







ಬೆಳ್ತಂಗಡಿ: ೨೦೧೮ರಿಂದ ೨೦೨೧ರವರೆಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಇನ್ಸ್ಪೆಕ್ಟರ್ ಆಗಿದ್ದು ಪ್ರಸ್ತುತ ಮಂಗಳೂರು ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಮೂಡುಬಿದಿರೆ ಠಾಣೆಯಲ್ಲಿ ಇನ್ಸ್ಪೆಕ್ಟರ್ ಆಗಿರುವ ಬಿ.ಜಿ. ಸಂದೇಶ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಅವರನ್ನು ಅಮಾನತುಗೊಳಿಸಲಾಗಿದೆ. ಮೂವರು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಸಂದೇಶ್ ಅವರ ವಿರುದ್ಧ ಕೇಳಿ ಬಂದಿದ್ದು ಇಲಾಖೆಯಲ್ಲಿ ಭಾರೀ ಕಂಪನ ಸೃಷ್ಟಿಸಿದೆ. ಮೂವರು ಸಂತ್ರಸ್ತೆಯರು ಮುಖ್ಯಮಂತ್ರಿ, ಗೃಹಸಚಿವರು, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ, ಡಿಜಿಪಿ ಮತ್ತು ಮಹಿಳಾ ಆಯೋಗಕ್ಕೆ ಪ್ರತ್ಯೇಕ ದೂರು ಸಲ್ಲಿಸಿದ್ದಾರೆ. ಈ ಪೈಕಿ ಒಬ್ಬ ಸಂತ್ರಸ್ತೆ ೨೦೨೫ರ ಆಗಸ್ಟ್ ೧೮ರಂದು ನನ್ನ ಗಂಡನನ್ನು ಸುಳ್ಳು ಆರೋಪ ಹೊರಿಸಿ ಬಂಧಿಸಿದ್ದ ಪ್ರಕರಣದಲ್ಲಿ ಇನ್ಸ್ಪೆಕ್ಟರ್ ಸಂದೇಶ್ ೨೫ ಲಕ್ಷ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದರು. ಅಲ್ಲದೆ ನಾನು ಗೃಹ ಸಚಿವರಿಗೆ ೫೦ ಲಕ್ಷ ರೂ. ಕೊಟ್ಟು ಪೋಸ್ಟಿಂಗ್ ಪಡೆದಿರುವುದಾಗಿ ಹೇಳಿದ್ದರು.
ಹಣ ಕೊಡಲು ಸಾಧ್ಯವಾಗದಿದ್ದರೆ ಲೈಂಗಿಕ ಬಯಕೆಗೆ ಸಹಕರಿಸುವಂತೆ ಬೆದರಿಸಿದ್ದರು ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಇನ್ಸ್ಪೆಕ್ಟರ್ ಕಿರುಕುಳ ತಾಳಲಾಗದೆ ೫೦ ಸಾವಿರ ರೂ. ನೀಡಿದ್ದೆ. ಇದಾದ ಬಳಿಕವೂ ಲೈಂಗಿಕ ಬೇಡಿಕೆ ಪಟ್ಟು ಮುಂದುವರಿಸಿದ್ದರು. ಒಪ್ಪದಿದ್ದರೆ ಡ್ರಗ್ಸ್ ಪೆಡ್ಲರ್ಗಳ ಮೂಲಕ ನರಕ ತೋರಿಸುತ್ತೇನೆ. ಅವರ ಮುಖಾಂತರ ಮಾನ ಮರ್ಯಾದೆ ಹರಾಜು ಹಾಕಿಸುತ್ತೇನೆಂದು ಕಿರುಕುಳ ನೀಡಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇನ್ಸ್ಪೆಕ್ಟರ್ ಸಂದೇಶ್ ವಿರುದ್ಧ ಪ್ರತ್ಯೇಕ ದೂರು ನೀಡಿರುವ ಇನ್ನಿಬ್ಬರು ಮಹಿಳೆಯರು ಕೂಡ ಸಾಲು ಸಾಲು ಆರೋಪ ಮಾಡಿದ್ದಾರೆ. ಹಣಕಾಸು ವಂಚನೆ, ಲೈಂಗಿಕ ಕಿರುಕುಳ ಹಾಗೂ ಬೆದರಿಕೆ ಆರೋಪದ ಕುರಿತು ತಮ್ಮ ದೂರುಗಳಲ್ಲಿ ಅವರು ಉಲ್ಲೇಖಿಸಿದ್ದಾರೆ. ಇನ್ಸ್ಪೆಕ್ಟರ್ ಸಂದೇಶ್ ವಿರುದ್ಧ ಈ ಹಿಂದೆ ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಮೇಲಾಧಿಕಾರಿಗಳಿಗೆ ದೂರು ನೀಡಿದ್ದರೂ ಸೂಕ್ತ ತನಿಖೆ ನಡೆದಿಲ್ಲ.
ಅಲ್ಲಿ ನ್ಯಾಯ ಸಿಗುವ ಭರವಸೆಯೂ ಇಲ್ಲ. ಈ ಕಾರಣಕ್ಕೆ ಪ್ರತ್ಯೇಕ ತನಿಖಾ ತಂಡ ರಚಿಸಿ ನ್ಯಾಯ ದೊರಕಿಸಿಕೊಡಬೇಕು ಎಂದು ಗೃಹ ಸಚಿವರು ಹಾಗೂ ಡಿಜಿಪಿಗೆ ನೀಡಿದ ದೂರುಗಳಲ್ಲಿ ಮಹಿಳೆಯರು ಒತ್ತಾಯಿಸಿದ್ದಾರೆ.
ಇನ್ಸ್ಪೆಕ್ಟರ್ ಅಮಾನತು- ಕಮೀಷನರ್ ಆದೇಶ: ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಉತ್ತರ ಎಸಿಪಿ ಶ್ರೀಕಾಂತ್ ಅವರು ನೀಡಿರುವ ವರದಿ ಆಧಾರದಲ್ಲಿ ಮೂಡುಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ. ಅವರನ್ನು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅಮಾನತುಗೊಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಲಭ್ಯವಾಗಿರುವ ಆಡಿಯೋ ಮತ್ತು ವೀಡಿಯೋದಲ್ಲಿ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿರುವುದು ಸ್ಪಷ್ಟವಾಗಿದೆ. ಆ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಸ್ತತ ತನಿಖೆ ನಡೆಸಲಾಗುವುದು ಎಂದು ಕಮಿಷನರ್ ತಿಳಿಸಿದ್ದಾರೆ. ಮೊದಲು ದೂರು ನೀಡಿರುವ ಹಾಗೂ ಮಾಧ್ಯಮ ಹೇಳಿಕೆ ನೀಡಿರುವ ಮಹಿಳೆ ಹಾಗೂ ಆಕೆಯ ಸಹೋದರಿಗೆ ಕೌಟುಂಬಿಕ ಕಲಹವಿದೆ. ಮಹಿಳೆ ಹಾಗೂ ಆಕೆಯ ಸಹೋದರಿಯ ವಿರುದ್ಧ ಎರಡು ಪ್ರಕರಣಗಳು ಕೂಡ ದಾಖಲಾಗಿವೆ. ಇವರ ದೂರು ಆಧರಿಸಿ ಇನ್ಸ್ಪೆಕ್ಟರ್ ವಿರುದ್ಧವೂ ಪ್ರಕರಣಗಳು ದಾಖಲಾಗಿವೆ.


