







ಬೆಳ್ತಂಗಡಿ: ಸಂತೆಕಟ್ಟೆಯಲ್ಲಿ ಕಳೆದ ೨೫ ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಶ್ರೀರಾಮ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಗ್ರಾಹಕರು ಠೇವಣಿ ಇಟ್ಟಿದ್ದ ಅಂದಾಜು ೪೦ ಕೋಟಿಗೂ ಅಧಿಕ ಹಣ ದುರುಪಯೋಗ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಮಾ.೧೭ರಂದು ಸಿಐಡಿ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಸೊಸೈಟಿಯ ಕಚೇರಿಗೆ ಆಗಮಿಸಿದ ಸಿಐಡಿ ಅಧಿಕಾರಿಗಳು ಮಹಜರು ನಡೆಸಿದ ನಂತರ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ.
ವಂಚನೆಗೊಳಗಾದ ಗ್ರಾಹಕರ ಪೈಕಿ ಬೆಳ್ತಂಗಡಿ ನಿವಾಸಿಗಳಾದ ದಯಾನಂದ ನಾಯಕ್, ನಿಧೀಶ್ ಡಿ.ನಾಯಕ್, ಶ್ರದ್ಧಾ ಬಿ., ಮಾಲಿನಿ ಟಿ. ರಾವ್, ತುಕಾರಾಮ್ ರಾವ್, ಅಕ್ಷಯಾ ಟಿ.ರಾವ್, ಅಕ್ಷತಾ ರಾವ್, ಚೈತ್ರಾ ಭಟ್, ಮೈತ್ರಿ ಭಟ್, ಸ್ವಾತಿ ಭಟ್, ನಂದಕುಮಾರ್, ಬಿ.ಗಣೇಶ್ ಭಟ್, ವಿದ್ಯಾ ಭಟ್ ಸೇರಿ ಒಟ್ಟು ೧೩ ಮಂದಿ ೨೦೨೫ರ ಮೇ ೨೨ರಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಬ್ಯಾಂಕ್ ಸಿಇಒ ಚಂದ್ರಕಾಂತ್, ಅಧ್ಯಕ್ಷ ಪ್ರಭಾಕರ ಸಿ.ಎಚ್., ಉಪಾಧ್ಯಕ್ಷ ಸದಾನಂದ ಎಂ.ಉಜಿರೆ, ನಿರ್ದೇಶಕರಾದ ವಿಶ್ವನಾಥ ಆರ್.ನಾಯಕ್, ಪ್ರಮೋದ್ ಆರ್. ನಾಯಕ್, ವಿಶ್ವನಾಥ, ಜಗನ್ನಾಥ ಪಿ., ರತ್ನಾಕರ, ಸುಮ ದಿನೇಶ್ ಉಜಿರೆ, ನಯನ ಶಿವಪ್ರಸಾದ್, ಮೋಹನದಾಸ್ ಕೆ, ಕಿಶೋರ್ ಕುಮಾರ್ ಲಾಯಿಲ, ಬ್ಯಾಂಕ್ ಸಿಬಂದಿ ಸರಿತಾ ಎಸ್. ಹಾಗೂ ವಿನೋದ್ ಕುಮಾರ್ ಸಿ.ಎಚ್. ವಿರುದ್ಧ ಪ್ರಕರಣ ದಾಖಲಿಸಿದ್ದರು.
ಆ ಬಳಿಕ ಈ ಕೇಸ್ ಮಂಗಳೂರು ಸೆನ್ ಠಾಣೆಗೆ ವರ್ಗಾಯಿಸಲಾಗಿತ್ತು. ನಂತರ ಈ ಪ್ರಕರಣವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸಿಐಡಿಗೆ ಹಸ್ತಾಂತರಿಸಿದ್ದರು. ಹೀಗಾಗಿ ಬೆಂಗಳೂರಿನ ಸಿಐಡಿ ಇನ್ಸ್ಪೆಕ್ಟರ್ ಹರೀಶ್ ನೇತೃತ್ವದ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿಯಾಗಿರುವ ಸೊಸೈಟಿಯ ಸಿಇಓ ಚಂದ್ರಕಾಂತ್ ಮತ್ತು ದೂರುದಾರ ದಯಾನಂದ್ ನಾಯಕ್ ಅವರ ಸಮ್ಮುಖದಲ್ಲಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಸಿಐಡಿ ಇನ್ಸ್ಪೆಕ್ಟರ್ ಹರೀಶ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.
