






ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ದೇವಸ್ಥಾನದ ಪರವಾಗಿ ಸಂತ್ರಸ್ತ ಎನ್ನುವ ನೆಲೆಗಟ್ಟಿನಲ್ಲಿ ವಿಶೇಷವಾದ ಅರ್ಜಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಇಡೀ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಹೇಳಿದಂತೆ ಆರೋಪಿಗಳು ಹಾಕಿದ ಅರ್ಜಿಯಲ್ಲಿ ಧರ್ಮಸ್ಥಳ ದೇವಸ್ಥಾನವನ್ನು ಉಲ್ಲೇಖ ಮಾಡಿರುವ ಹಿನ್ನೆಲೆಯನ್ನು ಗಮನದಲ್ಲಿಟ್ಟುಕೊಂಡು ಸಂತ್ರಸ್ತರಾಗಿರುವ ಅವರಿಗೂ ಈ ಪ್ರಕರಣದಲ್ಲಿ ಸ್ವತಃ ಭಾಗವಹಿಸುವ ಅವಕಾಶ ನೀಡಬೇಕು ಎಂದು ಅರ್ಜಿ ಸಲ್ಲಿಸಲಾಗಿದೆ. ಈ ಕುರಿತಾಗಿ ಹಿರಿಯ ವಕೀಲರಾದ ಸಿ.ವಿ. ನಾಗೇಶ್ ಅವರು ವಾದ ನಡೆಸಿದ್ದಾರೆ. ಮುಂದಿನ ವಾದ ಮಂಡನೆಗೆ ಜ.೩ ದಿನ ನಿಗದಿ ಮಾಡಲಾಗಿದೆ ಎಂದು ಖ್ಯಾತ ವಕೀಲ ಮಹೇಜ್ ಕಜೆ ಹೇಳಿದರು.


ಧರ್ಮಸ್ಥಳ ಪೊಲೀಸ್ ಠಾಣೆ ಯಲ್ಲಿ ದಾಖಲಾಗಿರುವ ಮೊಕದ್ದಮೆ ಸಂಖ್ಯೆ ೩೯/೨೦೨೫ ರಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಪರವಾಗಿ ಬೆಳ್ತಂಗಡಿ ನ್ಯಾಯಾಲಯಕ್ಕೆ ವಕಾಲತ್ತು ಸಲ್ಲಿಸಲು ಡಿ.೩೧ರಂದು ರಾಜ್ಯದ ಹಿರಿಯ ನ್ಯಾಯವಾದಿ ಸಿ ವಿ. ನಾಗೇಶ್ ಹಾಗೂ ಮಹೇಶ್ ಕಜೆ ಬೆಳ್ತಂಗಡಿ ನ್ಯಾಯಾಲಯಕ್ಕೆ ಬಂದಿದ್ದರು. ಈ ವೇಳೆ ಮಾಧ್ಯಮದ ಜೊತೆ ಮಾತನಾಡಿದ ಮಹೇಶ್ ಕಜೆ ಅವರು ಈ ದೂರು ಅರ್ಜಿಗೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್ ತೀರ್ಪು ಅಥವಾ ಕೋರಿಕೆ ಏನಿದೆ ಅದರ ಪ್ರಕಾರ ಪೂರಕವಾದ ದಾಖಲೆ ಸಲ್ಲಿಕೆ ಮಾಡಲಾಗುತ್ತದೆ. ಇನ್ನು ಬುರುಡೆ ಗ್ಯಾಂಗ್‌ನವರು ಈ ಕುರಿತಾಗಿ ಯಾವುದೇ ಆಕ್ಷೇಪಣೆ ಹಾಕಿಲ್ಲ. ಸಲ್ಲಿಸುವ ಸಾಧ್ಯತೆಯೂ ಇಲ್ಲ. ಅವರ ಅರ್ಜಿಯನ್ನು ನ್ಯಾಯಾಲಯ ಪರಿಗಣಿಸುತ್ತದೆಯೋ ಇಲ್ಲವೋ ಅದು ಬೇರೆ ಪ್ರತ್ಯೇಕವಾದ ವಿಚಾರ ಎಂದು ಹೇಳಿದರು.
ಇಡೀ ಆರೋಪ ಧರ್ಮಸ್ಥಳ ಕ್ಷೇತ್ರದ ಮೇಲೆ. ಈ ಹಿಂದೆ ಆರೋಪಿಗಳು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದಾಗ ಧರ್ಮಸ್ಥಳ ದೇವಸ್ಥಾನವನ್ನೇ ಗುರಿಯಾಗಿಟ್ಟುಕೊಂಡು ತನಿಖೆ ಮಾಡುವಂತೆ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿ ಸುಪ್ರೀಂ ಕೋರ್ಟ್‌ನಿಂದ ವಜಾ ಆಗಿತ್ತು. ಆ ಅರ್ಜಿಯ ಆಧಾರದಲ್ಲಿ ನಾವು ಸಂತ್ರಸ್ತರು ಎಂದು ಹೇಳುವುದು. ಇವತ್ತು ಧರ್ಮಸ್ಥಳ ದೇವಸ್ಥಾನದ ಬಗ್ಗೆ ಆರೋಪ ಮಾಡುತ್ತಿದ್ದಾರೆ. ಅದರ ಹಿನ್ನೆಲೆಯಲ್ಲಿ ಅದಕ್ಕೆ ಪೂರಕವಾದ ಬೇರೆ ಬೇರೆ ವಿಚಾರಗಳನ್ನು ಹೇಳಿರಬಹುದು. ಆದರೆ ಮುಖ್ಯ ಗುರಿ ಇರುವುದೇ ದೇವಸ್ಥಾನ. ಕಾನೂನಿನ ಹಾದಿ ದೊಡ್ಡದು ಎಂದು ಅರ್ಜಿ ಕುರಿತಾಗಿ ಮಹೇಶ್ ಕಜೆ ವಿವರಿಸಿದರು.