ಅದರಲ್ಲಿ ಸದ್ಯ ವಿಚಾರಣೆಯಲ್ಲಿರುವ ಒಂದು ಪ್ರಕರಣ ಹೊರತು ಪಡಿಸಿ ಉಳಿದ ಎಲ್ಲ ಪ್ರಕರಣಗಳು ಹೈಕೋರ್ಟ್ನಲ್ಲಿ ಸ್ಟೇ ತಂದಿದ್ದಾರೆ. ಎರಡನೇ ಮಹಿಳೆ ಇನ್ಸ್ಪೆಕ್ಟರ್ ವಿರುದ್ಧ ಮಾಧ್ಯಮದಲ್ಲಿ ಹೇಳಿಕೆ ನೀಡಿದ್ದಾರೆ. ಅವರ ಪತಿ ವಿರುದ್ಧ ನಾಲ್ಕು ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ ಒಂದರಲ್ಲಿ ಅವರು ಖುಲಾಸೆಯಾಗಿದ್ದಾರೆ. ಒಂದು ಪ್ರಕರಣದಲ್ಲಿ ಬಡ ವ್ಯಕ್ತಿಯ ಕಿಡ್ನಿ ಚಿಕಿತ್ಸೆಗೆ ಸಂಗ್ರಹಿಸಿದ ಹಣವನ್ನು ದುರುಪಯೋಗಪಡಿಸಿಕೊಂದ ಆರೋಪವಿದೆ. ಮಹಿಳೆ ಮತ್ತು ಆಕೆಯ ಪತಿ ಆರೋಪಿಗಳಾಗಿದ್ದಾರೆ. ಸಾಕ್ಷ್ಯ ಸಂಗ್ರಹದ ಅನಂತರ ಅವರ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಲಾಗಿದೆ. ಆಕೆಯ ಮೇಲೆ ಕಿರುಕುಳ ನೀಡಿರುವ ಯಾವುದೇ ಸಾಕ್ಷಿ ದೊರಕಿಲ್ಲ. ಅಸಭ್ಯವಾಗಿ ವರ್ತಿಸಿದ್ದಾರೆ ಮತ್ತು ಲಂಚ ಕೇಳಿದ್ದಾರೆ ಎಂದು ಆಕೆ ಹೇಳಿರುವ ಸ್ಥಳದಲ್ಲಿ ಸಿ.ಸಿ. ಕೆಮರಾ ಇದೆ. ಇಬ್ಬರು ಮಾಧ್ಯಮ ಪ್ರತಿನಿಧಿಗಳು ಮತ್ತು ವಕೀಲರು ಸ್ಥಳದಲ್ಲಿದ್ದರು. ಅವರ ಜತೆ ಮಾತನಾಡಿದ ಬಳಿಕ ಅಂತಹ ಯಾವುದೇ ಘಟನೆಗಳು ನಡೆದಿಲ್ಲ ಎಂದು ಸ್ಪಷ್ಟವಾಗಿದೆ ಎಂದು ಕಮಿಷನರ್ ತಿಳಿಸಿದ್ದಾರೆ.
ವೀಡಿಯೋ-ಆಡಿಯೋದ ಮಹಿಳೆಯರು ಬೇರೆ: ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಮಹಿಳೆಯರು ಹಾಗೂ ವೀಡಿಯೋ ಮತ್ತು ಆಡಿಯೋದಲ್ಲಿರುವ ಮಹಿಳೆಯರು ಬೇರೆ ಬೇರೆ. ಆದರೆ ವೀಡಿಯೋದಲ್ಲಿ ಇನ್ಸ್ಪೆಕ್ಟರ್ ಅನುಚಿತ ವರ್ತನೆ ತೋರಿರುವುದು ಹಾಗೂ ಫೋನ್ನಲ್ಲಿ ಮಹಿಳೆಯೊಂದಿಗೆ ಅಸಭ್ಯವಾಗಿ ಮಾತನಾಡಿರುವುದು ದೃಢಪಟ್ಟಿದೆ. ಈ ಮಹಿಳೆಯರು ಸದ್ಯ ಯಾವುದೇ ದೂರು ನೀಡಲು ನಿರಾಕರಿಸಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ತಮ್ಮ ಹೇಳಿಕೆಗಳನ್ನು ನೀಡಬಹುದೆಂದು ಅವರಿಗೆ ಸೂಚಿಸಲಾಗಿದೆ ಎಂದು ಕಮಿಷನರ್ ತಿಳಿಸಿದ್ದಾರೆ.
ವಿಚಾರಣೆ ನಡೆಸಿದ ಎಸಿಪಿ ಶ್ರೀಕಾಂತ್: ಮಂಗಳೂರು ಪೊಲೀಸ್ ಆಯುಕ್ತರ ಸೂಚನೆಯಂತೆ ಪಣಂಬೂರಿನಲ್ಲಿರುವ ಮಂಗಳೂರು ಉತ್ತರ ಎಸಿಪಿ ಕಚೇರಿಯಲ್ಲಿ ಸಹಾಯಕ ಪೊಲೀಸ್ ಆಯುಕ್ತ ಶ್ರೀಕಾಂತ್ ಅವರು ಸಂದೇಶ್ ಬಿ.ಜಿ. ಅವರನ್ನು ಹಲವು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ. ಮಹಿಳೆಯರು ಮಾಡಿರುವ ಆರೋಪ, ವೀಡಿಯೋ ಕ್ಲಿಪಿಂಗ್ಗಳು, ಆಡಿಯೋ ರೆಕಾರ್ಡ್ಗಳು ಎಲ್ಲದರ ಬಗ್ಗೆ ಮಾಹಿತಿ ಪಡೆದು ಕಮಿಷನರ್ಗೆ ವರದಿ ಸಲ್ಲಿಸಿದ್ದಾರೆ.
