






ಬೆಳ್ತಂಗಡಿ: ರಾಷ್ಟ್ರೀಯ ಹಿಂದು ಜಾಗರಣ ವೇದಿಕೆ ಮತ್ತು ಪ್ರಜಾಪ್ರಭುತ್ವ ವೇದಿಕೆಯ ಮುಖ್ಯಸ್ಥರೂ ಆಗಿರುವ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ(೫೭ವ) ಅವರನ್ನು ಮತ್ತೆ ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿದೆ. ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಅವರು ಮೂರನೇ ಬಾರಿ ಮಹೇಶ್ ಶೆಟ್ಟಿ ಅವರನ್ನು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡಿಪಾರು ಮಾಡಿ ಮಾ.೧೬ರಂದು ಆದೇಶ ಹೊರಡಿಸಿದ್ದಾರೆ. ಉಜಿರೆ ನಿವಾಸಿಯಾಗಿರುವ ಮಹೇಶ್ ಶೆಟ್ಟಿ ತಿಮರೋಡಿಯವರನ್ನು ಎ.ಸಿ. ಅವರು ೨೦೨೬ರ ಮಾ.೧೬ರಿಂದ ಸೆ.೧೬ರವರೆಗೆ ಗಡಿಪಾರು ಮಾಡಿ ಆದೇಶ ಹೊರಡಿಸಿದ ಬೆನ್ನಲ್ಲಿಯೇ ಬೆಳ್ತಂಗಡಿ ಉಪವಿಭಾಗದ ಡಿವೈಎಸ್ಪಿ ರೋಹಿಣಿ ಸಿ.ಕೆ. ಅವರ ನೇತೃತ್ವದಲ್ಲಿ ಪೊಲೀಸರ ತಂಡ ಗಡಿಪಾರು ಆದೇಶದ ಪ್ರತಿಯನ್ನು ಜಾರಿ ಮಾಡಲು ಮಹೇಶ್ ಶೆಟ್ಟಿ ತಿಮರೋಡಿ ಮನೆಗೆ ಮಾ.೧೬ರಂದು ಮಧ್ಯರಾತ್ರಿ ತೆರಳಿದೆ. ಈ ವೇಳೆ ಮಹೇಶ್ ಶೆಟ್ಟಿ ಅವರು ಮನೆಯಲ್ಲಿ ಇರದ ಕಾರಣ ಅವರ ಮನೆಯ ಗೋಡೆಗೆ ನೋಟಿಸ್ ಅಂಟಿಸಿ ವಾಪಸ್ ಬರಲಾಗಿದೆ.
ಎ.ಸಿ.ಆದೇಶಕ್ಕೆ ತಡೆ ನೀಡಿದ್ದ ಹೈಕೋರ್ಟ್: ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ದ.ಕ.ಜಿಲ್ಲೆಯಿಂದ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡಿಪಾರು ಮಾಡಿ ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಅವರು ಮಾಡಿದ್ದ ಆದೇಶಕ್ಕೆ ಹೈಕೋರ್ಟ್ ಈ ಹಿಂದೆ ತಾತ್ಕಾಲಿಕ ತಡೆಯಾಜ್ಞೆ ನೀಡಿತ್ತು. ಮಹೇಶ್ ಶೆಟ್ಟಿ ಸಲ್ಲಿಸಿದ್ದ ಆಕ್ಷೇಪಣೆಗಳನ್ನು ಪರಿಗಣಿಸಿದ್ದ ಹೈಕೋರ್ಟ್ ನ್ಯಾಯಮೂರ್ತಿಗಳು ಕಾನೂನು ಪ್ರಕ್ರಿಯೆ ಅನುಸರಿಸಿ ಹೊಸದಾಗಿ ಗಡಿಪಾರು ಆದೇಶ ಮಾಡುವಂತೆ ನಿರ್ದೇಶಿಸಿದ್ದರು. ಮಾನ್ವಿ ತಾಲೂಕಿಗೆ ಗಡಿಪಾರು ಮಾಡಿ ೨೦೨೫ರ ಡಿಸೆಂಬರ್ ೧೭ರಂದು ಪುತ್ತೂರು ಉಪ ವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಹೊರಡಿಸಿದ್ದ ಆದೇಶ ರದ್ದು ಮಾಡುವಂತೆ ಕೋರಿ ಮಹೇಶ್ ಶೆಟ್ಟಿ ತಿಮರೋಡಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ್ದ ಹೈಕೋರ್ಟ್ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ನಿರ್ದೇಶನ ನೀಡಿತ್ತು. ಗಡಿಪಾರು ಪ್ರಕರಣದಲ್ಲಿ ಈ ಹಿಂದೆ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರತಿವಾದಿಯಾಗಿರುವ ಉಪ ವಿಭಾಗಾಧಿಕಾರಿಗಳು ಅನುಸರಿಸಿಲ್ಲ.