ಗ್ರಾಹಕರಿಗೆ ಪಂಗನಾಮ ನಿಜ ಎಂದು ಲೆಕ್ಕಪರಿಶೋಧನಾ ನಿರ್ದೇಶಕರಿಗೆ ವರದಿ ನೀಡಲಾಗಿತ್ತು: ಬೆಳ್ತಂಗಡಿಯ ಶ್ರೀರಾಮಪತ್ತಿನ ಸಹಕಾರ ಸಂಘದಲ್ಲಿ ಕೋಟಿಗಟ್ಟಲೆ ಹಣಕಾಸು ಅವ್ಯವಹಾರ ನಡೆದಿರುವುದು ದೃಢವಾಗಿದೆ ಎಂದು ರಾಜ್ಯ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆಯ ಲೆಕ್ಕ ಪರಿಶೋಧನಾ ನಿರ್ದೇಶಕರಿಗೆ ವರದಿ ಸಲ್ಲಿಸಲಾಗಿತ್ತು. ಒಟ್ಟು ಅವ್ಯವಹಾರದ ಮೊತ್ತ ರೂ. ೩೦,೪೫,೨೪,೨೭೮ ಎಂದು ವರದಿಯಲ್ಲಿ ತಿಳಿಸಲಾಗಿತ್ತು. ಸಿ.ಎ. ತುಕಾರಾಮ ಆಂಡ್ ಕಂಪನಿಯ ಲೆಕ್ಕಪರಿಶೋಧಕರು ಈ ವರದಿಯನ್ನು ಸಲ್ಲಿಸಿದ್ದರು. ಅವ್ಯವಹಾರಕ್ಕೆ ಸಂಬಂಧಿಸಿ ಸಹಕಾರ ಸಂಘದ ೨೦೨೩-೨೪ನೇ ಸಾಲಿನ ಲೆಕ್ಕಪರಿಶೋಧನೆಯನ್ನು ಮುಂದಿನ ಕ್ರಮಗಳಿಗಾಗಿ ಸಲ್ಲಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿತ್ತು. ನಾವು ೨೦೨೩-೨೪ನೇ ಸಾಲಿನ ಅಂತಿಮ ಲೆಕ್ಕ ಪರಿಶೋಧನಾ ವರದಿಯಲ್ಲಿ ಸಾಕ್ಷ್ಯ ಸಮೇತ ಒಟ್ಟು ಹಣ ದುರುಪಯೋಗದ ಮೊತ್ತ ರೂ. ೩೦,೪೫,೨೪,೨೭೮.೦೦ ಎಂದು ಸಾಬೀತುಪಡಿಸಿರುತ್ತೇವೆ. ಈ ಮೊತ್ತ ೨೦೨೩-೨೪ನೇ ಸಾಲಿನ ಅಂತ್ಯದಲ್ಲಿ ಆಸ್ತಿ ಜವಾಬ್ದಾರಿ ತಃಖ್ಯೆಯ ಮೊತ್ತವಾಗಿದ್ದು ಹಿಂದಿನ ಹಲವಾರು ವರ್ಷಗಳಿಂದ ಕೂಡಿಕೊಂಡಿರುತ್ತವೆ. ೨೦೧೭-೧೮ರಿಂದ ೨೦೨೩-೨೪ನೇ ಸಾಲುಗಳ ಲೆಕ್ಕ ಪರಿಶೋಧನಾ ವರದಿಗಳ ಪ್ರತಿಗಳನ್ನು ಈ ಪತ್ರದೊಂದಿಗೆ ಲಗತ್ತಿಸಿರುತ್ತೇವೆ. ಇದರಿಂದ ಹಿಂದಿನ ವರದಿಗಳು ನಮ್ಮ ತಪಾಸಣೆಗೆ ಲಭ್ಯವಿರುವುದಿಲ್ಲ.
