







ಬೆಳ್ತಂಗಡಿ: ಈ ಹಿಂದೆ ಬೆಳ್ತಂಗಡಿಯಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ಆಗಿದ್ದು ಪ್ರಸ್ತುತ ಮೂಡುಬಿದಿರೆ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಆಗಿದ್ದ ಸಂದೇಶ್ ಪಿ.ಜಿ. ಅವರ ವಿರುದ್ಧ ಮುಖ್ಯ ಶಿಕ್ಷಕಿಯೋರ್ವರನ್ನು ಅತ್ಯಾಚಾರ ಮಾಡಿದ ಆರೋಪದಡಿ ವೇಣೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕೇಸ್‌ನ ಕಡತ ಸಿಐಡಿಗೆ ಹಸ್ತಾಂತರಗೊಂಡಿದೆ. ಮಾ. ೨೫ರಂದು ವೇಣೂರು ಪೊಲೀಸ್ ಠಾಣೆಯಿಂದ ಕಡತ ಪಡೆದುಕೊಂಡ ಬಳಿಕ ತನಿಖೆ ಚುರುಕುಗೊಳಿಸಿರುವ ಸಿಐಡಿ ಅಧಿಕಾರಿಗಳು ಮಾ. ೩೧ರಂದು ನಾರಾವಿಯ ಪ್ರವಾಸಿ ಮಂದಿರಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ಎಪ್ರಿಲ್ ೧ರಂದು ವೇಣೂರು ಪೊಲೀಸ್ ಠಾಣೆಗೆ ಆಗಮಿಸಿದ ಅಧಿಕಾರಿಗಳು ತನಿಖೆ ತೀವ್ರಗೊಳಿಸಿದ್ದಾರೆ. ಇನ್ಸ್‌ಪೆಕ್ಟರ್ ಸಂದೇಶ್ ಅವರ ವಿರುದ್ಧ ಆರೋಪ ಹೊರಿಸಿರುವ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಬಡಗಕಾರಂದೂರು ನಿವಾಸಿಯಾಗಿದ್ದು ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಮುಖ್ಯ ಶಿಕ್ಷಕಿಯಾಗಿರುವ ೪೩ ವರ್ಷ ಪ್ರಾಯದ ಮಹಿಳೆಯಿಂದಲೂ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದ್ದಾರೆ.
ಸಿಐಡಿ ತನಿಖೆ ಚುರುಕು: ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ಆಗಿದ್ದ ವೇಳೆ ಸಂದೇಶ್ ಪಿ.ಜಿ. ಅವರು ಬಲವಂತವಾಗಿ ಲೈಂಗಿಕ ಸಂಪರ್ಕ ಮಾಡಿದ್ದಾರೆ. ವಿರೋಧ ವ್ಯಕ್ತಪಡಿಸಿದಾಗ ಬೆದರಿಕೆ ಒಡ್ಡಿದ್ದಾರೆ ಮತ್ತು ಸಂತ್ರಸ್ತ ಮಹಿಳೆಯಿಂದ ಒಟ್ಟು ೧೬.೬೨ ಲಕ್ಷ ರೂ. ಹಣ ಪಡೆದು ವಂಚಿಸಿದ್ದಾರೆ ಎಂದು ವೇಣೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿತ್ತು. ಸಂದೇಶ್ ಅವರೊಂದಿಗೆ ಅವರ ಖಾಸಗಿ ಕಾರು ಚಾಲಕ ಅಕ್ಬರ್, ಪರಿಚಯದ ಸ್ಮಿತಾ ಹಾಗೂ ಸುನೀತಾ ಲೋಬೋ ಅವರನ್ನೂ ಆರೋಪಿಗಳು ಎಂದು ಹೆಸರಿಸಲಾಗಿತ್ತು. ಸಂದೇಶ್ ಪಿ.