








ಬೆಳ್ತಂಗಡಿ: ಕಾರಿನಲ್ಲಿ ನಿಷೇಧಿತ ಎಂಡಿಎಂಎ ಮಾದಕ ವಸ್ತು ಸಾಗಾಟ ಮಾಡಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ವೇಣೂರು ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು ೪೦ ಸಾವಿರ ಮೌಲ್ಯದ ೪ ಗ್ರಾಂ ಎಂಡಿಎಂಎ ಮಾದಕ ವಸ್ತು ಹಾಗೂ ಸಾಗಾಟಕ್ಕೆ ಬಳಸಿದ ೨ ಲಕ್ಷ ರೂ ಮೌಲ್ಯದ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಂಗಳೂರು ತಾಲೂಕಿನ ಪುತ್ತಿಗೆ ಗ್ರಾಮದ ಹಂಡೇಲು ನಿವಾಸಿ ಮಹಮ್ಮದ್ ತನ್ವೀರ್(೨೭) ಹಾಗೂ ಮೂಡುಬಿದಿರೆ ತಾಲೂಕಿನ ಕಲ್ಲಬೆಟ್ಟು ನಿವಾಸಿ ಮಹಮ್ಮದ್ ಸಲ್ವಾನ್ (೨೨) ಬಂಧಿತರು. ಕುವೆಟ್ಟು ಗ್ರಾಮದ ಸುನ್ನತ್ಕೆರೆಯ ಹಂಝತ್ ಕರಾರ್ ಎಂಬಾತ ಪರಾರಿಯಾಗಿದ್ದಾನೆ. ವೇಣೂರು ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ಅಕ್ಷಯ್ ಡವಗಿ ಅವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಮೇ.೨೭ರಂದು ಸಂಜೆ ಕಂಬಳದಡ್ಡ ಪ್ರದೇಶದ ಗುರುವಾಯನಕೆರೆ-ಮೂಡುಬಿದಿರೆ ಸಾರ್ವಜನಿಕ ರಸ್ತೆಯಲ್ಲಿ ನಾಕಾಬಂದಿ ಹಾಕಿ ವಾಹನ ತಪಾಸಣೆ ನಡೆಸಲಾಯಿತು. ಈ ವೇಳೆ ಗುರುವಾಯನಕೆರೆ ಕಡೆಯಿಂದ ವೇಣೂರು ಕಡೆಗೆ ತೆರಳುತ್ತಿದ್ದ ಕಾರನ್ನು ತಡೆದು ಪರಿಶೀಲಿಸಿದಾಗ ನಿಷೇಧಿತ ಎಂಡಿಎಂಎ ಮಾದಕ ವಸ್ತು ಪತ್ತೆಯಾಗಿದೆ.
ವಿಚಾರಣೆ ವೇಳೆ ಆರೋಪಿಗಳು ಈ ಮಾದಕ ವಸ್ತುವನ್ನು ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಸುನ್ನತ್ಕೆರೆ ನಿವಾಸಿ ಹಂಝತ್ ಕರಾರ್ ಎಂಬಾತ ಮಾರಾಟ ಮಾಡಲು ನೀಡಿರುವುದಾಗಿ ಒಪ್ಪಿಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ಗುರುವಾರ ಮಂಗಳೂರು ನ್ಯಾಯಾಧೀಶರ ನಿವಾಸಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಧೀಶರು ನ್ಯಾಯಾಂಗ ಬಂಧನ ವಿಧಿಸಿದ್ದಾರೆ.
ಪರಾರಿಯಾದ ಹಂಝತ್ ಕರಾರ್ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಬೆಳ್ತಂಗಡಿ ಉಪವಿಭಾಗದ ಡಿವೈಎಸ್ಪಿ ರೋಹಿಣಿ ಸಿ.ಕೆ. ಮಾರ್ಗದರ್ಶನ ಮತ್ತು ಬೆಳ್ತಂಗಡಿ ವೃತ್ತ ನಿರೀಕ್ಷಕ ರವಿ ಬಿ.ಎಸ್. ಅವರ ನೇತೃತ್ವದಲ್ಲಿ ವೇಣೂರು ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ಅಕ್ಷಯ್ ಡವಗಿ, ತನಿಖಾ ಸಬ್ ಇನ್ಸ್ಪೆಕ್ಟರ್ ಓಮನ ಹಾಗೂ ಸಿಬ್ಬಂದಿಗಳಾದ ಕೃಷ್ಣ, ಕೇಶವತಿ, ಮೋಹನ್ ಕುಮಾರ್, ವಸಂತ್ ಕುಮಾರ್, ಸಂತೋಷ್ ಮತ್ತು ರಾಕೇಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.








