ಗುಂಡ್ಯದಲ್ಲಿ ಸ್ವಿಫ್ಟ್ ಕಾರು-ರಾಜಹಂಸ ಬಸ್ ಅಪಘಾತ ಕೊಕ್ಕಡದ ಎಸ್.ಆರ್. ಆಯಿಲ್‌ಮಿಲ್ ಮಾಲಕ ಚಂದ್ರಶೇಖರ ಗೌಡ, ಕಕ್ಕಿಂಜೆಯ ಮಲ್ನಾಡ್ ಫೈನಾನ್ಸ್ ಮಾಲಕ ಶ್ರೀಧರ್ ಗೌಡ, ಉಜಿರೆಯ ಕೃಷಿಕ ಜನಾರ್ದನ ಗೌಡ ಬಲಿ

0

ಬೆಳ್ತಂಗಡಿ: ಸ್ವಿಫ್ಟ್ ಕಾರು ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಸೇರಿದ ರಾಜಹಂಸ ಬಸ್ಸಿನ ನಡುವೆ ಮಾ. ೧೩ರಂದು ಮಧ್ಯಾಹ್ನ ಮುಖಾಮುಖ ಡಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟು ಓರ್ವ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ೭೫ರ ಶಿರಾಡಿ ಗ್ರಾಮದ ಗುಂಡ್ಯ ಸಮೀಪದ ಬರ್ಚಿನಹಳ್ಳ ನಡೆದಿದೆ. ಬೆಳ್ತಂಗಡಿ ತಾಲೂಕಿನ ಕೊಕ್ಕಡದ ಎಸ್.ಆರ್.ಆಯಿಲ್ ಮಿಲ್ ಮಾಲಕ, ಶಿಶಿಲ ಧರ್ಮದಕಳ ನಿವಾಸಿ ಚಂದ್ರಶೇಖರ ಗೌಡ (೬೦), ಉಜಿರೆ ಗ್ರಾಮದ ಮರಕಡ ನಿವಾಸಿಯಾಗಿದ್ದು ಕಕ್ಕಿಂಜೆ ಮಲ್ನಾಡ್ ಫೈನಾನ್ಸ್‌ನ ಮಾಲಕರಾಗಿದ್ದ ಶ್ರೀಧರ ಗೌಡ (೬೦) ಹಾಗೂ ಉಜಿರೆ ಗ್ರಾಮದ ಗುರಿಪಳ್ಳ ನಿವಾಸಿಯಾಗಿದ್ದ ಕೃಷಿಕ ಜನಾರ್ದನ ಗೌಡ ಯಾನೆ ಉಮೇಶ್ ಗೌಡ (೬೩ವ) ಮೃತಪಟ್ಟವರು. ಕಾರಿನಲ್ಲಿದ್ದ ಉಜಿರೆ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ಕೂಡಿಗೆ ನಿವಾಸಿ ಸುರೇಶ್ (೫೮) ಅವರು ಗಂಭೀರ ಗಾಯಗೊಂಡಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

ನಜ್ಜುಗುಜ್ಜಾದ ಕಾರು: ರಾಜಹಂಸ ಬಸ್ಸು ಮಧ್ಯಾಹ್ನ ೧.೩೦ಕ್ಕೆ ಧರ್ಮಸ್ಥಳ ಕೆಎಸ್‌ಆರ್‌ಟಿಸಿ ಡಿಪೋದಿಂದ ಹೊರಟು ಬೆಂಗಳೂರಿಗೆ ತಲುಪಿ ತದ ನಂತರ ತಿರುಪತಿಗೆ ಸಾಗಲಿತ್ತು. ಮತ್ತೊಂದೆಡೆ ಸಕಲೇಶಪುರದಿಂದ ಕೊಕ್ಕಡ-ಬೆಳ್ತಂಗಡಿಗೆ ಬರುತ್ತಿದ್ದ ಸ್ವಿಫ್ಟ್ ಕಾರನ್ನು ಶ್ರೀಧರ ಗೌಡ ಮರಕಡ ಅವರು ಚಲಾಯಿಸುತ್ತಿದ್ದರು. ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ೭೫ರ ಶಿರಾಡಿ ಗ್ರಾಮದ ಗುಂಡ್ಯ ಸಮೀಪದ ಬರ್ಚಿನಹಳ್ಳ ತಲುಪುತ್ತಿದ್ದಂತೆಯೇ ಏಕಾಏಕಿ ಸ್ವಿಫ್ಟ್ ಕಾರು ಬಸ್‌ಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಸ್ವಿಫ್ಟ್ ಡಿಸೈರ್ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿತ್ತು. ಬಸ್ಸಿನ ಮುಂಭಾಗವೂ ಜಖಂಗೊಂಡಿದೆ. ದ್ವಿಪಥ ನೇರ ರಸ್ತೆಯಲ್ಲೇ ಅಪಘಾತ ನಡೆದಿದ್ದು ಅಪಘಾತದಿಂದಾಗಿ ಇತರೇ ವಾಹನಗಳ ಸಂಚಾರಕ್ಕೆ ಯಾವುದೇ ಅಡಚಣೆ ಉಂಟಾಗಿರಲಿಲ್ಲ.

