






ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣಕ್ಕೆ ಸಂಬಂಧಿಸಿ ಮುಂದಿನ ಕ್ರಮ ಕೈಗೊಳ್ಳಲು ಮಾರ್ಗದರ್ಶನ ನೀಡುವಂತೆ ವಿಶೇಷ ತನಿಖಾ ತಂಡದ ಅಧಿಕಾರಿಗಳು ಮಾಡಿದ್ದ ಮನವಿಯ ಅರ್ಜಿ ಯನ್ನು ವಿಚಾರಣೆ ನಡೆಸಿರುವ ಬೆಳ್ತಂಗಡಿ ನ್ಯಾಯಾಲಯ ಈ ಕುರಿತ ಆದೇಶವನ್ನು ಜ.೩ರಂದು ಪ್ರಕಟಿಸುವುದಾಗಿ ತಿಳಿಸಿದೆ. ಡಿ. ೨೬ಕ್ಕೆ ಕಾಯ್ದಿರಿಸಿದ್ದ ಆದೇಶದ ದಿನವನ್ನು ಡಿ.೨೯ಕ್ಕೆ ಮುಂದೂಡಿದ್ದ ನ್ಯಾಯಾಲಯ ಜನವರಿ ೩ರಂದು ತನ್ನ ಆದೇಶ ಪ್ರಕಟಿ ಸುವುದಾಗಿ ತಿಳಿಸಿದೆ. ಜ.೩ರಂದು ನ್ಯಾಯಾ ಲಯ ಏನು ಆದೇಶ ನೀಡಲಿದೆ ಎಂದು ಕುತೂಹಲ ಸೃಷ್ಟಿಸಿದೆ.
ಎಸ್ಐಟಿ ವರದಿ ಸಲ್ಲಿಸಿತ್ತು: ಎಸ್ಐಟಿ ನ.೨೦ರಂದು ನ್ಯಾಯಾಲಯಕ್ಕೆ ವರದಿ ಸಲ್ಲಿಸಿ ಚಿನ್ನಯ್ಯ, ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ಜಯಂತ್ ಟಿ.ವಿಠಲ ಗೌಡ ಮತ್ತು ಸುಜಾತ ಭಟ್ ಅವರನ್ನು ಆರೋಪಿಗಳನ್ನಾಗಿ ಉಲ್ಲೇಖಿಸಿತ್ತು. ತನಿಖೆ ವಿವರವನ್ನು ದಾಖಲಿಸಿ ಮುಂದಿನ ತನಿಖೆಗೆ ಮಾರ್ಗ ದರ್ಶನ ನೀಡುವಂತೆ ಎಸ್ಐಟಿ ಪರ ಸಹಾಯಕ ಸರಕಾರಿ ಅಭಿಯೋಜಕ ದಿವ್ಯ ರಾಜ್ ಹೆಗ್ಡೆ ಪುತ್ತೂರು ಅವರು ವಾದ ಮಂಡಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಿ ಕಾನೂನು ಕ್ರಮಕ್ಕಾಗಿ ನ್ಯಾಯಾಲಯಕ್ಕೆ ಅವರು ಮನವರಿಕೆ ಮಾಡಿದ್ದರು. ಬೆಳ್ತಂಗಡಿ ನ್ಯಾಯಾಲಯಕ್ಕೆ ಎಸ್ಐಟಿ ಅಧಿಕಾರಿಗಳು ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಸೆಕ್ಷನ್ನಡಿ ಸುಳ್ಳು ಸಾಕ್ಷಿಯ ಅಪರಾಧಕ್ಕಾಗಿ ಕಾನೂನು ಕ್ರಮಕ್ಕೆ ವಿನಂತಿಸಿ ಆರೋಪಿಗಳ ವಿರುದ್ಧ ೩೯೨೩ ಪುಟಗಳ ವರದಿ ಸಲ್ಲಿಸಿದ್ದರು. ಎಸ್ಐಟಿ ಪರ ವಕೀಲರು ಕೆಲವೊಂದು ಮಹತ್ವದ ಅಂಶಗಳನ್ನು ನ್ಯಾಯಾಲಯದ ಮುಂದಿಟ್ಟು ಮುಂದಿನ ಕಾನೂನು ಕ್ರಮಕ್ಕಾಗಿ ವಿನಂತಿ ಸಿದ್ದರು. ಬೆಳ್ತಂಗಡಿಯ ಹೆಚ್ಚುವರಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ವಿಜಯೇಂದ್ರ ಅವರು ವಾದವನ್ನು ಆಲಿಸಿ ಮುಂದಿನ ಆದೇಶವನ್ನು ಡಿ. ೨೬ಕ್ಕೆ ಕಾಯ್ದಿ ರಿಸಿದ್ದರು. ಡಿ.೨೬ರಂದು ಯಾವುದೇ ಆದೇಶ ಮಾಡದ ನ್ಯಾಯಾಧೀಶರು ಡಿ. ೨೯ಕ್ಕೆ ಮುಂದೂಡಿದ್ದರು. ಡಿ.೨೯ರಂದೂ ಯಾವುದೇ ಆದೇಶ ಮಾಡದ ನ್ಯಾಯಾ ಧೀಶರು ಜ.೩ಕ್ಕೆ ಆದೇಶ ನೀಡುವುದಾಗಿ ಪ್ರಕಟಿಸಿದ್ದಾರೆ. ಎಸ್ಐಟಿಯ ಪರ ಎಸ್ಪಿ ಸಿ.ಎ.ಸೈಮನ್, ಡಿವೈಎಸ್ಪಿ ಲೋಕೇಶ್ ಸೇರಿದಂತೆ ಇತರ ಅಧಿಕಾರಿಗಳು ಬೆಳ್ತಂಗಡಿ ನ್ಯಾಯಾಲಯದಲ್ಲಿ ಹಾಜರಿದ್ದರು.


