ಮುಖ್ಯ ಶಿಕ್ಷಕಿಯ ಅತ್ಯಾಚಾರ ಪ್ರಕರಣ: ಇನ್‌ಸ್ಪೆಕ್ಟರ್ ಸಂದೇಶ್ ವಿರುದ್ಧದ ಕೇಸ್ ರದ್ದುಗೊಳಿಸಲು ನಿರಾಕರಿಸಿದ ಹೈಕೋರ್ಟ್- ಅಧಿಕಾರಿಯಾದರೆ ಹೀಗೆಲ್ಲಾ ಮಾಡಬಹುದಾ ಎಂದು ತೀಕ್ಷ್ಣವಾಗಿ ತರಾಟೆಗೆತ್ತಿಕೊಂಡ ನ್ಯಾಯಮೂರ್ತಿ ಎಂ. ನಾಗಪ್ರಸನ್ನ

0

ಬೆಳ್ತಂಗಡಿ: ಖಾಸಗಿ ವಿದ್ಯಾಸಂಸ್ಥೆಯೊಂದರ ಮುಖ್ಯ ಶಿಕ್ಷಕಿಯನ್ನು ಅತ್ಯಾಚಾರ ಮಾಡಿದ ಆರೋಪದಡಿ ವೇಣೂರು ಪೊಲೀಸ್ ಠಾಣೆಯಲ್ಲಿ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ. ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣ ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ. ಅಲ್ಲದೆ ಅಧಿಕಾರಿಯಾದರೆ ಹೀಗೆಲ್ಲಾ ಮಾಡಬಹುದಾ ಎಂದು ನ್ಯಾಯಪೀಠ ತೀಕ್ಷ್ಣವಾಗಿ ತರಾಟೆಗೆತ್ತಿಕೊಂಡಿದೆ. ಈ ಹಿಂದೆ ಬೆಳ್ತಂಗಡಿ ಗ್ರಾಮಾಂತರ ಪೊಲೀಸ್ ಇನ್ಸ್‌ಪೆಕ್ಟರ್ ಆಗಿದ್ದು ಪ್ರಸ್ತುತ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಮೂಡಬಿದ್ರೆ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಆಗಿದ್ದ ಪಿ.ಜಿ.ಸಂದೇಶ್ ಅವರು ತಮ್ಮ ವಿರುದ್ಧ ವೇಣೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಕೇಸ್ ರದ್ದುಗೊಳಿಸುವಂತೆ ಕೋರಿ ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ಪ್ರಕರಣ ರದ್ದುಗೊಳಿಸಲು ನಿರಾಕರಿಸಿದರಲ್ಲದೆ ಪೊಲೀಸ್ ಅಧಿಕಾರಿಯ ವರ್ತನೆಯನ್ನು ತೀಕ್ಷ್ಣ ಶಬ್ದಗಳಲ್ಲಿ ತರಾಟೆಗೆತ್ತಿಕೊಂಡಿದ್ದಾರೆ. ಜತೆಗೆ ದೋಷಾರೋಪಣಾ ಪಟ್ಟಿ ಸಲ್ಲಿಕೆಯಾದರೆ ಅದನ್ನು ಪ್ರಶ್ನಿಸುವ ಸ್ವಾತಂತ್ರ್ಯ ಆರೋಪಿಗಳಿಗೆ ಇದೆ ಎಂದು ತಿಳಿಸಿದ್ದಾರೆ. ಈ ವೇಳೆ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ. ಅವರ ಪರ ವಕೀಲ ಎಂ.ಆರ್.ಬಾಲಕೃಷ್ಣ ಅವರು ಅರ್ಜಿ ವಾಪಸ್ ಪಡೆದುಕೊಂಡ ಹಿನ್ನೆಲೆಯಲ್ಲಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಕೇಸ್ ರದ್ದುಗೊಳಿಸಲು ಹೈಕೋರ್ಟ್ ನಿರಾಕರಣೆ-ಅರ್ಜಿ ವಾಪಸ್ ಪಡೆದ ವಕೀಲರು: ಬಡಗಕಾರಂದೂರು ನಿವಾಸಿಯಾಗಿದ್ದು ಖಾಸಗಿ ವಿದ್ಯಾಸಂಸ್ಥೆಯೊಂದರಲ್ಲಿ ಮುಖ್ಯ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ೪೨ರ ಹರೆಯದ ಮಹಿಳೆಯನ್ನು ಅತ್ಯಾಚಾರ ಮಾಡಿ ಆಕೆಯಿಂದ ಹಣ ಪಡೆದು ವಂಚಿಸಿ ಬೆದರಿಕೆ ಒಡ್ಡಿದ ಆರೋಪದಡಿ ತಮ್ಮ ವಿರುದ್ಧ ವೇಣೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಕ್ರಿಮಿನಲ್ ಪ್ರಕರಣವನ್ನು ರದ್ದು ಪಡಿಸಬೇಕು ಮತ್ತು ತನಿಖೆಗೆ ತಡೆಯಾಜ್ಞೆ ನೀಡಬೇಕು ಎಂದು ಕೋರಿ ಇನ್‌ಸ್ಪೆಕ್ಟರ್ ಸಂದೇಶ್ ಪಿ.ಜಿ. ಅವರು ತಮ್ಮ ಪರ ವಕೀಲ ಎಂ.ಆರ್.ಬಾಲಕೃಷ್ಣ ಅವರ ಮೂಲಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ಎಫ್‌ಐಆರ್ ರದ್ದುಗೊಳಿಸಲು ಮತ್ತು ತನಿಖೆಗೆ ತಡೆಯಾಜ್ಞೆ ನೀಡಲು ನಿರಾಕರಿಸಿದ್ದಾರೆ.

ಈ ವೇಳೆ ವಕೀಲ ಎಂ.ಆರ್.ಬಾಲಕೃಷ್ಣ ಅವರು ಇನ್ಸ್‌ಪೆಕ್ಟರ್ ಸಂದೇಶ್ ಸಲ್ಲಿಸಿರುವ ಈ ಅರ್ಜಿಯನ್ನು ವಾಪಸ್ ಪಡೆಯುವುದಾಗಿ ನ್ಯಾಯಪೀಠಕ್ಕೆ ತಿಳಿಸಿದರು. ಈ ಹಿನ್ನೆಲೆಯಲ್ಲಿ ಅರ್ಜಿಯನ್ನು ನ್ಯಾಯಮೂರ್ತಿ ವಜಾಗೊಳಿಸಿದರು. ಜೊತೆಗೆ ನ್ಯಾಯಮೂರ್ತಿಗಳು ಆರೋಪಿ ಇನ್ಸ್‌ಪೆಕ್ಟರ್ ಮತ್ತಿತರರ ವಿರುದ್ಧ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆಯಾದರೆ ಅದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲು ಅರ್ಜಿದಾರರು ಸ್ವತಂತ್ರರಿದ್ದಾರೆ ಎಂದು ತಿಳಿಸಿದರು. ಇದಕ್ಕೂ ಮುನ್ನ ಅರ್ಜಿದಾರ ಸಂದೇಶ್ ಪರ ವಕೀಲ ಎಂ.ಆರ್. ಬಾಲಕೃಷ್ಣ ಅವರು ವಾದ ಮಂಡಿಸಿ ಅರ್ಜಿದಾರರ ಮೇಲೆ ಅತ್ಯಾಚಾರ ಆರೋಪ ಮಾಡಲಾಗಿದೆ. ದೂರಿನಲ್ಲಿ ಆರೋಪಿಸಿರುವ ಘಟನೆ ೨೦೨೨ರ ನವೆಂಬರ್‌ನಿಂದ ೨೦೨೩ರ ಜೂನ್ ವರೆಗೆ ನಡೆದಿದೆ ಎಂದು ತಿಳಿಸಲಾಗಿದೆ. ಈ ದೂರನ್ನು ೨೦೨೬ರ ಮಾರ್ಚ್ ೨೧ರಂದು ದಾಖಲಿಸಲಾಗಿದೆ.
