






ಬೆಳ್ತಂಗಡಿ: ಗುರುವಾಯನಕೆರೆಯ ಅಲಾದಿಕೊಟ್ಟಿಗೆ ಎಂಬಲ್ಲಿ ಬಂಟ್ವಾಳ ತಾಲೂಕಿನ ಪೆರ್ನೆಯ ಯತೀಶ್ ಗೌಡ ಎಂಬವರಿಗೆ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆಗೆ ಸಂಬಂಧಿಸಿ ಮಿತ್ತಬಾಗಿಲಿನ ಯಶೋಧರ, ಕಡಬ ತಾಲೂಕಿನ ಚಾರ್ವಾಕದ ಮೋಹನ್ ಮತ್ತು ಪಡಂಗಡಿಯ ಇಬ್ರಾಹಿಂ ಎಂಬವರನ್ನು ಪೊಲೀಸರು ಬಂಧಿಸಿದ ಘಟನೆ ಜೂ. ೧ರಂದು ನಡೆದಿದೆ.
ಘಟನೆಯ ವಿವರ: ಗುರುವಾಯನಕೆರೆಯ ಅಲಾದಿಕೊಟ್ಟಿಗೆ ಎಂಬಲ್ಲಿ ಜೂ.೧ರಂದು ಬೆಳಿಗ್ಗೆ ಅಪರಿಚಿತ ಯುವಕನ ಮೃತದೇಹ ಪತ್ತೆಯಾಗಿತ್ತು. ಈ ಯುವಕನನ್ನು ಕೊಲೆ ಮಾಡಲಾಗಿದೆ ಎಂದು ಸಂಶಯ ವ್ಯಕ್ತವಾಗಿತ್ತು. ಮಾಹಿತಿ ಸಿಕ್ಕಿದ ತಕ್ಷಣ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಬಳಿಕ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಲಾಗಿತ್ತು. ಯುವಕನ ಮೃತದೇಹ ಪತ್ತೆಯಾದ ಕುರಿತು ವೆಬ್ಸೈಟ್ ಸಹಿತ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಪ್ರಸಾರವಾಗುತ್ತಿದ್ದಂತೆಯೇ ಇದು ಬಂಟ್ವಾಳ ತಾಲೂಕಿನ ಪೆರ್ನೆಯ ಯತೀಶ್ ಗೌಡ(೩೩) ಅವರ ಮೃತದೇಹ ಎಂದು ಗೊತ್ತಾಗಿತ್ತು. ವಾಟ್ಸಾಪ್ ಮೂಲಕ ಬಂದ ಫೋಟೋ ನೋಡಿ ಯತೀಶ್ ಅವರ ಸಹೋದರ ನಿತಿನ್ ಮತ್ತು ಅವರ ಸಂಬಂಧಿಕರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮೃತದೇಹದ ಗುರುತು ಪತ್ತೆ ಹಚ್ಚಿದ್ದರು. ಬಳಿಕ ನಿತಿನ್ ಅವರು ಘಟನಾ ಸ್ಥಳದ ಆಸುಪಾಸಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರ ಸಮ್ಮುಖದಲ್ಲಿ ಪರಿಶೀಲಿಸಿದ್ದ ವೇಳೆ ಮೂವರು ವ್ಯಕ್ತಿಗಳು ಸೇರಿ ಯತೀಶ ಅವರಿಗೆ ಹಲ್ಲೆ ನಡೆಸುತ್ತಿರುವ ದೃಶ್ಯ ಪತ್ತೆಯಾಗಿತ್ತು.
ಇದರ ಆಧಾರದಲ್ಲಿ ನಿತಿನ್ ಅವರು ಹಲ್ಲೆಯಿಂದಾಗಿ ತನ್ನ ಸಹೋದರ ಯತೀಶ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ನಂತರ ಪೊಲೀಸರು ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲಿನ ಯಶೋಧರ(೩೫), ಕಡಬ ತಾಲೂಕಿನ ಚಾರ್ವಾಕದ ಮೋಹನ್(೩೦) ಮತ್ತು ಬೆಳ್ತಂಗಡಿ ತಾಲೂಕಿನ ಪಡಂಗಡಿಯ ಇಬ್ರಾಹಿಂ(೫೪) ಎಂಬವರನ್ನು ಬಂಧಿಸಿದ್ದಾರೆ. ಘಟನೆ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ ೬೫/೨೦೨೬ರಂತೆ ಬಿ.ಎನ್.ಎಸ್. ಕಾಯ್ದೆಯ ಕಲಂ ೧೧೫(೨), ೪೦೩ ಹಾಗೂ ೩(೫) ರ ಅಡಿಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಎಸ್ಪಿ ಡಾ.ಅರುಣ್ ಕೆ, ಎಡಿಷನಲ್ ಎಸ್ಪಿ ಅನಿಲ್ ಕುಮಾರ್ ಬೂಮರೆಡ್ಡಿ ಮತ್ತು ಡಿವೈಎಸ್ಪಿ ರೋಹಿಣಿ ಸಿ.ಕೆ. ಅವರ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ರವಿ ಬಿ.ಎಸ್. ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.


