







ಬೆಳ್ತಂಗಡಿ: ಗೇರುಕಟ್ಟೆ ಸಮೀಪದ ಸಂಭೋಳ್ಯದ ಬಾಲಕ ಸುಮಂತ್ ಅವರ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯಕ್ಕೆ `ಸಿ? ರಿಪೋರ್ಟ್ ಸಲ್ಲಿಸಲು ಪೊಲೀಸ್ ಇಲಾಖೆ ಸಿದ್ಧತೆ ನಡೆಸಿದೆ. ವಿವಿಧ ಆಯಾಮಗಳಿಂದ ಹಗಲು ರಾತ್ರಿ ಪೊಲೀಸ್ ಅಧಿಕಾರಿಗಳು ಶ್ರಮಿಸಿದರೂ ಯಾವುದೇ ಫಲಿತಾಂಶ ದೊರಕದೇ ಇರುವುದರಿಂದ ಈ ಕೇಸ್ ಕೂಡ ಪತ್ತೆಯಾಗದ ಪ್ರಕರಣಗಳ ಪಟ್ಟಿಗೆ ಸೇರ್ಪಡೆಯಾಗುವುದು ಬಹುತೇಕ ನಿಚ್ಚಳವಾಗಿದೆ ಎಂದು ಹೇಳಲಾಗುತ್ತಿದೆ. ಪೊಲೀಸರು ಹರಸಾಹಸ ಪಟ್ಟರೂ ನಿಗೂಢವಾಗಿಯೇ ಮುಂದುವರಿದ ಪ್ರಕರಣ: ಬೆಳ್ತಂಗಡಿ ತಾಲೂಕಿನ ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಜ.೧೪ರಂದು ಮುಂಜಾನೆ ಧನುಪೂಜೆಗೆ ತೆರಳಿದ್ದ ಗೇರುಕಟ್ಟೆ ಸಮೀಪದ ಓಡಿಲ್ನಾಳ ಗ್ರಾಮದ ಸಂಭೋಳ್ಯ ನಿವಾಸಿ ಸುಮಂತ್(೧೫) ಅವರ ಸಂಶಯಾಸ್ಪದ ಸಾವಿನ ಪ್ರಕರಣ ನಿಗೂಢವಾಗಿಯೇ ಮುಂದುವರಿದಿದೆ. ಗೇರುಕಟ್ಟೆ ಸರಕಾರಿ ಪ್ರೌಢಶಾಲೆಯಲ್ಲಿ ೯ನೇ ತರಗತಿಯ ವಿದ್ಯಾರ್ಥಿಯಾಗಿದ್ದ ಪ್ರತಿಭಾನ್ವಿತ ಬಾಲಕ ಸುಮಂತ್ ಅವರನ್ನು ವ್ಯವಸ್ಥಿತವಾಗಿ ಕೊಲೆ ಮಾಡಲಾಯಿತೇ, ಪ್ರಾಣಿಗಳ ದಾಳಿಗೆ ಆತ ಬಲಿಯಾದನೇ, ಪೂರ್ವ ನಿರ್ಧರಿತ ಕೃತ್ಯವೇ, ಆಕಸ್ಮಿಕವಾಗಿ ಆತನ ಮೇಲಿನ ಹೊಡೆತ ಆಯ ತಪ್ಪಿ ತಲೆಗೆ ಬಿದ್ದು ಗಂಭೀರ ಸ್ಥಿತಿಯಲ್ಲಿ ಆತನನ್ನು ಬಾವಿಗೆ ಎಸೆಯಲಾಯಿತೇ, ಪ್ರಾಣಿ ದಾಳಿ ಮಾಡಿದಾಗ ರಕ್ಷಣೆಗಾಗಿ ಆತ ಕೆರೆಯ ಬಳಿ ಹೋದಾಗ ನೀರಿಗೆ ಬಿದ್ದು ಮೃತಪಟ್ಟನೇ, ತಲೆಗೆ ತೆಂಗಿನಕಾಯಿ ಬಿದ್ದು ಗಾಯಗೊಂಡ ಆತ ಜೀವನ್ಮರಣ ಹೋರಾಟದೊಂದಿಗೆ ಕೆರೆಯ ಬಳಿ ಹೋದಾಗ ಕೊನೆಯುಸಿರೆಳೆದನೇ, ಯಾರೋ ಅಡಿಕೆ ಕಳ್ಳರು ಈ ಕೃತ್ಯ ನಡೆಸಿರಬಹುದೇ, ಯಾರದ್ದೋ ಅನೈತಿಕ ಚಟುವಟಿಕೆಯನ್ನು ಕಣ್ಣಾರೆ ಕಂಡಿದ್ದರಿಂದ ಈ ಕೃತ್ಯ ಎಸಗಿರಬಹುದೇ, ಈ ಕೃತ್ಯದ ಹಿಂದೆ ಯಾವುದೇ ವೈಷಮ್ಯದ ಕಾರಣ ಇರಬಹುದೇ ಎಂಬಿತ್ಯಾದಿ ಕೋನಗಳಲ್ಲಿ ಪೊಲೀಸ್ ತನಿಖೆ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆ ಮಾತ್ರವಲ್ಲದೆ ಕೇರಳದಲ್ಲಿಯೂ ಪೊಲೀಸರು ಜಾಲಾಡಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪಶ್ಚಿಮ ವಲಯ ಐಜಿಪಿ ಅಮಿತ್ಸಿಂಗ್, ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕುಮಾರ್ ಮತ್ತು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ ಅವರು ಕ್ಷಣ ಕ್ಷಣದ ಮಾಹಿತಿ ಪಡೆದು ಅಧೀನ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.
ಬೆಳ್ತಂಗಡಿ ಉಪವಿಭಾಗದ ಡಿವೈಎಸ್ಪಿ ರೋಹಿಣಿ ಸಿ.ಕೆ. ಮತ್ತು ತನಿಖಾಧಿಕಾರಿಯಾಗಿರುವ ಬೆಳ್ತಂಗಡಿ ಪೊಲೀಸ್ ಇನ್ಸ್ಪೆಕ್ಟರ್ ಬಿ.ಜಿ. ಸುಬ್ಬಾಪುರ ಮಠ್ ಅವರ ನೇತೃತ್ವದಲ್ಲಿ ನಾಲ್ಕು ತನಿಖಾ ತಂಡಗಳು ಅವಿರತ ಶ್ರಮ ವಹಿಸಿದರೂ ಪ್ರಕರಣ ಭೇದಿಸಲು ಸಾಧ್ಯವಾಗಿಲ್ಲ. ಹಾಗಾಗಿ ನ್ಯಾಯಾಲಯಕ್ಕೆ ಇದೊಂದು ಪತ್ತೆಯಾಗದ ಪ್ರಕರಣ ಎಂದು ಸಿ ರಿಪೋರ್ಟ್ ಸಲ್ಲಿಕೆ ಮಾಡಲು ತನಿಖಾಧಿಕಾರಿ ಸಿದ್ಧತೆ ನಡೆಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಕೋರ್ಟ್ಗೆ ಸಿ ರಿಪೋರ್ಟ್ ಸಲ್ಲಿಕೆ ಮಾಡಿದರೆ ಕೇಸ್ ಫೈಲ್ ರೀ ಓಪನ್ ಮಾಡಿ ತನಿಖೆ ಮಾಡಲು ಅವಕಾಶ ಇದೆ. ಹಾಗಾಗಿ ಒಂದು ಹಂತದಲ್ಲಿ ಸಿ ರಿಪೋರ್ಟ್ ಸಲ್ಲಿಕೆ ಮಾಡಲು ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳು ಮತ್ತು ಕಾನೂನು ತಜ್ಞರು ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ನಾಪತ್ತೆ ಪ್ರಕರಣವನ್ನು ಕೊಲೆ ಪ್ರಕರಣವಾಗಿ ಪರಿವರ್ತನೆ ಮಾಡಲಾಗಿತ್ತು… ಕುತೂಹಲ ಕೆರಳಿಸಿದ ಕೇಸ್ನಲ್ಲಿ ಇನ್ನೂ ಲಭ್ಯವಾಗದ ಅಂತಿಮ ವರದಿ…..: ಕೇರಳದ ಕಾಸರಗೋಡಿನ ಬಾಯಾರಿನಿಂದ ಕಳೆದ ೧೩ ವರ್ಷಗಳ ಹಿಂದೆ ಆಗಮಿಸಿ ಓಡಿಲ್ನಾಳ ಗ್ರಾಮದ ಸಂಭೋಳ್ಯದಲ್ಲಿ ನೆಲೆಸಿ ಕೃಷಿ ಚಟುವಟಿಕೆ ಮಾಡುತ್ತಿರುವ ಸುಬ್ರಹ್ಮಣ್ಯ ನಾಯಕ್ ಮತ್ತು ರತ್ನಾವತಿ ದಂಪತಿಯ ಮೂರು ಮಕ್ಕಳ ಪೈಕಿ ಎರಡನೇಯವರಾಗಿರುವ ಸುಮಂತ್ ಅವರು ನಾಪತ್ತೆಯಾದ ಬಳಿಕ ಅವರಿಗೆ ಹುಡುಕಾಟ ನಡೆಸುತ್ತಿದ್ದಂತೆಯೇ ಮನೆ ಸಮೀಪದಲ್ಲಿ ಇರುವ ಶ್ಯಾಮಲಾ ಎಂಬವರಿಗೆ ಸೇರಿದ ಜಮೀನಿನ ಕೆರೆಯಲ್ಲಿ ಆತನ ಶವ ಪತ್ತೆಯಾಗಿತ್ತು. ಈ ಘಟನೆ ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಸುಮಂತ್ ಮನೆಯಿಂದ ತೆರಳಿದವರು ವಾಪಸ್ ಮನೆಗೆ ಬಾರದ ಕಾರಣ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲು ಮಾಡಲಾಗಿತ್ತು. ಆತನಿಗಾಗಿ ವ್ಯಾಪಕ ಹುಡುಕಾಟ ನಡೆಸಿ ಮೃತದೇಹ ಸಿಕ್ಕಿದ ಬಳಿಕ ಸಂಶಯಾಸ್ಪದ ಸಾವಿನ ಪ್ರಕರಣ ದಾಖಲಾಗಿತ್ತು. ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಕೊಲೆ ಪ್ರಕರಣವಾಗಿ ಪರಿವರ್ತಿಸಲಾಗಿತ್ತು.ಸುಮಂತ್ ಶವ ಕೆರೆಯಲ್ಲಿ ಪತ್ತೆಯಾಗುತ್ತಿದ್ದಂತೆಯೇ ಜನರಲ್ಲಿ ಆತಂಕ ಉಂಟಾಗಿತ್ತು. ತಾನಾಯಿತು ತನ್ನ ಪಾಡಾಯಿತು ಎಂಬಂತೆ ಇದ್ದ ಬಹುಮುಖ ಪ್ರತಿಭೆಯ ವಿದ್ಯಾರ್ಥಿ ಸುಮಂತ್ ನಿಗೂಢವಾಗಿ ಸಾವಿಗೀಡಾದ ಪ್ರಕರಣ ಜನರನ್ನು ಬೆಚ್ಚಿ ಬೀಳಿಸಿತ್ತು. ಚಿರತೆ ಅಥವಾ ನಾಯಿ ದಾಳಿ ನಡೆಸಿದ ಪರಿಣಾಮ ಆತ ಮೃತಪಟ್ಟಿರಬೇಕು ಎಂದು ಆರಂಭದಲ್ಲಿ ಶಂಕಿಸಲಾಗಿತ್ತು.