ಖುಲಾಸೆಯಾಗಿರುವ ಪ್ರಕರಣಗಳನ್ನು ಉಲ್ಲೇಖಿಸಿ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದ್ದು ಅದಕ್ಕೆ ನಾನು ಸಲ್ಲಿಸಿರುವ ಆಕ್ಷೇಪಣೆಗಳನ್ನು ಪರಿಗಣಿಸದೆ ವಿವೇಚನಾ ರಹಿತವಾಗಿ ಆದೇಶ ಹೊರಡಿಸಲಾಗಿದೆ ಎಂದು ಮಹೇಶ್ ಶೆಟ್ಟಿ ಉಚ್ಛ ನ್ಯಾಯಾಲಯದ ಮೊರೆ ಹೋಗಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಯವರು ಪ್ರಕರಣವನ್ನು ಮತ್ತೆ ಉಪವಿಭಾಗಾಧಿಕಾರಿಗೆ ಹಿಂದಿರುಗಿಸಲಾಗುತ್ತಿದೆ. ನ್ಯಾಯಾಲಯದ ಈ ಆದೇಶದ ಪ್ರತಿ ದೊರೆತ ೩ ವಾರಗಳ ಒಳಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜಿದಾರರು ಸಲ್ಲಿಸಿರುವ ಆಕ್ಷೇಪಣೆಯನ್ನು ಪರಿಗಣಿಸಿ ಉಪವಿಭಾಗಧಿಕಾರಿಗಳು ಕಾನೂನು ಪ್ರಕಾರ ಸೂಕ್ತ ಆದೇಶ ಹೊರಡಿಸಬೇಕು ಎಂದು ಆದೇಶಿಸಿದ್ದರು. ಈ ಹಿನ್ನೆಲೆಯಲ್ಲಿ ಸಹಾಯಕ ಆಯುಕ್ತರು ಇದೀಗ ಪರಿಷ್ಕೃತ ಆದೇಶ ಹೊರಡಿಸಿ ಮಹೇಶ್ ಶೆಟ್ಟಿ ಅವರನ್ನು ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ. ಇದಕ್ಕೆ ಮೊದಲು ಬಂಟ್ವಾಳ ಡಿವೈಎಸ್ಪಿಯವರ ಕೋರಿಕೆಯಂತೆ ಪದೇ ಪದೇ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುತ್ತಿರುವುದರಿಂದ ರೌಡಿಶೀಟರ್ ಆಗಿರುವ ಮಹೇಶ್ ಶೆಟ್ಟಿ ತಿಮರೋಡಿಯವರನ್ನು ದ.ಕ. ಜಿಲ್ಲೆಯಿಂದ ಗಡೀಪಾರು ಮಾಡಿ ಸೆ. ೧೭ರಂದು ಪುತ್ತೂರು ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಹೊರಡಿಸಿದ್ದ ಆದೇಶಕ್ಕೂ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು.