ಪರಸ್ಪರ ಸಂಬಂಧಿಕರು: ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಕೂಡಿಗೆ ಸುರೇಶ್ ಗೌಡ ಅವರ ಮಡದಿಯ ಅಕ್ಕನ ಮಗನ ಮದುವೆ ಸಕಲೇಶಪುರದಲ್ಲಿ ನಡೆದಿತ್ತು. ಇದರಲ್ಲಿ ಭಾಗಿಯಾಗಿ ಮಧ್ಯಾಹ್ನದ ಊಟದ ನಂತರ ನಾಲ್ವರು ಕಾರಿನಲ್ಲಿ ವಾಪಸಾಗುತ್ತಿದ್ದರು. ಈ ನಾಲ್ವರು ಕೂಡ ಹತ್ತಿರದ ಸಂಬಂಧಿಗಳಾಗಿದ್ದರು. ಸುರೇಶ್ ಗೌಡರ ಮೊದಲ ತಂಗಿ ಚಂದ್ರಕಲಾರವರ ಗಂಡ ಜನಾರ್ದನ ಗೌಡ ಕೇರಿಮಾರ್, ಕೊನೆಯ ತಂಗಿ ತಾಲೂಕು ಪಂಚಾಯತ್ ಮಾಜಿ ಸದಸ್ಯೆ ಚೇತನಾರವರ ಗಂಡ ಚಂದ್ರಶೇಖರ್ ಹಾಗೂ ಸುರೇಶ್ ಗೌಡರವರ ಸೋದರ ಮಾವನ ಮಗ ಶ್ರೀಧರ್ ಗೌಡ ಮರಕಡರವರಾಗಿದ್ದಾರೆ.

ಸುರೇಶ್ ಗೌಡರಿಗೆ ಸರ್ಜರಿ: ಅಪಘಾತದಲ್ಲಿ ಗಾಯಗೊಂಡಿರುವ ಉಜಿರೆಯ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಸುರೇಶ್ ಗೌಡ ಕೂಡಿಗೆರವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಗಂಭೀರ ಗಾಯಗೊಂಡಿರುವುದರಿಂದ ಈಗಾಗಲೇ ಎರಡು ಸರ್ಜರಿ ಮಾಡಲಾಗಿದೆ. ತನ್ನ ಮಡದಿಯ ಕಡೆಯ ಮದುವೆಗೆ ಸುರೇಶ್ ಗೌಡರವರು ಅಂದು ಬೆಳಗ್ಗೆ ಬಸ್‌ನಲ್ಲಿ ತೆರಳಿದ್ದು ವಾಪಾಸಾಗುವಾಗ ಕಾರಿನಲ್ಲಿ ಬಂದಿದ್ದರು.
ಇಬ್ಬರು ಸಹೋದರಿಯರು ಗ್ರೇಟ್ ಎಸ್ಕೇಪ್: ಸಕಲೇಶಪುರದಲ್ಲಿ ನಡೆದ ಮದುವೆಗೆ ಆಗಮಿಸಿದ ಸುರೇಶ್ ಗೌಡರ ಮತ್ತಿಬ್ಬರು ಅಕ್ಕಂದಿರಾದ ಕನ್ಯಾಡಿಯ ಪುಡ್ಕೆತ್ತು ನಿವಾಸಿ ವಿಶಾಲಾಕ್ಷಿ ಹಾಗೂ ಬೆಳಾಲು ಮಾಯ ಪಾಲ್ದಡ್ಕದ ನಿವಾಸಿ ಹೇಮಾವತಿಯವರು ಕಾರಿನಲ್ಲಿ ಬರುವ ಬಗ್ಗೆ ಯೋಚಿಸಿದ್ದರು. ಆದರೆ ಕಾರಿನಲ್ಲಿ ನಾಲ್ವರು ಇದ್ದಿದ್ದರಿಂದ ಬಸ್‌ನಲ್ಲಿ ಬರುವಂತೆ ಸುರೇಶ್ ಗೌಡರು ತಿಳಿಸಿದರು. ಈ ಹಿನ್ನಲೆಯಲ್ಲಿ ಅವರಿಬ್ಬರು ಗ್ರೇಟ್ ಎಸ್ಕೇಪ್ ಆಗಿದ್ದಾರೆ.
ಅಪಘಾತ ಸ್ಥಳದಲ್ಲಿ ನೆಟ್‌ವರ್ಕ್ ಸಮಸ್ಯೆ, ತುರ್ತು ಕ್ರಮಕ್ಕೆ ಅಡ್ಡಿ: ಅಪಘಾತ ನಡೆದ ಬರ್ಚಿನಹಳ್ಳದ ಸಮೀಪ ನೆಟ್‌ವರ್ಕ್ ಸಮಸ್ಯೆಯಿದೆ. ಈ ಹಿನ್ನಲೆಯಲ್ಲಿ ಅಪಘಾತವಾದ ಕೂಡಲೇ ಆಂಬ್ಯುಲೆನ್ಸ್ ಸಂಪರ್ಕ ಸಾಧ್ಯವಾಗಿಲ್ಲ. ಅಲ್ಲಿಂದ ೫೦೦ ಮೀಟರ್ ಮುಂದೆ ಬಂದು ಕೆಲವರು ಆಂಬ್ಯುಲೆನ್ಸ್‌ಗೆ ಕರೆ ಮಾಡಿದ್ದರು. ಇದರಿಂದಾಗಿ ಸ್ಥಳದಲ್ಲಿ ಜೀವಂತವಾಗಿದ್ದ ಶ್ರೀಧರ್ ಗೌಡರನ್ನು ಆಸ್ಪತ್ರೆಗೆ ಸೇರಿಸುವಾಗ ತಡವಾಗಿದೆ ಎನ್ನಲಾಗಿದೆ. ಅಲ್ಲದೇ, ರಸ್ತೆಯಲ್ಲಿ ಬರುತ್ತಿದ್ದ ಇತರೆ ಖಾಸಗಿ ವಾಹನಗಳಲ್ಲಿ ಬಂದವರು ಇವರನ್ನು ಆಸ್ಪತ್ರೆಗೆ ಸಾಗಿಸಲು ಮುಂದಾಗಲಿಲ್ಲ ಎಂಬ ಮಾಹಿತಿಯಿದೆ.