ಆತನ ಮೇತದೇಹ ಪತ್ತೆಯಾದ ಕೆಲವು ಮೀಟರ್ಗಳ ದೂರದಲ್ಲಿ ರಕ್ತದ ಕಲೆಗಳು ಕಾಣಿಸಿಕೊಂಡಿದ್ದರಿಂದ ಇದು ಕೊಲೆಯಾಗಿರಬೇಕು ಎಂಬ ಸಂಶಯ ದಟ್ಟವಾಗಿತ್ತು. ತನ್ನ ಸ್ನೇಹಿತರಾದ ಪಕ್ಕದ ಮನೆಯ ಮನ್ವಿತ್, ತನುಷ್, ಕಾರ್ತಿಕ್ ಮತ್ತು ಇತರರೊಂದಿಗೆ ಸೇರಿಕೊಂಡು ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಧನುಪೂಜೆಗೆ ತೆರಳುತ್ತಿದ್ದ ಸುಮಂತ್ ತನ್ನ ಮನೆಯಿಂದ ಕಾಲು ದಾರಿಯ ಮೂಲಕ ಕೆಲ ದೂರ ಸಾಗಿ ನಂತರ ತನ್ನ ಸ್ನೇಹಿತನ ಮನೆಯ ಪಕ್ಕ ನಿಲ್ಲಿಸಿದ್ದ ಸೈಕಲ್ನಲ್ಲಿ ತೆರಳುತ್ತಿದ್ದರು. ಜ.೧೪ರ ಮಕರ ಸಂಕ್ರಾಂತಿಯಂದು ಕೂಡ ಬೆಳಗ್ಗೆ ಸುಮಂತ್ ಬರುತ್ತಾನೆಂದು ಕಾಯುತ್ತಿದ್ದ ಸ್ನೇಹಿತರು ಕಾದು ಕಾದು ನಂತರ ಅವರು ದೇವಸ್ಥಾನಕ್ಕೆ ತೆರಳಿದ್ದರು. ಧನುಪೂಜೆ ನಂತರ ಮನೆಗೆ ವಾಪಾಸಾದ ಸುಮಂತ್ ಸ್ನೇಹಿತರು ಸುಮಂತ್ ಮನೆಯವರಿಗೆ ಕರೆ ಮಾಡಿದಾಗ ಆತ ಧನುಪೂಜೆಗೂ ಹೋಗದೆ ಮನೆಗೂ ವಾಪಾಸಾಗದೇ ಇರುವುದು ಗೊತ್ತಾಗಿದೆ. ಸುಮಂತ್ ಎಲ್ಲಿ ಹೋದ ಎಂದು ಆತಂಕಗೊಂಡ ಮನೆಯವರು ಮತ್ತು ಸ್ಥಳೀಯರು ಆತ ಹೋದ ದಾರಿಯಲ್ಲಿ ಹುಡುಕಾಟ ನಡೆಸಿದ್ದರು.


ಈ ವೇಳೆ ಅವರು ಕಾಲುದಾರಿಯಲ್ಲಿ ಸಾಗುವಾಗ ಸಿಗುವ ಶ್ಯಾಮಲಾ ಎಂಬವರ ಜಮೀನಿನಲ್ಲಿ ರಕ್ತದ ಕಲೆ ಪತ್ತೆಯಾಗಿದೆ. ಅದರಲ್ಲೂ ಜಮೀನಿನಲ್ಲಿದ್ದ ಕೆರೆಯ ಪಕ್ಕದಲ್ಲೇ ರಕ್ತದ ಕಲೆ ಪತ್ತೆಯಾಗಿದ್ದು ತೀವ್ರ ಆತಂಕಕ್ಕೆ ಕಾರಣವಾಗಿತ್ತು. ಪೊಲೀಸ್ ಅಧಿಕಾರಿಗಳು, ವಿಧಿ ವಿಜ್ಞಾನ ಪ್ರಯೋಗಾಲಯದ ತಂಡಗಳು, ಸೊಕೊ ತಂಡ, ಶ್ವಾನದಳ, ಬೆರಳಚ್ಚು ತಜ್ಞರು, ಗುಪ್ತಚರ ಇಲಾಖೆಯವರು ವಿವಿಧ ಆಂಗಲ್ಗಳಲ್ಲಿ ಮಾಹಿತಿ ಸಂಗ್ರಹಿಸಿದ್ದರು. ಈ ಪ್ರಕರಣದಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆಯ ವರದಿ ಬಹುಮುಖ್ಯವಾಗಿತ್ತು
ಈ ಬಗ್ಗೆ ಮಾಹಿತಿ ನೀಡಿದ್ದ ಪೊಲೀಸರು ಈ ಮೊದಲು ಹೊರಡಿಸಿದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದಂತೆ ಮೃತ್ಯುವಿನ ಕಾರಣ ಮುಳುಗು ಆಗಿದೆ. ಆದರೆ ತಲೆಯಲ್ಲಿದ್ದ ಗಾಯದಿಂದ ಸಂಶಯ ಉಂಟಾದ ಕಾರಣ ಪ್ರಕರಣವನ್ನು ಸಂಪೂರ್ಣ ಹಾಗೂ ಸಮಗ್ರವಾಗಿ ತನಿಖೆ ನಡೆಸುವ ಉzಶದಿಂದ ಹತ್ಯೆ ಕಲಂ ಸೇರಿಸಲಾಗಿದೆ. ವೈದ್ಯಕೀಯ ನ್ಯಾಯ ವಿಜ್ಞಾನ ಹಾಗೂ ಅಂತಿಮ ಮರಣೋತ್ತರ ಪರೀಕ್ಷಾ ವರದಿ ಇನ್ನೂ ಬರಬೇಕಿದೆ. ಇದು ಹತ್ಯೆಯೇ ಅಥವಾ ಅಸಹಜ ಮರಣವೇ ಎಂಬುದರ ಬಗ್ಗೆ ಈವರೆಗೆ ಯಾವುದೇ ನಿರ್ಧಾರಕ್ಕೆ ಬರಲಾಗುವುದಿಲ್ಲ ಎಂದು ತಿಳಿಸಿದ್ದರು. ಹಾಗಾಗಿ ಇನ್ನೂ ಸುಮಂತ್ ಅವರದ್ದು ಕೊಲೆಯೇ ಎಂಬುದು ಖಚಿತವಾಗಿಲ್ಲ. ಈ ಪ್ರಕರಣವನ್ನು ಫಿಫ್ಟಿ ಫಿಫ್ಟಿ ಎಂದು ಶಂಕಿಸಲಾಗಿದೆ. ಇದೆಲ್ಲವನ್ನೂ ಗಣನೆಗೆ ತೆಗೆದುಕೊಂಡು ಅಂತಿಮವಾಗಿ ನ್ಯಾಯಾಲಯಕ್ಕೆ ಸಿ ರಿಪೋರ್ಟ್ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಬೈಕ್ನಿಂದಲೂ ಮಾಹಿತಿ ಸಿಗಲಿಲ್ಲ!: ಸುಮಂತ್ ಅವರ ನಿಗೂಢ ಸಾವಿನ ಪ್ರಕರಣಕ್ಕೆ ಬೈಕೊಂದು ಪ್ರಮುಖ ಮಾಹಿತಿಯಾಗಬಹುದು ಎಂದು ಆಶಾಭಾವನೆ ಮೂಡಿಸಿತ್ತು. ಆದರೆ ಬೈಕ್ ಸಂಚರಿಸಿದ ಮಾಹಿತಿ ಕೂಡ ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಸುಮಂತ್ ಅವರ ಸಂಶಯಾಸ್ಪದ ಸಾವಿನ ಕುರಿತು ಶಾಸಕ ಹರೀಶ್ ಪೂಂಜ ಅವರು ವಿಧಾನಸಭೆಯಲ್ಲಿ ಮಾಡಿದ್ದ ಪ್ರಶ್ನೆಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಉತ್ತರಿಸಿದ್ದರು. ಸಮರ್ಪಕ ತನಿಖೆ ನಡೆಸಲಾಗುವುದು ಎಂದು ಪರಮೇಶ್ವರ್ ತಿಳಿಸಿದ್ದರು. ಆ ಬಳಿಕ ಸುಮಂತ್ ಅವರ ತಂದೆ ಸುಬ್ರಹ್ಮಣ್ಯ ನಾಯಕ್ ಮತ್ತು ತಾಯಿ ರತ್ನಾವತಿ ಅವರು ಮಂಗಳೂರಿನಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿದ್ದ ವೇಳೆ ಗೃಹ ಸಚಿವರು ಐಜಿಪಿ ಅಮಿತ್ ಸಿಂಗ್ ಮತ್ತು ಎಸ್ಪಿ ಡಾ. ಅರುಣ್ ಅವರಿಂದ ಮಾಹಿತಿ ಪಡೆದುಕೊಂಡು ತನಿಖೆಯನ್ನು ಇನ್ನಷ್ಟು ಚುರುಕುಗೊಳಿಸುವುದರ ಬಗ್ಗೆ ನಿರ್ದೇಶನ ನೀಡಿದ್ದರು. ಸುಮಂತ್ ಅವರ ಮನೆಯವರು, ಸಂಬಂಧಿಕರು, ನೆರೆ ಹೊರೆಯವರು, ಶಾಲೆಯವರು, ಸಂಶಯಿತ ವ್ಯಕ್ತಿಗಳು ಸೇರಿದಂತೆ ಹಲವರಿಂದ ಮಾಹಿತಿ ಪಡೆದುಕೊಂಡಿದ್ದ ಪೊಲೀಸರು ಗೃಹ ಸಚಿವರ ಸೂಚನೆ ಬಳಿಕ ಮತ್ತಷ್ಟು ಚುರುಕಾಗಿದ್ದರು. ಹಲವರ ಮೊಬೈಲ್ ಫೋನ್ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದ ಪೊಲೀಸರು ಮೊಬೈಲ್ ಲೊಕೇಶನ್ ಆಧರಿಸಿಯೂ ತನಿಖೆ ನಡೆಸಿದ್ದರು.