ಮೊಬೈಲ್ ಫೋನ್. ಲ್ಯಾಪ್ಟಾಪ್ ಬಿಡುಗಡೆಗೆ ಗಿರೀಶ್ ಮಟ್ಟಣ್ಣನವರ್, ಮೋಹನ್ ಶೆಟ್ಟಿ ಸಲ್ಲಿಸಿದ್ದ ಅರ್ಜಿ ವಜಾ: ಬುರುಡೆ ಷಡ್ಯಂತ್ರದ ತನಿಖೆ ನಡೆ ಸಿದ ಬಳಿಕ ಎಸ್ಐಟಿ ಅಧಿಕಾರಿಗಳು ವಶಪಡಿಸಿ ಕೊಂಡಿರುವ ತಮ್ಮ ಮೊಬೈಲ್ ಫೋನ್ ಬಿಡುಗಡೆಗೊಳಿಸಿ ತಮ್ಮ ವಶಕ್ಕೆ ನೀಡುವಂತೆ ಸೌಜನ್ಯ ಪರ ಹೋರಾಟಗಾರರಾದ ಮಾಜಿ ಪೊಲೀಸ್ ಅಧಿಕಾರಿ ಗಿರೀಶ್ ಮಟ್ಟಣ್ಣನವರ್ ಹಾಗೂ ತಮ್ಮ ಮೊಬೈಲ್ ಫೋನ್, ಲ್ಯಾಪ್ಟಾಪ್, ಪೆನ್ಡ್ರೈವ್, ಹಾರ್ಡ್ ಡಿಸ್ಕ್ ಸಹಿತ ಎಲೆಕ್ಟ್ರಾನಿಕ್ ಸಾಧನಗಳನ್ನು ಬಿಡುಗಡೆಗೊಳಿಸಿ ತಮ್ಮ ವಶಕ್ಕೆ ನೀಡುವಂತೆ ರಾಷ್ಟ್ರೀಯ ಹಿಂದು ಜಾಗರಣ ವೇದಿಕೆಯ ಮುಖಂಡ ಮಹೇಶ್ ಶೆಟ್ಟಿ ತಿಮರೋಡಿ ಅವರ ಸಹೋದರ ಉಜಿರೆಯ ಮೋಹನ್ ಶೆಟ್ಟಿ ಅವರು ಬೆಳ್ತಂಗಡಿ ನ್ಯಾಯಾಲಯಕ್ಕೆ ತಮ್ಮ ವಕೀಲರ ಮೂಲಕ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಡಿ.೨೯ರಂದು ವಜಾಗೊಳಿಸಿದೆ. ಗಿರೀಶ್ ಮಟ್ಟಣ್ಣನವರ್ ಮತ್ತು ಮೋಹನ್ ಶೆಟ್ಟಿ ಅವರ ಅರ್ಜಿ ಪುರಸ್ಕರಿಸುವಂತೆ ಅವರ ಪರ ವಕೀಲರು ಪ್ರಬಲ ವಾದ ಮಂಡಿಸಿದ್ದರು. ಆದರೆ ಇದಕ್ಕೆ ಎಸ್ಐಟಿ ಪರ ವಕೀಲರಾದ ಸಹಾಯಕ ಸರಕಾರಿ ಅಭಿಯೋಜಕ ದಿವ್ಯರಾಜ್ ಹೆಗ್ಡೆ ಪ್ರಬಲ ಆಕ್ಷೇಪ ವ್ಯಕ್ತಪಡಿಸಿದ್ದರು. ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಧೀಶರು ಅರ್ಜಿ ವಜಾಗೊಳಿಸಿದ್ದಾರೆ.
ಚಿನ್ನಯ್ಯ ಕೋರ್ಟ್ಗೆ ಹಾಜರು: ಬುರುಡೆ ಷಡ್ಯಂತ್ರ ಪ್ರಕರಣದ ಆರೋಪಿ ಯಾಗಿದ್ದು ಜಾಮೀನು ಪಡೆದು ಜೈಲಿನಿಂದ ಹೊರ ಬಂದಿರುವ ಚಿನ್ನಯ್ಯ ