







ಬೆಂಗಳೂರು: ಧರ್ಮಸ್ಥಳ ಗ್ರಾಮದ ಆಸುಪಾಸು ೧೯೯೦ರಿಂದ ೨೦೨೧ರ ನಡುವೆ ನಡೆದಿದೆ ಎನ್ನಲಾದ ೭೪ ಅಸಹಜ ಸಾವಿನ ಪ್ರಕರಣಗಳ ಈಗಿನ ಸ್ಥಿತಿಗತಿ, ತೆಗೆದುಕೊಂಡಿರುವ ಕ್ರಮಗಳು ಹಾಗೂ ಮುಂದೆ ಕೈಗೊಳ್ಳಲಿರುವ ಕ್ರಮಗಳ ಬಗ್ಗೆ ೨ ವಾರಗಳ ಒಳಗೆ ವರದಿ ನೀಡುವಂತೆ ರಾಜ್ಯ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೊಟೀಸ್ ಜಾರಿ ಮಾಡಿದೆ.


ಅಸಹಜ ಸಾವುಗಳ ಬಗ್ಗೆ ಅತ್ಯಾಚಾರ-ಹತ್ಯೆಗೊಳಗಾಗಿದ್ದ ವಿದ್ಯಾರ್ಥಿನಿ ಸೌಜನ್ಯ ಅವರ ತಾಯಿ ಕುಸುಮಾವತಿ ಅವರು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾ. ವಿಭು ಬಬ್ರು ಮತ್ತು ನ್ಯಾ. ಸಿ.ಎಂ. ಪೂಣಚ್ಚ ಅವರನ್ನೊಳಗೊಂಡ ನ್ಯಾಯಪೀಠ, ವರದಿ ಸಲ್ಲಿಕೆಗೆ ನೊಟೀಸ್ ಜಾರಿ ಮಾಡಿದೆ. ಸರ್ಕಾರದ ಪರ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ ಶಶಿಕಿರಣ ಶೆಟ್ಟಿ, ೭೪ ಪ್ರಕರಣಗಳಿಗೆ ಸಂಬಂಧಿಸಿ ಪ್ರಕರಣಗಳು ಯಾವ ಹಂತದಲ್ಲಿವೆ, ಇದುವರೆಗೆ ನಡೆದಿರುವ ಬೆಳವಣಿಗೆಗಳು ಎಂಬ ಕುರಿತ ಸಮಗ್ರ ವರದಿಯನ್ನು ಸಲ್ಲಿಸಲಾಗುವುದು ಎಂದು ತಿಳಿಸಿದರು.
ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಎಸ್. ಬಾಲನ್, ೭೪ ಪ್ರಕರಣಗಳನ್ನೂ ತನಿಖೆಯಾಗಿ, ವಿಚಾರಣೆಗೊಳಪಡಿಸಬೇಕಿದೆ. ಹಾಗಾಗಿ, ಸರ್ಕಾರದಿಂದ ಅಗತ್ಯ ಮಾಹಿತಿ ಕೋರ್ಟ್‌ಗೆ ಮೊದಲು ಸಲ್ಲಿಕೆಯಾಗಲಿ ಎಂದು ಹೇಳಿದರು.