ಹಿಂದಿನ ಬಸ್‌ನಲ್ಲಿ ಬಂದ ಸಹೋದರಿಯರು, ಶ್ರೀಧರ್ ಸಹೋದರ: ಮದುವೆ ಮುಗಿಸಿ ಬಸ್‌ನಲ್ಲಿ ಸುರೇಶ್ ಗೌಡರ ಸಹೋದರಿಯರು ಹಾಗೂ ಶ್ರೀಧರ್ ಗೌಡರ ಸಹೋದರ ಹರೀಶ್ ವಾಪಸಾಗುತ್ತಿದ್ದರು, ಈ ವೇಳೆ ಅಪಘಾತ ಸ್ಥಳದ ಮುಂದೆ ಬಸ್ ಪಾಸ್ ಆಗುವಾಗ ಅಣ್ಣನ ಗಾಡಿ ನಂಬರ್ ನೋಡಿದ ಹರೀಶ್ ಬಸ್ ನಿಲ್ಲಿಸಿ ಓಡಿ ಹೋದಾಗ ದೇಹಗಳು ಹಾಗೂ ಗಾಯಾಳುಗಳು ಅಲ್ಲೇ ಬಿದ್ದಿದ್ದರು. ಕೂಡಲೇ ಆಂಬ್ಯುಲೆನ್ಸ್‌ನಲ್ಲಿ ಹಾಕಿ ಸುರೇಶ್ ಗೌಡ ಹಾಗೂ ಶ್ರೀಧರ್ ಗೌಡರನ್ನು ಆಸ್ಪತ್ರೆಗೆ ಸಾಗಿಸಲಾಯಿತು.
ನೆಲ್ಯಾಡಿವರೆಗೆ ಜೀವಂತವಿದ್ದ ಶ್ರೀಧರ್ ಗೌಡ: ಹರೀಶ್ ಗೌಡರವರು ಶ್ರೀಧರ್ ಗೌಡ ಅವರನ್ನು ಒಂದು ಆಂಬ್ಯುಲೆನ್ಸ್‌ನಲ್ಲಿ ಹಾಗೂ ಸ್ಥಳೀಯರು ಸುರೇಶ್ ಅವರನ್ನು ಮತ್ತೊಂದು ಆಂಬ್ಯುಲೆನ್ಸ್‌ನಲ್ಲಿ ಕರೆದೊಯ್ದರು. ಶ್ರೀಧರ್ ಗೌಡರವರು ನೆಲ್ಯಾಡಿಯ ಅಶ್ವಿನಿ ಆಸ್ಪತ್ರೆಗೆ ಕರೆ ತಂದಾಗ ಉಸಿರಾಡುತ್ತಿದ್ದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನತ್ತ ಸಾಗಿಸುವ ವೇಳೆ ಉಪ್ಪಿನಂಗಡಿ ಸಮೀಪ ಕೊನೆಯುಸಿರೆಳೆದಿದ್ದಾರೆ.
ಮೃತ ಮೂವರು ಕೂಡ ಸಮಾಜ ಸೇವಕರು: ಮೃತರಲ್ಲಿ ಮೂವರು ಕೂಡ ಸಮಾಜ ಸೇವಕರಾಗಿದ್ದರು. ಕೊಕ್ಕಡದಲ್ಲಿ ಎಸ್.ಆರ್.ಆಯಿಲ್ ಮಿಲ್ ಹೊಂದಿದ್ದ ಚಂದ್ರಶೇಖರ ಗೌಡ ಅವರು ಉದ್ಯಮದ ಜೊತೆಗೆ ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿದ್ದರು. ಅವರು ಪಟ್ಟೂರು ಶ್ರೀರಾಮ ವಿದ್ಯಾಸಂಸ್ಥೆಯ ಅಧ್ಯಕ್ಷರಾಗಿ, ಶಿಶಿಲ ಶಿಶಿಲೇಶ್ವರ ದೇವಸ್ಥಾನದ ಆಡಳಿತ ಸಮಿತಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.