ಜಿ. ಅವರು ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ಆಗಿದ್ದ ವೇಳೆ ಸಂತ್ರಸ್ತ ಮಹಿಳೆ ಹಾಗೂ ಆಕೆಯ ತಂಗಿಗೆ ಜಾಗದ ವಿಚಾರದಲ್ಲಿ ತರಕಾರು ಇತ್ತು. ಸಂತ್ರಸ್ತ ಮಹಿಳೆ, ಆಕೆಯ ಗಂಡ ಹಾಗೂ ಇತರರ ವಿರುದ್ಧ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದ ತನಿಖಾಧಿಕಾರಿಯಾಗಿದ್ದ ಸಂದೇಶ್ ಅವರು ೨೦೧೮ರಿಂದ ೨೦೨೩ರ ನಡುವೆ ಮಹಿಳೆಯ ಮನೆಗೆ ಬಂದು ಹೋಗುತ್ತಿದ್ದರು. ಆಗ ಮಹಿಳೆಯ ಜತೆ ಆತ್ಮೀಯತೆ ಬೆಳೆಸಿ, ಬೆದರಿಸಿ ಕೆಟ್ಟದಾಗಿ ವರ್ತಿಸಿ ಅತ್ಯಾಚಾರ ಎಸಗಿ ಹಣ ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಲಾಗಿದ್ದು ಈ ಕುರಿತು ಮಾ.೨೧ರಂದು ವೇಣೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ. ೨೨/೨೦೨೬ರಂತೆ ಐಪಿಸಿ ೩೭೬(೨), ೩೭೬(೨)(ಎನ್)೩೮೪, ೫೦೬ ಮತ್ತು ೩೪ರಡಿ ಕೇಸು ದಾಖಲಿಸಲಾಗಿತ್ತು. ಈ ಮಧ್ಯೆ ಕಾರ್ಕಳದ ಮಹಿಳೆಯೊಂದಿಗೆ ಮೊಬೈಲ್ ಫೋನ್‌ನಲ್ಲಿ ಮಾತನಾಡುವ ವೇಳೆ ಅಸಭ್ಯ ಪದ ಬಳಸಿದ ಆರೋಪದಡಿ ಸಂದೇಶ್ ಪಿ.ಜಿ. ಅವರನ್ನು ಮಂಗಳೂರು ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ಅವರು ಅಮಾನತುಗೊಳಿಸಿ ಆದೇಶಿಸಿದ್ದರು. ಸಂದೇಶ್ ಅವರ ವಿರುದ್ಧ ಹಲವು ಮಹಿಳೆಯರಿಂದ ದೂರು ವ್ಯಕ್ತವಾದ ಹಿನ್ನೆಲೆಯಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿದ್ದರು. ಗೃಹ ಸಚಿವರ ಆದೇಶದ ಬೆನ್ನಲ್ಲಿಯೇ ಚುರುಕಾಗಿರುವ ಸಿಐಡಿ ಅಧಿಕಾರಿಗಳು ವೇಣೂರು ಠಾಣೆಗೆ ಆಗಮಿಸಿ ಕಡತಗಳನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೆ ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.


