕೆಲಸವನ್ನು ಯಾರ ಪ್ರೇರಣೆಯಿಂದ ಮಾಡುತ್ತಿದ್ದೀರಿ ಎಂಬುದರ ಕುರಿತು ಪದೇ ಪದೇ ಪ್ರಶ್ನೆ ಕೇಳಿದ್ದಾರೆ. ನನ್ನ ಮೊಬೈಲ್ ನಂಬರ್ ಕೇಳಿ ನನ್ನ ಬಳಿ ಮಾತಾಡಬೇಕೆಂದು ಹೇಳಿರುತ್ತಾರೆ. ಬೆದರಿಕೆ ಹಾಕುವ ಹಾಗೂ ಮಾನಸಿಕ ಒತ್ತಡ ಹೇರುವ ರೀತಿಯಲ್ಲಿ ಮಾತನಾಡಿದ್ದಾರೆ. ಅದೇ ದಿನ ರಾತ್ರಿ ೯ ಗಂಟೆಗೆ ಗಿರೀಶ್ ಮಟ್ಟಣ್ಣವರ್ ಅವರು ನನ್ನ ಪತ್ನಿಯ ಅಕ್ಕನ ಮಗನಾದ ರವಿಗೆ ವಾಟ್ಸಾಪ್ ಕರೆ ಮಾಡಿ ನಾನು ರಿಟ್ ಅರ್ಜಿ ಸಲ್ಲಿಸಲು ಕಾರಣ ಕುರಿತು ಮಾಹಿತಿ ಕಲೆ ಹಾಕಲು ಪ್ರಯತ್ನಿಸಿದ್ದಾರೆ. ಹೀಗಾಗಿ ಈ ಪ್ರಕರಣದ ತನಿಖೆ ಮತ್ತು ನ್ಯಾಯಾಂಗ ಪ್ರಕ್ರಿಯೆಗೆ ಅಡ್ಡಿಪಡಿಸುವ ಉzಶದಿಂದ ಕಾರ್ಯ ನಿರ್ವಹಿಸುತ್ತಿರುವ ವ್ಯಕ್ತಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಚಿನ್ನಯ್ಯ ಮನವಿ ಮಾಡಿದ್ದಾರೆ.

ಸ್ವಾಮೀಜಿ ಭೇಟಿ ಉಲ್ಲೇಖ-ಪೊಲೀಸ್ ಅಧೀಕ್ಷಕರ ಮೇಲೆ ಪ್ರಭಾವ ಬೀರಲು ಪ್ರಯತ್ನ ಸಂಚಿನ ಭಾಗವಾಗಿ ಗಿರೀಶ್ ಮಟ್ಟೆಣ್ಣವರ್ ಮತ್ತು ಮಹೇಶ್ ಶೆಟ್ಟಿ ಅವರು ಚಿನ್ನಯ್ಯನನ್ನು ಮೂಲ್ಕಿಯ ಆಶ್ರಮವೊಂದಕ್ಕೆ ಕರೆದೊಯ್ದರು. ಅಲ್ಲಿ ಚಂದ್ರಶೇಖರ ಸ್ವಾಮೀಜಿ ಎಂಬುವವರು ಹೂವೊಂದನ್ನು ವಿಧಿಪೂರ್ವಕವಾಗಿ ಪ್ರತಿಷ್ಠಾಪಿಸಿ ನೀಡಿದ್ದರು. ನಂತರ ಈ ಇಬ್ಬರೂ ಬೆಂಗಳೂರಿನ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ ಮಂಗಳೂರಿನ ಪೊಲೀಸ್ ಅಧೀಕ್ಷಕರ ಮೇಲೆ ಪ್ರಭಾವ ಬೀರಲು ಯತ್ನಿಸಿದ್ದರು. ಮಹೇಶ್ ಶೆಟ್ಟಿ ಮನೆಯಲ್ಲಿ ತನ್ನನ್ನು ಜೀತದಾಳುವಿನಂತೆ ಕೂಡಿ ಹಾಕಲಾಗಿತ್ತು, ಬೆದರಿಕೆ ಹಾಕಿ ಸುಳ್ಳು ಹೇಳಿಕೆಗಳನ್ನು ವಿಡಿಯೋ ರೆಕಾರ್ಡ್ ಮಾಡಿಟ್ಟಿದ್ದರು. ಅವರು ಹೇಳಿದ ಸ್ಥಳಗಳನ್ನು ಎಸ್‌ಐಟಿಗೆ ತೋರಿಸುವಂತೆ ಒತ್ತಾಯಿಸಿದ್ದರು. ಧರ್ಮಸ್ಥಳದಲ್ಲಿ ತನಿಖೆಯಲ್ಲಿ ಅಸ್ಥಿಪಂಜರಗಳು ಸಿಗದ ಸಂದರ್ಭದಲ್ಲಿ ಕೋಪಗೊಂಡಿದ್ದ ಮಹೇಶ್ ಶೆಟ್ಟಿ ತನ್ನ ಮೇಲೆ ಹಲ್ಲೆ ಮಾಡಿದ್ದರು. ಕೊನೆಗೆ ಧರ್ಮಸ್ಥಳದ ವಿರುದ್ಧ ಸುಳ್ಳು ಸಾಕ್ಷಿ ಹೇಳಲು ಆತ್ಮಸಾಕ್ಷಿ ಒಪ್ಪದೆ ಎಸ್‌ಐಟಿ ಅಧಿಕಾರಿಗಳ ಮುಂದೆ ಸತ್ಯ ಬಿಚ್ಚಿಟ್ಟಿದ್ದೆ. ನನ್ನನ್ನು ಮತ್ತು ಸುಜಾತ ಭಟ್ ಅವರನ್ನು ವಿಮಾನದ ಮೂಲಕ ದೆಹಲಿಗೆ ಕರೆದೊಯ್ಯಲಾಗಿತ್ತು. ತಲೆಬುರುಡೆಯನ್ನು ರೈಲಿನ ಮೂಲಕ ಜಯಂತ್ ದೆಹಲಿಗೆ ಸಾಗಿಸಿದ್ದರು ಎಂದು ಚಿನ್ನಯ್ಯ ತಿಳಿಸಿದ್ದಾರೆ.