ಯಶೋಧರ ಮತ್ತು ಮೋಹನ್ ಅವರು ಗುರುವಾಯನಕೆರೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯೊಂದರ ಅಡುಗೆ ವಿಭಾಗದ ಸಿಬ್ಬಂದಿಗಳಾಗಿದ್ದಾರೆ. ಇಬ್ರಾಹಿಂ ಅವರು ಘಟನಾ ಸ್ಥಳದ ಪಕ್ಕದಲ್ಲಿ ವಾಹನಗಳ ಸರ್ವೀಸ್ ಸೆಂಟರ್ ಹೊಂದಿದ್ದಾರೆ. ಕೊಲೆಯಾದ ಯತೀಶ್ ವೆಲ್ಡಿಂಗ್ ಕೆಲಸ ಮಾಡುತ್ತಿದ್ದರು. ಯತೀಶ್ ಅವರು ಮನೆಯಿಂದ ಬಂದವರು ಮೂರು ತಿಂಗಳಿನಿಂದ ಮನೆಗೆ ಹೋಗಿರಲಿಲ್ಲ. ಯತೀಶ್ ಮಂಗಳೂರಿನಲ್ಲಿದ್ದಾರೆ ಎಂದು ಅವರ ಮನೆಯವರು ತಿಳಿದುಕೊಂಡಿದ್ದರು ಎಂದು ತಿಳಿದು ಬಂದಿದೆ. ಯತೀಶ್ ಅವರ ತಂದೆ ಕೂಸಪ್ಪ ಗೌಡ ಮೂರು ವರ್ಷದ ಹಿಂದೆ ನಿಧನರಾಗಿದ್ದಾರೆ. ಮೃತ ಯತೀಶ್ ಅವರು ತಾಯಿ ಪದ್ಮಾವತಿ ಮತ್ತು ಈರ್ವರು ಸಹೋದರರನ್ನು ಅಗಲಿದ್ದಾರೆ.
ಕಳ್ಳನೆಂದು ಭಾವಿಸಿ ಹೊಡೆದರು!
ಯತೀಶ್ ಗೌಡ ಮುಂಜಾನೆ ವೇಳೆ ಗುರುವಾಯನಕೆರೆ ಆಸುಪಾಸಿನಲ್ಲಿ ತಿರುಗಾಡುತ್ತಿದ್ದರು. ಮಾದಕ ವ್ಯಸನಿಯಾಗಿದ್ದ ಇವರು ಸಂಶಯಾಸ್ಪದವಾಗಿ ವರ್ತಿಸುತ್ತಿದ್ದರು. ಅವರನ್ನು ಕಳ್ಳನೆಂದು ಭಾವಿಸಿ ಯಶೋಧರ ಮತ್ತು ಮೋಹನ್ ಅವರು ಹೊಡೆದಿದ್ದರು. ಅವರಿಗೆ ಇಬ್ರಾಹಿಂ ಸಹಕರಿಸಿದ್ದರು. ಕೊಲೆ ಮಾಡುವ ಉzಶ ಮೂವರಿಗೂ ಇರಲಿಲ್ಲ. ಆದರೆ ಹಲ್ಲೆಯ ಪರಿಣಾಮ ಯತೀಶ್ ಗೌಡ ಮೃತರಾಗಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಆದರ ಈ ಕುರಿತು ಅಧಿಕೃತ ಮಾಹಿತಿ ದೊರೆತಿಲ್ಲ.
ಆರೋಪಿಗಳಿಗೆ ನ್ಯಾಯಾಂಗ ಬಂಧನ: ಯತೀಶ್ ಗೌಡ ಅವರಿಗೆ ಹಲ್ಲೆ ನಡೆಸಿ ಕೊಲೆ ಮಾಡಿರುವ ಆರೋಪಿಗಳಾದ ಯಶೋಧರ, ಮೋಹನ್ ಮತ್ತು ಇಬ್ರಾಹಿಂ ಅವರನ್ನು ಬಂಧಿಸಿ ವಿಚಾರಣೆ ನಡೆಸಿದ ಪೊಲೀಸರು ಜೂ.೨ರಂದು ಬೆಳ್ತಂಗಡಿ ಪ್ರಭಾರ ಹೊಂದಿರುವ ಬಂಟ್ವಾಳ ಸ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈ ವೇಳೆ ನ್ಯಾಯಾಲಯ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.