ಮೂರು ವರ್ಷಗಳ ಕಾಲ ವಿಳಂಬವಾಗಿ ದೂರು ದಾಖಲಿಸಲಾಗಿದೆ. ಪ್ರಕರಣದಲ್ಲಿ ಅರ್ಜಿದಾರವನ್ನು ಸಿಲುಕಿಸಲು ದೊಡ್ಡ ಪಿತೂರಿ ನಡೆಸಲಾಗಿದೆ. ಹಾಗಾಗಿ ಎಫ್‌ಐಆರ್ ರದ್ದುಪಡಿಸಬೇಕು ಎಂದು ನ್ಯಾಯಪೀಠವನ್ನು ಕೋರಿದ್ದರು. ಅದಕ್ಕೆ ನ್ಯಾಯಪೀಠ ಅರ್ಜಿದಾರರು ಏನೂ ಮಾಡಿಲ್ಲವೇ ಎಂದು ಕೇಳಿತು. ಈ ವೇಳೆ ವಕೀಲ ಎಂ.ಆರ್.ಬಾಲಕೃಷ್ಣ ಅವರು ಅರ್ಜಿದಾರರು ಪೊಲೀಸ್ ಅಧಿಕಾರಿಯಾಗಿದ್ದಾರೆ. ದೂರುದಾರೆ ಖಾಸಗಿ ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿದ್ದಾರೆ.

ದೂರುದಾರೆ ಮಾಡಿರುವ ಆರೋಪಗಳ ಮಾದರಿಯನ್ನು ಜನ ಸಾಮಾನ್ಯರು ನಂಬುವಂತಿಲ್ಲ ಎಂದರು. ಆಗ ನ್ಯಾಯಪೀಠ ಅದರ ಬಗ್ಗೆ ನಿಮಗೆ ಚಿಂತೆ ಬೇಡ. ಜನ ಸಾಮಾನ್ಯರು ನಂಬುವುದಿಲ್ಲ. ಅಸಾಮಾನ್ಯರು ನಂಬುತ್ತಾರೆ ಬಿಡಿ. ಅರ್ಜಿದಾರರ ವಿರುದ್ಧ ಪದೇ ಪದೇ ಅತ್ಯಾಚಾರ ಮಾಡಿರುವ ಆರೋಪವಿದೆ. ಇನ್ಸ್‌ಪೆಕ್ಟರ್ ಸಂದೇಶ್ ಬಿಟ್ಟು ಉಳಿದ ಇಬ್ಬರು ಮಹಿಳಾ ಅರ್ಜಿದಾರರ ಮೇಲೆ ಏನು ಆರೋಪವಿದೆ ಎಂದು ಕೇಳಿತು. ಆ ವೇಳೆ ದೂರದಾರೆಯ ಪರ ವಕೀಲರು ಮಹಿಳಾ ಆರೋಪಿಗಳು ದೂರುದಾರೆಯ ಮನೆಗೆ ಬಂದು ಸಂದೇಶ್ ಅವರ ವಿರುದ್ಧ ಪ್ರಕರಣ ಮುಂದುವರಿಸಬಾರದು ಎಂದು ಬೆದರಿಕೆ ಹಾಕಿದ್ದಾರೆ. ಈ ಕುರಿತು ಫೋನ್ ಸಂಭಾಷಣೆಯ ರೆಕಾರ್ಡಿಂಗ್ ಇವೆ ಎಂದು ತಿಳಿಸಿದರು. ಈ ವೇಳೆ ನ್ಯಾಯಪೀಠ ಹಾಗಾದರೆ ಅರ್ಜಿದಾರರ ವಿರುದ್ಧ ತನಿಖೆಗೆ ತಡೆಯಾಜ್ಞೆ ನೀಡುವುದಿಲ್ಲ. ಪೊಲೀಸ್ ಇನ್ಸ್‌ಪೆಕ್ಟರ್ ಆಗಿ ಸಂದೇಶ್ ಈ ರೀತಿ ಮಾಡಬಾರದು. ತನಿಖಾಧಿಕಾರಿಗಳು ದೋಷಾರೋಪಣಾ ಪಟ್ಟಿ ಸಲ್ಲಿಸಿದರೆ ನಂತರ ಆರೋಪ ಕೈ ಬಿಡಲು ಕೋರಿ ಸಂದೇಶ್ ಹಾಗೂ ಇತರೆ ಅರ್ಜಿದಾರರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಬಹುದು.
