






ಬೆಳ್ತಂಗಡಿ: ಕಸಬಾ ಗ್ರಾಮದ ಬೆದ್ರಬೆಟ್ಟು ಶ್ರೀ ಮಹಮ್ಮಾಯಿ ಮಾರಿಗುಡಿಯಲ್ಲಿ ೨೦೨೫ರ ಫೆಬ್ರವರಿ ೮ರಂದು ನಡೆದ ಹಿಂದೂ ಸಮಾಜ ರಕ್ಷಣಾ ಕಾರ್ಯಕ್ರಮದಲ್ಲಿ ದ್ವೇಷ ಭಾಷಣ ಮಾಡಿದ ಆರೋಪ ಎದುರಿಸುತ್ತಿರುವ ರಾಷ್ಟ್ರೀಯ ಹಿಂದು ಜಾಗರಣ ವೇದಿಕೆಯ ಮುಖಂಡ ಮಹೇಶ್ ಶೆಟ್ಟಿ ತಿಮರೋಡಿ ಅವರ ಬಂಧನಕ್ಕೆ ಬೆಳ್ತಂಗಡಿ ನ್ಯಾಯಾಲಯ ವಾರಂಟ್ ಜಾರಿ ಮಾಡಿದೆ. ಮಹೇಶ್ ಶೆಟ್ಟಿ ಅವರು ಮಾರಿಗುಡಿಯ ಕಾರ್ಯಕ್ರಮದಲ್ಲಿ ದ್ವೇಷ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಉಜಿರೆ ಶಿವಾಜಿನಗರದ ಸಾಯಂಕ್ ನಿಲಯದ ಕಿಶೋರ್ ಕುಮಾರ್(೫೨) ಎಂಬವರು ಕೇಸು ದಾಖಲಿಸಿದ್ದರು.


೦೮-೦೨-೨೦೨೫ರಂದು ಬೆದ್ರಬೆಟ್ಟು ಶ್ರೀ ಮಹಾಮ್ಮಾಯಿ ಮಾರಿಗುಡಿಯಲ್ಲಿ ನಡೆದ ಹಿಂದೂ ಸಮಾಜ ರಕ್ಷಣಾ ಕಾರ್ಯಕ್ರಮದಲ್ಲಿ ಮಹೇಶ್ ಶೆಟ್ಟಿ ಅವರು ವೇದಿಕೆಯ ಮೇಲೆ ನಿಂತು ಒಬ್ಬ ಅಧರ್ಮಿಯಿಂದ ಧರ್ಮ ನಾಶ ಆಗುತ್ತದೆ. ಇಂದು ಧಾರ್ಮಿಕ ಸ್ಥಳಗಳಿಗೆ ಮತ್ತು ಹಿಂದೂ ಸಮಾಜಕ್ಕೆ ಅಧರ್ಮಿಗಳ ಪ್ರಭಾವ ಹೆಚ್ಚಾಗಿದೆ. ನಾವು ನಮ್ಮ ಸಂಪ್ರದಾಯ ಮತ್ತು ಧರ್ಮವನ್ನು ಉಳಿಸಿಕೊಳ್ಳಬೇಕಾದ ಸಮಯ ಬಂದಿದೆ. ದುಡ್ಡಿಗಾಗಿ ಧರ್ಮ ಅಲ್ಲ. ಸನಾತನ ಹಿಂದೂ ಧರ್ಮ ಉಳಿಸಲು ನಾವು ಈ ಕಾರ್ಯ ಮಾಡುತ್ತಿದ್ದೇವೆ.