ಇದಲ್ಲದೆ ಪ್ರಮುಖವಾಗಿ ಗಮನಿಸಬೇಕಾದ ಅಂಶವೆಂದರೆ ೨೦೨೩-೨೪ನೇ ಸಾಲಿನ ಲೆಕ್ಕ ಪರಿಶೋಧನೆಯ ಸಂದರ್ಭದಲ್ಲಿ ಸಾಲಗಾರರಿಂದ ಲಿಖಿತ ರೂಪದಲ್ಲಿ ಮಾಹಿತಿ ಪಡೆದುಕೊಂಡಂತೆ ನಕಲಿ ಸಾಲಗಳೆಂದು ರುಜವಾತಿಗಿರುವ ಸಾಲಗಾರರ ಖಾತೆಗಳು ಹಾಗೂ ಠೇವಣಿಗಳೇ ಇಲ್ಲದೆ ನಕಲಿ ಸಾಲ ನೀಡಿರುವ ಸಾಲಗಾರರ ಖಾತೆಗಳು ೨೦೧೭-೧೮ನೇ ಸಾಲಿನ ಲೆಕ್ಕ ಪರಿಶೋಧನಾ ವರದಿಯಲ್ಲಿ ಗಮನಕ್ಕೆ ಬಂದಿದೆ. ಆದ್ದರಿಂದ ನಕಲಿ ಸಾಲ ನೀಡಿ ಸಂಘದ ಹಣವನ್ನು ದುರುಪಯೋಗ ಮಾಡಿರುವ ಕುರುಹುಗಳು ಮತ್ತು ಸಾಧ್ಯತೆಗಳು ಸಂಘದ ಆರಂಭದಿಂದಲೇ ಇದ್ದಂತಿದೆ.
ಮೇಲಾಗಿ ಸಂಘದ ಹಿಂದಿನ ಸಾಲುಗಳ ಲೆಕ್ಕ ಪರಿಶೋಧನಾ ವರದಿಗಳಲ್ಲಿ ಸೂಚಿಸಿರುವ ನ್ಯೂನ್ಯತೆಗಳನ್ನು ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗದವರು ನಿರ್ಲಕ್ಷಿಸಿದ್ದು ಸಂಘದ ಆರ್ಥಿಕ ಲೆಕ್ಕಗಳ ಮೇಲಿನ ಇಂಟರ್ನಲ್ ಆಡಿಟ್ ನಡೆಸದಿರುವುದು ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗದವರ ಅಪರಾಧಿ ಮಾನಸಿಕ ಸ್ಥಿತಿಗೆ ಹಿಡಿದ ಕನ್ನಡಿ ಎಂದು ವರದಿಯಲ್ಲಿ ಆರೋಪಿಸಲಾಗಿತ್ತು. ಸಂಘ ಕಾರ್ಯಾರಂಭಗೊಂಡ ೧೯೯೮ರ ವರ್ಷದಿಂದ ೨೦೨೩-೨೪ನೇ ಸಾಲುಗಳ ಸಂಘದ ಲೆಕ್ಕ ಪುಸ್ತಕಗಳನ್ನು ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ ೧೯೫೯ರ ಕಲಂ ೬೩(೧೩)ರ ಅಡಿಯಲ್ಲಿ ಮರು ಲೆಕ್ಕ ಪರಿಶೋಧನೆಗೆ ಆದೇಶಿಸಬೇಕೆಂದು ರಾಜ್ಯ ಲೆಕ್ಕ ಪರಿಶೋಧನಾ ನಿರ್ದೇಶಕರಿಗೆ ವರದಿಯಲ್ಲಿ ಕೋರಲಾಗಿತ್ತು.