ಗಡೀಪಾರು ಆದೇಶವನ್ನು ಕರ್ನಾಟಕ ಪೊಲೀಸ್ ಕಾಯ್ದೆಯ ಯಾವ ಕಲಂನಡಿ ಮಾಡಲಾಗಿದೆ ಎಂಬುದನ್ನು ಸ್ಪಷ್ಟವಾಗಿ ಕಾರಣ ಸಹಿತ ತಿಳಿಸಿಲ್ಲವಾದ್ದರಿಂದ ಈ ಬಗ್ಗೆ ಮತ್ತೊಂದು ಆದೇಶ ಮಾಡಲು ಹೈಕೋರ್ಟ್ ಸಹಾಯಕ ಆಯುಕ್ತರಿಗೆ ಸೂಚಿಸಿತ್ತು. ರಿಟ್ ಪಿಟಿಶನ್ ಆದೇಶದ ಪ್ರತಿಯನ್ನು ಸ್ವೀಕರಿಸಿದ ೧೫ ದಿನದೊಳಗೆ ಆದೇಶ ಮಾಡುವಂತೆಯೂ ಹೈಕೋರ್ಟ್ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಪುತ್ತೂರಿನ ಎ.ಸಿ. ಕೋರ್ಟ್ನಲ್ಲಿ ಮತ್ತೆ ವಿಚಾರಣೆ ನಡೆದು ಪುನಃ ಗಡೀಪಾರಿನ ಆದೇಶ ಹೊರಡಿಸಲಾಗಿತ್ತು.


ಗಡೀಪಾರು ಆದೇಶ ಹೊರ ಬಿದ್ದ ಕೂಡಲೇ ಮಹೇಶ್ ಶೆಟ್ಟಿ ಭೂಗತರಾಗಿದ್ದರು. ಗಡಿಪಾರು ಆದೇಶ ಜಾರಿ ಮಾಡುವ ನಿಟ್ಟಿನಲ್ಲಿ ಬೆಳ್ತಂಗಡಿ ಪೊಲೀಸ್ ಇನ್ಸ್ಪೆಕ್ಟರ್ ಬಿ.ಜಿ. ಸುಬ್ಬಾಪುರ ಮಠ್ ನೇತೃತ್ವದ ಪೊಲೀಸರ ತಂಡ ಮಹೇಶ್ ಶೆಟ್ಟಿ ಅವರ ಮನೆಗೆ ತೆರಳಿ ಮನೆಯ ಗೋಡೆಗೆ ಗಡೀಪಾರಿನ ಆದೇಶ ಪ್ರತಿ ಅಂಟಿಸಿದ್ದರು. ಅಲ್ಲದೆ ಉಜಿರೆ ಪೇಟೆಯಲ್ಲಿ ಮೈಕ್ನಲ್ಲಿ ಪ್ರಕಟಣೆ ಮೂಲಕ ಘೋಷಿಸಲಾಗಿತ್ತು.
ಆ ಬಳಿಕ ತನ್ನನ್ನು ಗಡೀಪಾರು ಮಾಡಿ ಸಹಾಯಕ ಆಯುಕ್ತರು ಆದೇಶ ಹೊರಡಿಸಿದ್ದನ್ನು ಪ್ರಶ್ನಿಸಿ ಮಹೇಶ್ ಶೆಟ್ಟಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ವೇಳೆ ಹೈಕೋರ್ಟ್ ನ್ಯಾಯಮೂರ್ತಿ ಬಿ.ಎಂ. ಶ್ಯಾಮ್ಪ್ರಸಾದ್ ಅವರು ವಿಚಾರಣೆಯಿಂದ ಹಿಂದೆ ಸರಿದಿದ್ದರು. ತಾನು ಈ ಹಿಂದೆ ಧರ್ಮಸ್ಥಳ ಕ್ಷೇತ್ರದ ಪರ ವಕೀಲನಾಗಿ ಕಾರ್ಯ ನಿರ್ವಹಿಸಿದ್ದರಿಂದ ಅರ್ಜಿ ವಿಚಾರಣೆಯಿಂದ ಹಿಂದೆ ಸರಿಯುತ್ತಿರುವುದಾಗಿ ಅವರು ತಿಳಿಸಿದ್ದರು.
