







ಬೆಳ್ತಂಗಡಿ: ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದ ವೇಳೆ ಶಿಳ್ಳೆ ಹಾಕಿದ ಪ್ರೇಕ್ಷಕನನ್ನು ಖ್ಯಾತ ಯಕ್ಷಗಾನ ಕಲಾವಿದ ಉಜಿರೆ ಅಶೋಕ್ ಭಟ್ ತರಾಟೆಗೆತ್ತಿಕೊಂಡ ಘಟನೆ ಭಾರೀ ಚರ್ಚೆಗೆ ಗ್ರಾಸ ಒದಗಿಸಿದೆ.
ಅಶೋಕ್ ಭಟ್ ಪ್ರೇಕ್ಷಕನನ್ನು ಗದರಿಸುವ ವೇಳೆ ತುಳುನಾಡಿನ ಪ್ರಾಚೀನ ಕಲೆಯಾದ ಕೋಳಿ ಅಂಕ ಮತ್ತು ಕಂಬಳ ಕೂಟವನ್ನು ಅಪಮಾನಿಸಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ.
ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರವಲ್ಲದೆ ವಿವಿಧೆಡೆ ಪರ-ವಿರೋಧ ಚರ್ಚೆಗೆ ಕಾರಣವಾಗಿದೆ. ಜತೆಗೆ ಯಕ್ಷಗಾನದ ವೇದಿಕೆಗಳಲ್ಲಿಯೂ ಅಶೋಕ್ ಭಟ್ ಅವರ ಹೇಳಿಕೆಗೆ ಟಾಂಗ್ ನೀಡಲಾಗುತ್ತಿದೆ. ಈ ಮಧ್ಯೆ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ ಅಶೋಕ್ ಭಟ್ ತಮ್ಮ ಹೇಳಿಕೆ ಕುರಿತು ವಿಷಾದ ವ್ಯಕ್ತಪಡಿಸಿದರೂ ಅವರನ್ನು ಟ್ರೋಲ್ ಮಾಡುವುದು ಮುಂದುವರಿಯುತ್ತಿದೆ. ಅಲ್ಲದೇ ಈ ವಿಚಾರ ರಾಜ್ಯಮಟ್ಟದ ಪತ್ರಿಕೆ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಸುದ್ದಿಯಾಗಿದೆ.
ಪ್ರೇಕ್ಷಕನನ್ನು ತರಾಟೆಗೆತ್ತಿಕೊಂಡ ಅಶೋಕ್ ಭಟ್: ಮಾ. ೨೫ರಂದು ರಾತ್ರಿ ಧರ್ಮಸ್ಥಳ ಮೇಳದ ಯಕ್ಷಗಾನ ಕುಂದಾಪುರದ ಹೆನ್ನಬೈಲು ಬಕ್ರಮನೆ ಎಂಬಲ್ಲಿ ನಡೆದಿತ್ತು. ಶ್ರೀಕೃಷ್ಣ ಪಾರಿಜಾತ-ನರಕಾಸುರ ಮೋಕ್ಷ ಪ್ರಸಂಗದಲ್ಲಿ ಭಾಗವತರು ಪದ್ಯ ಹೇಳಿದ ಬಳಿಕ ಪ್ರೇಕ್ಷಕ ವಲಯದಿಂದ ಶಿಳ್ಳೆ ಕೇಳಿ ಬಂದಿತ್ತು. ಈ ವೇಳೆ ಕೋಪಗೊಂಡ ಶ್ರೀಕೃಷ್ಣ ಪಾತ್ರಧಾರಿ ಉಜಿರೆ ಅಶೋಕ್ ಭಟ್ ಶಿಳ್ಳೆ ಹಾಕಿದ ಪ್ರೇಕ್ಷಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಭಾಗವತರು