






ಬೆಳ್ತಂಗಡಿ: ರೌಡಿಗಳನ್ನು ನಿಗ್ರಹಿಸಲು ಪೊಲೀಸ್ ಠಾಣಾ ಹಂತದಲ್ಲಿ ರೌಡಿ ನಿಗ್ರಹ ದಳ ರಚಿಸುವಂತೆ ಸರಕಾರ ಆದೇಶ ನೀಡಿದ ಬೆನ್ನಲ್ಲಿಯೇ ಬೆಳ್ತಂಗಡಿ ತಾಲೂಕಿನಲ್ಲಿ ಪೊಲೀಸ್ ಇಲಾಖೆ ಚುರುಕಾಗಿದೆ. ಸರಕಾರ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ರೌಡಿಸಂ ಮಟ್ಟ ಹಾಕಲು ಪೊಲೀಸ್ ವೃತ್ತ ಮಟ್ಟದಲ್ಲಿ ರೌಡಿ ನಿರೋಧಕ ಪಡೆಯನ್ನು ನಿಯೋಜನೆ ಮಾಡುವ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ನೀಡಿರುವ ನಿರ್ದೇಶನದ ಮೇರೆಗೆ ಬೆಳ್ತಂಗಡಿಯಲ್ಲಿ ರೌಡಿ ನಿರೋಧಕ ತಂಡವನ್ನು ರಚಿಸಲಾಗಿದೆ. ರೌಡಿಗಳ ಮೇಲಿನ ಪರಿಣಾಮಕಾರಿ ಕಾವಲು ಹಾಗೂ ರೌಡಿಸಂ ತಡೆಗಟ್ಟುವ ಕ್ರಮಗಳಿಗಾಗಿ ಪೊಲೀಸ್ ಠಾಣೆಗಳಲ್ಲಿ ಗೌಪ್ಯ ರೌಡಿ ರಿಜಿಸ್ಟರ್‌ಗಳನ್ನು ನಿರ್ವಹಿಸುವುದನ್ನು ಕಡ್ಡಾಯಗೊಳಿಸುವಂತೆ ಹಾಗೂ ರೌಡಿ ಚಟುವಟಿಕೆಗಳನ್ನು ಮಟ್ಟ ಹಾಕಲು ಪ್ರಯತ್ನಗಳನ್ನು ಮತ್ತಷ್ಟು ಬಲಪಡಿಸುವ ಮತ್ತು ರೌಡಿಗಳ ನಿರಂತರ ಮೇಲ್ವಿಚಾರಣೆಯನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಸೂಚಿಸಲಾಗಿರುವ ಹಿನ್ನೆಲೆಯಲ್ಲಿ ಈ ತಂಡ ರಚನೆ ಮಾಡಲಾಗಿದೆ. ಬೆಳ್ತಂಗಡಿ ಪೊಲೀಸ್ ಉಪವಿಭಾಗಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಪೊಲೀಸ್ ಠಾಣಾ ಎಸ್.ಐ. ಆನಂದ್, ಹೆಡ್‌ಕಾನ್ಸ್‌ಟೇಬಲ್ ಜಗದೀಶ್, ವೇಣೂರು ಪೊಲೀಸ್ ಠಾಣೆಯ ಎಸ್.ಐ. ಅಕ್ಷಯ್, ಎ.ಎಸ್.ಐ. ಬೆನ್ನಚ್ಚಿನ್, ಪುಂಜಾಲಕಟ್ಟೆ ಠಾಣೆಯ ಕಾನ್ಸ್‌ಟೇಬಲ್ ರಜಿತ್, ಧರ್ಮಸ್ಥಳ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಮಾಲಿತೇಶ್, ಉಪ್ಪಿನಂಗಡಿ ಪೊಲೀಸ್ ಠಾಣೆಯ ಎಸ್.ಐ. ಸುತೇಶ್ ಮತ್ತು ಕಡಬ ಪೊಲೀಸ್ ಠಾಣೆಯ ಎಸ್.ಐ. ಜಂಬೂರಾಜ್ ಮಹಾಜನ್, ಎ.ಎಸ್.ಐ ಕರುಣಾಕರ್, ಕಾನ್ಸ್ ಸ್ಟೇಬಲ್ ಹರ್ಷಿತ್ ನೇತೃತ್ವದಲ್ಲಿ ರೌಡಿ ನಿಗ್ರಹ ದಳ ಕಾರ್ಯ ನಿರ್ವಹಿಸಲಿದೆ. ಇವರ ನೇತೃತ್ವದ ರೌಡಿ ನಿಗ್ರಹ ಪಡೆ ಪೊಲೀಸ್ ವೃತ್ತ ನಿರೀಕ್ಷಕರು ಮತ್ತು ಡಿವೈಎಸ್‌ಪಿಯವರಿಗೆ ವರದಿ ಸಲ್ಲಿಸಲಿದೆ. ಬಳಿಕ ಎಸ್.ಪಿ. ಅವರಿಗೆ ವರದಿ ಸಲ್ಲಿಕೆಯಾಗಲಿದೆ.