ಪೊಲೀಸರು ಮತ್ತಷ್ಟು ಆಳಕ್ಕೆ ಇಳಿದು ತನಿಖೆ ಕೈಗೆತ್ತಿಕೊಂಡಿದ್ದರು. ಅಕ್ಕಪಕ್ಕದ ಸಿ.ಸಿ. ಕೆಮರಾದ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದರು. ತಮ್ಮಲ್ಲಿರುವ ಎಲ್ಲಾ ಸಾಮರ್ಥ್ಯಗಳನ್ನು ಪಣಕ್ಕಿಟ್ಟು ಪೊಲೀಸರು ತನಿಖೆ ನಡೆಸಿದ್ದರು. ಯಾವ ರೀತಿಯಲ್ಲಿ ತನಿಖೆ ನಡೆಸಿದರೂ ಯಾವುದೇ ಪ್ರಯೋಜನವಾಗದೇ ಇದ್ದಾಗ ಪೊಲೀಸರಿಗೆ ಬೈಕೊಂದು ಆಸರೆಯಾಗಿ ಕಂಡಿತ್ತು. ಘಟನೆ ನಡೆದ ದಿನದಂದು ಮುಂಜಾನೆ ಸುಮಂತ್ ಅವರ ಮನೆಯಿಂದ ಸ್ವಲ್ಪ ದೂರದಲ್ಲಿರುವ ಲೋಕನಾಥ್ ಎಂಬವರ ಮನೆಯ ಮುಂಭಾಗದಲ್ಲಿ ಬೈಕೊಂದು ವೇಗವಾಗಿ ಹೋಗಿದೆ. ಅದರ ಲೈಟ್ ಪ್ರಖರವಾಗಿತ್ತು ಮತ್ತು ಬೈಕ್ನಲ್ಲಿ ರಾಡ್ ಮಾದರಿಯ ವಸ್ತು ಇತ್ತು ಎಂದು ಮಾಹಿತಿ ಕಲೆ ಹಾಕಿದ್ದ ಪೊಲೀಸರು ಕೊನೇಯ ಪ್ರಯತ್ನ ಮುಂದುವರಿಸಿದ್ದರು. ಲೋಕನಾಥ್ ಅವರು ನೀಡಿದ ಮಾಹಿತಿಯ ಆಧಾರದಲ್ಲಿ ಸಂಶಯ ಇರುವ ಬೈಕ್ಗಳನ್ನು ಪತ್ತೆ ಹಚ್ಚಿ ಟ್ರಯಲ್ ನಡೆಸಲಾಗಿತ್ತು. ಆದರೆ ಯಾವ ಪ್ರಯೋಜನವೂ ಆಗಿಲ್ಲ. ಹಾಗಾಗಿ ಕೊನೇಗೆ ಪೊಲೀಸರು ಇದೊಂದು ಪತ್ತೆಯಾಗದ ಪ್ರಕರಣ ಎಂದು ಷರಾ ಬರೆಯಲು ನಿರ್ಧರಿಸಿದ್ದಾರೆ ಎಂದು ಮಾಹಿತಿ ದೊರೆತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಇನ್ನಷ್ಟೇ ದೊರಕಬೇಕಿದೆ.








