






ಬೆಳ್ತಂಗಡಿ: ನಮ್ಮ ಮಗನ ಸಾವಿಗೆ ಕಾರ್ಕಳ ಬಂಗ್ಲೆಗುಡ್ಡೆಯ ಸೌಮ್ಯ ಶೆಟ್ಟಿ ಕಾರಣ ಎಂದು ನಾವು ನೀಡಿರುವ ದೂರಿನ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಸುದೀಪ್ ರೈ ಅವರ ತಂದೆ ದಾಮೋದರ ರೈ ಅವರು ಮಾ.೩೧ರಂದು ಮಂಗಳೂರು ಪ್ರೆಸ್ಕ್ಲಬ್ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಆಗ್ರಹಿಸಿದ್ದಾರೆ. ಫೆ.೧೬ರಂದು ಕಾರ್ಕಳ ಬಂಗ್ಲೆಗುಡ್ಡೆ ನಿವಾಸಿ ಸೌಮ್ಯ ಎಂಬಾಕೆಯ ಜೊತೆ ಮಗ ಸುದೀಪ್ ರೈ ವಿವಾಹ ನೋಂದಣಿ ಮಾಡಿಕೊಂಡಿರುವುದು ಬೇರೆಯವರ ಮೂಲಕ ತಿಳಿದು ಬಂದಿದೆ. ಇದಾದ ಬಳಿಕ ಮಾ.೧೭ರಂದು ನೆಲ್ಯಾಡಿಗೆ ಬಂದಿದ್ದ ಸೌಮ್ಯ ಶೆಟ್ಟಿ ನನ್ನ ಪತ್ನಿ ಮತ್ತು ಮಗ ಸುದೀಪ್ ರೈ ಬೆಳ್ತಂಗಡಿಗೆ ಪ್ರಯಾಣಿಸುತ್ತಿದ್ದ ಕಾರು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಒಡ್ಡಿದ್ದಾಳೆ. ಈ ವೇಳೆ ಸ್ಥಳಕ್ಕೆ ಪೊಲೀಸರೂ ಬಂದಿದ್ದಾರೆ.
ಇದು ಪೇಟೆಯ ಸಿಸಿಟಿವಿಯಲ್ಲೂ ದಾಖಲಾಗಿದೆ. ಮಾ.೧೭ರಂದೇ ಕಾರ್ಕಳಕ್ಕೆ ತೆರಳಿದ್ದ ಸುದೀಪ್ ಶೆಟ್ಟಿಗೆ ಸೌಮ್ಯ ಆಹಾರದಲ್ಲಿ ವಿಷ ನೀಡಿರುವ ಅನುಮಾನ ಇದೆ ಎಂದು ದಾಮೋದರ ರೈ ಆರೋಪಿಸಿದ್ದಾರೆ. ಅಸ್ವಸ್ಥ ಸುದೀಪ್ನನ್ನು ಮಾ.೨೧ರಂದು ಕಾರ್ಕಳದ ಆಸ್ಪತ್ರೆಗೆ ಸೇರಿಸಿ ಈ ಬಗ್ಗೆ ನನ್ನ ಅಕ್ಕನ ಮಗನಿಗೆ ಮಾ.೨೨ರಂದು ಕರೆ ಮಾಡಿ ಮೊಹಿತಿ ನೀಡಿದ್ದಾರೆ. ಅದೇ ದಿನ ನಾವು ಆಸ್ಪತ್ರೆಗೆ ಹೋದಾಗ ಅಲ್ಲಿ ಸೌಮ್ಯ, ಆಕೆಯ ತಂದೆ, ತಾಯಿ, ತಮ್ಮ ಇದ್ದರು. ಸುದೀಪ್ ಜೊತೆ ನಮಗೆ ಮಾತನಾಡಲು ಅವಕಾಶ ನೀಡಲಿಲ್ಲ. ನಮ್ಮ ಮುಂದೆಯೇ ಸುದೀಪ್ನನ್ನು ಅಲ್ಲಿಂದ ಬೇರೆ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದರು. ಅದೇ ದಿನ ರಾತ್ರಿ ಅಕ್ಕನ ಮಗನಿಗೆ ಮತ್ತೆ ಕರೆ ಮಾಡಿ ಸುದೀಪ್ನನ್ನು ಉಡುಪಿ ಅಥವಾ ಮಂಗಳೂರು ದೇರಳಕಟ್ಟೆ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯುವಂತೆ ವೈದ್ಯರು ತಿಳಿಸಿರುವುದಾಗಿ ಮಾಹಿತಿ ನೀಡಿದ್ದರು. ಮರು ದಿನ ಸುದೀಪ್ನ ಮೊಬೈಲ್ಗೆ ಕರೆ ಮಾಡಿದಾಗ ಬೇರೆ ಯಾರೋ ಸ್ವೀಕರಿಸಿದ್ದು ಸುದೀಪ್ನನ್ನು ಉಡುಪಿ ಆದರ್ಶ ಆಸ್ಪತ್ರೆಗೆ ಸೇರಿಸಿರುವುದಾಗಿ ತಿಳಿಸಿದ್ದಾರೆ.
