ಅಸಹಜ ಸಾವಿನ ಪ್ರಕರಣ: ಸೌಜನ್ಯ ತಾಯಿ ಕುಸುಮಾವತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆತನಿಖೆ ನಡೆಸಲಾಗಿದೆ ಎಂದು ತಿಳಿಸಿದ ಸರಕಾರ: ವರದಿ ಸಲ್ಲಿಸಲು ಹೈಕೋರ್ಟ್ ಸೂಚನೆ

0

ಬೆಳ್ತಂಗಡಿ; ಧರ್ಮಸ್ಥಳ ಗ್ರಾಮದಲ್ಲಿ ನಡೆದ ೭೪ ಅಸಹಜ ಸಾವುಗಳ ಬಗ್ಗೆ ಪ್ರತ್ಯೇಕ ಪ್ರಕರಣ ದಾಖಲಿಸಿ ತನಿಖೆ ನಡೆಸಲು ಆದೇಶಿಸುವಂತೆ ಆಗ್ರಹಿಸಿ ಧರ್ಮಸ್ಥಳ ಗ್ರಾಮದ ಪಾಂಗಳದ ಕು. ಸೌಜನ್ಯ ಅವರ ತಾಯಿ ಕುಸುಮಾವತಿ ಚಂದಪ್ಪ ಗೌಡ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಮಾ.೧೮ರಂದು ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ನಡೆದಿದೆ.

ತನಿಖಾ ವರದಿ ನೀಡಲು ಹೈಕೋರ್ಟ್ ಸೂಚನೆ: ೧೩ ವರ್ಷಗಳ ಹಿಂದೆ ಧರ್ಮಸ್ಥಳ ಗ್ರಾಮದ ಮಣ್ಣಸಂಕದಲ್ಲಿ ಅತ್ಯಾಚಾರಕ್ಕೀಡಾಗಿ ಹತ್ಯೆಗೀಡಾಗಿರುವ ಉಜಿರೆ ಎಸ್‌ಡಿಎಂ ಕಾಲೇಜಿನ ವಿದ್ಯಾರ್ಥಿನಿ ಕು. ಸೌಜನ್ಯ ಅವರ ತಾಯಿ ಕುಸುಮಾವತಿ ಚಂದಪ್ಪ ಗೌಡ ಅವರು ಧರ್ಮಸ್ಥಳ ಗ್ರಾಮದಲ್ಲಿ ನಡೆದ ೭೪ ಅಸಹಜ ಸಾವುಗಳ ಬಗ್ಗೆ ಪ್ರತ್ಯೇಕ ಪ್ರಕರಣ ದಾಖಲಿಸಿ ತನಿಖೆ ನಡೆಸಲು ಆದೇಶಿಸುವಂತೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಹಿಂದೆ ಈ ಅರ್ಜಿಯ ವಿಚಾರಣೆ ನಡೆದಿದ್ದಾಗ ಕುಸುಮಾವತಿ ಅವರ ಪರ ಹಿರಿಯ ವಕೀಲ ಎಸ್. ಬಾಲನ್ ವಾದ ಮಂಡಿಸಿದ್ದರು. ಸರಕಾರದ ಪರ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ವಾದ ಮಂಡಿಸಿ ನಾಪತ್ತೆ ಪ್ರಕರಣಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುವುದು.

ಈ ಪ್ರಕರಣಗಳ ಬಗ್ಗೆ ತನಿಖೆ ನಡೆಸುವುದಕ್ಕೆ ಸರಕಾರದ ಆಕ್ಷೇಪವಿಲ್ಲ. ಈ ಬಗ್ಗೆ ಒಂದು ವಾರದಲ್ಲಿ ನ್ಯಾಯಾಲಯಕ್ಕೆ ಮಾಹಿತಿ ಸಲ್ಲಿಸುವುದಾಗಿ ತಿಳಿಸಿದ್ದರು. ಬಳಿಕ ನ್ಯಾಯಾಲಯ ವಿಚಾರಣೆ ಮುಂದೂಡಿತ್ತು. ಮಾ.೧೮ರಂದು ಮತ್ತೆ ಅರ್ಜಿಯ ವಿಚಾರಣೆ ನಡೆದಿದ್ದು ಕುಸುಮಾವತಿ ಪರ ನ್ಯಾಯವಾದಿ ಎಸ್. ಬಾಲನ್ ಮತ್ತು ಸರಕಾರದ ಪರ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಹಾಜರಾಗಿದ್ದರು. ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಅವರು ಅರ್ಜಿಯ ವಿಚಾರಣೆ ನಡೆಸಿದ ವೇಳೆ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರು ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವು ಪ್ರಕರಣಗಳ ಕುರಿತು ಈಗಾಗಲೇ ಪೊಲೀಸರಿಂದ ತನಿಖೆ ನಡೆದಿದೆ ಎಂದು ತಿಳಿಸಿದರು. ಈ ವೇಳೆ ಎಸ್. ಬಾಲನ್ ಅವರು ಈ ವಾದಕ್ಕೆ ಆಕ್ಷೇಪ ಸೂಚಿಸಿದರು. ಅಸಹಜ ಸಾವು ಪ್ರಕರಣಗಳ ಕುರಿತು ಪೊಲೀಸ್ ಇಲಾಖೆ ತನಿಖೆ ನಡೆಸಿದ್ದಲ್ಲಿ ಅದರ ತನಿಖಾ ವರದಿಯನ್ನು ನ್ಯಾಯಪೀಠಕ್ಕೆ ಒದಗಿಸಿ ಎಂದು ಸರಕಾರಕ್ಕೆ ಸೂಚಿಸಿದ ಮುಖ್ಯ ನ್ಯಾಯಮೂರ್ತಿ ಅವರು ವಿಚಾರಣೆಯನ್ನು ಮುಂದೂಡಿದ್ದಾರೆ.

ಅರ್ಜಿಯಲ್ಲಿರುವ ಅಂಶ: ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಎಂಬ ಗ್ರಾಮದ ಸಣ್ಣ ಹೊರಠಾಣೆ ಪೊಲೀಸ್ ಠಾಣಾ ವ್ಯಾಪ್ತಿಯೊಂದರಲ್ಲೇ ೭೪ ಅಸಹಜ ಸಾವು ಪ್ರಕರಣಗಳು ಸಂಶಯಾಸ್ಪದವಾಗಿ ವರದಿಯಾಗಿದೆ. ಎಲ್ಲಿ ಶವ ಹೂತು ಹಾಕಿದ್ದು ಎನ್ನುವ ಮಾಹಿತಿ ಯಾವ ದಾಖಲೆಯಲ್ಲಿಯೂ ತಿಳಿಸಿಲ್ಲ. ಈ ಪ್ರಕರಣಗಳ ತನಿಖೆ ಮಾಡಲೆಂದೇ ರಾಜ್ಯ ಸರ್ಕಾರ ಎಸ್‌ಐಟಿ ರಚಿಸಿದೆ. ಆದರೆ ಎಸ್‌ಐಟಿಯು ಕೇವಲ ಒಂದು ಎಫ್‌ಐಆರ್ ದಾಖಲಿಸಿದೆ. ಉಳಿದ ೭೪ ಕೊಲೆ, ನಾಪತ್ತೆ, ಸಾವು ಪ್ರಕರಣಗಳಿಗೆ ಪ್ರತ್ಯೇಕ ಎಫ್‌ಐಆರ್ ದಾಖಲಿಸಿಲ್ಲ ಎಂದು ಕುಸುಮಾವತಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here