ಆಸ್ತಿ ಜಪ್ತಿಗೆ ಸಹಕಾರ ಸಂಘಗಳ ಉಪನಿಬಂಧಕರ ನ್ಯಾಯಾಲಯ ಆದೇಶ ನೀಡಿತ್ತು: ಕಳೆದ ೨೫ ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಶ್ರೀರಾಮ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ ಸಂಸ್ಥೆ ಕೋಟಿಗಟ್ಟಲೆ ಹಣಕಾಸು ಅವ್ಯವಹಾರ ನಡೆಸಿ ಗ್ರಾಹಕರಿಗೆ ವಂಚಿಸಿದ ಆರೋಪದ ಹಿನ್ನೆಲೆಯಲ್ಲಿ ಸೊಸೈಟಿಯ ಅಧ್ಯಕ್ಷ ಮತ್ತು ನಿರ್ದೇಶಕರು ಸೇರಿದಂತೆ ಕೆಲವು ಸಿಬ್ಬಂದಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ದ.ಕ. ಜಿಲ್ಲೆಯ ಸಹಕಾರ ಸಂಘಗಳ ಉಪನಿಬಂಧಕರ ನ್ಯಾಯಾಲಯ ಮಹತ್ವದ ಆದೇಶ ನೀಡಿತ್ತು. ಈ ಮೂಲಕ ಶ್ರೀರಾಮ ಕ್ರೆಡಿಕ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಹಣದ ಅವ್ಯವಹಾರ ನಡೆದಿರುವುದು ನಿಜವೆಂದು ದೃಢಪಟ್ಟಿತ್ತು.
ಶ್ರೀರಾಮ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ೨೦೨೩-೨೪ನೇ ಸಾಲಿನ ಲೆಕ್ಕ ಪರಿಶೋಧನೆಯನ್ನು ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ ೧೯೫೯ರ ಕಲಂ ೬೩ರಡಿ ಬೆಂಗಳೂರಿನ ತುಕಾರಾಮ್ ಎಂಬವರು ಮಾಡಿ ವರದಿ ಸಲ್ಲಿಸಿದ್ದರು. ಲೆಕ್ಕ ಪರಿಶೋಧನೆಯಲ್ಲಿ ವ್ಯವಹಾರದಲ್ಲಿನ ನ್ಯೂನತೆಗಳು ಕಂಡುಬಂದಿದ್ದು ಸಂಘದಲ್ಲಿ ರೂ. ೩೦,೪೫,೨೭೮ಮೊತ್ತದಷ ಹಣದ ದುರುಪಯೋಗ ನಡೆದಿದೆ. ಇದನ್ನು ವಸೂಲು ಮಾಡಬೇಕು ಎಂದು ಶಿಫಾರಸು ಮಾಡಿದ್ದರು. ಇದನ್ನು ಪರಿಗಣಿಸಿದ್ದ ನ್ಯಾಯಾಲಯ ಸೊಸೈಟಿ ಅಧ್ಯಕ್ಷ ಪ್ರಭಾಕರ ಸಿಎಚ್, ನಿರ್ದೇಶಕರಾದ ವಿಶ್ವನಾಥ ನಾಯಕ್, ವಿಶ್ವನಾಥ, ಪ್ರಮೋದ್ ಆರ್. ನಾಯಕ್, ಪಿ. ಜಗನ್ನಾಥ್, ರತ್ನಾಕರ ಶೇರಿಗಾರ್, ನಯನ ಶಿವಪ್ರಸಾದ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ. ಚಂದ್ರಕಾಂತ್ ಮತ್ತು ಸಿಬ್ಬಂದಿ ಸರಿತಾ ಎಸ್. ಅವರ ಆಸ್ತಿಗಳನ್ನು ಜಪ್ತಿ ಮಾಡುವಂತೆ ಆದೇಶ ಮಾಡಿತ್ತು.