ವಕೀಲ ಕೆ.ವಿ. ಧನಂಜಯ್ ತಂಡದವರು ಸಹಿ ಪಡೆದರು-ದೇವರ ಕೆಲಸ ಇದೆ ಎಂದು ಉಜಿರೆಗೆ ಕರೆಸಿಕೊಂಡರು
ಮಹೇಶ್ ಶೆಟ್ಟಿ ಪುತ್ರಿ ಪಂಚಮಿ ಶೆಟ್ಟಿ ನನ್ನ ಚಲನ ವಲನ ದಾಖಲಿಸಿಕೊಳ್ಳುತ್ತಿದ್ದರು: ಇತರರ ಸಂಪರ್ಕಕ್ಕೆ ಅವಕಾಶ ಇರಲಿಲ್ಲ
ದೆಹಲಿಯಲ್ಲಿ ಇದ್ದ ಸಂದರ್ಭದಲ್ಲಿ ವಕೀಲ ಕೆ.ವಿ.ಧನಂಜಯ ಅವರ ಕಾನೂನು ತಂಡದ ಸದಸ್ಯರು ನನ್ನಿಂದ ಸಹಿಗಳನ್ನು ಪಡೆದಿದ್ದರು. ಏಕೆ ಸಹಿಗಳನ್ನು ಪಡೆದರು ಎಂದು ಮಾಹಿತಿ ನೀಡಲಿಲ್ಲ. ನಂತರ ಸುಪ್ರೀಂ ಕೋರ್ಟ್‌ನ ಮುಂದೆ ರಿಟ್ ಅರ್ಜಿ ಸಲ್ಲಿಸಲ್ಪಟ್ಟಿದ್ದು ಆ ಅರ್ಜಿ ವಜಾಗೊಂಡಿದೆ. ನಂತರ ಎಲ್ಲರೂ ಬೆಂಗಳೂರಿಗೆ ಹಿಂದಿರುಗಿದೆವು. ಇದಾದ ಸುಮಾರು ಹತ್ತರಿಂದ ಇಪ್ಪತ್ತು ದಿನಗಳ ನಂತರ ಮಹೇಶ್ ಶೆಟ್ಟಿ ತಿಮರೋಡಿ ಅವರು ಕರೆ ಮಾಡಿ ದೇವರ ಕೆಲಸ ಇರುವುದಾಗಿ ತಿಳಿಸಿ ಉಜಿರೆಗೆ ಬರುವಂತೆ ಕೋರಿದರು. ಅದರಂತೆ ನಾನು ಉಜಿರೆಗೆ ತೆರಳಿ ಮಹೇಶ್ ಶೆಟ್ಟಿ ತಿಮರೋಡಿ ಅವರ ನಿವಾಸದಲ್ಲಿ ತಂಗಿದ್ದೆ. ಮಹೇಶ್ ಶೆಟ್ಟಿ ತಿಮರೋಡಿ ಅವರ ನಿವಾಸದಲ್ಲಿ ತಂಗಿದ್ದ ಅವಧಿಯಲ್ಲಿ ಅವರ ಪುತ್ರಿ ಪಂಚಮಿ ಶೆಟ್ಟಿ ನನ್ನ ಪ್ರತಿಯೊಂದು ಚಲನವಲನ ಮತ್ತು ನಡೆ ನುಡಿಗಳನ್ನು ಗಮನಿಸುತ್ತಾ ದಾಖಲಿಸಿಕೊಳ್ಳುತ್ತಿದ್ದರು. ಇತರರೊಂದಿಗೆ ಸಂಪರ್ಕ ಸಾಧಿಸಲು ಬಿಡುತ್ತಿರಲಿಲ್ಲ ಎಂದು ಚಿನ್ನಯ್ಯ ಅರ್ಜಿಯಲ್ಲಿ ಹೇಳಿದ್ದಾರೆ.

ಚಿನ್ನಯ್ಯ ಯಾರೆಂದು ಗೊತ್ತಿಲ್ಲ: ರಮಾ ನಾಗರಾಜ್
ಧರ್ಮಸ್ಥಳದ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಚಿನ್ನಯ್ಯನ ಪತ್ನಿ ಖಾತೆಗೆ ಹಣ ವರ್ಗಾವಣೆ ಮಾಡಿರುವ ಆರೋಪಕ್ಕೆ ಚಿತ್ರದುರ್ಗದ ರಮಾ ನಾಗರಾಜ್ ಅವರು ಪ್ರತಿಕ್ರಿಯಿಸಿ ನನ್ನ ಮೇಲಿನ ಆರೋಪ ಮಾಡಿರುವ ಚಿನ್ನಯ್ಯ ನನಗೆ ಗೊತ್ತಿಲ್ಲ ಎಂದು ತಿಳಿಸಿದ್ದಾರೆ. ನಾನು ಮಹಿಳಾ ಪರ ಹೋರಾಟಗಾರ್ತಿಯಾಗಿದ್ದು ಸೌಜನ್ಯ ಪ್ರಕರಣದಲ್ಲಿ ನ್ಯಾಯ ಸಿಗಲಿ ಎಂದು ಕೈ ಜೋಡಿಸಿದ್ದೆ. ಆದರೆ ನನ್ನ ಮೇಲೆ ಆರೋಪ ಮಾಡಿದ ಚಿನ್ನಯ್ಯ ಯಾರು ಎಂದು ನನಗೆ ಗೊತ್ತಿಲ್ಲ. ಎಸ್‌ಐಟಿ ರಚನೆ ಆದ ಮೇಲೆ ಅವರು ಬಂದಿದ್ದು. ಅವರ ಪತ್ನಿ ಅಕೌಂಟ್‌ಗೆ ಹಣ ಹಾಕಿದ್ದೀನಿ ಎಂದು ಆರೋಪ ಮಾಡಿದ್ದಾರೆ. ಅದು ಸತ್ಯಕ್ಕೆ ದೂರವಾದ ಆರೋಪವಾಗಿದೆ. ಅವರಿಗೆ ಆರೋಪ ಮಾಡಲು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಕ್ಕಿದೆ. ನಾನು ಯಾವ ಹಣವನ್ನೂ ಕೊಟ್ಟಿಲ್ಲ. ಅವರು ಹೇಳಿದ್ದನ್ನು ಸಾಬೀತು ಮಾಡಲಿ. ಆರೋಪವನ್ನು ಸಾಬೀತು ಮಾಡಿದರೆ ಸ್ವಾಗತ ಮಾಡುತ್ತೇನೆ. ಸಾಬೀತು ಮಾಡಿಲ್ಲ ಅಂದ್ರೆ ನಾನು ಕಾನೂನು ಹೋರಾಟ ಮಾಡುತ್ತೇನೆ ಹೋರಾಟಗಾರರ ಹೆಸರನ್ನು ಹೇಳಿ ಶಕ್ತಿ ಅಡಗಿಸುವ ಹುನ್ನಾರ ಇದು. ನ್ಯಾಯ ಸಿಗುವವರೆಗೂ ನಾವು ಹೋರಾಟ ಮಾಡುತ್ತೇವೆ ಎಂದು ರಮಾ ನಾಗರಾಜ್ ಹೇಳಿದ್ದಾರೆ.

ಚಿನ್ನಯ್ಯನ ಜೊತೆ ಮಾತನಾಡಿದ್ದು ನಿಜ: ಪ್ರಕಾಶ್ ರಾಜ್
ಚಿನ್ನಯ್ಯನ ಸಂಪರ್ಕದ ಬಗ್ಗೆ ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಸುದ್ದಿ ಗೋಷ್ಠಿ ನಡೆಸಿದ ಚಿಂತಕ,ನಟ ಪ್ರಕಾಶ್ ರಾಜ್ ನಾನು ನನ್ನ ಜೀವನದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರನ್ನು ಒಮ್ಮೆ ಭೇಟಿ ಆಗಿದ್ದೆ.