ತನ್ನ ಹಾಡು ನಿಲ್ಲಿಸುತ್ತಿದ್ದಂತೆಯೇ ಕೃಷ್ಣ ಪಾತ್ರಧಾರಿಯ ಸಂಭಾಷಣೆ ಹೇಳಬೇಕಿದ್ದ ಅಶೋಕ್ ಭಟ್ ಅವರು ಪ್ರೇಕ್ಷಕನನ್ನು ತರಾಟೆಗೆತ್ತಿಕೊಂಡಿದ್ದಾರೆ. ಯಕ್ಷಗಾನ ಮತ್ತು ತಾಳಮದ್ದಲೆಗಳಲ್ಲಿ ಆರ್ಭಟಿಸುವ ಅಶೋಕ್ ಭಟ್ ಅವರು ಪ್ರೇಕ್ಷಕನ ಶಿಳ್ಳೆಯಿಂದ ಕಿರಿಕಿರಿಗೆ ಒಳಗಾಗಿ ಆತನನ್ನು ತರಾಟೆಗೆತ್ತಿಕೊಳ್ಳಲಾರಂಭಿಸಿದ್ದಾರೆ. ಅಶೋಕ್ ಭಟ್ ಅವರ ತೀಕ್ಷ್ಣ ಮಾತುಗಳನ್ನು ಕೇಳಿದ ಪ್ರೇಕ್ಷಕ ಮೌನಕ್ಕೆ ಶರಣಾಗಿದ್ದಾನೆ. ಬಳಿಕ ಭಟ್ರು ಶ್ರೀಕೃಷ್ಣನ ಪಾತ್ರಧಾರಿಯಾಗಿ ತನ್ನ ಮಾತು ಮುಂದುವರಿಸಿದ್ದಾರೆ.
ಸ್ಪಷ್ಟನೆ ನೀಡಿದರೂ ಅಶೋಕ್ ಭಟ್ ಟ್ರೋಲ್: ವಿವಾದದ ಆರಂಭದಲ್ಲಿ ಮುದ್ರಣ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ಉಜಿರೆ ಅಶೋಕ್ ಭಟ್ ಅವರು ಹೈಸ್ಕೂಲ್ ವಿದ್ಯಾರ್ಥಿಗಳಂತೆ ಕಾಣಿಸುವ ಸುಮಾರು ಹತ್ತು ಮಂದಿ ಹುಡುಗರ ತಂಡ ಯಕ್ಷಗಾನ ಶುರು ಆದಾಗಿನಿಂದಲೇ ಅಂಗಡಿಯಲ್ಲಿ ಸಿಗುವ ಬಿಗಿಲು ಊದುತ್ತಿತ್ತು. ಆ ಶಬ್ದ ಕಿರಿಕಿರಿ ಉಂಟು ಮಾಡುತ್ತಿತ್ತು. ಕಲಾವಿದರು ಸಹಿಸಿಕೊಂಡಿದ್ದರು. ಅತಿ ಎನಿಸಿದಾಗ ನಾನು ಪ್ರೇಕ್ಷಕ ಹೇಗೆ ಇರಬೇಕೆಂದು ಬುದ್ಧಿ ಹೇಳಿದ್ದೇನೆ. ನಾನು ಮಾತ್ರ ಅಲ್ಲ. ಅಲ್ಲಿದ್ದ ಇತರ ಪ್ರೇಕ್ಷಕರೂ ಅವರಿಗೆ ಬೈದಿದ್ದರು. ಪ್ರೇಕ್ಷಕನಿಗೆ ಕಲಾವಿದನ ಅಭಿನಯ ಖುಷಿ ಆದಲ್ಲಿ ಆತ ನಿರ್ಗಮಿಸುವ ವೇಳೆ ಚಪ್ಪಾಳೆ ತಟ್ಟಬೇಕು. ವೇದಿಕೆಯಲ್ಲಿ ಇರುವಾಗ, ವೇದಿಕೆ ಏರುವಾಗ ಅದು ಸಮಂಜಸ ಅಲ್ಲ. ಹಿಂದೆ ಶೇಣಿ ಗೋಪಾಲಕೃಷ್ಣ ಭಟ್ ಹಾಗೂ ಇತರ ಹಿರಿಯ ಕಲಾವಿದರು ಇಂತಹ ವರ್ತನೆ ವಿರುದ್ಧ ರಂಗಸ್ಥಳದಲ್ಲೇ ಪ್ರೇಕ್ಷಕರನ್ನು ತರಾಟೆಗೆ ತೆಗೆದುಕೊಂಡಿದ್ದರು ಎಂದು ಹೇಳಿದ್ದರು.