ಆ ಅವಕಾಶವನ್ನು ಕಾಯ್ದಿರಿಸಲಾಗುವುದು ಎಂದು ತಿಳಿಸಿದರು. ಈ ವೇಳೆ ಸಂದೇಶ್ ಪರ ವಕೀಲರು ಸಂದೇಶ್ ಅವರ ವಿರುದ್ಧದ ಆರೋಪಗಳಿಗೆ ಪೂರಕವಾದ ಪುರಾವೆಗಳಿಲ್ಲ. ತನಿಖೆ ನಡೆಯುತ್ತಿದೆ. ಕೊನೆಯ ಪಕ್ಷ ಅರ್ಜಿದಾರರ ವಿರುದ್ಧ ಬಲವಂತದ ಕ್ರಮ ಜರುಗಿಸದಂತೆ ತನಿಖಾಧಿಕಾರಿಗೆ ನಿರ್ದೇಶಿಸಬೇಕು ಎಂದು ಕೋರಿದರು. ಅದಕ್ಕೆ ನ್ಯಾಯಪೀಠ ಒಪ್ಪದ ಕಾರಣ ಅರ್ಜಿದಾರರ ಪರ ವಕೀಲರು ಅರ್ಜಿ ಹಿಂಪಡೆಯುವುದಾಗಿ ತಿಳಿಸಿದರು. ಇದರಿಂದ ನ್ಯಾಯಪೀಠ ಅರ್ಜಿ ವಜಾಗೊಳಿಸಲಾಗುತ್ತಿದೆ ಎಂದು ತಿಳಿಸಿತು. ಪ್ರಕರಣ ರದ್ದುಗೊಳಿಸುವಂತೆ ಕೋರಿ ಪಿ.ಜಿ.ಸಂದೇಶ್ ಅವರ ಜೊತೆಗೆ ಉಡುಪಿಯ ಸ್ಮಿತಾ, ಪೂರ್ಣಿಮಾ ಆರ್. ಮಲ್ಯ ಮತ್ತು ಮಂಗಳೂರಿನ ಸುನೀತಾ ಲೋಬೊ ಸಲ್ಲಿಸಿರುವ ಅರ್ಜಿ ಕೂಡ ವಜಾಗೊಂಡಿದೆ.

ಮಧ್ಯಂತರ ತಡೆ ನೀಡಲು ನಿರಾಕರಿಸಿದ್ದ ಹೈಕೋರ್ಟ್; ಅರ್ಜಿ ವಜಾಗೊಳಿಸುವ ಮೊದಲು ನಡೆದಿದ್ದ ಅರ್ಜಿಯ ವಿಚಾರಣೆಯ ವೇಳೆ ಇನ್ಸ್‌ಪೆಕ್ಟರ್ ಸಂದೇಶ್ ಅವರ ಬಂಧನಕ್ಕೆ ಮಧ್ಯಂತರ ತಡೆ ನೀಡಲು ಹೈಕೋರ್ಟ್ ನಿರಾಕರಿಸಿತ್ತು. ಸಂದೇಶ್ ಪಿ.ಜಿ. ಮತ್ತಿತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಕೆಲ ಕಾಲ ವಾದ-ಪ್ರತಿವಾದ ಆಲಿಸಿತ್ತು.