ರೌಡಿ ನಿಗ್ರಹ ದಳ ರಚನೆಗೆ ಆದೇಶ ನೀಡಲಾಗಿತ್ತು: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರಾಜ್ಯದಲ್ಲಿ ರೌಡಿಗಳ ನಿಗ್ರಹಕ್ಕೆ ಪ್ರತ್ಯೇಕ ಪಡೆ ಆರಂಭಿಸುವುದಾಗಿ ಹೇಳಿದ ಬೆನ್ನಲ್ಲೇ ಪ್ರತಿ ಪೊಲೀಸ್ ವಲಯ ಹಾಗೂ ಠಾಣೆ ಮಟ್ಟದಲ್ಲಿ ರೌಡಿ ನಿಗ್ರಹ ದಳ ರಚಿಸುವಂತೆ ಸೂಚಿಸಿ ರಾಜ್ಯ ನಿರ್ದೇಶಕ ಪೊಲೀಸ್ ಮಹಾ ನಿರ್ದೇಶಕ ಡಾ.ಎಂ.ಎ.ಸಲೀಂ ಆದೇಶ ಹೊರಡಿಸಿದ್ದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಬಲಪಡಿಸಲು ಹಾಗೂ ರೌಡಿಗಳ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿಗಾಗಿ ಪ್ರತಿ ಪೊಲೀಸ್ ವಲಯ ಮತ್ತು ಪೊಲೀಸ್ ಠಾಣೆ ಮಟ್ಟದಲ್ಲಿ ರೌಡಿ ನಿಗ್ರಹ ದಳ ಆರಂಭಿಸುತ್ತಿರುವುದಾಗಿ ಸಲೀಂ ಆದೇಶದಲ್ಲಿ ತಿಳಿಸಿದ್ದರು. ರೌಡಿಸಂ ಚಟುವಟಿಕೆಗಳು ಸಮಾಜದಲ್ಲಿ ಭಯದ ವಾತಾವರಣ ಸೃಷ್ಟಿಸುತ್ತವೆ ಮತ್ತು ಸಾಮಾಜಿಕ ಸೌಹಾರ್ದತೆ ಹಾಳು ಮಾಡುತ್ತವೆ. ಜತೆಗೆ ಸಾರ್ವಜನಿಕ ಶಾಂತಿಗೆ ಧಕ್ಕೆ ಉಂಟು ಮಾಡುತ್ತವೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ನಿರ್ದೇಶನದಂತೆ ರೌಡಿಗಳು ಹಾಗೂ ರೌಡಿ ಚಟುವಟಿಕೆಗಳ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಕರ್ನಾಟಕ ಪೊಲೀಸ್ ಮ್ಯಾನ್ಯುಯಲ್ ಪ್ರಕಾರ ರೌಡಿಗಳ ಗುರುತಿಸುವಿಕೆ, ನೋಂದಣಿ ಹಾಗೂ ನಿಗಾ ವಹಿಸಿ ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕ ಶಾಂತಿ ಕಾಯ್ದುಕೊಳ್ಳುವುದು ಅಗತ್ಯವಾಗಿದೆ ಎಂದು ಸಲೀಂ ಆದೇಶದಲ್ಲಿ ಹೇಳಿದ್ದರು. ಪೊಲೀಸ್ ಪ್ರಧಾನ ಕಚೇರಿಯ ನಿರ್ದೇಶನದಂತೆ ಎಲ್ಲಾ ಪೊಲೀಸ್ ಅಧಿಕಾರಿಗಳು ರೌಡಿಗಳು ಮತ್ತು ರೌಡಿ ಚಟುವಟಿಕೆಗಳ ವಿರುದ್ಧ ಶೂನ್ಯ ಸಹಿಷ್ಣುವ ಅನುಸರಿಸಬೇಕು. ಸರ್ಕಲ್ ಇನ್ಸ್‌ಪೆಕ್ಟರ್‌ಗಳ ಮೇಲ್ವಿಚಾರಣೆಯಲ್ಲಿ ಪ್ರತಿ ವಲಯದಲ್ಲಿ ರೌಡಿ ನಿಗ್ರಹ ದಳ ರಚಿಸಬೇಕು.