ಅಲ್ಲದೆ ಟಿ.ವಿ. ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಉಜಿರೆ ಅಶೋಕ್ ಭಟ್ ಅವರು ೭.೪೫ ಗಂಟೆಗೆ ಪ್ರದರ್ಶನ ಆರಂಭಗೊಂಡಿದೆ. ೭.೪೫ ತೊಡಗಿ ನನ್ನ ಪಾತ್ರ ಹೋದದ್ದು ೧೦.೩೦ ಗಂಟೆಗೆ. ಏಳನೇ ತರಗತಿಯಿಂದ ೯ನೇ ತರಗತಿ ಮಧ್ಯ ವಯಸ್ಸಿನ ಮಕ್ಕಳು ೧೨ರಿಂದ ೧೫ ವರ್ಷ ಇರಬಹುದು. ಒಂದು ಹತ್ತು ಜನ ಸಂತೆಯಲ್ಲಿ ಸಿಗುವ ಪಿಪಿ ಹಿಡಿದುಕೊಂಡು ಊದುವುದು. ಇದು ೭.೪೫ಕ್ಕೆ ಶುರು ಆಗಿದೆ. ನಮ್ಮಲ್ಲಿರುವ ಎಲ್ಲಾ ಕಲಾವಿದರು ಚೌಕಿಗೆ ಬಂದು ಬಾರೀ ರಗಳೆ ಮಾರ್ರೆ ಅವರನ್ನು ಯಾರೂ ಕೇಳುವುದಿಲ್ಲ. ಭಾಗವತರಿಗೆ ಹಾಡಲು ಕೂಡ ರಗಳೆ ಆಗುತ್ತದೆ. ಯಾವುದೇ ಒಂದು ಸಂತೋಷವನ್ನು ಕಲೆಯನ್ನು ವ್ಯಕ್ತ ಪಡಿಸಲು ಕಲೆಯನ್ನು ನೋಡಿದ ಮೇಲೆ, ತೊಡಗುವಾಗಲೇ ಪಿಪಿ ಮಾಡಿದ್ದಾರೆ. ನಮಗೆ ಸಹಿಸಲು ಆಗಲಿಲ್ಲ. ಆವಾಗ ನಾವು ಬೆವರಿ, ವೇಷ ಕಟ್ಟಿ ಆಯಾಸದಲ್ಲಿ ಇರುತ್ತೇವೆ. ನಾವು ಮನುಷ್ಯರು ನಾವು ದೇವರು ಅಲ್ಲ ನನ್ನ ಧ್ವನಿ ಏರಿದ್ದು ಇರಬಹುದು. ಆ ಮಕ್ಕಳನ್ನು ಉದ್ದೇಶಿಸಿ ಹೇಳಿದ್ದೇನೆ.