ಇನ್ಸ್ಪೆಕ್ಟರ್ ವಿರುದ್ಧ ಸುಳ್ಳು ಆರೋಪ-ದೂರುದಾರೆಯ ಸಹೋದರಿ ಹೇಳಿಕೆ: ಮೂಡುಬಿದಿರೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ. ವಿರುದ್ಧ ಸುಳ್ಳು ಆರೋಪ ಮಾಡಲಾಗಿದೆ ಎಂದು ಇನ್ಸ್ಪೆಕ್ಟರ್ ವಿರುದ್ಧ ದೂರು ನೀಡಿರುವ ಮಹಿಳೆಯೋರ್ವರ ಸಹೋದರಿ ಪ್ರಫುಲ್ಲಾ ಹೇಳಿಕೆ ನೀಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸಹೋದರಿಯಿಂದಾಗಿ ನಮ್ಮ ಮರ್ಯಾದೆ ಹೋಗುತ್ತಿದೆ. ನನ್ನ ಗಂಡನ ಜತೆ ಸಣ್ಣ ಗಲಾಟೆ ನಡೆದು ನಮ್ಮನ್ನು ಠಾಣೆಗೆ ಕರೆಸಿದ್ದಾಗ ಅಲ್ಲಿಗೆ ಸಹೋದರಿಯೂ ಬಂದಿದ್ದಳು. ಅಲ್ಲಿ ವೀಡಿಯೋ ಚಿತ್ರೀಕರಣ ಮಾಡುತ್ತಿದ್ದ ಆಕೆಯ ಮಗನಿಗೆ ಇನ್ಸ್ಪೆಕ್ಟರ್ ತಳ್ಳಿದ್ದರು. ಹಾಗಾಗಿ ಇನ್ಸ್ಪೆಕ್ಟರ್ ಮೇಲೆ ಆಕೆಗೆ ದ್ವೇಷವಿತ್ತು. ಅವರನ್ನು ಸೇವೆಯಿಂದ ಪದಚ್ಯುತಿಗೊಳಿಸಬೇಕೆಂಬ ಉದ್ದೇಶದಿಂದ ಅವರ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾಳೆ. ತಾಯಿಯ ಜಾಗದ ವಿಷಯವಾಗಿ ಆಕೆಗೆ ನನ್ನ ಮೇಲೆಯೂ ಕೋಪವಿದೆ. ಇವೆಲ್ಲ ಕಾರಣದಿಂದ ಸುಳ್ಳು ಆರೋಪ ಮಾಡಿದ್ದಾಳೆ ಎಂದರು.
ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ ಮಹಿಳಾ ಆಯೋಗ: ಇನ್ಸ್ಪೆಕ್ಟರ್ ಸಂದೇಶ್ ವಿರುದ್ದ ಕೇಳಿ ಬಂದಿರುವ ಲೈಂಗಿಕ ಕಿರುಕುಳ ಹಾಗೂ ಬೆದರಿಕೆ ಆರೋಪ ಸಂಬಂಧ ರಾಜ್ಯ ಮಹಿಳಾ ಆಯೋಗ ಸೋಮವಾರ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ. ಜತೆಗೆ ಸಾರ್ವಜನಿಕ ಅಧಿಕಾರಿಯಾದ ಸಂದೇಶ್ ದುರ್ವರ್ತನೆ ಖಂಡನೀಯ. ಅವರ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಿ ಶಿಸ್ತಿನ ಕ್ರಮ ಜರುಗಿಸಬೇಕು ಎಂದು ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರಿಗೆ ಪತ್ರ ಬರೆಯಲಾಗಿದೆ. ಜತೆಗೆ ಅನುಪಾಲನಾ ವರದಿ ಸಲ್ಲಿಸುವಂತೆಯೂ ಸೂಚಿಸಲಾಗಿದೆ.