ಬಳಿಕ ವಿಚಾರಣೆಯನ್ನು ಏ.೭ಕ್ಕೆ ಮುಂದೂಡಿತ್ತು. ಈ ವೇಳೆ ಅರ್ಜಿದಾರರ ಪರ ವಕೀಲರು ಅಲ್ಲಿಯವರೆಗೆ ಅರ್ಜಿದಾರ ಇನ್ಸ್‌ಪೆಕ್ಟರ್ ಅವರನ್ನು ಬಂಧಿಸಿದಂತೆ ಮಧ್ಯಂತರ ತಡೆ ನೀಡಬೇಕು ಎಂದು ಮನವಿ ಮಾಡಿದ್ದರು. ಆದರೆ ಇದನ್ನು ಸ್ಪಷ್ಟವಾಗಿ ನಿರಾಕರಿಸಿದ್ದ ನ್ಯಾಯಮೂರ್ತಿಗಳು ಇನ್ಸ್‌ಪೆಕ್ಟರ್ ಮಾಡಿರುವುದು ಅಧಿಕಾರದ ದುರುಪಯೋಗವಲ್ಲವೇ. ದೂರು ಕೊಡಲು ಬಂದ ಮಹಿಳೆಯೊಂದಿಗೆ ಸಂಬಂಧ ಬೆಳೆಸಿದರೆ ಇನ್ನೇನಾಗುತ್ತದೆ ಎಂದು ಪ್ರಶ್ನಿಸಿದ್ದರು. ಅರ್ಜಿದಾರರ ಪರ ವಕೀಲರು ಇನ್ಸ್‌ಪೆಕ್ಟರ್ ವಿರುದ್ಧದ ಅತ್ಯಾಚಾರ ಆರೋಪಕ್ಕೆ ಆಧಾರಗಳಿಲ್ಲ. ಆದರೆ ದೂರು ನೀಡಿರುವ ಮಹಿಳೆಯೊಂದಿಗೆ ಒಪ್ಪಿತ ಸಂಬಂಧವಿತ್ತು ಎಂದು ವಾದ ಮಂಡಿಸಿದ್ದರು.

ಪ್ರಕರಣದ ಹಿನ್ನೆಲೆ: ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ಆಗಿದ್ದ ವೇಳೆ ಸಂದೇಶ್ ಪಿ.ಜಿ. ಅವರು ಬಲವಂತವಾಗಿ ಲೈಂಗಿಕ ಸಂಪರ್ಕ ಮಾಡಿದ್ದಾರೆ. ವಿರೋಧ ವ್ಯಕ್ತಪಡಿಸಿದಾಗ ಬೆದರಿಕೆ ಒಡ್ಡಿದ್ದಾರೆ ಮತ್ತು ಸಂತ್ರಸ್ತ ಮಹಿಳೆಯಿಂದ ಒಟ್ಟು ೧೬.೬೨ ಲಕ್ಷ ರೂ. ಹಣ ಪಡೆದು ವಂಚಿಸಿದ್ದಾರೆ ಎಂದು ವೇಣೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿತ್ತು. ಸಂದೇಶ್ ಅವರೊಂದಿಗೆ ಅವರ ಖಾಸಗಿ ಕಾರು ಚಾಲಕ ಅಕ್ಬರ್, ಪರಿಚಯದ ಸ್ಮಿತಾ ಹಾಗೂ ಸುನೀತಾ ಲೋಬೋ ಅವರನ್ನೂ ಆರೋಪಿಗಳು ಎಂದು ಹೆಸರಿಸಲಾಗಿತ್ತು. ಸಂದೇಶ್ ಪಿ.ಜಿ. ಅವರು ಬೆಳ್ತಂಗಡಿ ಸರ್ಕಲ್ ಇನ್‌ಸ್ಪೆಕ್ಟರ್ ಆಗಿದ್ದ ವೇಳೆ ಸಂತ್ರಸ್ತ ಮಹಿಳೆ ಹಾಗೂ ಆಕೆಯ ತಂಗಿಗೆ ಜಾಗದ ವಿಚಾರದಲ್ಲಿ ತರಕಾರು ಇತ್ತು. ಸಂತ್ರಸ್ತ ಮಹಿಳೆ, ಆಕೆಯ ಗಂಡ ಹಾಗೂ ಇತರರ ವಿರುದ್ಧ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದ ತನಿಖಾಧಿಕಾರಿಯಾಗಿದ್ದ ಸಂದೇಶ್ ಅವರು ೨೦೧೮ರಿಂದ ೨೦೨೩ರ ನಡುವೆ ಮಹಿಳೆಯ ಮನೆಗೆ ಬಂದು ಹೋಗುತ್ತಿದ್ದರು. ಆಗ ಮಹಿಳೆಯ ಜತೆ ಆತ್ಮೀಯತೆ ಬೆಳೆಸಿ, ಬೆದರಿಸಿ ಕೆಟ್ಟದಾಗಿ ವರ್ತಿಸಿ ಅತ್ಯಾಚಾರ ಎಸಗಿ ಹಣ ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಲಾಗಿದ್ದು ಈ ಕುರಿತು ಮಾ.೨೧ರಂದು ವೇಣೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ. ೨೨/೨೦೨೬ರಂತೆ ಐಪಿಸಿ ೩೭೬(೨), ೩೭೬(೨)(ಎನ್)೩೮೪, ೫೦೬ ಮತ್ತು ೩೪ರಡಿ ಕೇಸು ದಾಖಲಿಸಲಾಗಿತ್ತು.

