







ಬೆಳ್ತಂಗಡಿ: ಜ.೧೪ರಂದು ಸಂಶಯಾಸ್ಪದವಾಗಿ ಸಾವಿಗೀಡಾಗಿರುವ ಗೇರುಕಟ್ಟೆ ಸಮೀಪದ ಸಂಭೋಳ್ಯದ ಸುಮಂತ್ ಅವರ ಸಹೋದರ ಸುದರ್ಶನ್ ಅವರ ಕುರಿತು ಸುಳ್ಳು ಮಾಹಿತಿ ಸೃಷ್ಟಿಸಿ ವೀಡಿಯೋ ಪ್ರಸಾರ ಮಾಡಿದ ಆರೋಪದಡಿ ಹಿರಿಯ ಪತ್ರಕರ್ತ ಮೋಹನ್ ಬೋಳಂಗಡಿ ಮತ್ತು ಧರ್ಮ ಸಂಘರ್ಷ ಯೂ ಟ್ಯೂಬ್ ಚಾನೆಲ್ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಫೆ.೧೫ರಂದು ದಾಖಲಾಗಿದ್ದ ಕೇಸ್ಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಸುಮಂತ್ ಅವರ ಅನುಮಾನಾಸ್ಪದ ಸಾವಿನ ನಂತರ ಅವರ ಸಹೋದರ ಸುದರ್ಶನ್ ಅವರ ಬಗ್ಗೆ ಮೋಹನ್ ಬೋಳಂಗಡಿಯವರು ಧರ್ಮ ಸಂಘರ್ಷ ಯೂ ಟ್ಯೂಬ್ ಚಾನೆಲ್ನಲ್ಲಿ ಫೆ.೪ರಂದು ವರದಿ ಪ್ರಸಾರ ಮಾಡಿ ಸುದರ್ಶನ್ ಅವರಿಗೂ ಒಬ್ಬ ಹೆಣ್ಣಿಗೂ ಸಂಬಂಧ ಇದೆ.


ರಾತ್ರಿ ೨.೩೦ರ ತನಕ ವೀಡಿಯೋ ಕಾಲ್ನಲ್ಲಿ ಮಾತನಾಡಿದ್ದನ್ನು ತನ್ನ ಜತೆ ಮಲಗಿದ್ದ ತಮ್ಮ ನೋಡಿದ ಕಾರಣ ಈ ವಿಚಾರ ಮನೆಯವರಿಗೆ ತಿಳಿಸುವ ಭಯದಿಂದ ತನ್ನ ತಮ್ಮ ಸುಮಂತ್ನನ್ನು ಕೊಲೆ ಮಾಡಿರಬಹುದು ಎಂದು ಪ್ರಸಾರ ಮಾಡಿದ್ದರು. ಇದರ ವಿರುದ್ಧ ಸುದರ್ಶನ್ ಬೆಳ್ತಂಗಡಿ ಠಾಣೆಯಲ್ಲಿ ದೂರು ನೀಡಿದ್ದರು. ಪೊಲೀಸರು ಅಪರಾಧ ಕ್ರಮಾಂಕ ೧೬/೨೦೨೬ರಂತೆ ಬಿಎನ್ಎಸ್ ೩೫೩(೨)ರಡಿ ಪತ್ರಕರ್ತ ಮೋಹನ್ ಬೋಳಂಗಡಿ ಮಂಗಳೂರು ಮತ್ತು ಧರ್ಮ ಸಂಘರ್ಷ ಯೂಟ್ಯೂಬ್ ಚಾನೆಲ್ ವಿರುದ್ಧ ಪ್ರಕರಣ ದಾಖಲಿಸಿದ್ದರು. ಇದನ್ನು ಪ್ರಶ್ನಿಸಿ ಮೋಹನ್ ಬೋಳಂಗಡಿ ಹೈಕೋರ್ಟ್ ಮೊರೆ ಹೋಗಿದ್ದರು. ಮೋಹನ್ ಬೋಳಂಗಡಿಯವರ ಅರ್ಜಿ ಪುರಸ್ಕರಿಸಿದ ಹೈಕೋರ್ಟ್ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ. ಮೋಹನ್ ಬೋಳಂಗಡಿ ಪರ ಹೈಕೋರ್ಟ್ ವಕೀಲ ರಕ್ಷಿತ್ ಜೈನ್ ನಾರಾವಿ ವಾದ ಮಂಡಿಸಿದ್ದರು.