ಇನ್ಸ್‌ಪೆಕ್ಟರ್‌ಗಳ ನೇತೃತ್ವದ ಠಾಣೆಗಳಲ್ಲಿ ಪ್ರತ್ಯೇಕ ರೌಡಿ ನಿಗ್ರಹದಳ ರಚಿಸಲಾಗುವುದು. ಇದರ ಸಂಯೋಜನೆ, ಸ್ಥಳೀಯ ಅಗತ್ಯತೆ ಮತ್ತು ಅಪರಾಧ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಉಪ ವಿಭಾಗದ ಪೊಲೀಸ್ ಅಧಿಕಾರಿ ಅಥವಾ ಎಸಿಪಿ ನಿರ್ಧಾರ ಕೈಗೊಳ್ಳಬೇಕು ಎಂದು ಆದೇಶದಲ್ಲಿ ತಿಳಿಸಲಾಗಿತ್ತು. ರೌಡಿ ನಿಗ್ರಹ ದಳ ಅಪರಾಧ ಪ್ರಕರಣಗಳನ್ನು ಪರಿಶೀಲಿಸಿ ಹೊಸ ರೌಡಿ ಪಟ್ಟಿ ತೆರೆಯಬೇಕು. ರೌಡಿ ಶೀಟರ್‌ಗಳ ಚಲನವಲನ ಮತ್ತು ಚಟುವಟಿಕೆಗಳ ಮೇಲೆ ನಿಗಾ ವಹಿಸಬೇಕು. ಹೊಸ ರೌಡಿ ಅಂಶಗಳು, ಗ್ಯಾಂಗ್‌ಗಳು ಮತ್ತು ಅಪರಾಧ ಗುಂಪುಗಳನ್ನು ಗುರುತಿಸಿ ಗುಪ್ತಚರ ಮಾಹಿತಿ ಸಂಗ್ರಹಿಸಬೇಕು. ಪಿಎಆರ್, ಗೂಂಡಾ ಕಾಯಿದೆ, ಕೆಸಿಒಸಿಎ ಕಾಯಿದೆ ಮುಂತಾದ ಕಾನೂನು ಕ್ರಮಗಳನ್ನು ತಕ್ಷಣ ಕೈಗೊಳ್ಳಬೇಕು. ಗಸ್ತು ಸಿಬ್ಬಂದಿ ಮತ್ತು ಸ್ಥಳೀಯ ಗುಪ್ತಚರ ಮೂಲಗಳೊಂದಿಗೆ ನಿಕಟ ಸಂಪರ್ಕ ಕಾಯ್ದುಕೊಳ್ಳಬೇಕು. ಅಪಾಯದ ಪ್ರದೇಶಗಳಲ್ಲಿ ವಿಶೇಷ ಕಾರ್ಯಾಚರಣೆ ಮತ್ತು ತಪಾಸಣೆ ನಡೆಸಬೇಕು. ಈ ಆದೇಶವನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು ಎಂದು ಡಾ. ಸಲೀಂ ಸೂಚಿಸಿದ್ದರು.