ಅವರು ಅತ್ಯಂತ ಅದ್ಭುತವಾದ ಮತ್ತು ಶ್ರೇಷ್ಠ ಮನುಷ್ಯ. ಗಿರೀಶ್ ಮಟ್ಟಣ್ಣನವರ್ ಕಡೆಯಿಂದ ಅಂದು ನನಗೆ ಒಂದು ಫೋನ್ ಕರೆ ಬಂದಿತ್ತು. ‘ಮಾಸ್ಕ್ ಮ್ಯಾನ್’ ನಿಮ್ಮ ಹತ್ತಿರ ಮಾತನಾಡಬೇಕಂತೆ ಎಂದು ಹೇಳಿದ್ದರು. ಬಳಿಕ ಮಾಸ್ಕ್ ಮ್ಯಾನ್ ನನ್ನ ಜೊತೆಗೆ ತಮಿಳಿನಲ್ಲಿ ಮಾತನಾಡಲು ಶುರು ಮಾಡಿದ. ‘ಅಣ್ಣ ನನಗೆ ಬಹಳ ವಿಷಯ ಗೊತ್ತು. ನಾನು ನಿಮ್ಮನ್ನು ಭೇಟಿ ಆಗಬೇಕು ಮತ್ತು ಸಾಕಷ್ಟು ವಿಚಾರಗಳನ್ನು ಹೇಳಿಕೊಳ್ಳಬೇಕು. ನನಗೆ ಭಯ ಆಗ್ತಾ ಇದೆ, ನಿಮ್ಮ ಬೆಂಬಲ ಬೇಕು’ ಎಂದು ಕೇಳಿಕೊಂಡಿದ್ದ,
ಆ ಸಂದರ್ಭದಲ್ಲಿ ನಾನು ಅವನಿಗೆ ಫೋನ್‌ನಲ್ಲಿ ಮಾತನಾಡಬೇಡ, ನಿನ್ನ ವಾಯ್ಸ್ ರೆಕಾರ್ಡ್ ಮಾಡಿ ಕಳುಹಿಸು ಎಂದಿದ್ದೆ. ಚಿನ್ನಯ್ಯ ವಾಯ್ಸ್ ರೆಕಾಡ್ ಮಾಡಿ ಕಳುಹಿಸಿದ ಕೂಡಲೇ ನಾನು ಎಸ್.ಐ.ಟಿ ಮುಖ್ಯಸ್ಥರಾದ ಮೊಹಾಂತಿ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದೆ. ಹಾಗೂ ಚಿನ್ನಯ್ಯ ಕಳಿಸಿದ್ದ ವಾಯ್ಸ್ ಮೆಸೇಜನ್ನು ಪೊಲೀಸರಿಗೆ ಕಳುಹಿಸಿಕೊಟ್ಟಿzನೆ. ಜೊತೆಗೆ ನೀನು ನನ್ನ ಮುಂದೆ ಹೇಳಿದ ಸತ್ಯವನ್ನೆಲ್ಲಾ ಎಸ್‌ಐಟಿ ಅಧಿಕಾರಿಗಳ ಮುಂದೆ ಹೋಗಿ ಹೇಳು ಎಂದಿದ್ದೆ. ಅಲ್ಲದೆ, ಸತ್ಯ ಹೇಳಿದರೆ ಊರೇ ನಿನ್ನನ್ನು ಕೊಂಡಾಡುತ್ತೆ ಹಾಗೂ ನಾನು ಕೂಡಾ ನಿನ್ನನ್ನು ತಬ್ಬಿಕೊಳ್ಳುತ್ತೇನೆ ಎಂದು ಹೇಳಿದ್ದು ನಿಜ.
ಆದರೆ ಇಲ್ಲಿಯವರೆಗೆ ಚಿನ್ನಯ್ಯನನ್ನು ಭೇಟಿಯಾಗಿಲ್ಲ. ಕೆಲ ದಿನಗಳ ನಂತರ ಎಸ್.ಐ.ಟಿ ಮುಖ್ಯಸ್ಥ ಮೊಹಾಂತಿ ಅವರ ಬಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಕೇಳಿದಾಗ ‘ಚಿನ್ನಯ್ಯನಿಂದ ಅಂತರ ಕಾಯ್ದುಕೊಳ್ಳುವಂತೆ ಹೇಳಿದ್ದರು. ‘ಚಿನ್ನಯ್ಯ ಉಲ್ಟಾ ಹೊಡೆಯುತ್ತಿದ್ದಾನೆ,ಅವನಿಂದ ದೂರ ಇರಿ’ ಎಂದು ಎಚ್ಚರಿಸಿದ್ದರು. ಈ ಕಾರಣದಿಂದಾಗಿ ನಾನು ಅವನಿಂದ ತಕ್ಷಣ ದೂರ ಆದೆ. ಧರ್ಮಸ್ಥಳದ ಮೇಲೆ ನಾನು ಯಾಕೆ ಅಪಪ್ರಚಾರ ಮಾಡಲಿ ಎಂದು ಹೇಳಿದರು.

ಪ್ರಕಾಶ್ ರಾಜ್ ಪಾತ್ರದ ಬಗ್ಗೆ ತನಿಖೆಗೆ ಪುಣ್ಯ ಸಂರಕ್ಷಣಾ ಸಮಿತಿ ಆಗ್ರಹ: ಧರ್ಮಸ್ಥಳದ ವಿರುದ್ಧ ನಡೆದಿದೆ ಎನ್ನಲಾದ ಷಡ್ಯಂತ್ರ ಪ್ರಕರಣದಲ್ಲಿ ಬಹುಭಾಷಾ ನಟ ಪ್ರಕಾಶ್ ರಾಜ್ ಅವರ ಪಾತ್ರದ ಬಗ್ಗೆ ಸಮಗ್ರ ತನಿಖೆಯಾಗಬೇಕು ಮತ್ತು ಪ್ರಕರಣದ ಬಗ್ಗೆ ಎಸ್‌ಐಟಿ ನೀಡಿದ ಮಧ್ಯಂತರ ವರದಿಯನ್ನು ಸರ್ಕಾರ ತಕ್ಷಣವೇ ಬಹಿರಂಗಪಡಿಸಬೇಕು ಎಂದು ಪುಣ್ಯಕ್ಷೇತ್ರ ಸಂರಕ್ಷಣಾ ಸಮಿತಿ ಒತ್ತಾಯಿಸಿದೆ.
ಬೆಂಗಳೂರಿನ ಶಿವಾನಂದ ಸರ್ಕಲ್ ನಲ್ಲಿರುವ ಗೋಲ್ಡ್ ಫಿಂಚ್ ಹೊಟೇಲ್ ನಲ್ಲಿ ಜೂ.೧೭ರಂದು ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಕ್ರವರ್ತಿ ಸೂಲಿಬೆಲೆ, ವಸಂತ್ ಗಿಳಿಯಾರ್ ಮತ್ತು ವಿಕಾಸ್ ಪುತ್ತೂರು ಅವರು ಧರ್ಮಸ್ಥಳದ ವಿರುದ್ಧ ವ್ಯವಸ್ಥಿತ ಸಂಚು ರೂಪಿಸಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.