ಅಲ್ಲಿ ಅನೇಕ ಹಿರಿಯರು ಎದುರು ನಿಂತವರು ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲಿಂದ ಮಕ್ಕಳನ್ನು ಎಬ್ಬಿಸಿದರು. ಸಾರ್ವಜನಿಕವಾಗಿ ಪ್ರೇಕ್ಷಕರಿಗೆ ಹೇಳಿದ್ದು ಅಲ್ಲ. ಆ ಸಂದರ್ಭ ಮಾತುಗಳಲ್ಲಿ ಕೋಳಿ ಅಂಕ ಮತ್ತು ಕಂಬಳ ಸುದ್ದಿ ಬಂತು. ಅದು ಯಾಕೆ ಬಂತು ಅಂದರೆ ಇಲ್ಲಿ ಎಲ್ಲಾ ಕ್ರೀಡೆಯ ಪ್ರೋತ್ಸಾಹಕ್ಕಾಗಿ ಸಿಳ್ಳೆ, ಚಪ್ಪಾಳೆ ಹಾಕುವುದು. ಕೋಣವನ್ನು ಓಡಿಸುವಾಗ, ಕ್ರೀಡೆಗಳಿಗೆ ಪ್ರೋತ್ಸಾಹ ಕೊಡುವಂತಹ ಎಂಬ ಅರ್ಥದಲ್ಲಿ ಹೇಳಿದ್ದು ಬಿಟ್ಟರೆ ಜನಪದ ಕ್ರೀಡೆಗಳನ್ನು ಗೌನ ಮಾಡುವ ವಿಷಯದಲ್ಲಿ ಅಲ್ಲ. ಯಾರು ಕೂಡ ಅನ್ಯತಾ ಭಾವಿಸಬೇಡಿ ಎಂದು ಹೇಳಿದ್ದಾರೆ. ಅಶೋಕ್ ಭಟ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ವಿವಾದವನ್ನು ತಣ್ಣಗಾಗಿಸುವ ಪ್ರಯತ್ನ ನಡೆಸಿದರೂ ಅವರನ್ನು ಮತ್ತಷ್ಟು ಟೀಕಿಸಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅವರನ್ನು ಟ್ರೋಲ್ ಮಾಡಲಾಗುತ್ತಿದೆ. ಯಕ್ಷಗಾನ ವೇದಿಕೆಗಳಲ್ಲಿ ಹಲವು ಯಕ್ಷಗಾನ ಕಲಾವಿದರು ಅಶೋಕ್ ಭಟ್ ಅವರ ಹೇಳಿಕೆಗಳನ್ನು ವಿರೋಧಿಸುತ್ತಿದ್ದಾರೆ. ಶಿಳ್ಳೆ, ಚಪ್ಪಾಳೆಗಳಿಂದಲೇ ಕಲಾವಿದರು ಬೆಳೆಯಲು ಸಾಧ್ಯ ಎಂದು ಇತರ ಯಕ್ಷಗಾನ ಕಲಾವಿದರು ವೇದಿಕೆಗಳಲ್ಲಿ ತಮ್ಮ ಅಭಿನಯದ ಮಧ್ಯೆ ಸಂಭಾಷಣೆ ಮಾಡುತ್ತಿದ್ದಾರೆ.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ್ ಶೆಟ್ಟಿ, ಕಂಬಳ ಅಸೋಸಿಯೇಶನ್ ರಾಜ್ಯಾಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ ಸಹಿತ ಹಲವು ಪ್ರಮುಖರೂ ಅಶೋಕ್ ಭಟ್ ಅವರ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಉಪ್ಪಿನಂಗಡಿ ಕಂಬಳದಲ್ಲಿ ತರಾಟೆಗೆತ್ತಿಕೊಂಡ ಎಡ್ತೂರು ರಾಜೀವ ಶೆಟ್ಟಿ