ಮತ್ತೆ ಹೈಕೋರ್ಟ್ನಲ್ಲಿ ಮಹೇಶ್ ಶೆಟ್ಟಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆದಿದ್ದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ಗಡೀಪಾರು ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿದ್ದರು. ಇದೀಗ ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಅವರು ಮೂರನೇ ಬಾರಿ ಮಹೇಶ್ ಶೆಟ್ಟಿ ಅವರನ್ನು ಗಡಿಪಾರು ಆದೇಶ ಹೊರಡಿಸಿದ್ದಾರೆ. ಅದರ ಬೆನ್ನಿಗೇ ತಿಮರೋಡಿ ಭೂಗತರಾಗಿದ್ದಾರೆ. ಎ.ಸಿ. ಅವರ ಆದೇಶದ ಕುರಿತು ಮುಂದಿನ ಕಾನೂನು ಹೋರಾಟ ನಡೆಸಲು ಮಹೇಶ್ ಶೆಟ್ಟಿ ಅವರು ತಮ್ಮ ವಕೀಲರನ್ನು ಸಂಪರ್ಕಿಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
ತಿಮರೋಡಿ ಮೇಲ್ಮನವಿ ವಜಾಗೊಳಿಸಿದ ಹೈಕೋರ್ಟ್: ಗಡೀಪಾರು ಆದೇಶ ಸಂಬಂಧ ಮಹೇಶ್ ಶೆಟ್ಟಿ ತಿಮರೋಡಿ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ಮಂಗಳವಾರ ವಜಾಗೊಳಿಸಿದೆ. ಏಕ ಸದಸ್ಯ ಪೀಠ ೨೦೨೬ರ ಜ.೩೧ರಂದು ನೀಡಿದ್ದ ಆದೇಶ ಪ್ರಶ್ನಿಸಿ ಮಹೇಶ್ ಶೆಟ್ಟಿ ತಿಮರೋಡಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ಪೀಠ ಮೇಲ್ಮನವಿಯನ್ನು ವಜಾಗೊಳಿಸಿತು. ತಿಮರೋಡಿ ಅವರನ್ನು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ೨೦೨೫ರ ಡಿ.೧೬ರಿಂದ ೨೦೨೬ರ ಸೆ.೧೬ರವರೆಗೆ ೯ ತಿಂಗಳ ಕಾಲ ಗಡೀಪಾರು ಮಾಡಿ ಪುತ್ತೂರು ಸಹಾಯಕ ಆಯುಕ್ತರು ಆದೇಶಿಸಿದ್ದರು. ಅವರ ಆದೇಶ ಪ್ರಶ್ನಿಸಿ ಮಹೇಶ್ ಶೆಟ್ಟಿ ತಿಮರೋಡಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ಕುರಿತು ವಿಚಾರಣೆ ನಡೆಸಿದ್ದ ಏಕಸದಸ್ಯ ಪೀಠ ಗಡೀಪಾರು ಆದೇಶವನ್ನು ಪುತ್ತೂರು ಸಹಾಯಕ ಆಯುಕ್ತರಿಗೆ ಹಿಂದಿರುಗಿಸಿ ಅರ್ಜಿದಾರರ ಆಕ್ಷೇಪಣೆ ಪರಿಗಣಿಸಿ ಮೂರು ೫ ವಾರಗಳಲ್ಲಿ ಹೊಸ ಆದೇಶ ಹೊರಡಿಸುವಂತೆ ನಿರ್ದೇಶಿಸಿ ೨೦೨೬ರ ಜ.೩೧ರಂದು ಆದೇಶಿಸಿತ್ತು. ಅದನ್ನು ಪ್ರಶ್ನಿಸಿ ತಿಮರೋಡಿ ಮೇಲ್ಮನವಿ ಸಲ್ಲಿಸಿದ್ದರು. ಗಡೀಪಾರು ಆದೇಶದಿಂದ ತಮ್ಮ ಸ್ವಾತಂತ್ರ್ಯ ಕಸಿದಂತಾಗಿದೆ. ಆದೇಶ ನೀಡುವಾಗ ಸಹಾಯಕ ಆಯುಕ್ತರು ಪ್ರಕ್ರಿಯೆ ಪಾಲಿಸಿಲ್ಲ. ಸೌಜನ್ಯಾ ಕೊಲೆ ಪ್ರಕರಣದಲ್ಲಿ ಹೋರಾಟ ಮಾಡಿದ್ದಕ್ಕೆ ಹಲವು ಕೇಸ್ಗಳನ್ನು ಹಾಕಲಾಗಿತ್ತು. ಈಗ ಅದೇ ಕೇಸ್ ಆಧರಿಸಿ ಗಡೀಪಾರು ಆದೇಶ ಹೊರಡಿಸಲಾಗಿದೆ ಎಂದು ತಿಮರೋಡಿ ತಮ್ಮ ವಕೀಲರ ಮೂಲಕ ವಾದಿಸಿದ್ದರು.