ಇವರ ಪತ್ನಿ ಚೇತನ ಅವರು ಬೆಳ್ತಂಗಡಿ ತಾ.ಪಂ. ಮಾಜಿ ಸದಸ್ಯೆಯಾಗಿದ್ದಾರೆ. ಮೃತರು ಪತ್ನಿ ಚೇತನಾ, ವೈದ್ಯೆಯಾಗಿರುವ ಪುತ್ರಿ ಡಾ.ಚಂದನಾ ಹಾಗೂ ಜೈಪುರದಲ್ಲಿ ಆರ್ಕಿಟೆಕ್ಟ್ ಕಲಿಯುತ್ತಿರುವ ಮಗ ಚಿನ್ಮಯ್ ಅವರನ್ನು ಅಗಲಿದ್ದಾರೆ. ಜನಾರ್ದನ ಗೌಡ ಅವರು ಕೃಷಿಕರಾಗಿದ್ದು ಜೊತೆಗೆ ಆಟೋ ಚಾಲಕರಾಗಿಯೂ ಕೆಲಸ ಮಾಡುತ್ತಿದ್ದರು. ಉಜಿರೆಯ ಜನಾರ್ದನ ಸ್ವಾಮಿ ದೇವಸ್ಥಾನದ ಬ್ರಹ್ಮಕಲಶೋತ್ಸವದಲ್ಲಿ ಸಕ್ರೀಯವಾಗಿ ಭಾಗಿಯಾಗಿದ್ದರು. ಇವರು ಪತ್ನಿ ಚಂದ್ರಕಲಾ ಹಾಗೂ ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಪುತ್ರಿಯರಾದ ಅನ್ವಿತಾ ಮತ್ತು ನಿಶ್ಮಿತಾ ಅವರನ್ನು ಆಗಲಿದ್ದಾರೆ. ಕಕ್ಕಿಂಜೆಯಲ್ಲಿ ಫೈನಾನ್ಸ್ ಹೊಂದಿದ್ದ ಶ್ರೀಧರ ಗೌಡ ಅವರು ಉಜಿರೆಯ ಬ್ರಹ್ಮಕಲಶೋತ್ಸವದಲ್ಲಿ ಸುಪ್ರಸಾದ ಭೋಜನಾಲಯದಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿದ್ದರು. ಉಜಿರೆಯ ಶಾರದಾ ಪೂಜಾ ಸಮಿತಿಯ ಅಧ್ಯಕ್ಷರಾಗಿಯೂ ಇವರು ಸೇವೆ ಸಲ್ಲಿಸಿದ್ದಾರೆ. ಅಲ್ಲದೆ ಶಾರದೋತ್ಸವ, ಗಣೇಶೋತ್ಸವ ಸಂದರ್ಭದಲ್ಲಿ ಅನ್ನದಾನದ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಿದ್ದರು. ಅಶಕ್ತರಿಗೆ ಸದಾ ಸಹಾಯ ಹಸ್ತ ಚಾಚುತ್ತಿದ್ದ ಶ್ರೀಧರ್ ಗೌಡರವರು ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇವರು ಪತ್ನಿ ಉಷಾ ಶ್ರೀಧರ್ ಗೌಡ, ಬೆಂಗಳೂರಿನಲ್ಲಿ ವೈದ್ಯೆಯಾಗಿರುವ ಪುತ್ರಿ ಡಾ.ಶ್ರೇಯಾ, ಮಂಗಳೂರಿನ ಎ.ಜೆ. ಸಂಸ್ಥೆಯಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿರುವ ಪುತ್ರ ಸೃಜನ್ ಅವರನ್ನು ಅಗಲಿದ್ದಾರೆ.
