







ಬೆಳ್ತಂಗಡಿ: ಒಡಿಯೂರು ಶ್ರೀ ವಿವಿಧೋzಶ ಸೌಹಾರ್ದ ಸಹಕಾರಿ ಸಂಘದ ಮಡಂತ್ಯಾರು ಶಾಖೆಯಲ್ಲಿ ನಕಲಿ ಚಿನ್ನವನ್ನು ಅಡವಿಟ್ಟು ಸಾಲ ಪಡೆದು ಸಂಸ್ಥೆಗೆ ವಂಚಿಸಲು ಯತ್ನಿಸಿದ ಇಬ್ಬರನ್ನು ಪುಂಜಾಲಕಟ್ಟೆ ಪೊಲೀಸ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಕುಳ ಗ್ರಾಮದ ಕಲ್ಲಂದಡ್ಕ ನಿವಾಸಿ ಅಬ್ದುಲ್ ನಝೀರ್ ಹಾಗೂ ಬೋಳಂತೂರು ಗ್ರಾಮದ ಬೀರುಕೋಡಿ ನಿವಾಸಿ ಪ್ರಮೋದ್ ಪಿ. ಬಂಧಿತರು. ಬಂಧಿತರನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಸಹಕಾರಿ ಸಂಘದ ಶಾಖಾ ವ್ಯವಸ್ಥಾಪಕಿ ಅಶ್ವಿತಾ ಅವರು ಪೊಲೀಸರಿಗೆ ದೂರು ನೀಡಿದ್ದರು.


ಫೆ. ೨ರಂದು ಬೆಳಗ್ಗೆ ೧೧ರ ಸುಮಾರಿಗೆ ಆರೋಪಿಗಳಿಬ್ಬರು ಬಂದಿದ್ದರು. ಅಬ್ದುಲ್ ನಝೀರ್ ಎಂಬಾತ ತನ್ನ ಗ್ರಾಹಕರ ಸೋಗಿನಲ್ಲಿ ಹೆಸರಿನಲ್ಲಿ ಅಡವಿಟ್ಟು ಸಾಲ ಪಡೆಯಲು ಮೂರು ಚಿನ್ನದ ಸರಗಳನ್ನು ನೀಡಿದ್ದ. ಚಿನ್ನದ ಪರೀಕ್ಷಕರು ಪರಿಶೀಲಿಸಿದಾಗ ಅದು ನಕಲಿ ಚಿನ್ನವೆಂದು ತಿಳಿಯಿತು. ನಝೀರ್ ಬಳಿ ವಿಚಾರಿಸಿದಾಗ ಅದು ಸಂಬಂಧಿಕರು ನೀಡಿರುವುದು ಎಂದು ತಿಳಿಸಿದನು. ಆರೋಪಿಗಳನ್ನು ಹೀಗೇ ಬಿಟ್ಟರೆ ಮತ್ತೊಂದು ಸಹಕಾರಿ ಸಂಘಕ್ಕೆ ಹೋಗಿ ಅಡವಿಟ್ಟು ಮೋಸ ಮಾಡುವ ಸಾಧ್ಯತೆ ಹಾಗೂ ಈ ಹಿಂದೆಯೂ ಇದೇ ರೀತಿ ಮೋಸ ಮಾಡಿರಬಹುದೇ ಎಂಬ ಸಂಶಯದಿಂದ ಸಂಘದವರು ಪೊಲೀಸರಿಗೆ ದೂರು ನೀಡಿ ಆರೋಪಿಗಳು ತಂದಿದ್ದ ಚಿನ್ನದ ಸರಗಳನ್ನು ಕೂಡ ಠಾಣೆಗೆ ಒಪ್ಪಿಸಿದ್ದರು. ಬಳಿಕ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಅ.ಕ್ರ ೧೧/೨೦೨೬ರಂತೆ ಕಲಂ: ೩೧೮(೪), ೬೨ ಜೊತೆಗೆ ೩(೫) ಬಿಎನ್ಎಸ್ರಂತೆ ಪ್ರಕರಣ ದಾಖಲಿಸಿ ಈರ್ವರನ್ನು ಬಂಧಿಸಲಾಗಿದೆ.
ಚಿನ್ನ ಅಡಮಾನ ಸಾಲ ನೀಡುವಾಗ ಇರಲಿ ಎಚ್ಚರ: ಸಹಕಾರಿ ಸಂಘಗಳು, ಬ್ಯಾಂಕ್ಗಳಿಗೆ ಇದೇ ರೀತಿ ನಕಲಿ ಚಿನ್ನಾಭರಣಗಳನ್ನು ತಂದು ಸಾಲ ಪಡೆದು ವಂಚಿಸಿದ ಪ್ರಕರಣಗಳು ಈ ಹಿಂದೆಯೂ ಸಾಕಷ್ಟು ಕಡೆ ನಡೆದಿದ್ದು ಅದು ನಕಲಿ ಎಂದು ತಿಳಿಯದೆ ಬ್ಯಾಂಕಿನವರು ಮೋಸ ಹೋಗಿರುವ ಘಟನೆಗಳು ನಡೆದಿವೆ. ಇದರ ಹಿಂದೆ ವಂಚನಾ ಜಾಲ ಇರುವ ಸಾಧ್ಯತೆಯೂ ಇದ್ದು ಪ್ರಸ್ತುತ ಚಿನ್ನದ ಧಾರಣೆ ಹೆಚ್ಚಿರುವುದರಿಂದ ದೊಡ್ಡ ಮೊತ್ತದ ಸಾಲ ನೀಡಿ ವಂಚನೆಗೊಳಗಾಗುವ ಅಪಾಯವೂ ಇರುತ್ತದೆ. ಈ ನಿಟ್ಟಿನಲ್ಲಿ ಚಿನ್ನಾಭರಣಗಳನ್ನು ಅಡವಿಟ್ಟು ಸಾಲ ನೀಡುವ ಆರ್ಥಿಕ ಸಂಸ್ಥೆಗಳು ಹೆಚ್ಚಿನ ನಿಗಾ ಇರಿಸುವ ಅಗತ್ಯವಿದೆ ಎಂದು ಆಗ್ರಹ ವ್ಯಕ್ತವಾಗಿದೆ.








