







ಬೆಳ್ತಂಗಡಿ: ಶಿಬಾಜೆಯ ದಲಿತ ಯುವಕ ಶ್ರೀಧರ್ ಅವರ ಸಂಶಯಾಸ್ಪದ ಸಾವಿನ ಕುರಿತು ಹೈಕೋರ್ಟ್ ಮೆಟ್ಟಿಲೇರಿ ವಿಶೇಷ ತನಿಖಾ ತಂಡದ ರಚನೆಗೆ ಕಾರಣಕರ್ತರಾಗಿರುವ ಹರೀಶ್ ಮೊಗೇರ ಅವರು ಆತ್ಮಹತ್ಯೆಗೆ ಯತ್ನಿಸಿಲ್ಲ. ಬದಲಾಗಿ ಮದ್ಯ ಎಂದು ಭಾವಿಸಿ ಕ್ರಿಮಿನಾಶಕ ಸೇವಿಸಿ ಅಸ್ವಸ್ಥಗೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿದೆ. ಘಟನೆ ಕುರಿತು ಪೊಲೀಸರು ಪ್ರಕಟಣೆ ನೀಡಿದ್ದು `ದಿನಾಂಕ ೧೧.೦೩.೨೦೨೬ರಂದು ಬೆಳ್ತಂಗಡಿ ಶಿಬಾಜೆ ನಿವಾಸಿ ಹರೀಶ್ ಮುಗೇರ ಎಂಬವರು ಅನಾರೋಗ್ಯಕ್ಕೀಡಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿ ವೈದ್ಯಕೀಯ ಸೂಚನಾಪತ್ರ ಬಂದ ಹಿನ್ನೆಲೆಯಲ್ಲಿ ಸದ್ರಿ ವ್ಯಕ್ತಿಯನ್ನು ವಿಚಾರಿಸಿ ವಿಡಿಯೋ ಹೇಳಿಕೆ ದಾಖಲಿಸಲಾಗಿದೆ. ಅದರಂತೆ ಸದ್ರಿ ವ್ಯಕ್ತಿಯು ದಿನಾಂಕ ೧೧.೦೩.೨೦೨೬ರಂದು ಮನೆಯಲ್ಲಿ ತಂದಿರಿಸಿದ್ದ ಮದ್ಯವನ್ನು ಸೇವಿಸುವುದಕ್ಕಾಗಿ ರಾತ್ರಿ ತೆಗೆಯುವಾಗ ಕಣ್ತಪ್ಪಿನಿಂದ ಸದ್ರಿ ಮದ್ಯದ ಬಾಟಲಿಯ ಬಳಿಯಿದ್ದ ಕೀಟನಾಶಕವನ್ನು ತೆಗೆದು ಸೇವಿಸಿರುವುದಾಗಿದೆ. ಇದರಿಂದಾಗಿ ಆರೋಗ್ಯದಲ್ಲಿ ಏರುಪೇರಾದಾಗ ತನ್ನ ಪತ್ನಿ ಹಾಗೂ ಜೊತೆಯಲ್ಲಿ ಕೆಲಸ ಮಾಡುತ್ತಿದ್ದವರು ಆಸ್ಪತ್ರೆಗೆ ದಾಖಲಿಸಿರುತ್ತಾರೆ.


ತಾನು ಮದ್ಯದ ಬದಲು ಆಕಸ್ಮಿಕವಾಗಿ ಕೀಟನಾಶಕ ಸೇವಿಸಿದ್ದು ಆದ್ದರಿಂದ ಈ ಬಗ್ಗೆ ಯಾವುದೇ ಕಾನೂನು ಕ್ರಮದ ಅಗತ್ಯವಿರುವುದಿಲ್ಲ ಎಂಬುದಾಗಿ ಹೇಳಿಕೆ ನೀಡಿರುತ್ತಾರೆ. ಈ ಬಗ್ಗೆ ಇನ್ನಷ್ಟು ಹೆಚ್ಚಿನ ವಿಚಾರಣೆ ನಡೆಸುವ ಸಲುವಾಗಿ ಸದ್ರಿ ವ್ಯಕ್ತಿಗೆ ತಜ್ಞರಿಂದ ಆಪ್ತ ಸಮಾಲೋಚನೆ ನಡೆಸುವಂತೆ ಜಿಲ್ಲಾ ವೈದ್ಯಾಧಿಕಾರಿಯವರಿಗೆ ಕೊರಲಾಗಿರುತ್ತದೆ.
ಆತನ ಮುಂದಿನ ಹೇಳಿಕೆಯ ಬಳಿಕ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು? ಎಂದು ತಿಳಿಸಲಾಗಿದೆ. ಉದ್ಯಮಿ ಎ.ಸಿ. ಕುರಿಯನ್ ಅವರ ಮಾಲಕತ್ವದ ಶಿಬಾಜೆಯ ಸಾರಾ ಫಾರ್ಮ್ನಲ್ಲಿ ಕಾರ್ಮಿಕನಾಗಿದ್ದ ಶ್ರೀಧರ್ ಅವರು ೨೦೨೨ರ ಡಿಸೆಂಬರ್ ೧೮ರಂದು ಸಂಶಯಾಸ್ಪದವಾಗಿ ಸಾವಿಗೀಡಾಗಿರುವ ಘಟನೆಗ ಸಂಬಂಧಿಸಿ ಕಾನೂನು ಹೋರಾಟ ನಡೆಸುತ್ತಿರುವ ಸಾರಾ ಫಾರ್ಮ್ನ ಮೇಲ್ವಿಚಾರಕ ಹರೀಶ್ ಮೊಗೇರ ಅವರು ಮಾ.೧೧ರಂದು ರಾತ್ರಿ ೯.೪೫ರ ವೇಳೆಗೆ ಫಾರ್ಮ್ ಹೌಸ್ನಲ್ಲಿ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಕ್ಷಣ ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಎಸ್ಐಟಿ ಅಧಿಕಾರಿಗಳು ಶ್ರೀಧರ್ ಅವರ ಸಾವಿನ ಕುರಿತು ತನಿಖೆ ಚುರುಕುಗೊಳಿಸಿದ ಬೆನ್ನಲ್ಲಿಯೇ ಹರೀಶ್ ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅವರು ಯಾವ ಕಾರಣಕ್ಕಾಗಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬುದು ಗೊತ್ತಾಗಿಲ್ಲ ಎಂದು ವಿವಿಧ ವೆಬ್ಸೈಟ್ ಸಹಿತ ಸಾಮಾಜಿಕ ಜಾಲತಾಣಗಳಲ್ಲಿ ವರದಿಯಾಗಿತ್ತು. ಈ ಹಿನ್ನಲೆಯಲ್ಲಿ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.








