ಯುವತಿಯ ಖಾಸಗಿ ವಿಡಿಯೋ ದುರುಪಯೋಗ ಪ್ರಕರಣಬಂಧಿತ ಯುವಕನಿಗೆ ಷರತ್ತುಬದ್ಧ ಜಾಮೀನು ಮಂಜೂರು

0

ಬೆಳ್ತಂಗಡಿ: ಸಾಮಾಜಿಕ ಜಾಲತಾಣದ ಮೂಲಕ ಪರಿಚಯ ಬೆಳೆಸಿ ಮದುವೆಯ ಭರವಸೆ ನೀಡಿ ಯುವತಿಯ ಖಾಸಗಿ ವಿಡಿಯೋ ಪಡೆದು ಬಳಿಕ ಅದನ್ನು ವಾಟ್ಸಾಪ್ ಮೂಲಕ ಹಂಚಿದ ಆರೋಪದಡಿ ಉಪ್ಪಿನಂಗಡಿ ಠಾಣಾ ಪೊಲೀಸರಿಂದ ಬಂಧಿತನಾಗಿದ್ದ ಪೆರ್ನೆಯ ಸುಶಾಂತ್ ಪೂಜಾರಿಗೆ ಮಂಗಳೂರು ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಘಟನೆಯ ವಿವರ: ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ನಿವಾಸಿಯಾಗಿದ್ದು ಬ್ಯೂಟಿಷಿಯನ್ ಆಗಿ ಕೆಲಸ ಮಾಡುತ್ತಿರುವ ೨೦ ವರ್ಷದ ಯುವತಿಗೆ ಆರು ತಿಂಗಳ ಹಿಂದೆ ಪೆರ್ನೆಯ ಸುಶಾಂತ್ ಪೂಜಾರಿ ಇನ್‌ಸ್ಟಾಗ್ರಾಮ್ ಮೂಲಕ ಪರಿಚಯವಾಗಿದ್ದ. ಬಳಿಕ ಇಬ್ಬರ ನಡುವೆ ಸ್ನೇಹ ಪ್ರೀತಿಗೆ ತಿರುಗಿ ಮದುವೆಯಾಗಲು ಪರಸ್ಪರ ನಿರ್ಧರಿಸಿದ್ದರು. ನಂತರ ಸುಶಾಂತ್ ಪೂಜಾರಿ ನಗ್ನವಾಗಿ ವಿಡಿಯೋ ಕಾಲ್ ಮಾಡಲು ಯುವತಿಯನ್ನು ಒತ್ತಾಯಿಸಿದ್ದ. ಮದುವೆಯ ಭರವಸೆ ನೀಡಿದ್ದರಿಂದ ಆತನ ಮೇಲಿನ ನಂಬಿಕೆಯಿಂದ ಯುವತಿ ಸ್ನಾನ ಮಾಡುವ ವೇಳೆ ವಿಡಿಯೋ ಕಾಲ್ ಮಾಡಿದ್ದಳು. ಈ ಖಾಸಗಿ ವಿಡಿಯೋವನ್ನು ಸುಶಾಂತ್ ಪೂಜಾರಿ ಮತ್ತು ಆತನ ಸಹೋದರಿ ವಾಟ್ಸಾಪ್ ಮೂಲಕ ಇತರರಿಗೆ ಹಂಚಿದ್ದರು. ಈ ಘಟನೆ ೦೧.೧೦.೨೦೨೫ರಿಂದ ೧೬.೦೩.೨೦೨೬ರ ನಡುವೆ ನಡೆದಿದ್ದು ಯುವತಿಗೆ ಈ ವಿಷಯ ೧೬.೦೩.೨೦೨೬ರಂದು ಗೊತ್ತಾಗಿತ್ತು. ನಂತರ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿ ಆಕೆ ಮಾರ್ಚ್ ೨೪ರಂದು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಉಪ್ಪಿನಂಗಡಿ ಪೊಲೀಸರು ಠಾಣಾ ಅ.ಕ್ರ. ೪೩/೨೦೨೬ರಂತೆ ಭಾರತೀಯ ನ್ಯಾಯ ಸಂಹಿತೆ ೩೧೮(೩), ೩೧೬(೩), ೭೭ ಜೊತೆಗೆ ೩(೫), ಮಾಹಿತಿ ತಂತ್ರಜ್ಞಾನ ಕಾಯ್ದೆಯ ೬೬(ಇ), ೬೭ ಹಾಗೂ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯ ವಿವಿಧ ವಿಧಿಗಳಡಿ ಪ್ರಕರಣ ದಾಖಲಿಸಿಕೊಂಡಿದ್ದರು. ನಂತರ ಕಾರ್ಯಾಚರಣೆ ನಡೆಸಿ ಸುಶಾಂತ್ ಪೂಜಾರಿಯನ್ನು ಬಂಧಿಸಿ ಜೈಲಿಗಟ್ಟಿದ್ದರು. ಇದೀಗ ಬಂಧಿತ ಸುಶಾಂತ್ ಪೂಜಾರಿ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮಂಗಳೂರು ನ್ಯಾಯಾಲಯ ಆತನಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಆರೋಪಿ ಪರ ವಕೀಲರಾದ ಪ್ರಸಾದ್ ಕುಮಾರ್ ರೈ ಉಪ್ಪಿನಂಗಡಿ, ಕೃಷ್ಣದೇವ ಮಂಗಳೂರು ಮತ್ತು ಶ್ರೀಹರಿ ಪುತ್ತೂರು ವಾದಿಸಿದ್ದರು.

LEAVE A REPLY

Please enter your comment!
Please enter your name here