ನಾವು ಅಲ್ಲಿಗೆ ಹೋದಾಗ ಸುದೀಪ್ ಚಿಂತಾಜನಕ ಸ್ಥಿತಿಯಲ್ಲಿ ಇದ್ದ. ವೈದ್ಯರಿಗೆ ರಿಕ್ವೆಸ್ಟ್ ಮಾಡಿದ ಮೇಲೆ ನಮಗೆ ನೋಡಲು ಅವಕಾಶ ಮಾಡಿಕೊಟ್ಟಿದ್ದರು. ಈ ಸಂದರ್ಭದಲ್ಲಿ ಪೊಲೀಸ್ನವರು ಬಂದು ಹೇಳಿಕೆ ಪಡೆದುಕೊಂಡಿದ್ದಾರೆ.
ನಾವು ಹೋದಂತೆ ಸೌಮ್ಯ, ಅವಳ ತಂದೆ ಅಲ್ಲಿಂದ ಪರಾರಿಯಾದರು. ಸುದೀಪ್ನ ಲಿವರ್ಗೆ ಡ್ಯಾಮೇಜ್ ಆಗುತ್ತಿದೆ. ಮಂಗಳೂರಿಗೆ ಕರೊದೊಯ್ಯುವಂತೆ ಅಲ್ಲಿನ ವೈದ್ಯರ ಸೂಚನೆಯಂತೆ ನಾವು ಮಂಗಳೂರು ಯೆನೆಪೊಯ ಆಸ್ಪತ್ರೆಗೆ ಸೇರಿಸಿzವೆ. ಲಿವರ್ ಡ್ಯಾಮೇಜ್ ಆಗಿರುವುದರಿಂದ ಏನೂ ಮಾಡಲು ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದರು. ಚಿಕಿತ್ಸೆ ನೀಡಿದ್ದರೂ ಫಲಕಾರಿಯಾಗದೇ ಮಾ.೨೯ರಂದು ಸುದೀಪ್ ಮೃತಪಟ್ಟಿದ್ದಾನೆ ಎಂದು ದಾಮೋದರ ರೈ ಮಾಹಿತಿ ನೀಡಿದರು.


