






ಬೆಳ್ತಂಗಡಿ: ಮೂಲತಃ ಕಡಬ ತಾಲೂಕಿನ ನೆಲ್ಯಾಡಿಯವರಾಗಿದ್ದು ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಕರ್ನೋಡಿಯಲ್ಲಿ ವಾಸವಿದ್ದು ಎಸ್.ಆರ್.ಎಸ್. ಹೆಸರಿನ ಎಲೆಕ್ಟ್ರಾನಿಕ್ಸ್ ಮತ್ತು ಸೋಲಾರ್ ಉದ್ಯಮ ನಡೆಸುತ್ತಿದ್ದ ಬಿ. ಸುದೀಪ್ ರೈ(೩೧) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.
ಆತ್ಮಹತ್ಯೆಗೆ ಯತ್ನಿಸಿ ಜೀವನ್ಮರಣ ಸ್ಥಿತಿಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೆ ಮಾ.೨೯ರಂದು ಬೆಳಗ್ಗೆ ಸಾವನ್ನಪ್ಪಿದ್ದಾರೆ. ನೆಲ್ಯಾಡಿ ಗ್ರಾಮದ ಪಡ್ರೆಕಬೆಟ್ಟು ಬೀದಿಮಜಲು ನಿವಾಸಿ ದಾಮೋದರ ರೈ ಅವರ ಪುತ್ರರಾದ ಬಿ.ಸುದೀಪ್ ರೈ ಅವರು ಮಾ.೧೭ರಂದು ಬೆಳಗ್ಗೆ ತಿಂಡಿಯೊಟ್ಟಿಗೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ತೀವ್ರ ಅಸ್ವಸ್ಥಗೊಂಡಿದ್ದ ಸುದೀಪ್ ರೈ ಅವರನ್ನು ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸುದೀಪ್ ರೈ ಚಿಕಿತ್ಸೆಗೆ ಸ್ಪಂದಿಸದೆ ಮಾ.೨೯ರಂದು ಬೆಳಗ್ಗೆ ಮೃತಪಟ್ಟಿದ್ದಾರೆ. ಮೃತರು ತಂದೆ, ತಾಯಿ, ಪತ್ನಿ ಮತ್ತು ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.
ಸುದೀಪ್ ರೈ ಅವರು ಮನೆಯವರಿಗೆ ಮಾಹಿತಿ ನೀಡದೆ ಪುತ್ತೂರು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಕಾರ್ಕಳ ತಾಲೂಕಿನ ಕಜೆ ನಿವಾಸಿ ಸೌಮ್ಯ ಶೆಟ್ಟಿ (೨೮) ಎಂಬವರೊಂದಿಗೆ ಫೆ.೧೭ರಂದು ವಿವಾಹ ನೋಂದಣಿ ಮಾಡಿಕೊಂಡಿದ್ದರು. ಸುದೀಪ್ ಅವರ ಆತ್ಮಹತ್ಯೆ ಕುರಿತು ಅವರ ತಂದೆ ದಾಮೋದರ ರೈ ಅವರು ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪತ್ನಿ ಸೌಮ್ಯ ಶೆಟ್ಟಿ ವಿರುದ್ಧ ದೂರು ದಾಖಲು: ಸುದೀಪ್ ರೈ ಅವರು ೧೭.೦೨.೨೦೨೬ರಂದು ಪುತ್ತೂರು ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಮದುವೆ ನೋಂದಣಿ ಮಾಡಿಕೊಂಡಿದ್ದರು. ಆ ಬಳಿಕ ಸುದೀಪ್ ಮತ್ತು ಸೌಮ್ಯ ಅವರು ಕಾರ್ಕಳ ತಾಲೂಕು ಜೋಡುರಸ್ತೆಯ ಬಂಗ್ಲೆಗುಡ್ಡೆ ಕಜೆ ಎಂಬಲ್ಲಿ ವಾಸವಾಗಿದ್ದರು. ಮಾ.೧೭ರಂದು ಸುದೀಪ್ ಅವರು ನೆಲ್ಯಾಡಿ ಗ್ರಾಮದ ಪಡ್ರೆಕಬೆಟ್ಟು ಬೀದಿಮಜಲು ಎಂಬಲ್ಲಿರುವ ತಮ್ಮ ಮನೆಗೆ ಬಂದಿದ್ದರು. ಈ ಸಮಯದಲ್ಲಿ ಸುದೀಪ್ ಅವರ ತಾಯಿ ಕಾರಿನಲ್ಲಿ ಮಗ ಸುದೀಪ್ ಅವರೊಂದಿಗೆ ಪೂಜಾ ಕಾರ್ಯಕ್ರಮದ ನಿಮಿತ್ತ ಮನೆಯಿಂದ ಹೊರಟು ಕಡಬ ತಾಲೂಕಿನ ನೆಲ್ಯಾಡಿ ಪೇಟೆಯ ಸಮೀಪ ತಲುಪಿದ್ದರು.