ಮಾ. ೨೮ರಂದು ಉಪ್ಪಿನಂಗಡಿಯ ಹಳೆಗೇಟು ಬಳಿ ನಡೆದ ೪೦ನೇ ವರ್ಷದ ವಿಜಯ-ವಿಕ್ರಮ ಜೋಡುಕರೆ ಕಂಬಳದಲ್ಲಿ ಹಿರಿಯ ವೀಕ್ಷಕ ವಿವರಣೆಗಾರ ಎಡ್ತೂರು ರಾಜೀವ ಶೆಟ್ಟಿ ಅವರರು ಉಜಿರೆ ಅಶೋಕ್ ಭಟ್ ಅವರನ್ನು ತರಾಟೆಗೆತ್ತಿಕೊಂಡಿದ್ದಾರೆ. `ಉಜಿರೆ ಅಶೋಕ್ ಭಟ್ರವರು ಯಕ್ಷಗಾನ ತಾಳಮದ್ದಳೆಯಲ್ಲಿ ಒಳ್ಳೆಯದನ್ನು ಮಾತನಾಡುತ್ತಾರೆ. ಒಂದು ವೇಷಧಾರಿಯಾಗಿ ಸಿಳ್ಳೆ ಹೊಡೆದದ್ದು ಯಾರು, ಚಪ್ಪಾಳೆ ಹೊಡೆದದ್ದು ಯಾರು, ಇದೆಂತ ಕೋಳಿ ಕಟ್ಟವಾ, ಕಂಬಳವಾ ಎಂದು ಉಜಿರೆ ಅಶೋಕ್ ಭಟ್ ಹೇಳಿದ್ದಾರೆ ಎಂದು ಕಂಬಳದಲ್ಲಿ ಹೇಳಿದ ರಾಜೀವ ಶೆಟ್ಟಿ ಅವರು ಉಜಿರೆಯ ಆಶೋಕ್ ಭಟ್ರೇ… ನೀವು ಯಕ್ಷಗಾನದಲ್ಲಿ ಮಲ್ಲ ಜನ. ಕಂಬಳದ ಕಥೆ ಗೊತ್ತುಜಿ..ನೀವು ವೀಡಿಯೋ ನೋಡುತ್ತಿದ್ದರೆ ಅರ್ಥ ಮಾಡಿಕೊಳ್ಳಿ… ರೆಕಾರ್ಡ್ ಮಾಡಿ ಅಶೋಕ್ ಭಟ್ಗೆ ಯಾರಾದರೂ ಕಳುಹಿಸಿ. ನಿಮ್ಮ ಯಕ್ಷಗಾನಕ್ಕೆ ಎಷ್ಟು ಗೌರವ ಇದೆಯಾ ಕಂಬಳಕ್ಕೆ ಕೂಡ ಅಷ್ಟೇ ಗೌರವ ಇದೆ. ಕರಾವಳಿ ಜಿಲ್ಲೆಯ ಪ್ರತಿಷ್ಠಿತ ಎರಡು ವ್ಯವಸ್ಥೆಗಳು ಯಾವುದೆಂದರೆ ಒಂದು ಯಕ್ಷಗಾನ. ಇನ್ನೊಂದು ಕಂಬಳ. ನೀವು ವೇಷ ಹಾಕಿ ಇದು ಏನು ಕಂಬಳವಾ ಎಂದು ಕೇಳಿದ್ದೀರಿ ಅಲ್ವ. ನಿಮಗೆ ಯಾಕೆ ಇಷ್ಟು ತಾತ್ಸಾರ. ಒಂದು ವ್ಯವಸ್ಥೆಯನ್ನು ಒಟ್ಟಾರೆಯಾಗಿ ದೂರಬಾರದು. ಉಪ್ಪಿನಂಗಡಿ ಕಂಬಳದ ಅಧ್ಯಕ್ಷ ಆಶೋಕ್ ರೈ ಅವರು ಒಂದು ಎಂ.ಎಲ್.ಎ ಆಗಿ ಎಫ್.ಐ.ಆರ್ ಹಾಕಿಕೊಂಡು ಜೂಜು ರಹಿತ ಕೋಳಿ ಅಂಕ ಯಾವತ್ತು ಆಗಬೇಕು ಎಂದು ಪ್ರತಿಪಾದನೆ ಮಾಡಿದವರು. ಅಶೋಕ್ ಭಟ್ ಅವರು ಯಕ್ಷಗಾನ ವೇಷ ಹಾಕಿ ಮಾತನಾಡುವುದು ಸರಿಯಾ.. ವೇಷಕ್ಕೆ ಮಾನ ಮರ್ಯಾದೆ ಇಲ್ವಾ.. ಅಲ್ಲಿ ಕುಳಿತುಕೊಂಡು ಎಂಥ ಸಿಳ್ಳೆ ಹೊಡೆಯುವುದು ಎಂಥ ಕಂಬಳವ, ಕೋಳಿ ಕಟ್ಟವ.. ಶ್ರೀ ಕೃಷ್ಣ ಪಾತ್ರಧಾರಿಯಾಗಿ ಮಾತನಾಡಿದ್ದು ಅದನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ. ಕಂಬಳ ಕೂಟದ ಮಧ್ಯೆ ಸುದ್ದಿ ನ್ಯೂಸ್ ಚಾನೆಲ್ನವರು ಸಂದರ್ಶನ ನಡೆಸಿದ ವೇಳೆಯೂ ಎಡ್ತೂರು ರಾಜೀವ ಶೆಟ್ಟಿ ಅವರು ಯಕ್ಷಗಾನ ಕಲಾವಿದ ಉಜಿರೆ ಅಶೋಕ್ ಭಟ್ ಅವರ ಹೇಳಿಕೆಯನ್ನು ಖಂಡಿಸಿದ್ದಾರೆ.