ಎಸ್‌ಐಟಿ ಮುಖ್ಯಸ್ಥ ಪ್ರಣವ್ ಮೊಹಂತಿ ಅವರ ಜೊತೆ ನಾನು ಮಾತನಾಡಿzನೆ. ಅವರು ಚಿನ್ನಯ್ಯನ ಜೊತೆ ಮಾತನಾಡದಂತೆ ನನಗೆ ಸೂಚಿಸಿದ್ದರು ಎಂದು ಪ್ರಕಾಶ್ ರಾಜ್ ಅವರೇ ಹೇಳಿದ್ದಾರೆ. ಸಾಕ್ಷಿಯಾಗಿದ್ದ ಚಿನ್ನಯ್ಯನ ಜೊತೆ ಮಾತನಾಡದಂತೆ ಹೇಳಲು ಹೇಗೆ ಸಾಧ್ಯ? ಪ್ರಕಾಶ್ ರಾಜ್ ಅವರ ಈ ಹೇಳಿಕೆಯಿಂದ ಹೊಸ ಅನುಮಾನ ವ್ಯಕ್ತವಾಗಿದೆ. ಎಸ್‌ಐಟಿ ಮಧ್ಯಂತರ ವರದಿಯಲ್ಲಿ ಪ್ರಕಾಶ್ ರಾಜ್ ಫೋನ್ ಕರೆಗಳ ವಿವರ ಉಲ್ಲೇಖವಾಗಿದೆಯೇ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಸೂಲಿಬೆಲೆ ಪ್ರಶ್ನಿಸಿದರು

ಎಸ್‌ಐಟಿ ನೋಡಿಕೊಳ್ಳುತ್ತದೆ: ಪ್ರಿಯಾಂಕ್ ಖರ್ಗೆ: ಧರ್ಮಸ್ಥಳ ಕ್ಷೇತ್ರಕ್ಕೆ ಕಳಂಕ ಹಚ್ಚಲು ೨೦೦ ಕೋಟಿ ರೂ. ಷಡ್ಯಂತ್ರ ನಡೆದಿತ್ತು ಎಂಬ ಆರೋಪಿ ಚಿನ್ನಯ್ಯ ಅರ್ಜಿಯ ಬಗ್ಗೆ ವಿಶೇಷ ತನಿಖಾ ತಂಡ ನೋಡಿಕೊಳ್ಳಲಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ಶುಕ್ರವಾರ ಬೆಂಗಳೂರಿನಲ್ಲಿ ಮಾಧ್ಯಮದವರ ಜತೆ ಮಾತನಾಡಿದ ಸಚಿವರು ಆರೋಪಿ ಚಿನ್ನಯ್ಯನ ರಿಟ್ ಅರ್ಜಿ ವಿಷಯದಲ್ಲಿ ಹೈಕೋರ್ಟ್‌ಗೆ ಎಸ್‌ಐಟಿ ಪ್ರತಿಕ್ರಿಯಿಸಲಿದೆ. ಅರ್ಜಿಯಲ್ಲಿ ಮಾಡಿರುವ ಹೇಳಿಕೆಗಳ ಸತ್ಯಾಸತ್ಯತೆ ಪರಿಶೀಲಿಸುವ ಅಗತ್ಯವಿದೆ. ವಿಷಯ ಈಗ ನ್ಯಾಯಾಲಯದ ಮೇಲ್ವಿಚಾರಣೆಯ ತನಿಖೆಯಲ್ಲಿದೆ. ನ್ಯಾಯಾಲಯ ಎಸ್‌ಐಟಿಗೆ ಕೆಲವು ಪ್ರಶ್ನೆಗಳನ್ನು ಕೇಳಿದೆ. ಎಸ್‌ಐಟಿ ಮುಖ್ಯಸ್ಥರು ಅವುಗಳಿಗೆ ಉತ್ತರಿಸುತ್ತಾರೆ. ಇದನ್ನು ಸಾರ್ವಜನಿಕವಾಗಿ ಚರ್ಚಿಸಲು ಸಾಧ್ಯವಿಲ್ಲ. ನ್ಯಾಯಾಲಯಕ್ಕೆ ಉತ್ತರ ನೀಡಿದ ಬಳಿಕ ಅದು ತಿಳಿಯುತ್ತದೆ ಎಂದು ಹೇಳಿದರು. ಮಾಸ್ಟ್‌ಮ್ಯಾನ್ ಚಿನ್ನಯ್ಯ ಅರ್ಜಿಯಲ್ಲಿ ಪಿತೂರಿ ನಡೆಸಲು ವಿವಿಧ ಮೂಲಗಳಿಂದ ಹಣ ಬಂದಿದೆ ಎಂದು ಹೇಳಿಕೊಂಡಿದ್ದಾನೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು ನ್ಯಾಯಾಲಯದಲ್ಲಿ ೨೦೦ ಕೋಟಿ ರೂ. ಆರೋಪ ಕೇಳಿಬಂದಿದೆ ಎಂದು ಮಾಧ್ಯಮದ ವರದಿಗಳಿವೆ. ಎಷ್ಟು ನಿಜವೋ ತಿಳಿದಿಲ್ಲ. ಹಲವಾರು ಕೊಲೆಗಳು, ಅತ್ಯಾಚಾರಗಳು ಮತ್ತು ಸಮಾಧಿಗಳ ಬಗ್ಗೆ ಹೇಳಿಕೊಂಡಿದ್ದ ಅದೇ ವ್ಯಕ್ತಿಯೇ ಈಗ ಹೀಗೆ ಹೇಳಿದ್ದಾನೆ. ಹೀಗಾಗಿ ಸತ್ಯ ಪರಿಶೀಲಿಸಬೇಕಾಗಿದೆ ಎಂದರು. ಚಿನ್ನಯ್ಯ ಸಲ್ಲಿಸಿರುವ ಅರ್ಜಿಯಲ್ಲಿ ನಟ ಪ್ರಕಾಶ್‌ರಾಜ್ ಹೆಸರನ್ನೂ ಉಲ್ಲೇಖಿಸಿರುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ ಅವರು ಹೆಸರು ಉಲ್ಲೇಖಿಸಿದ ಮಾತ್ರಕ್ಕೆ ಒಬ್ಬರನ್ನು ಅಪರಾಧಿ ಎಂದು ಪರಿಗಣಿಸಲಾಗುವುದಿಲ್ಲ. ನ್ಯಾಯಾಲಯ ಎಸ್‌ಐಟಿ ಮುಖ್ಯಸ್ಥರಿಂದ ಉತ್ತರವನ್ನು ಕೇಳಿದೆ. ಅವರು ಉತ್ತರಿಸಲಿ ಎಂದರು.