ಈ ವೇಳೆ ಸೌಮ್ಯ ಶೆಟ್ಟಿ ಅವರು ಅವರ ಸ್ಕೂಟಿ ಚಲಾಯಿಸಿಕೊಂಡು ಬಂದು ಕಾರಿಗೆ ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ಬೈದು ಕೊಂದು ಹಾಕುವುದಾಗಿ ಜೀವ ಬೆದರಿಕೆ ಹಾಕಿದ್ದರು. ನಂತರ ಸುದೀಪ್ ಅವರು ಸೌಮ್ಯ ಅವರೊಂದಿಗೆ ಕಾರ್ಕಳಕ್ಕೆ ಬಂದಿದ್ದರು. ಕಾರ್ಕಳದಲ್ಲಿರುವಾಗ ಮಾ. ೨೨ರಂದು ಸೌಮ್ಯ ಅವರ ಸಂಬಂಧಿಕರು ಸುದೀಪ್ ಅವರ ಸಂಬಂಧಿಕರಿಗೆ ಪೋನ್ ಮಾಡಿ ಸುದೀಪ್ ಅವರು ಯಾವುದೋ ವಿಷ ಪದಾರ್ಥ ಸೇವಿಸಿದ್ದು ಚಿಕಿತ್ಸೆಯ ಬಗ್ಗೆ ಅವರನ್ನು ಕಾರ್ಕಳದ ನಿಟ್ಟೆಯ ಗಾಬ್ರಿಯಾ ಆಸ್ಪತ್ರೆಗೆ ದಾಖಲು ಮಾಡಿರುವುದಾಗಿ ತಿಳಿಸಿದ್ದಾರೆ. ನಂತರ ಸುದೀಪ್ ಅವರ ತಾಯಿ ಕಾರ್ಕಳಕ್ಕೆ ಬಂದು ಮಾ.೨೩ರಂದು ನಿಟ್ಟೆ ಗಾಜಿಯಾ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಉಡುಪಿಯ ಆದರ್ಶ ಆಸ್ಪತ್ರೆಗೆ ಸುದೀಪ್ ಅವರನ್ನು ಕರೆದುಕೊಂಡು ಹೋಗಿದ್ದಾರೆ.


ನಂತರ ಅಲ್ಲಿಂದ ಮಾ.೨೪ರಂದು ಮಂಗಳೂರು ಯೆನಪೋಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮಾ.೨೯ರಂದು ಬೆಳಗಿನ ಜಾವ ಸುಮಾರು ೦೩.೦೯ ಗಂಟೆಗೆ ಸುದೀಪ್ ಮೃತಪಟ್ಟಿದ್ದಾರೆ. ಸೌಮ್ಯ ಅವರು ಮಾನಸಿಕ ಚಿತ್ರಹಿಂಸೆ ನೀಡಿ ಆತ್ಮಹತ್ಯೆಗೆ ಪ್ರಚೋದಿಸಿರುವುದರಿಂದ ಸುದೀಪ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸುದೀಪ್ ಅವರ ತಂದೆ ದಾಮೋದರ ರೈ ನೀಡಿದ ದೂರಿನಂತೆ ಸೌಮ್ಯ ಶೆಟ್ಟಿ ವಿರುದ್ಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ. ೪೭/೨೦೨೬ರಂತೆ ಪ್ರಕರಣ ದಾಖಲಾಗಿದೆ.