ಸೌಮ್ಯಳಿಗೆ ಮೊದಲೇ ೨ ವಿವಾಹವಾಗಿದೆ: ಸೌಮ್ಯ ಮೊದಲ ಪತಿಯಿಂದ ಡೈವೋರ್ಸ್ ಪಡೆದು ಇನ್ನೊಬ್ಬರ ಜೊತೆ ವಿವಾಹವಾಗಿ ಅವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾಳೆ. ಆದರೆ ಅವರಿಂದ ಡೈವೋರ್ಸ್ ಆಗಿಲ್ಲ. ಇದೇ ರೀತಿ ಸೌಮ್ಯಳಿಂದ ಹಲವರಿಗೆ ತೊಂದರೆಯಾಗಿದೆ. ಸೌಮ್ಯಳಿಂದ ಇನ್ನು ಯಾರಿಗೂ ಅನ್ಯಾಯ ಆಗಬಾರದು. ಹೋದ ಜೀವ ಮತ್ತೆ ಬರುವುದಿಲ್ಲ. ನಮ್ಮಂತೆ ಯಾರ ತಂದೆ, ತಾಯಿಗೂ ಅನ್ಯಾಯ ಆಗಬಾರದು. ಸೌಮ್ಯಳಿಂದ ಹಿಂಸೆ ಆಗುತ್ತಿರುವ ಬಗ್ಗೆ ಸುದೀಪ್ ನಮಗೆ ಮಾಹಿತಿ ನೀಡಿದ್ದ. ಮಗನ ಮೊಬೈಲ್ ಸೌಮ್ಯ ಶೆಟ್ಟಿಯ ಬಳಿಯೇ ಇದೆ.
ಸುದೀಪ್ ಜೊತೆ ವಿವಾಹದ ವೇಳೆ, ಮೊದಲೇ ತನಗೆ ಮದುವೆ ಆಗಿರುವ ಬಗ್ಗೆ ಸಬ್ ರಿಜಿಸ್ಟ್ರಾರ್ ಕಚೇರಿಗೂ ಆಕೆ ಮಾಹಿತಿ ನೀಡಿಲ್ಲ. ಸುದೀಪ್ ಕೋಮಾ ಸ್ಥಿತಿಯಲ್ಲಿದ್ದ ವೇಳೆಯಲ್ಲಿ ಯಾರ್ಯಾರಿಗೋ ಏನೋನೋ ಮೇಸೆಜ್ ಮಾಡಿದ್ದಾಳೆ. ಆದ್ದರಿಂದ ಈ ಪ್ರಕರಣವನ್ನು ಸಾಮಾನ್ಯ ಪ್ರಕರಣವೆಂದು ಪರಿಗಣಿಸದೆ, ಸಂಪೂರ್ಣ ಸತ್ಯಾಂಶ ಬಹಿರಂಗವಾಗುವಂತೆ ಉನ್ನತ ಮಟ್ಟದ, ನಿಷ್ಪಕ್ಷಪಾತ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಸುದೀಪ್ ರೈಗೆ ನ್ಯಾಯ ಒದಗಿಸಬೇಕು ಎಂದು ದಾಮೋದರ ರೈ ಒತ್ತಾಯಿಸಿದ್ದಾರೆ.
ಸೌಮ್ಯಳಿಂದ ಮಾನಸಿಕ ಕಿರುಕುಳ: ವೇಣುಗೋಪಾಲ್ ಎಂಬವರು ಮಾತನಾಡಿ, ಸೌಮ್ಯಳಿಂದ ಮಾನಸಿಕ ಕಿರುಕುಳವನ್ನು ನಾನೂ ಅನುಭವಿಸಿದ್ದೇನೆ. ಇದೇ ಕಾರಣದಿಂದ ಸೌಮ್ಯಳ ಜೊತೆಗಿನ ವಿವಾಹ ಮಾತುಕತೆ ಹಂತದಲ್ಲೇ ಮುರಿದು ಬಿದ್ದಿತ್ತು. ಆಕೆಯ ಕಿರುಕುಳದಿಂದ ತಪ್ಪಿಸಿಕೊಳ್ಳಲು ನಾನು ಮುಂಬೈಗೆ ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ನಮ್ಮ ಸಂಬಂಧ ಮುಂದುವರಿದಿದ್ದರೆ ಸುದೀಪ್ಗೆ ಆದ ಸ್ಥಿತಿ ನನ್ನದಾಗಿರುತ್ತಿತ್ತು ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮೃತ ಸುದೀಪ್ ತಾಯಿ ಉಪಸ್ಥಿತರಿದ್ದರು.









