






ನೆರಿಯ: ಶಾಲೆ ಬಿಟ್ಟು ಕೆ.ಎಸ್.ಆರ್. ಟಿ.ಸಿ.ಬಸ್ ನಲ್ಲಿ ಮನೆಗೆ ತೆರಳುವಾಗ ಎಂಟನೇ ತರಗತಿಯ ಬಾಲಕನ ಕಾಲಿಗೆ ಬಲವಾಗಿ ಕೊಯ್ದ ಗಾಯವಾದ ಘಟನೆ ನಡೆದಿದೆ. ಮುಂಡಾಜೆಯ ಖಾಸಗಿ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿ, ನೆರಿಯ ನೆಕ್ಕರೆ ಪಿ.ಆರ್. ಶಾಜಿ ಮತ್ತು ಸೌಮ್ಯ ದಂಪತಿಯ ಪುತ್ರ ಅರುಣ್ ಗಾಯಗೊಂಡವರು.
ಜೂ.೧೧ರಂದು ಸಂಜೆ ಬಸ್ ನಲ್ಲಿ ತೆರಳುವಾಗ ಈ ಘಟನೆ ನಡೆದಿದೆ. ಬಲ ಕಾಲಿನ ತೊಡೆ ಭಾಗ ಕತ್ತರಿಸಿದಂತಾಗಿದ್ದು ಹಾಕಿದ್ದ ಜೀನ್ಸ್ ಪ್ಯಾಂಟ್ ಹರಿದು,ರಕ್ತಸ್ರಾವವಾಗಿದೆ.
ನೋವು ತಡೆದುಕೊಂಡು ನೆಕ್ಕರೆಯಲ್ಲಿರುವ ತನ್ನ ಮನೆಗೆ ಬಂದು ನೋಡಿದಾಗ ಗಾಯದ ತೀವ್ರತೆ ಗೊತ್ತಾಗಿದೆ.


ಕೂಡಲೇ ಸರ್ಕಾರಿ ಅಸ್ಪತ್ರೆಗೆ ಕರೆದುಕೊಂಡು ಹೀಗಿ ಚಿಕಿತ್ಸೆ ಕೊಡಿಸಿದ್ದು ನಾಲ್ಕು ಸ್ಟಿಚ್ ಹಾಕಲಾಗಿದೆ. ವಿದ್ಯಾರ್ಥಿಗಳಲ್ಲಿ ಮನವಿ: ಮುಂಡಾಜೆಯಿಂದ ನೆರಿಯ ಮಾರ್ಗವಾಗಿ ಧರ್ಮಸ್ಥಳಕ್ಕೆ ತೆರಳುವ ಬಸ್ ನಲ್ಲಿ ಅಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪ್ರಯಾಣಿಸುತ್ತಾರೆ.
ಬಸ್ ನಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದರಿಂದ ಬಾಲಕನ ಕಾಲಿಗೆ ವಿದ್ಯಾರ್ಥಿಗಳ ಬ್ಯಾಗ್ ನಲ್ಲಿದ್ದ ಯಾವುದಾದರೂ ವಸ್ತುಗಳಿಂದ ಗಾಯವಾಗಿರಬಹುದೆಂದು ವಿದ್ಯಾರ್ಥಿ ಅಭಿಪ್ರಾಯ ವ್ಯಕ್ತಪಡಿಸಿದ್ದಾನೆ.
ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಬ್ಯಾಗ್ ನಲ್ಲಿಟ್ಟ ಕೈವಾರ ಇನ್ನಿತರ ವಸ್ತುಗಳ ಬಗ್ಗೆ ಎಚ್ಚರಿಕೆ ವಹಿಸಬೇಕಿದೆ.