ಮುಂದುವರಿದ ತನಿಖೆ: ಸುದೀಪ್ ರೈ ಅವರ ಸಾವಿನ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಕಾರ್ಕಳ ನಗರ ಠಾಣಾ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಸುದೀಪ್ ರೈ ಅವರಿಗೆ ಫೇಸ್ಬುಕ್ನಲ್ಲಿ ಕಾರ್ಕಳದ ಬಂಗ್ಲೆಗುಡ್ಡೆಯ ಕಜೆ ನಿವಾಸಿ ಸೌಮ್ಯ ಶೆಟ್ಟಿ ಅವರು ಪರಿಚಯವಾಗಿದ್ದರು. ಬಳಿಕ ಸೌಮ್ಯ ಶೆಟ್ಟಿ ಅವರ ಮನೆಯ ಸಮೀಪದ ದೇವಸ್ಥಾನದಲ್ಲಿ ಆಕೆಯನ್ನು ಸರಳವಾಗಿ ಸುದೀಪ್ ರೈ ವಿವಾಹವಾಗಿದ್ದರು.
೨೦೨೬ರ ಫೆ.೧೭ರಂದು ಪುತ್ತೂರು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ವಿವಾಹ ನೋಂದಣಿ ಮಾಡಿಸಿಕೊಂಡಿದ್ದರು ಎಂಬ ವಿಚಾರದ ಕುರಿತು ಮಾಹಿತಿ ಕಲೆ ಹಾಕಿರುವ ಪೊಲೀಸರು ವಿವಾಹವಾದ ಒಂದೇ ತಿಂಗಳಲ್ಲಿ ನವ ವಿವಾಹಿತ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಏನೆಂದು ತನಿಖೆ ನಡೆಸುತ್ತಿದ್ದಾರೆ.
ನಾನು ಕೂಡ ದೂರು ನೀಡುತ್ತೇನೆ: ಸೌಮ್ಯ ಶೆಟ್ಟಿ : ಘಟನೆಯ ಕುರಿತು ಪ್ರತಿಕ್ರಿಯೆ ನೀಡಿರುವ ಕಾರ್ಯಕ್ರಮ ನಿರೂಪಕಿಯಾಗಿ, ಕಲಾವಿದೆಯಾಗಿ, ಮೇಕಪ್ ಆರ್ಟಿಸ್ಟ್ ಆಗಿ ಗುರುತಿಸಿಕೊಂಡಿರುವ ಸೌಮ್ಯ ಶೆಟ್ಟಿ ಅವರು ನಮ್ಮ ಮದುವೆಯನ್ನು ಸುದೀಪ್ ಮನೆಯವರು ಒಪ್ಪಿರಲಿಲ್ಲ. ಅಲ್ಲದೆ ಸುದೀಪ್ ಅವರಿಗೆ ಲಕ್ಷಾಂತರ ರೂಪಾಯಿ ಸಾಲವಿತ್ತು. ಸಾಲಗಾರರು ಫೋನ್ ಮಾಡಿದಾಗ ಅವರ ತಂದೆಯೇ ನನ್ನ ನಂಬರ್ ನೀಡುತ್ತಿದ್ದರು. ಈ ಎಲ್ಲಾ ಮಾನಸಿಕ ಒತ್ತಡಗಳಿಂದ ಸುದೀಪ್ ಈ ನಿರ್ಧಾರ ಕೈಗೊಂಡಿರಬಹುದು ಎಂದು ಹೇಳಿದ್ದಾರೆ. ತನಗೆ ಈ ಹಿಂದೆ ಒಂದು ಮದುವೆಯಾಗಿ ವಿಚ್ಛೇದನವಾಗಿದ್ದ ವಿಷಯ ಸುದೀಪ್ಗೆ ತಿಳಿದಿತ್ತು. ಸುದೀಪ್ ಸ್ವತಹ ಫೇಸ್ಟುಕ್ ಮೂಲಕ ನನ್ನನ್ನು ಅಪ್ರೋಚ್ ಆಗಿದ್ದರು. ಕಳೆದ ವರ್ಷ ಫೆಬ್ರವರಿಯಿಂದ ಮೆಸೇಜ್ ಮಾಡುತ್ತಿದ್ದರು. ಆದರೆ ಇತ್ತೀಚೆಗೆ ನಾನು ಅವರಿಗೆ ವಾಪಸ್ ಮೆಸೇಜ್ ಮಾಡಿದ್ದೆ. ಬಳಿಕ ಅವರು ಮದುವೆಯಾಗುವ ಇಚ್ಚೆ ವ್ಯಕ್ತಪಡಿಸಿದರು. ನನ್ನ ಮನೆಯವರಿಗೆ ಹೇಳಿ ಎಂದು ತಿಳಿಸಿದ್ದೆ. ಒಂದು ವರ್ಷದಿಂದ ನಿಮ್ಮ ಬಗ್ಗೆ ನೋಡಿ ನಾನು ಮದುವೆಯಾಗಲು ನಿರ್ಧರಿಸಿದ್ದೇನೆ ಎಂದು ಸುದೀಪ್ ಹೇಳಿದ್ದರು.ನಾನು ಸಹ ಮನೆಯವರು ಒಪ್ಪಿದರೆ ಮದುವೆಯಾಗುತ್ತೇನೆ ಎಂದು ಹೇಳಿದ್ದೆ. ಅವರು ಮನೆಯವರನ್ನು ಒಪ್ಪಿಸಿ ಮದುವೆಯ ತೀರ್ಮಾನಕ್ಕೆ ಬಂದರು. ನನ್ನ ತಮ್ಮನನ್ನು ಇನ್ಸ್ಟಾ ಗ್ರಾಮ್ ಮೂಲಕ ಸಂಪರ್ಕಿಸಿ ಅವನ ಜೊತೆ ಮಾತನಾಡಿ ಮದುವೆ ತೀರ್ಮಾನಕ್ಕೆ ಬಂದರು. ನನ್ನ ಹಿಂದಿನ ಜೀವನದ ಬಗ್ಗೆ ಎಲ್ಲಾ ವಿಚಾರ ಅವರಿಗೆ ತಿಳಿಸಿದೆ. ಆ ಬಗ್ಗೆ ಏನು ತಲೆಕೆಡಿಸಿಕೊಂಡಿರಲಿಲ್ಲ. ಮದುವೆ ನೋಂದಣಿಯಾದ ನಂತರ ನನ್ನ ಮನೆಯಲ್ಲಿ ಎಲ್ಲರ ಜೊತೆ ಸಂತೋಷವಾಗಿದ್ದರು. ಈಗ ಆತ್ಮಹತ್ಯೆ ಯಾಕೆ ಮಾಡಿಕೊಂಡರು ಗೊತ್ತಿಲ್ಲ. ನಮ್ಮ ಮದುವೆಗೆ ಅವರ ಮನೆಯವರು ಒಪ್ಪದೇ ಇರುವ ಕಾರಣ ಇರಬಹುದು. ಈ ಬಗ್ಗೆ ಪೊಲೀಸರು ತನಿಖೆ ಮಾಡಲಿ. ನಾನು ಕೂಡ ದೂರು ನೀಡುತ್ತೇನೆ ಎಂದು ಸೌಮ್ಯ ಶೆಟ್ಟಿ ತಿಳಿಸಿದ್ದಾರೆ.