ಆರೋಪಪಟ್ಟಿಯಲ್ಲಿ ಏನೇನಿತ್ತು?: ಪುಸ್ತಕದಲ್ಲಿದ್ದ ಲೆಕ್ಕ ರೂ ೨೩,೭೩,೫೯೧ ರೂಪಾಯಿ. ಆದರೆ ಪರಿಶೀಲಿಸಿದಾಗ ಇದ್ದಿದ್ದು ರೂ. ೬ ಸಾವಿರ. ೫-೧೦-೨೦೨೪ರಂದು ನಗದು ಪರಿಶೀಲಿಸಿದಾಗ ಕೈಯಲಿರುವ ನಗದು ರೂ ೬೦೦೦ ಮಾತ್ರ ಇತ್ತು. ಆದರೆ ಪುಸ್ತಕದಲ್ಲಿ ರೂ ೨೩,೭೯,೫೯೧ ಎಂದು ಬರೆದಿತ್ತು. ಇರುವ ನಗದಿಗೂ ಪುಸ್ತಕದಲ್ಲಿರುವ ಮೊತ್ತಕ್ಕೂ ೨೩,೭೩,೫೯೧ ರಷ್ಟು ವ್ಯತ್ಯಾಸ ಕಂಡುಬಂದಿದೆ. ಆದರೆ, ೧೩-೦೮-೨೦೧೬ರ ಸಭೆಯಲ್ಲಿ ತೀರ್ಮಾನಿಸಿದಂತೆ ಸಂಘದಲ್ಲಿ ಇರಬಹುದಾದ ನಗದು ಮಿತಿಯು ೮,೦೦,೦೦೦ ರೂ ನಿಗದಿಪಡಿಸಿದ್ದು, ಬೈಲಾ ಪ್ರಕಾರ, ನಗದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ನಗದು ಗುಮಾಸ್ತೆಯ ಜಂಟಿ ಅಧೀನದಲ್ಲಿ ಇರಬೇಕಾಗಿರುತ್ತದೆ. ಇದಲ್ಲದೆ ಸಂಘದಲ್ಲಿ ಇರಬಹುದಾದ ನಗದು ಶಿಲ್ಕಿನ ಮೇಲೆ ತೆಗೆದುಕೊಂಡ ವಿಮೆಯ ಮೊತ್ತವು ೫ ಲಕ್ಷ ರೂ. ಆಗಿದ್ದು ಇದರ ಅವಧಿ ೯-೧೨-೨೦೨೩ರಂದು ಪೂರ್ಣಗೊಂಡಿದೆ. ಆದರೂ ಸಂಘ ವಿಮೆಯನ್ನು ನವೀಕರಣಗೊಳಿಸಿರಲಿಲ್ಲ.
ಇದು ಆಡಳಿತ ಮಂಡಳಿ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರ ನಿರ್ಲಕ್ಷ್ಯವಾಗಿದ್ದು, ಸದರಿ ಮೊತ್ತದ ದುರುಪಯೋಗವಾಗಿದೆ. ಲೆಕ್ಕ ಪರಿಶೋಧನಾ ಸಮಯದಲ್ಲಿ ಆಭರಣ ಸಾಲಗಳನ್ನು ಪರಿಶೀಲಿಸಿದಾಗ ಸಂಘದ ಲೆಕ್ಕ ಪುಸ್ತಕಗಳಲ್ಲಿ ಆಭರಣ ಸಾಲ ೭೦ ಜನರಿಂದ ರೂ. ೨,೨೧,೮೫,೧೯೫ ನೀಡಿರುವ ಬಗ್ಗೆ ನಮೂದಿಸಲಾಗಿದೆ. ಆದರೆ ಸಂಘದಲ್ಲಿ ಆಭರಣಗಳು ಪರಿಶೀಲನೆಗೆ ಲಭ್ಯವಿರುವುದಿಲ್ಲ. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೀಡಿದ ವಿವರದಂತೆ ಸಂಘ ಆರ್ಥಿಕ ದುರುಪಯೋಗಕ್ಕೊಳಗಾಗಿರುವುದರಿಂದ ಸದಸ್ಯರು ಬ್ಯಾಂಕ್ ಖಾತೆಗಳಿಂದ ಹಣ ಡ್ರಾ ಮಾಡಲು ಬಂದಾಗ ಸಂಘದಲ್ಲಿ ನಗದು ಲಭ್ಯವಿರುತ್ತಿರಲಿಲ್ಲ. ಇದಕ್ಕಾಗಿ ಸಾಲಗಾರರು ಅಡವಿಟ್ಟ ಚಿನ್ನಾಭರಣಗಳನ್ನು ಆಡಳಿತ ಮಂಡಳಿಯ ನಿರ್ದೇಶನದಂತೆ ನೆರೆಯ ಗುರುವಾಯನಕೆರೆ ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರ ಹೆಸರಿನಲ್ಲಿ ಅಡವಿಡಲಾಗುತ್ತಿತ್ತು.