ಎಸ್‌ಐಟಿ ವರದಿ ಬಹಿರಂಗಗೊಳಿಸಲು ಬಿಜೆಪಿ ಆಗ್ರಹ: ಧರ್ಮಸ್ಥಳದ ಹೆಸರು ಕೆಡಿಸಲು ನಡೆಸಿದ ವಿದೇಶಿ ಶಕ್ತಿಗಳ ಕೈವಾಡದ ತನಿಖೆಯ ಜತೆಗೆ ಎಸ್‌ಐಟಿ ವರದಿಯನ್ನು ಬಹಿರಂಗಪಡಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ. ಧರ್ಮಸ್ಥಳದ ವಿರುದ್ಧ ೨೦೦ ಕೋಟಿ ರೂ. ವೆಚ್ಚದ ಬೃಹತ್ ಷಡ್ಯಂತ್ರ ರೂಪಿಸಲಾಗಿತ್ತು ಎಂಬುದಾಗಿ ಅರ್ಜಿದಾರ ಚಿನ್ನಯ್ಯನ ಆರೋಪದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರಕಾರದ ವಿರುದ್ಧ ಮುಗಿ ಬಿದ್ದಿರುವ ಬಿಜೆಪಿ ನಾಯಕರು ಧಾರ್ಮಿಕ ಶ್ರದ್ಧೆಗೆ ಕೊಡಲಿ ಪೆಟ್ಟು ನೀಡುವ ಷಡ್ಯಂತ್ರ ನಡೆದಿದೆ ಎಂದು ಆರೋಪಿಸಿದ್ದಾರೆ. ಬೆಂಗಳೂರಿನಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಈ ಬಗ್ಗೆ ಪ್ರತಿಕ್ರಿಯಿಸಿದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಮಿಯ ಸನ್ನಿಧಿಗೆ ಕಳಂಕ ತರುವ ಕೆಲಸ ನಡೆದಿದೆ. ಹಿಂದಿನ ಸಿಎಂ ಸಿದ್ದರಾಮಯ್ಯನವರು ಯಾವುದನ್ನೂ ಪರಾಮರ್ಶಿಸದೆ ಯಾರೋ ಹೇಳಿದರೆಂಬ ಕಾರಣಕ್ಕೆ ಎಸ್‌ಐಟಿ ತನಿಖೆಗೆ ಆದೇಶಿಸಿದ ನಿರ್ಧಾರ ಸೂಕ್ತವಾಗಿರಲಿಲ್ಲ. ಧರ್ಮಸ್ಥಳ ಪ್ರಕರಣ ಸಂಬಂಧ ಸಾಕಷ್ಟು ವಿಷಯಗಳು ಈಗ ಬಯಲಾಗುತ್ತಿವೆ ಎಂದು ಹೇಳಿದರು. ಹಿಂದೆ ಸಿದ್ದರಾಮಯ್ಯನವರು ಧರ್ಮಸ್ಥಳ ವಿಚಾರವಾಗಿ ಯಾವುದೇ ತನಿಖೆ ಅಗತ್ಯವಿಲ್ಲ ಎಂದಿದ್ದರು. ಆದರೆ ಪಟ್ಟಭದ್ರ ಹಿತಾಸಕ್ತಿಗಳು ಅವರನ್ನು ಸ್ವಗೃಹದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ ನಂತರ ಸಿದ್ದರಾಮಯ್ಯನವರು ಏಕಾಏಕಿ ಎಸ್‌ಐಟಿ ತನಿಖೆಗೆ ಆದೇಶಿಸಿದ್ದರು. ಇದರ ವಿರುದ್ಧ ಬಿಜೆಪಿ ಹಿಂದೆಯೇ ಧರ್ಮಸ್ಥಳ ಚಲೋ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿತ್ತು ಎಂದು ಹೇಳಿದ ವಿಜಯೇಂದ್ರ ಅವರು ಈ ಷಡ್ಯಂತ್ರದ ಹಿಂದೆ ನೂರಾರು ಕೋಟಿ ರೂ. ವೆಚ್ಚದ ಯೋಜನೆ ಇದ್ದುದು ಈಗ ಬೆಳಕಿಗೆ ಬಂದಿದೆ. ನೂರಾರು ಕೋಟಿ ರೂ. ತೊಡಗಿಸಿಕೊಂಡ ಕಾರಣ ವಿದೇಶಿ ಶಕ್ತಿಗಳ ಕೈವಾಡದ ತನಿಖೆಯೂ ಆಗಬೇಕಿದೆ. ಕಾಂಗ್ರೆಸ್ ಸರಕಾರ ಇಂತಹ ಷಡ್ಯಂತ್ರಗಳಿಗೆ ಶಕ್ತಿ ತುಂಬುವ ಕೆಲಸ ಮಾಡಿರುವುದು ನೋವು ತಂದಿದೆ. ಈ ಷಡ್ಯಂತ್ರದ ಹಿಂದೆ ಯಾರೆಲ್ಲಾ ಇದ್ದಾರೆ. ಯಾರೆಲ್ಲಾ ಬಂಡವಾಳ ಹೂಡಿದ್ದಾರೆ. ಹಿಂದಿನ ಸಿಎಂ ಏಕಾಏಕಿ ಎಸ್‌ಐಟಿಗೆ ತನಿಖೆಗೆ ವಹಿಸಿದ್ದು ಏಕೆ ಎಂಬ ಬಗ್ಗೆ ಸತ್ಯಾಸತ್ಯತೆ ಹೊರ ಬರಬೇಕು ಎಂದು ಆಗ್ರಹಿಸಿದರು.