ಆದರೆ ಇವತ್ತು ಅಧರ್ಮಿಯರ ದುಡ್ಡು ತಂದು ಧರ್ಮಸ್ಥಳ ಮಾತ್ರ ಅಲ್ಲ. ಉಡುಪಿ ಬೇರೆ ದೇವಾಲಯಗಲ್ಲೂ ಇರಿಸಿಕೊಳ್ಳುತ್ತಿದ್ದಾರೆ ಎಂದು ಮಾತನಾಡಿ ಧರ್ಮಸ್ಥಳ ಮತ್ತು ಇತರ ದೇವಾಲಯಗಳ ಬಗ್ಗೆ ಜನರಲ್ಲಿ ಅನುಮಾನ ಮತ್ತು ವಿಚಲಿತ ಭಾವನೆ ಮೂಡಿಸುವ, ದೇವಾಲಯಗಳ ಬಗ್ಗೆ ಜನರಲಿ ಸಂಶಯ ಎಬ್ಬಿಸುವ ಮತ್ತು ಸಾಮಾಜಿಕ ಶಾಂತಿ ಹಾಳು ಮಾಡುವ ಉದ್ದೇಶದಿಂದ ಸಾರ್ವಜನಿಕವಾಗಿ ಅಸಭ್ಯವಾಗಿ ಮಾತನಾಡಿದಾಗ ನಾನು ಧಾರ್ಮಿಕ ಆಘಾತಕ್ಕೆ ಒಳಗಾಗಿದ್ದೇನೆ ಮತ್ತು ಜನರ ಧಾರ್ಮಿಕ ಭಾವನೆಗಳಿಗೆ ನೇರ ದಾಳಿ ಮಾಡಿ ಜನಸಮುದಾಯಗಳ ನಡುವೆ ದ್ವೇಷ ಹುಟ್ಟಿಸುವಂತೆ ಸಾಮಾಜಿಕ ಶಾಂತಿ ಭಂಗಕ್ಕೆ ಮತ್ತು ಸಮುದಾಯಗಳ ನಡುವಿನ ಧಾರ್ಮಿಕ ಭಾವನೆಗಳನ್ನು ಉದ್ದೇಶಪೂರ್ವಕವಾಗಿ ನೋಯಿಸುವ, ಧಾರ್ಮಿಕ ಸ್ಥಳಗಳ ಮೇಲೆ ನಂಬಿಕೆ ಕಳೆದುಕೊಳ್ಳುವಂತೆ, ಬೇರೆ ಧರ್ಮದ ಜನರಿಗೆ ಹಿಂದೂ ಧರ್ಮದ ಶಂಕೆ ಹುಟ್ಟು ಹಾಕುವ, ಸನಾತನ ಹಿಂದೂ ಧರ್ಮದ ಗೌರವವನ್ನು ಕುಗ್ಗಿಸುವ ಪ್ರಚೋದನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ೧೪/೨೦೨೫ರಂತೆ ೩೫೩(೨) ಸೆಕ್ಷನ್ ಅಡಿಯಲ್ಲಿದಾಖಲಾಗಿದ್ದ ಮಹೇಶ್ ಶೆಟ್ಟಿ ವಿರುದ್ಧ ದಾಖಲಾಗಿದ್ದ ಈ ಪ್ರಕರಣಕ್ಕೆ ಸಂಬಂಧಿಸಿ ತನಿಖಾಧಿಕಾರಿಯವರು ಮಹೇಶ್ ಶೆಟ್ಟಿ ವಿರುದ್ಧ ಬೆಳ್ತಂಗಡಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಲಯದ ವಿಚಾರಣೆಗೆ ಪದೇ ಪದೇ ಗೈರಾಗುತ್ತಿರುವ ಹಿನ್ನೆಲೆಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಅವರಿಗೆ ಡಿ.೨೪ರಂದು ಬೆಳ್ತಂಗಡಿ ನ್ಯಾಯಾಲಯ ಬಂಧನದ ವಾರಂಟ್ ಜಾರಿ ಮಾಡಿದೆ. ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತರು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡೀಪಾರು ಮಾಡಿ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಸದ್ಯ ಮಹೇಶ್ ಶೆಟ್ಟಿ ತಲೆಮರೆಸಿಕೊಂಡಿದ್ದಾರೆ.