ಸ್ಪೆಷಲ್ ಪಿ.ಪಿ. ನೇಮಿಸಲು ಸಂತ್ರಸ್ತ ಮಹಿಳೆ ಮನವಿ: ಪ್ರಕರಣದಲ್ಲಿ ಆರೋಪಿಯಾಗಿರುವ ಇನ್ಸ್‌ಪೆಕ್ಟರ್ ಪಿ.ಜಿ. ಸಂದೇಶ್ ಅವರು ಪ್ರಭಾವಿಯಾಗಿರುವುದರಿಂದ ಸಿಐಡಿಗೆ ಹಸ್ತಾಂತರಗೊಂಡಿರುವ ಈ ಕೇಸ್‌ನಲ್ಲಿ ತನ್ನ ಪರ ವಾದ ಮಂಡಿಸಲು ವಿಶೇಷ ಅಭಿಯೋಜಕರನ್ನು ನೇಮಿಸಬೇಕು ಎಂದು ಸಂತ್ರಸ್ತ ಮಹಿಳೆ ಗೃಹ ಇಲಾಖೆಗೆ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ವಿಶೇಷ ಅಭಿಯೋಜಕರಾಗಿ ತನಗೆ ಕಾನೂನು ನೆರವು ನೀಡುತ್ತಿರುವ ವಕೀಲ ಶಿವಾನಂದ ವಿಟ್ಲ ಅವರನ್ನು ನೇಮಿಸುವಂತೆಯೂ ಮಹಿಳೆ ಕೇಳಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಹೊಸ ಪಿಟಿಷನ್ ಅರ್ಜಿ ವಿಚಾರಣೆ: ಸಂದೇಶ್ ಅವರ ವಿರುದ್ಧ ಐಪಿಸಿಯಡಿ ಮಾತ್ರ ಕೇಸು ದಾಖಲು ಮಾಡಲಾಗಿದೆ. ಅವರು ಸಂತ್ರಸ್ತ ಮಹಿಳೆಯಿಂದ ಹಣ ಪಡೆದುಕೊಂಡಿರುವುದಕ್ಕೆ ದಾಖಲೆಗಳಿದೆ. ಹಾಗಾಗಿ ಸಂದೇಶ್ ಅವರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ತಡೆ ಕಾಯ್ದೆಯಡಿಯೂ ಕೇಸು ದಾಖಲಿಸಬೇಕು ಎಂದು ನ್ಯಾಯಾಲಯಕ್ಕೆ ಈಗಾಗಲೇ ಸಂತ್ರಸ್ತ ಮಹಿಳೆ ಪರ ವಕೀಲ ಶಿವಾನಂದ ವಿಟ್ಲ ಅವರು ಪಿಟಿಷನ್ ಸಲ್ಲಿಸಿದ್ದಾರೆ. ಈ ವಿಚಾರದಲ್ಲಿ ವಾದ ಮಂಡನೆ ಎ.೨ರಂದು ಬೆಳ್ತಂಗಡಿ ನ್ಯಾಯಾಲಯದಲ್ಲಿ ನಡೆಯಲಿದೆ.
ಅತ್ಯಾಚಾರವಲ್ಲ- ನಮ್ಮ ಮಧ್ಯೆ ಒಪ್ಪಿಗೆಯ ಸಂಬಂಧ ಇತ್ತು : ಹೈಕೋರ್ಟ್‌ಗೆ ಸಂದೇಶ್ ಅರ್ಜಿ : ತನ್ನ ಮೇಲಿನ ಪ್ರಕರಣವನ್ನು ರದ್ದುಪಡಿಸಬೇಕು ಮತ್ತು ತಕ್ಷಣಕ್ಕೆ ನನ್ನನ್ನು ಬಂಧಿಸದಂತೆ ನಿರ್ದೇಶನ ನೀಡಬೇಕು ಎಂದು ಸಂದೇಶ್ ಪಿ.ಜಿ.ಯವರು ಹೈಕೋರ್ಟ್ ಮೊರೆ ಹೋಗಿದ್ದಾರೆ. ಈ ಅರ್ಜಿಯಲ್ಲಿವರು ಮಹಿಳೆಯನ್ನು ನಾನು ಅತ್ಯಾಚಾರ ಎಸಗಿಲ್ಲ . ನಮ್ಮ ಮಧ್ಯೆ ಒಪ್ಪಿಗೆಯ ಸಂಬಂಧ ಇತ್ತು ಎಂದು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ. ಅರ್ಜಿಯ ವಿಚಾರಣೆ ಎ.೬ಕ್ಕೆ ಮುಂದೂಡಿಕೆಯಾಗಿದೆ. ಈ ವೇಳೆ ತನ್ನನ್ನು ಬಂಧಿಸಬಾರದು ಎಂದು ಸಂದೇಶ್ ಪಿ.ಜಿ. ಮಾಡಿರುವ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.