ಪುತ್ತೂರಿನಲ್ಲಿ ಮರಣೋತ್ತರ ಪರೀಕ್ಷೆ-ಮಾರ್ಚ್ ೧೪ರಂದು ಅಂತ್ಯಸಂಸ್ಥಾರ: ಅಪಘಾತ ನಡೆದಂದು ಮೃತರಾದ ಮೂವರ ದೇಹಗಳನ್ನು ಪುತ್ತೂರಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಶವಾಗಾರದಲ್ಲಿಡಲಾಗಿತ್ತು. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಸಂಬಂಧಿಕರು ನೀಡಿದ ದೂರಿನ ಹಿನ್ನಲೆಯಲ್ಲಿ ಕೇಸ್‌ನ ಮಹಜರು ನಡೆದು ಮೂವರ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಮಾರ್ಚ್ ೧೪ರಂದು ಜನಾರ್ದನ ಕೇರಿಮಾರ್‌ರವರ ಮೃತದೇಹದ ಅಂತ್ಯಸಂಸ್ಕಾರ ಗುರಿಪಳ್ಳದ ಅವರ ಜಮೀನಿನಲ್ಲಿ, ಶ್ರೀಧರ್ ಗೌಡರ ಪಾರ್ಥೀವ ಶರೀರದ ಅಂತ್ಯಸಂಸ್ಕಾರ ಉಜಿರೆಯ ಅರಳಿಯಲ್ಲಿರುವ ಅವರ ಜಮೀನಿನಲ್ಲಿ ಹಾಗೂ ಚಂದ್ರಶೇಖರ್‌ರವರ ಮೃತದೇಹದ ಅಂತ್ಯಸಂಸ್ಕಾರದ ಶಿಶಿಲದ ಧರ್ಮದಕಲದಲ್ಲಿರುವ ಅವರ ಜಮೀನಿನಲ್ಲಿ ನಡೆಸಲಾಗಿದೆ.

ಪೊಲೀಸ್ ಅಧಿಕಾರಿಗಳ ಭೇಟಿ: ಘಟನಾ ಸ್ಥಳಕ್ಕೆ ದ.ಕ. ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ, ಬೆಳ್ತಂಗಡಿ ಡಿವೈಎಸ್‌ಪಿ ರೋಹಿಣಿ ಸಿ.ಕೆ., ಉಪ್ಪಿನಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ನಾಗರಾಜ್, ಪ್ರೊಬೆಷನರಿ ಎಎಸ್ಪಿ ಅನನ್ಯ ಶ್ರೀವಾಸ್ತವ್, ನೆಲ್ಯಾಡಿ ಹೊರಠಾಣೆ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗಣ್ಯರ ಭೇಟಿ, ಅಶ್ರುತರ್ಪಣ: ಘಟನೆ ನಡೆದ ದಿನ ಪುತ್ತೂರಿನ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಶಾಸಕ ಹರೀಶ್ ಪೂಂಜ ಭೇಟಿಯಾಗಿ ಪಾರ್ಥೀವ ಶರೀರದ ದರ್ಶನ ಪಡೆದರು. ಅಲ್ಲದೆ ಅಂತ್ಯಸಂಸ್ಕಾರದ ದಿನ ಮೂರೂ ಮನೆಗಳಿಗೂ ಭೇಟಿ ನೀಡಿ ಸಂತಾಪ ಸೂಚಿಸಿದರು. ಪುತ್ತೂರಿಗೆ ವಿಜಯಸಾಮ್ರಾಟ್ ಟ್ರಸ್ಟ್‌ನ ಸ್ಥಾಪಕ ಸಹಜ್ ರೈ ಬಳಜ್ಜ, ಗ್ರಾಮ ಪಂಚಾಯತ್ ನೌಕರರ ಸಂಘದ ರಾಜ್ಯಾಧ್ಯಕ್ಷ ದೇವಿಪ್ರಸಾದ್ ಗೌಡ ಬೊಳ್ಮ, ಭರತ್ ಕುಮಾರ್, ಕಾಂಗ್ರೆಸ್ ಮುಖಂಡ ಹಳ್ಳಿಮನೆ ಪ್ರವೀಣ್ ಫೆನಾಂಡೀಸ್ ಮುಂತಾದವರು ಭೇಟಿ ನೀಡಿದ್ದರು. ಮೂವರ ಅಂತ್ಯಸಂಸ್ಕಾರ ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಪೂಂಜ, ಕಾಳಭೈರವೇಶ್ವರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಂಜನ್ ಜಿ. ಗೌಡ, ವಕೀಲರಾದ ಶ್ರೀನಿವಾಸ್, ವಿಶ್ವ ಹಿಂದೂ ಪರಿಷತ್ ಮುಖಂಡ ನವೀನ್ ನೆರಿಯ ಮೊದಲಾದವರು ಅಪಾರ ಸಂಖ್ಯೆಯಲ್ಲಿ ಮೃತರ ಮನೆಗಳಿಗೆ ಭೇಟಿ ನೀಡಿ ಅಂತಿಮ ದರ್ಶನ ಪಡೆದು ಕುಟುಂಬದವರಿಗೆ ಸಂತಾಪ ಸೂಚಿಸಿದರು.