ಎಸ್‌ಐಟಿ ವರದಿ ಬಹಿರಂಗಪಡಿಸಲಿ: ಧರ್ಮಸ್ಥಳ ಪ್ರಕರಣದ ತನಿಖೆಗೆ ರಚನೆಯಾದ ಎಸ್‌ಐಟಿ ವರದಿಯನ್ನು ಸರಕಾರ ಕೂಡಲೇ ಬಹಿರಂಗಪಡಿಸಬೇಕು ಎಂದು ಮಾಜಿ ಸಚಿವ ವಿ. ಸುನಿಲ್ ಕುಮಾರ್ ಒತ್ತಾಯಿಸಿದ್ದಾರೆ. ಈ ಪ್ರಕರಣದ ಹಿಂದೆ ಯಾರ ಕೈವಾಡ ಇದೆ ಎಂಬುದನ್ನು ಸರಕಾರ ತಿಳಿಸಲಿ. ದೊಡ್ಡ ಷಡ್ಯಂತ್ರ ರೂಪಿಸಿದ್ದ ಗ್ಯಾಂಗ್‌ನ ಆರೋಪಿ ಕೋರ್ಟ್‌ಗೆ ನೀಡಿರುವ ಹೇಳಿಕೆ ಆಘಾತಕಾರಿಯಾಗಿದೆ. ಇದರ ಹಿಂದೆ ನಾನಾ ರಾಜ್ಯಗಳ ನಂಟಿದೆ ಎಂದು ಹೇಳಿದ್ದೆವು. ಆರೋಪಿ ಎಸ್‌ಐಟಿ ಮುಂದೆ ಹೇಳಲಾಗದ್ದನ್ನು ನ್ಯಾಯಾಲಯದ ಮುಂದೆ ಹೇಳಿದ್ದಾನೆಂದರೆ ಎಸ್‌ಐಟಿ ಯಾವ ರೀತಿಯ ತನಿಖೆ ಮಾಡಿತ್ತು ಎಂಬುದು ಸ್ಪಷ್ಟ. ಇದರ ಹಿಂದಿರುವ ಹುನ್ನಾರ ಏನು ಎಂಬುದು ಸೇರಿದಂತೆ ಎಲ್ಲ ವಿಚಾರಗಳ ಬಗ್ಗೆ ಸಾರ್ವಜನಿಕವಾಗಿ ಚರ್ಚೆಯಾಗಬೇಕಿದೆ ಎಂದು ಆಗ್ರಹಿಸಿರುವ ಸುನಿಲ್ ಕುಮಾರ್ ಅವರು ಸಿಎಂ ಡಿ.ಕೆ. ಶಿವಕುಮಾರ್ ಅವರು ಹಿಂದೆ ಕಾಸು ಬಿಡದ ತಿಮ್ಮಪ್ಪ, ಮಾತು ಬಿಡದ ಮಂಜುನಾಥ ಎಂದು ಉಲ್ಲೇಖಿಸಿ ತಾವು ಧರ್ಮಸ್ಥಳದ ಪರವಾಗಿ ಇzನೆ ಎಂದು ವಿಧಾನಸಭೆಯಲ್ಲಿ ಹೇಳಿದ್ದರು. ಕೇವಲ ಹೆಸರಿನಲ್ಲಿ ಶಿವ ಎಂದು ಇಟ್ಟುಕೊಂಡರೆ ಸಾಲದು. ಧರ್ಮಸ್ಥಳದ ಬಗ್ಗೆ ಯಾರು ಅವಹೇಳನ ಮಾಡಿದ್ದಾರೋ ಅವರನ್ನು ಸರಕಾರ ಒದ್ದು ಒಳಗೆ ಹಾಕಲಿ ಎಂದು ಹೇಳಿದ್ದಾರೆ.

ಸಿನಿಮಾ ರಂಗದಿಂದ ಪ್ರಕಾಶ್‌ರಾಜ್ ಬಹಿಷ್ಕರಿಸಿ: ಮುತಾಲಿಕ್
ಧರ್ಮಸ್ಥಳಕ್ಕೆ ಅಪಖ್ಯಾತಿ ತರುವ ಪಿತೂರಿಯಲ್ಲಿ ಬಹುಭಾಷಾ ನಟ ಪ್ರಕಾಶ ರಾಜ್ ಭಾಗಿಯಾದ ಆರೋಪ ಕೇಳಿ ಬಂದಿದೆ. ಹೀಗಾಗಿ ಅವರನ್ನು ಸಿನಿಮಾಗಳಿಂದ ಬಹಿಷ್ಕರಿಸುವಂತೆ ಕನ್ನಡ, ತೆಲುಗು, ತಮಿಳು ಚಲನಚಿತ್ರ ಮಂಡಳಿಗಳಿಗೆ ದೂರು ಸಲ್ಲಿಸಲಾಗುವುದು ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಹೇಳಿದ್ದಾರೆ. ಬೆಂಗಳೂರು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತಲೆಬುರುಡೆ ಪ್ರಕರಣದಲ್ಲಿ ಆರೋಪಿಯಾಗಿರುವ ಚಿನ್ನಯ್ಯ ಅವರೇ ಪ್ರಕಾಶ್ ರಾಜ್ ಪ್ರಕರಣದ ಸಂಚುಕೋರ ಎಂದು ಹೆಸರಿಸಿದ್ದಾರೆ. ಹಾಗಾಗಿ ಎಸ್‌ಐಟಿಯವರು ಪ್ರಕಾಶ್ ಅವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಬೇಕು. ಹಿಂದೂಗಳ ದಾರ್ಮಿಕ ಭಾವನೆಗೆ ನೋವುಂಟು ಮಾಡಿದ್ದಕ್ಕಾಗಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು. ಕಾಂಗ್ರೆಸ್ ನಾಯಕರು, ಎಡಪಂಥೀಯರು, ಬುದ್ಧಿಜೀವಿಗಳು, ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರ ಒಂದು ಭಾಗವು ಹಿಂದೂ ಧರ್ಮಕ್ಕೆ ಅಪಖ್ಯಾತಿ ತರುವ ಪಿತೂರಿಯಲ್ಲಿ ಭಾಗಿಯಾಗಿದೆ. ಸನಾತನ ಧರ್ಮ ಹಾಗೂ ಹಿಂದೂ ಧಾರ್ಮಿಕ ಕ್ಷೇತ್ರಗಳ ವಿರುದ್ಧ ನಿರಂತರವಾಗಿ ಸಂಚು ರೂಪಿಸುತ್ತಿರುವ ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಧರ್ಮಸ್ಥಳದ ಹೆಸರು ಕೆಡಿಸುವ ಉzಶದಿಂದ ಈ ಪ್ರಕರಣದಲ್ಲಿ ಸುಜಾತಾ ಭಟ್ ಅವರನ್ನು ದಾಳವಾಗಿ ಬಳಸಿಕೊಳ್ಳಲಾಯಿತು. ಅಸ್ತಿತ್ವದಲ್ಲೇ ಇರದ ಅನನ್ಯಾ ಭಟ್ ಅಪಹರಿಸಿ ಕೊಲೆ ಮಾಡಲಾಗಿದೆ ಎಂದು ಗಂಭೀರವಾಗಿ ಆರೋಪಿಸಲಾಯಿತು. ಈ ಸಂಚು ರೂಪಿಸಲು ಪ್ರಕಾಶರಾಜ್ ಅವರಿಗೆ ಕೇರಳದಿಂದ ೨೦೦ ಕೋಟಿ ರೂ. ಹರಿದು ಬಂದಿದೆ ಎಂದು ಮುತಾಲಿಕ್ ಅವರು ಆರೋಪಿಸಿದರು.