ಈ ಮಧ್ಯೆ ಕಾರ್ಕಳದ ಮಹಿಳೆಯೊಂದಿಗೆ ಮೊಬೈಲ್ ಫೋನ್‌ನಲ್ಲಿ ಮಾತನಾಡುವ ವೇಳೆ ಅಸಭ್ಯ ಪದ ಬಳಸಿದ ಆರೋಪದಡಿ ಸಂದೇಶ್ ಪಿ.ಜಿ. ಅವರನ್ನು ಮಂಗಳೂರು ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ಅವರು ಅಮಾನತುಗೊಳಿಸಿ ಆದೇಶಿಸಿದ್ದರು. ಸಂದೇಶ್ ಅವರ ವಿರುದ್ಧ ಹಲವು ಮಹಿಳೆಯರಿಂದ ದೂರು ವ್ಯಕ್ತವಾದ ಹಿನ್ನೆಲೆಯಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿದ್ದರು. ಗೃಹ ಸಚಿವರ ಆದೇಶದ ಬೆನ್ನಲ್ಲಿಯೇ ಚುರುಕಾಗಿದ್ದ ಸಿಐಡಿ ಅಧಿಕಾರಿಗಳು ವೇಣೂರು ಠಾಣೆಗೆ ಆಗಮಿಸಿ ಕಡತಗಳನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದರು.
ಅಲ್ಲದೆ ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದರು. ಸಂತ್ರಸ್ತ ಮಹಿಳೆಯಿಂದಲೂ ಮಾಹಿತಿ ಕಲೆ ಹಾಕಿದ್ದರು. ಸಿಐಡಿ ಅಧಿಕಾರಿಗಳು ತನಿಖೆ ನಡೆಸುತ್ತಿರುವ ಮಧ್ಯೆಯೇ ಪ್ರಕರಣ ರದ್ದುಗೊಳಿಸಲು ಸಂದೇಶ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಕೇಸ್ ರದ್ದುಗೊಳಿಸಲು ಮತ್ತು ತನಿಖೆಗೆ ತಡೆಯಾಜ್ಞೆ ನೀಡಲು ಹೈಕೋರ್ಟ್ ನಿರಾಕರಿಸಿ ಅರ್ಜಿ ವಜಾಗೊಳಿಸಿರುವುದರಿಂದ ಸಿಐಡಿ ಅಧಿಕಾರಿಗಳು ಮತ್ತೆ ತನಿಖೆ ಮುಂದುವರಿಸಿದ್ದಾರೆ.

ಸಾಕ್ಷ್ಯ ನುಡಿಯಲು ಗೈರು: ಇನ್ಸ್‌ಪೆಕ್ಟರ್ ಸಂದೇಶ್‌ಗೆ ಜಾಮೀನು ರಹಿತ ವಾರಂಟ್ ಹೊರಡಿಸಿದ ಬಂಟ್ವಾಳ ಕೋರ್ಟ್
ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣದಲ್ಲಿ ತನಿಖಾಧಿಕಾರಿಯಾಗಿದ್ದರೂ ಸಾಕ್ಷ್ಯ ನುಡಿಯಲು ನ್ಯಾಯಾಲಯಕ್ಕೆ ನಿರಂತರವಾಗಿ ಗೈರಾಗಿರುವ ಹಿನ್ನೆಲೆಯಲ್ಲಿ ಬಂಟ್ವಾಳದ ಹಿರಿಯ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ. ಅವರಿಗೆ ಜಾಮೀನು ರಹಿತ ವಾರಂಟ್ ಹೊರಡಿಸಿದೆ. ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅಪರಾಧ ಕ್ರಮ ಸಂಖ್ಯೆ ೯೦/೨೦೧೯ರ ಪ್ರಕರಣದಲ್ಲಿ ಬೆಳ್ತಂಗಡಿ ಗ್ರಾಮಾಂತರ ವೃತ್ತ ನಿರೀಕ್ಷಕರಾಗಿದ್ದ ಸಂದೇಶ್ ಪಿ.ಜಿ. ಅವರು ತನಿಖಾಧಿಕಾರಿಯಾಗಿದ್ದರು. ಸಂದೇಶ್ ಪಿ.ಜಿ. ಅವರು ನ್ಯಾಯಾಲಯಕ್ಕೆ ಆರೋಪಿಗಳ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ನಂತರ ನಡೆದ ವಿಚಾರಣೆಯ ವೇಳೆ ಹಲವಾರು ಸಾಕ್ಷಿಗಳ ವಿಚಾರಣೆ ನಡೆದಿತ್ತು. ಬಳಿಕ ತನಿಖಾಧಿಕಾರಿ ಸಂದೇಶ್ ಪಿ.ಜಿ. ಅವರಿಗೆ ಸಾಕ್ಷ್ಯ ನುಡಿಯಲು ಹಾಜರಾಗುವಂತೆ ಕಳೆದ ೨-೩ ತಿಂಗಳುಗಳಿಂದ ಸಮನ್ಸ್ ಜಾರಿಗೊಳಿಸಲಾಗಿತ್ತು. ಹಲವಾರು ಬಾರಿ ಸಮನ್ಸ್ ಜಾರಿಗೊಂಡಿದ್ದರೂ ನ್ಯಾಯಾಲಯಕ್ಕೆ ಸಂದೇಶ್ ಅವರು ಹಾಜರಾಗದೆ ಇರುವುದರಿಂದ ಬಂಟ್ವಾಳದ ಹಿರಿಯ ಸಿವಿಲ್ ನ್ಯಾಯಾಲಯ ಸಿ.ಸಿ. ನಂ.೨೨೦/೨೦೨೦ರ ಈ ಪ್ರಕರಣದಲ್ಲಿ ಸಂದೇಶ್ ಪಿ.ಜಿ. ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸುವಂತೆ ಆದೇಶಿಸಿದೆ. ಸಾಮಾಜಿಕ ಜಾಲತಾಣವಾದ ಶೇರ್‌ಚಾಟ್ ಮೂಲಕ ಬಂಟ್ವಾಳದ ಅಜ್ಜಿಬೆಟ್ಟು ಸಮೀಪದ ಪಾಲೆದಡಿಯ ಅಮಹಿಳೆಯೋರ್ವರಿಗೆ ಪರಿಚಯವಾದ ಬಿಜಾಪುರ ಮೂಲದ ಮಂಜುನಾಥ ಎಂಬಾತ ಈ ಮಹಿಳೆಯನ್ನು ೨೦೧೯ನೇ ಜೂನ್ ತಿಂಗಳಿನಲ್ಲಿ ಭೇಟಿಯಾಗಿದ್ದ. ಆ ವೇಳೆ ಮಂಜುನಾಥ ಮಹಿಳೆಯನ್ನು ತಬ್ಬಿಕೊಂಡಿರುವ ಫೋಟೋಗಳನ್ನು ತೆಗೆದಿದ್ದ. ೨೯.೦೮.೨೦೧೯ರಂದು ಮಹಿಳೆಯ ಗಂಡನ ವಾಟ್ಸ್‌ಅಪ್ ಖಾತೆಗೆ ಆ ಪೋಟೋಗಳನ್ನು ಕಳುಹಿಸಿದ್ದ. ಅಲ್ಲದೆ ಫೇಸ್‌ಬುಕ್‌ನಲ್ಲಿ ಕೂಡಾ ಅದೇ ಪೋಟೋಗಳನ್ನು ಅಪ್ ಲೋಡ್ ಮಾಡಿ ಅಶ್ಲೀಲವಾಗಿ ಬರೆದಿದ್ದ ಎಂದು ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಎಸ್‌ಐ ಆಗಿದ್ದ ಸೌಮ್ಯ ಮತ್ತಿತರರ ಸಾಕ್ಷಿ ಹೇಳಿಕೆ ಮುಕ್ತಾಯವಾಗಿತ್ತು. ಆದರೆ ಸಂದೇಶ್ ಅವರು ಸಾಕ್ಷಿ ಹೇಳಲು ಬಾರದ ಪ್ರಕರಣಕ್ಕೆ ಸಂಬಂಧಿಸಿ ಈ ಬೆಳವಣಿಗೆ ನಡೆದಿದೆ.

