









ಬೆಳ್ತಂಗಡಿ: ಗುರುವಾಯನಕೆರೆಯ ಇನ್ಫಿನಿಟಿ ಲನಿಂಗ್ ಫೌಂಡೇಶನ್‌ನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಮತ್ತು ಮೂವರು ಸದಸ್ಯರಿಗೆ ಮಂಗಳೂರಿನ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಶಿಕ್ಷಣ ಇಲಾಖೆಗೆ ಕಟ್ಟಡದ ಬೆಂಕಿ ಸುರಕ್ಷತಾ ಪ್ರಮಾಣ ಪತ್ರವನ್ನು ನಕಲಿಯಾಗಿ ಸೃಷ್ಟಿಸಿ ಸಲ್ಲಿಸಿದ ಆರೋಪದಡಿ ಡಿಡಿಪಿಐ ಶಶಿಧರ ಜಿ.ಎಸ್.ಅವರು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರಿನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಸುಮಂತ್ ಕುಮಾರ್ ಜೈನ್ ಮತ್ತಿತರರು ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶ ವಿ.ಎನ್. ಜಗದೀಶ್ ಅವರು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದಾರೆ. ಫೌಂಡೇಶನ್ ಅಧ್ಯಕ್ಷ ಬಿ. ಸುಮಂತ್ ಕುಮಾರ್ ಜೈನ್ ಮತ್ತು ಸದಸ್ಯರಾದ ಬಿ. ಸಹನಾ ಜೈನ್, ಸತೀಶ್ ಕುಮಾರ್ ಜೈನ್ ಹಾಗೂ ಶುಭಲತಾ ಅವರಿಗೆ ಜಾಮೀನು ಮಂಜೂರು ಮಾಡಲಾಗಿದ್ದು ಒಂದು ವೇಳೆ ಇವರು ಬಂಧನಕ್ಕೊಳಗಾದರೆ ತಲಾ ೫೦ ಸಾವಿರ ರೂಪಾಯಿಗಳ ವೈಯಕ್ತಿಕ ಬಾಂಡ್ ಪಡೆಯುವ ಮೂಲಕ ಬಿಡುಗಡೆ ಮಾಡಬೇಕು ಎಂದು ನ್ಯಾಯಾಧೀಶರು ಪೊಲೀಸರಿಗೆ ಸೂಚಿಸಿದ್ದಾರೆ.
ಅಲ್ಲದೆ ತನಿಖಾಧಿಕಾರಿಯೊಂದಿಗೆ ಆರೋಪಿಗಳು ಸಹಕರಿಸಬೇಕು, ಸಾಕ್ಷಿ ನಾಶಪಡಿಸಬಾರದು ಎಂದು ಷರತ್ತು ವಿಧಿಸಲಾಗಿದೆ.