ಚಿನ್ನಯ್ಯನ ಬ್ರೈನ್ ಮ್ಯಾಪಿಂಗ್ ನಡೆಸಬೇಕು-ಅಗತ್ಯವಿದ್ದರೆ ನಾನು ಕೂಡ ಲೈವ್ ಬ್ರೈನ್ ಮ್ಯಾಪಿಂಗ್‌ಗೆ ತಯಾರಿzನೆ: ಮಟ್ಟಣ್ಣನವರ್: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತು ಹಾಕಿದ ಪ್ರಕರಣದ ತನಿಖೆಯ ದಿಕ್ಕು ತಪ್ಪಿಸಲು ಆರೋಪಿ ಚಿನ್ನಯ್ಯನ ಮೂಲಕ ವ್ಯತಿರಿಕ್ತ ಹೇಳಿಕೆಗಳನ್ನು ನೀಡಲಾಗಿದೆ. ಇದರ ಹಿಂದೆ ಯಾರಿದ್ದಾರೆ ಎಂದು ತನಿಖೆ ನಡೆಯಬೇಕು ಎಂದು ಸೌಜನ್ಯ ಪರ ಹೋರಾಟಗಾರ ಗಿರೀಶ್ ಮಟ್ಟೆಣ್ಣನವರ್ ಆಗ್ರಹಿಸಿದ್ದಾರೆ. ಜೂ.೧೩ರಂದು ಬೆಳ್ತಂಗಡಿ ಎಸ್‌ಐಟಿ ಕಚೇರಿಗೆ ಈ ಬಗ್ಗೆ ದೂರು ನೀಡಲು ಆಗಮಿಸಿದ್ದ ಅವರು ಪತ್ರಕರ್ತರ ಜತೆ ಮಾತನಾಡಿ ಚಿನ್ನಯ್ಯ ೨೦೦ ಕೋಟಿ ರೂ. ವ್ಯವಹಾರ ಎಂದು ಹೇಳಿರುವುದು ಕಪೋಲ ಕಲ್ಪಿತವಾಗಿದೆ. ತನಿಖೆಯನ್ನು ವಿಳಂಬ ಮಾಡಲು ಈ ತಂತ್ರ ಅನುಸರಿಸಲಾಗಿದೆ. ಇತ್ತೀಚೆಗೆ ಎಸ್‌ಐಟಿ ತಂಡ ಬಂಗ್ಲೆಗುಡ್ಡೆಗೆ ಬಂದು ತನಿಖೆ ನಡೆಸಿದ ಬಳಿಕ ಚಿನ್ನಯ್ಯನನ್ನು ಬಳಸಿ ಈ ರೀತಿ ಹೇಳಿಕೆ ನೀಡಿರುವ ಶಂಕೆ ಇದೆ. ಎನ್‌ಐಟಿ ತನಿಖೆ ಶೀಘ್ರ ಮುಗಿಯಲಿ ಎಂದು ಹೇಳುವ ಹಕ್ಕು ಚಿನ್ನಯ್ಯನಿಗೆ ಇಲ್ಲ. ಶೀಘ್ರ ತನಿಖೆ ಏಕೆ ಮುಗಿಸಬೇಕು. ಎಲ್ಲ ರೀತಿಯ ತನಿಖೆಗಳು ನಡೆಯಲಿ ಎಂದು ಹೇಳಿದರು. ಈ ಹಿಂದೆ ಮೃತದೇಹಗಳನ್ನು ಹೂತು ಹಾಕಿರುವುದಾಗಿ ಚಿನ್ನಯ್ಯ ಸ್ವಯಂಪ್ರೇರಿತ ಹೇಳಿಕೆ ಕೊಟ್ಟಿದ್ದ. ತನಿಖೆಗೆ ಸಂಬಂಧಿಸಿದಂತೆ ಯಾವ ಹೇಳಿಕೆಗಳನ್ನು ಮಾಧ್ಯಮಗಳಿಗೆ ನೀಡಬಾರದು ಎಂಬ ಷರತ್ತನ್ನು ಚಿನ್ನಯ್ಯ ಉಲ್ಲಂಸಿದ್ದು ಈ ಬಗ್ಗೆ ಎಸ್‌ಐಟಿ ವಕೀಲರು ಕ್ರಮ ಕೈಗೊಳ್ಳಬೇಕು. ಹೋರಾಟದ ಸಮಯ ಚಿನ್ನಯ್ಯನಿಗೆ ನಾನು ನೈತಿಕ ಬೆಂಬಲ ನೀಡಿರಬಹುದು. ಅದು ಬಿಟ್ಟರೆ ಸಂಪರ್ಕ ಇಲ್ಲ. ಚಿನ್ನಂಯ್ಯನ ಬ್ರೈನ್ ಮ್ಯಾಪಿಂಗ್ ನಡೆಸಬೇಕು. ಅಗತ್ಯವಿದ್ದರೆ ನಾನು ಕೂಡ ಲೈವ್ ಬ್ರೈನ್ ಮ್ಯಾಪಿಂಗಿಗೆ ತಯಾರಿzನೆ. ಎಸ್‌ಐಟಿ ಒಂದು ವರದಿಯನ್ನು ಮೂರು ತಿಂಗಳ ಹಿಂದೆ ಸರಕಾರಕ್ಕೆ ನೀಡಿದೆ. ಸರಕಾರ ಅದನ್ನು ತಕ್ಷಣ ಬಿಡುಗಡೆ ಗೊಳಿಸಬೇಕು ಎಂದು ಮಟ್ಟಣ್ಣನವರ್ ಆಗ್ರಹಿಸಿದರು. ಸಾಮಾಜಿಕ ಹೋರಾಟಗಾರ ಜಯಂತ್ ಟಿ., ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಅಧ್ಯಕ್ಷ ಅನಿಲ್ ಅಂತರ, ಪ್ರಕಾಶ್ ಸಿ.ಬೆಂಗಳೂರು, ಪ್ರದೀಪ ಕುಲಾಲ್, ಗಣೇಶ್, ಉದಯ, ಶ್ರೀನಿವಾಸ್, ಮನೋಜ್ ಮತ್ತಿತರರು ಉಪಸ್ಥಿತರಿದ್ದರು.

ಸಿಬಿಐ ತನಿಖೆಗೆ ಸಿ.ಟಿ. ರವಿ ಪತ್ರ: ಧರ್ಮಸ್ಥಳದ ವಿರುದ್ಧ ನಡೆದ ಷಡ್ಯಂತ್ರ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಆಗ್ರಹಿಸಿ ಮಾಜಿ ಸಚಿವರಾದ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ. ಈಗ ಹೈಕೋರ್ಟ್‌ಗೆ ಸಲ್ಲಿಕೆಯಾಗಿರುವ ಅರ್ಜಿ ಪ್ರಕರಣಕ್ಕೆ ಮತ್ತೊಂದು ಗಂಭೀರ ಆಯಾಮ ನೀಡಿದೆ. ಮಾಧ್ಯಮ ವರದಿಗಳ ಪ್ರಕಾರ ಆ ಅರ್ಜಿಯಲ್ಲಿ ಹಲವರ ಹೆಸರನ್ನು ಉಲ್ಲೇಖಿಸಲಾಗಿದೆ. ಜತೆಗೆ ಧರ್ಮಸ್ಥಳದ ವಿರುದ್ಧದ ಷಡ್ಯಂತ್ರಕ್ಕೆ ೨೦೦ ಕೋಟಿ ರೂ. ಬಳಕೆಯಾಗಿತ್ತು ಎಂದು ಆರೋಪಿಸಲಾಗಿದೆ. ಇದು ಸತ್ಯವೋ, ಸುಳ್ಳೋ ಎಂಬುದರ ಬಗ್ಗೆ ತನಿಖೆಯಾಗಲೇಬೇಕು. ಇತ್ತೀಚೆಗೆ ಹೊರ ಬರುತ್ತಿರುವ ಬೆಳವಣಿಗೆಗಳು ನನ್ನನ್ನಷ್ಟೇ ಅಲ್ಲದೆ ಕೋಟ್ಯಂತರ ಭಕ್ತರಲ್ಲೂ ಆತಂಕ ಮತ್ತು ಅನುಮಾನಗಳನ್ನು ಹುಟ್ಟು ಹಾಕಿವೆ. ಈ ಕಾರಣದಿಂದಲೇ ಈ ಪತ್ರವನ್ನು ಬರೆಯುತ್ತಿzನೆ. ಧರ್ಮಸ್ಥಳದಂತಹ ಸಂಸ್ಥೆಯ ವಿರುದ್ಧ ಇಷ್ಟೊಂದು ದೊಡ್ಡ ಮಟ್ಟದ ಅಭಿಯಾನ ನಡೆಸಲು ಹಣ ಎಲ್ಲಿಂದ ಬಂತು? ಯಾರು ಇದ್ದರು? ಇದು ವೈಯಕ್ತಿಕ ಕೃತ್ಯವೋ ಅಥವಾ ಇದರ ಹಿಂದೆ ದೊಡ್ಡ ಜಾಲವೇ ಕಾರ್ಯನಿರ್ವಹಿಸುತ್ತಿದೆಯೋ ಎಂಬ ಸತ್ಯ ಹೊರಬರಬೇಕಾಗಿದೆ ಎಂದು ಸಿ.ಟಿ. ರವಿ ಆಗ್ರಹಿಸಿದ್ದಾರೆ.