ಭ್ರಷ್ಟಾಚಾರದ ಆರೋಪ ಸೇರಿಸಲು ಅರ್ಜಿ
ಎ.೧೬ರಂದು ಬೆಳ್ತಂಗಡಿ ಕೋರ್ಟ್ ಆದೇಶ
ಸಂದೇಶ್ ಅವರ ವಿರುದ್ಧ ಐಪಿಸಿಯಡಿ ಮಾತ್ರ ಕೇಸು ದಾಖಲು ಮಾಡಲಾಗಿದೆ. ಅವರು ಸಂತ್ರಸ್ತ ಮಹಿಳೆಯಿಂದ ಹಣ ಪಡೆದುಕೊಂಡಿರುವುದಕ್ಕೆ ದಾಖಲೆಗಳಿದೆ. ಹಾಗಾಗಿ ಸಂದೇಶ್ ಅವರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ತಡೆ ಕಾಯ್ದೆಯಡಿಯೂ ಕೇಸು ದಾಖಲಿಸಬೇಕು ಎಂದು ಸಂತ್ರಸ್ತ ಮಹಿಳೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯ ವಿಚಾರಣೆ ಈಗಾಗಲೇ ಬೆಳ್ತಂಗಡಿ ನ್ಯಾಯಾಲಯದಲ್ಲಿ ನಡೆದಿದೆ. ಸಂತ್ರಸ್ತ ಮಹಿಳೆಯ ಪರ ವಕೀಲ ಶಿವಾನಂದ ವಿಟ್ಲ ವಾದ ಮಂಡಿಸಿದ್ದಾರೆ. ಇದಕ್ಕೆ ಎಪಿಸಿ ದಿವ್ಯರಾಜ್ ಹೆಗ್ಡೆ ಪುತ್ತೂರು ಅವರು ಆಕ್ಷೇಪ ಸಲ್ಲಿಸಿದ್ದಾರೆ. ವಾದ ಪ್ರತಿವಾದ ಆಲಿಸಿರುವ ನ್ಯಾಯಾಧೀಶರು ಎ.೧೬ರಂದು ಈ ಕುರಿತು ಆದೇಶ ಹೊರಡಿಸುವುದಾಗಿ ತಿಳಿಸಿದ್ದಾರೆ. ಈ ಮಧ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಇನ್ಸ್‌ಪೆಕ್ಟರ್ ಪಿ.ಜಿ. ಸಂದೇಶ್ ಅವರು ಪ್ರಭಾವಿಯಾಗಿರುವುದರಿಂದ ಸಿಐಡಿಗೆ ಹಸ್ತಾಂತರಗೊಂಡಿರುವ ಈ ಕೇಸ್‌ನಲ್ಲಿ ತನ್ನ ಪರ ವಾದ ಮಂಡಿಸಲು ವಿಶೇಷ ಅಭಿಯೋಜಕರನ್ನು ನೇಮಿಸಬೇಕು. ತನ್ನ ಪರ ವಿಶೇಷ ಅಭಿಯೋಜಕರಾಗಿ ತನಗೆ ಕಾನೂನು ನೆರವು ನೀಡುತ್ತಿರುವ ವಕೀಲ ಶಿವಾನಂದ ವಿಟ್ಲ ಅವರನ್ನು ನೇಮಿಸಬೇಕು ಎಂದು ಸಂತ್ರಸ್ತ ಮಹಿಳೆ ರಾಜ್ಯ ಗೃಹ ಇಲಾಖೆಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಈ ಮನವಿಯನ್ನು ಗೃಹ ಇಲಾಖೆ ಮಾನ್ಯ ಮಾಡದೇ ಇದ್ದಲ್ಲಿ ಹೈಕೋರ್ಟ್ ಮೆಟ್ಟಲೇರಲು ಮಹಿಳೆ ಸಿದ್ಧತೆ ನಡೆಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

LEAVE A REPLY

Please enter your comment!
Please enter your name here