






ಬೆಳ್ತಂಗಡಿ: ಯುವಕನೋರ್ವ ತನ್ನ ಚಿಕ್ಕಪ್ಪನನ್ನು ಬಿಯರ್ ಬಾಟ್ಲಿಯಿಂದ ಇರಿದು ಕೊಲೆಗೈದ ಘಟನೆ ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಪಿಲಾತಬೆಟ್ಟು ಗ್ರಾಮದ ಕಾಡಬೆಟ್ಟು ಎಂಬಲ್ಲಿ ಮೇ.೩೧ರಂದು ರಾತ್ರಿ ನಡೆದಿದೆ. ಕಾಡಬೆಟ್ಟು ನಿವಾಸಿ ಮಧುಸೂಧನ (೩೮) ಅವರು ಮೃತಪಟ್ಟವರಾಗಿದ್ದು ಅವರ ಅಣ್ಣ ಕೇಶವ ಪೂಜಾರಿ ಅವರ ಪುತ್ರ ರಾಹುಲ್ (೨೩) ಕೊಲೆಗೈದ ಆರೋಪಿಯಾಗಿದ್ದಾನೆ. ಆರೋಪಿ ರಾಹುಲ್ನನ್ನು ಪೊಲೀಸರು ಘಟನೆ ನಡೆದ ಕೆಲವೇ ಹೊತ್ತಿನಲ್ಲಿ ಬಂಧಿಸಿದ್ದಾರೆ.


ಘಟನೆಯ ವಿವರ: ಕೇಶವ ಪೂಜಾರಿ ಅವರ ಮನೆಯಲ್ಲಿ ರವಿವಾರ ರಾತ್ರಿ ದೈವಕ್ಕೆ ತಂಬಿಲ ಕಾರ್ಯಕ್ರಮ ನಡೆಯುತ್ತಿತ್ತು. ರಾಹುಲ್ ಮತ್ತಿತರರು ಮನೆಯಿಂದ ಹೊರಗೆ ಕುಡಿದು ಗದ್ದಲ ಮಾಡುತ್ತಿದ್ದರು. ಇದನ್ನು ಆಕ್ಷೇಪಿಸಿದ ಮಧುಸೂದನ್ ಅವರನ್ನು ರಾಹುಲ್ ಕೋಪದಿಂದ ಬಿಯರ್ ಬಾಟಲ್ನಿಂದ ಕುತ್ತಿಗೆಗೆ ಇರಿದು ಸ್ಥಳದಿಂದ ಪರಾರಿಯಾಗಿದ್ದಾನೆ. ಗಂಭೀರ ಗಾಯಗೊಂಡ ಮಧುಸೂದನ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆ ವೇಳೆಗಾಗಲೇ ಅವರು ಮೃತಪಟ್ಟಿದ್ದರು. ಮೃತ ಮಧುಸೂದನ್ ಅವಿವಾಹಿತರಾಗಿದ್ದು ಇಲೆಕ್ಟ್ರಿಷಿಯನ್ ವೃತ್ತಿ ಮಾಡುತ್ತಿದ್ದರು. ರಾಹುಲ್ ಪೆಟ್ರೋಲ್ ಬಂಕ್ನಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಮಧುಸೂದನ್ ಅವರ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ನಡೆಸಲಾಗಿದೆ.
ಕೊಲೆ ಪ್ರಕರಣ ದಾಖಲು: ಪಿಲಾತಬೆಟ್ಟು ನಿವಾಸಿ ಶೇಖರ (೪೩) ಎಂಬವರ ದೂರಿನಂತೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಅ.ಕ್ರ.೫೮/೨೦೨೬ರಂತೆ ಕೊಲೆ ಪ್ರಕರಣ ದಾಖಲಾಗಿದೆ. ಮೇ. ೩೧ರಂದು ರಾತ್ರಿ ಶೇಖರ ಅವರ ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮವಿತ್ತು. ಕಾರ್ಯಕ್ರಮದಲ್ಲಿ ಕುಟುಂಬ ಸದಸ್ಯರು ಹಾಜರಿದ್ದರು. ಶೇಖರ್ ಅವರ ಸಹೋದರ ಮಧುಸೂದನ್ ಅವರು ತನ್ನ ಸಹೋದರ ಕೇಶವ ಅವರ ಮಗ ರಾಹುಲ್ ಎಂಬಾತನೊಂದಿಗೆ ಕೆಲಸದ ವಿಚಾರದಲ್ಲಿ ತಕರಾರು ತೆಗೆದಿದ್ದಾರೆ. ಇದರಿಂದ ರಾಹುಲ್ ಕೋಪಗೊಂಡು ಅಲ್ಲಿಂದ ತೆರಳಿದ್ದಾನೆ.
ಕಾರ್ಯಕ್ರಮ ಮುಗಿದ ಬಳಿಕ ಶೇಖರ್ ಅವರು ಮನೆಯಲ್ಲಿದ್ದಾಗ ಮನೆಯ ಸಮೀಪ ಬೊಬ್ಬೆ ಕೇಳಿದೆ. ಶೇಖರ್ ಅವರು ಅಲ್ಲಿಗೆ ತೆರಳಿದಾಗ ರಾಹುಲ್ ಬಿಯರ್ ಬಾಟಲಿಯಿಂದ ಮಧುಸೂದನರವರ ಕುತ್ತಿಗೆಗೆ ತಿವಿಯುತ್ತಿರುವುದು ಕಂಡು ಬಂದಿದೆ. ಗಂಭೀರವಾಗಿ ಗಾಯಗೊಂಡಿದ್ದ ಮಧುಸೂದನ ಅವರನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಕೊಂಡು ಹೋಗಲಾಗಿದೆ. ಅಲ್ಲಿ ವೈದ್ಯರು ಪರೀಕ್ಷಿಸಿದಾಗ ಮಧುಸೂದನ್ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ ಎಂದು ಎಫ್ಐಆರ್ ದಾಖಲಿಸಲಾಗಿದೆ. ತನ್ನ ಚಿಕ್ಕಪ್ಪನನ್ನು ಕೊಲೆ ಮಾಡಿದ ಆರೋಪಿ ರಾಹುಲ್ನನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.