ಚಾಕು ತೋರಿಸಿ ಒತ್ತೆಯಾಳಾಗಿಟ್ಟಿದ್ದ ತಿಮರೋಡಿ ಗ್ಯಾಂಗ್: ಮಾಸ್ಕ್ ಹಿಂದೆ ಹೆಡ್‌ಫೋನ್ ಇರಿಸಿ ಸೂಚನೆ ನೀಡಲಾಗುತ್ತಿತ್ತು!: ಧರ್ಮಸ್ಥಳದ ಧರ್ಮಾಧಿಕಾರಿಗಳ ವಿರುದ್ಧ ಸುಳ್ಳು ಹೇಳಲು ನನ್ನ ಆತ್ಮಸಾಕ್ಷಿ ಒಪ್ಪಲಿಲ್ಲ. ಆಗ ಮಹೇಶ್ ಶೆಟ್ಟಿ ತಿಮರೋಡಿ ಚಾಕುವಿನಿಂದ ನನ್ನನ್ನು ಕೊಲ್ಲಲು ಬಂದಿದ್ದರು. ಹೇಳಿಕೊಟ್ಟಂತೆ ಕೇಳದಿದ್ದರೆ ನಿನ್ನ ಹೆಂಡತಿಯನ್ನು ಕೊಲ್ಲುತ್ತೇವೆ ಎಂದು ಹೆದರಿಸಿದ್ದರು. ಒಂದು ವೇಳೆ ತಪ್ಪು ಹೇಳಿಕೆ ನೀಡಿದರೆ ಅದೇ ಜಾಗದಲ್ಲಿ ಹೂತು ಹಾಕುವುದಾಗಿ ತಿಮರೋಡಿ ಗ್ಯಾಂಗ್ ಬೆದರಿಕೆ ಹಾಕಿತ್ತು. ನನ್ನ ಕೈಗೆ ಬುರುಡೆ ಕೊಟ್ಟು ಫೋಟೋ ತೆಗೆಸಿಕೊಂಡಿದ್ದರು. ಸುಜಾತಾ ಭಟ್ ಎಂಬುವವರ ಜೊತೆ ದೆಹಲಿಗೆ ಕರೆದೊಯ್ದು ಕಂಡಕಂಡಲ್ಲಿ ಸಹಿ ಹಾಕಿಸಿಕೊಂಡರು. ವಕೀಲರ ಕಚೇರಿಯಲ್ಲಿ ಕೂರಿಸಿ ಹೇಗೆ ಹೇಳಿಕೆ ನೀಡಬೇಕೆಂದು ತರಬೇತಿ ನೀಡಲಾಗಿತ್ತು. ನನ್ನನ್ನು ಸಂಪೂರ್ಣವಾಗಿ ಒತ್ತೆಯಾಳುವಿನಂತೆ ಇರಿಸಿಕೊಳ್ಳಲಾಗಿತ್ತು. ನನಗೆ ಹಾಕಲಾಗಿದ್ದ ಮಾಸ್ಕ್‌ನ ಹಿಂದೆ ಹೆಡ್‌ಫೋನ್ ಇರಿಸಲಾಗಿತ್ತು. ಅದರಲ್ಲಿ ಕ್ಷಣಕ್ಷಣಕ್ಕೂ ನಾನು ಏನು ಮಾತನಾಡಬೇಕು ಎಂಬ ಸೂಚನೆಗಳು ಬರುತ್ತಿದ್ದವು. ಈ ಮಾನಸಿಕ ಕಿರುಕುಳ ತಾಳಲಾರದೆ ನಾನು ಒಮ್ಮೆ ಆತ್ಮಹತ್ಯೆಗೂ ಯತ್ನಿಸಿದ್ದೆ ಎಂದು ಚಿನ್ನಯ್ಯ ಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ತಪ್ಪಿತಸ್ಥರೆಲ್ಲರೂ ಹೊರಗಡೆ ಮುಕ್ತವಾಗಿ ತಿರುಗಾಡುತ್ತಿದ್ದಾರೆ. ಕಾನೂನು ಕ್ರಮ ಜರುಗಿಸುವುದಾದರೆ ಇಡೀ ಷಡ್ಯಂತ್ರ ರೂಪಿಸಿದ ಎಲ್ಲರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅರ್ಜಿಯಲ್ಲಿ ಒತ್ತಾಯಿಸಲಾಗಿದೆ.

ಷಡ್ಯಂತ್ರ ಕುರಿತು
ಶಿರೂರು ಶ್ರೀ ಕಳವಳ:
ಧರ್ಮಸ್ಥಳ ಕ್ಷೇತ್ರದ ಮೇಲೆ ನಡೆಯುತ್ತಿರುವ ವ್ಯವಸ್ಥಿತ ಷಡ್ಯಂತ್ರದ ಬಗ್ಗೆ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಕಳವಳ ವ್ಯಕ್ತಪಡಿಸಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಪಡ್ಯಂತ್ರ ನಡೆಸಲು ನೂರಾರು ಕೋಟಿ ರೂ. ವ್ಯವಹಾರ ನಡೆದಿದೆ ಎನ್ನುವುದು ಆತಂಕಕಾರಿ ವಿಷಯ. ಧಾರ್ಮಿಕ ಕ್ಷೇತ್ರದ ಬಗ್ಗೆ ಪಡ್ಯಂತ್ರ ರೂಪಿಸಿದವರನ್ನು ಬಯಲಿಗೆಳೆಯಬೇಕು. ಇದರ ಬಗ್ಗೆ ಸಮಸ್ತ ಹಿಂದೂ ಸಮಾಜ ಪ್ರತಿಭಟಿಸಬೇಕು ಎಂದು ಅವರು ಕರೆ ನೀಡಿದ್ದಾರೆ.

LEAVE A REPLY

Please enter your comment!
Please enter your name here