ಕೊಕ್ಕಡದಲ್ಲಿ ಅಂತಿಮ ದರ್ಶನ-ವರ್ತಕರಿಂದ ಅಂಗಡಿ ಮುಚ್ಚಿ ಶ್ರದ್ಧಾಂಜಲಿ: ಕೊಕ್ಕಡದಲ್ಲಿ ಎಸ್.ಆರ್. ಆಯಿಲ್ ಮಿಲ್ ಉದ್ಯಮ ನಡೆಸುತ್ತಿದ್ದ ಶಿಶಿಲದ ಧರ್ಮದಕಳ ನಿವಾಸಿ ಚಂದ್ರಶೇಖರ ಗೌಡರ ಪಾರ್ಥೀವ ಶರೀರ ಕೊಕ್ಕಡ ತಲುಪಿದಾಗ ಅಲ್ಲಿ ಸಾರ್ವಜನಿಕರು, ವರ್ತಕರು ಅಂತಿಮ ದರ್ಶನ ಪಡೆದರು. ಎಸ್.ಆರ್. ಆಯಿಲ್ ಮಿಲ್ ಆವರಣದಲ್ಲಿ ಸಾರ್ವಜನಿಕ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ, ಕೊಕ್ಕಡ ಗ್ರಾಮ ಪಂಚಾಯಿತಿಯ ನಿಕಟಪೂರ್ವ ಅಧ್ಯಕ್ಷ ಯೋಗೀಶ್ ಆಲಂಬಿಲ, ಕೊಕ್ಕಡ ಪಂಚಮಿ ಆಯುರ್ಧಾಮ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಬಿ.ಮೋಹನ್‌ದಾಸ್ ಗೌಡ, ನೆಲ್ಯಾಡಿ ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷ ರವಿಪ್ರಸಾದ್ ಬಲ್ಯ, ಕೊಕ್ಕಡ ರಕ್ತೇಶ್ವರಿ ಪೆಟ್ರೋ ಪಾಯಿಂಟ್‌ನ ಮಾಲಕ ನಾರಾಯಣ ಗೌಡ, ಹತ್ಯಡ್ಕ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಘವೇಂದ್ರ ನಾಯಕ್, ನಿರ್ದೇಶಕ ಕೊರಗಪ್ಪ ಗೌಡ, ಶಿಶಿಲ ಗ್ರಾಮ ಪಂಚಾಯಿತಿಯ ನಿಕಟಪೂರ್ವ ಅಧ್ಯಕ್ಷ ಸುಧೀನ್, ಸಂದೀಪ್ ಅಮ್ಮುಡಂಗೆ, ಕರುಣಾಕರ ಶಿಶಿಲ, ರಾಧಾಕೃಷ್ಣ ಶಿಶಿಲ ಸೇರಿದಂತೆ ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯರು, ಕೊಕ್ಕಡದ ವರ್ತಕರು ಹಾಗೂ ಗ್ರಾಮಸ್ಥರು, ಬಂಧುಗಳು ಹಾಗೂ ಹಿತೈಷಿಗಳು ಆಗಮಿಸಿ ಅಂತಿಮ ದರ್ಶನ ಪಡೆದು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು. ಮೃತರಿಗೆ ಗೌರವ ಸೂಚಿಸುವ ನಿಟ್ಟಿನಲ್ಲಿ ಕೊಕ್ಕಡದ ಎಲ್ಲಾ ವರ್ತಕ ಬಂಧುಗಳು ಬೆಳಿಗ್ಗೆ ಸುಮಾರು ಒಂದು ಗಂಟೆ ತಮ್ಮ ಅಂಗಡಿ ವ್ಯವಹಾರಗಳನ್ನು ಬಂದ್ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದರು.

LEAVE A REPLY

Please enter your comment!
Please enter your name here