







ಬೆಳ್ತಂಗಡಿ: ಪತ್ರಕರ್ತೆ ಉಮಾ ಅನಂತ್ ಅವರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿಯ ಪ್ರಶಸ್ತಿ ದೊರಕಿದೆ. ೨೦೨೫ರ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾಗಿರುವ ಉಮಾ ಅನಂತ್ ಅವರು ಮೂಲತಃ ವೇಣೂರಿನವಾರಗಿದ್ದು ಪ್ರಸ್ತುತ ಬೆಂಗಳೂರಿನಲ್ಲಿ ಪ್ರಜಾವಾಣಿ ಪತ್ರಿಕೆಯ ಮುಖ್ಯ ಉಪಸಂಪಾದಕರಾಗಿದ್ದಾರೆ. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಗಾಯಕರೂ ರಾಗ ಸಂಯೋಜಕರೂ ಆಗಿರುವ ಸಿದ್ಧಾಪುರ ಹೆಗ್ಗಾರದ ಪಂ. ಅನಂತ ಹೆಗಡೆ ಅವರ ಪತ್ನಿಯಾಗಿರುವ ಉಮಾ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾ.೧೩ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.
ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಹಳೆ ವಿದ್ಯಾರ್ಥಿನಿಯಾಗಿರುವ ಉಮಾ ಅವರು ಮಂಗಳೂರು ವಿಶ್ವವಿದ್ಯಾನಿಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು ಪ್ರಜಾವಾಣಿ ಪತ್ರಿಕೆಯ ಮುಖ್ಯ ಉಪ ಸಂಪಾದಕಿಯಾಗಿದ್ದಾರೆ.


ಕಳೆದ ೨೭ ವರ್ಷಗಳಿಂದ ಪ್ರಜಾವಾಣಿ, ಸುಧಾ, ಮಯೂರ ಪತ್ರಿಕೆಯಲ್ಲಿ ಕೆಲಸ ಮಾಡಿರುವ ಇವರು ಕಲಬುರಗಿಯಲ್ಲಿ ಸುಮಾರು ಮೂರೂವರೆ ವರ್ಷ ಪ್ರಜಾವಾಣಿಯ ಜಿಲ್ಲಾ ವರದಿಗಾರ್ತಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಬರವಣಿಗೆ, ಶಾಸ್ತ್ರೀಯ ಸಂಗೀತ, ಯಕ್ಷಗಾನ, ಸಾಹಿತ್ಯ ಮತ್ತು ಕ್ರೀಡೆಯಲ್ಲಿ ಆಸಕ್ತಿ ಹೊಂದಿರುವ ಉಮಾ ಅವರ ಮಹಿಳೆ, ಸಂಗೀತ, ಆರೋಗ್ಯ, ಫ್ಯಾಷನ್ ಕುರಿತ ಅನೇಕ ಬರಹಗಳು ಪ್ರಜಾವಾಣಿ, ಸುಧಾ, ಮಯೂರ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಸಂಗೀತ ವಾದ್ಯಗಳ ಕುರಿತ ಇವರ ವಾದ್ಯ ವೈವಿಧ್ಯ ಎಂಬ ಪುಸ್ತಕಕ್ಕೆ ಕರ್ನಾಟಕ ಲೇಖಕಿಯರ ಸಂಘದ ರಾಜ್ಯಮಟ್ಟದ ದತ್ತಿನಿಧಿ ಪ್ರಶಸ್ತಿ ಲಭಿಸಿದೆ. ಬೆಂಗಳೂರಿನಲ್ಲಿ ೨೦೧೩ರಲ್ಲಿ ಚರಕ ಅಭಿವೃದ್ಧಿ ಪತ್ರಿಕೋದ್ಯಮ ರಾಜ್ಯ ಪ್ರಶಸ್ತಿಯನ್ನು ರಾಜ್ಯಪಾಲರಿಂದ ಸ್ವೀಕರಿಸಿರುವ ಇವರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಅತ್ಯುತ್ತಮ ವಿಮರ್ಶಾ ಬರಹಕ್ಕೆ ನೀಡುವ ಖಾದ್ರಿ ಶಾಮಣ್ಣ ಪ್ರಶಸ್ತಿ ಪಡೆದಿದ್ದಾರೆ. ಅತ್ಯುತ್ತಮ ಸಂಗೀತ ಬರಹ, ವಿರ್ಮಶೆಗಳಿಗಾಗಿ ಕರ್ನಾಟಕ ಗಾನಕಲಾ ಸೇವಾ ಸುವರ್ಣ ರಾಜ್ಯ ಪ್ರಶಸ್ತಿ ಪಡೆದಿರುವ ಇವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ವಾರಪತ್ರಿಕೆಗಾಗಿ ನೀಡುವ ಮಂಗಳ ವರ್ಗೀಸ್ ರಾಜ್ಯ ಪ್ರಶಸ್ತಿಯನ್ನು ೨೦೨೨ರಲ್ಲಿ ಕಲಬುರಗಿಯಲ್ಲಿ ನೀಡಿ ಗೌರವಿಸಲಾಗಿದೆ.
ಇವರು ಬರೆದ ಆರೋಗ್ಯ ಪುಸ್ತಕ ಆರೋಗ್ಯ ಮಾಹಿತಿ ಸ್ವಸ್ಥ ಬದುಕಿಗೆ ಸ್ಫೂರ್ತಿ’ಗೆ ಕನ್ನಡ ಸಾಹಿತ್ಯ ಪರಿಷತ್ತಿನ ೨೦೨೫ರ ದತ್ತಿನಿಧಿ ರಾಜ್ಯ ಪ್ರಶಸ್ತಿ ಲಭಿಸಿದೆ. ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಆಸಕ್ತಿ ಹೊಂದಿರುವ ಇವರು ಕರ್ನಾಟಕ ಪ್ರೌಢಶಿಕ್ಷಣ ಮಂಡಳಿ ನಡೆಸಿದ ಸಂಗೀತ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಬರೆದಿರುವ ಸಂಗೀತ ಲೇಖನಗಳ ಸಂಗ್ರಹ ಪುಸ್ತಕ ಸಂಗೀತ ಸಾಂಗತ್ಯ ಮತ್ತು ಆರೋಗ್ಯ ಕುರಿತ ಲೇಖನಗಳ ಸಂಗ್ರಹ ಪುಸ್ತಕ ಈಗಾಗಲೇ ಬಿಡುಗಡೆಗೊಂಡಿದ್ದು ಆರೋಗ್ಯ ಮಾಹಿತಿ, ಸ್ವಸ್ಥ ಬದುಕಿಗೆ ಸ್ಫೂರ್ತಿ ಪುಸ್ತಕ, ಆರೋಗ್ಯ ಕುರಿತ ಬದುಕುವ ಕಲೆಗೆ ಆರೋಗ್ಯದ ನೆಲೆ ಪುಸ್ತಕ ಬಿಡುಗಡೆಗೆ ಸಿದ್ಧವಾಗಿದೆ. ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಸದಸ್ಯೆ, ಕರ್ನಾಟಕ ಲೇಖಕಿಯರ ಸಂಘದ ಸದಸ್ಯೆ, ಕರ್ನಾಟಕ ಪತ್ರಕರ್ತೆಯರ ಸಂಘದ ಸದಸ್ಯೆ, ಬೆಂಗಳೂರಿನ ಸಂಗೀತ ಸಂಸ್ಥೆಯಾಗಿರುವ ನಾದಬ್ರಹ್ಮ ಸಂಗೀತ ಕಲಾಕೇಂದ್ರದ ಸದಸ್ಯೆಯಾಗಿ ಉಮಾ ಅನಂತ್ ಅವರು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.