ವೇದಿಕೆಯಲ್ಲಿ ಅಶೋಕ್ ಭಟ್ ಹೇಳಿದ್ದೇನು? ಶಿಳ್ಳೆ ಊದುತ್ತಿದ್ದ ಪ್ರೇಕ್ಷಕನನ್ನು ತರಾಟೆಗೆತ್ತಿಕೊಳ್ಳುವ ವೇಳೆ ಉಜಿರೆ ಅಶೋಕ್ ಭಟ್ ಅವರು `ನೀವು ಶಿಳ್ಳೆ ನಿಲ್ಲಿಸದಿದ್ದರೆ ನಾನು ಹೋಗ್ತೇನೆ. ದೊಂಬರಾಟ ಅಲ್ಲ ಇದು. ನಾನು ಆಗಿನಿಂದ ಚೌಕಿಯಲ್ಲಿದ್ದುಕೊಂಡು ಗಮನಿಸುತ್ತಿದ್ದೇನೆ. ಸಭ್ಯ ಸಭೆಯನ್ನು ಬಯಸುತ್ತೇನೆ. ನನಗೆ ದಾಕ್ಷಿಣ್ಯ ಯಾರದ್ದೂ ಇಲ್ಲ. ಇಲ್ಲಿ ಯಾಕೆ ಕುಣಿಯುತ್ತಿದ್ದೇವೆ ಗೊತ್ತುಂಟಾ ನಿಮಗೆ. ಯಾರು ಆಟ ಆಡಿಸುವವರು? ಏನೆಂದು ಯೋಚನೆ ಮಾಡಿದ್ದೀರಿ ನೀವು? ಈ ಕ್ಷೇತ್ರದಲ್ಲಿ ನಮ್ಮ ತಿರುಗಾಟ ಎಷ್ಟು ಗೊತ್ತಿದೆಯಾ ನಿಮಗೆ? ಏನದು ಶಿಳ್ಳೆ? ಕೋಳಿ ಕಟ್ಟವಾ ಅಲ್ಲ ಕಂಬಳವಾ? ಯಾರದು? ಏನು ಆಲೋಚನೆ ಮಾಡಿದ್ದೀರಿ ನೀವು. ಯಾರದು ಶಿಳ್ಳೆ ಹಾಕಿದವ? ಆಗದಿದ್ದರೆ ಬನ್ಸ್ ತಿಂದು ಹೋಗಿ. ಭಾಗವತರ ಕಂಠ ಹಾಳು ಮಾಡುತ್ತೀರಾ? ಸಭ್ಯ ಸಭೆ ಅರ್ಥ ಮಾಡಿಕೊಳ್ಳಬೇಕು. ಹುಚ್ಚರನ್ನು ಬೆಳೆಸಬೇಡಿ. ಕಲಾ ಪ್ರೇಕ್ಷಕರನ್ನು ಬೆಳೆಸಿ. ನಾವು ಕೆಲಸ ಇಲ್ಲದ್ದಕ್ಕೆ ಇಲ್ಲಿ ಬಂದು ಬೆವರು ಹರಿಸಿ ಕುಣಿಯುವುದಲ್ಲ. ಅವರಿಗೆ ವಿಸಿಲ್, ದುಡ್ಡು ಕೊಟ್ಟವರು ಯಾರು? ಧಾರ್ಮಿಕ ಭಾಷಣ ಮಾಡಬೇಕೋ ಒಂದು ಗಂಟೆ ಅಥವಾ ಯಕ್ಷಗಾನ ಮಾಡಬೇಕೋ? ಏನು ಹೇಳುತ್ತೀರಿ ಹಿರಿಯರೇ? ಆಲೋಚನೆ ಮಾಡಿ’ ಎಂದು ಹೇಳಿದ್ದರು. ಈ ಹೇಳಿಕೆ ವಿವಾದದ ಸ್ವರೂಪ ಪಡೆದಿದೆ.