ಈ ರೀತಿ ಅಡವಿಟ್ಟು ಬಂದ ನಗದನ್ನು ಸದಸ್ಯರಿಗೆ ಡ್ರಾ ಮಾಡುವ ಸಮಯದಲ್ಲಿ ನೀಡಲಾಗುತ್ತಿತ್ತು ಎಂಬ ಮಾಹಿತಿ ನೀಡಿದ್ದು ಸಂಘದ ಉಪನಿಯಮ ೫೩ರಲ್ಲಿ ನಿಗದಿಪಡಿಸಿದಂತೆ ಆಡಳಿತ ಮಂಡಳಿ ಸದಸ್ಯರು ಹಾಗೂ ಸಂಘದ ಅಧಿಕಾರಿಗಳು ಸಾಲ ಪ್ರಕ್ರಿಯೆಗಳಲ್ಲಿ ನಡೆದ ದುರುಪಯೋಗಗಳಿಗೆ ವೈಯಕ್ತಿಕ ಜವಾಬ್ದಾರರಾಗಿರುತ್ತಾರೆ. ಅಲ್ಲದೇ ಒಡವೆಗಳನ್ನು ರಕ್ಷಣೆ ಮಾಡುವ ಜವಾಬ್ದಾರಿ ಕಾರ್ಯನಿರ್ವಹಣಾಧಿಕಾರಿ ಮತ್ತು ಗುಮಾಸ್ತೆಯದ್ದಾಗಿರುತ್ತದೆ.
ಲೆಕ್ಕಪರಿಶೋಧನೆ ವೇಳೆ ನಿರಖು ಠೇವಣಿ ಮೇಲೆ ೧೫,೪೦,೮೫,೩೨೨ ರೂಪಾಯಿ ಸಾಲ ನೀಡಿದ್ದರ ಬಗ್ಗೆ ಪುಸ್ತಕಗಳಲ್ಲಿ ನಮೂದಿಸಲಾಗಿತ್ತು. ಇದು ಠೇವಣಿದಾರರ ಹಣಗಳನ್ನು ತಮ್ಮ ಸ್ವಂತಕ್ಕೆ ಬಳಸಲು ಆಡಳಿತ ಮಂಡಳಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ನಗದು ಗುಮಾಸ್ತರು, ಸಹಾಯಕರು ಮಾಡಿದ್ದ ಕುತಂತ್ರ ಎಂದು ಆರೋಪಿಸಲಾಗಿತ್ತು. ಬಳಿಕ ಆಸ್ತಿ ಜಪ್ತಿಗೆ ಸಹಕಾರ ಸಂಘಗಳ ಉಪನಿಬಂಧಕರ ನ್ಯಾಯಾಲಯ ನೀಡಿದ್ದ ಆದೇಶಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿತ್ತು. ಈ ಎಲ್ಲಾ ಅಂಶಗಳನ್ನು ಕ್ರೋಡೀಕರಿಸಿ ಸಿಐಡಿ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.








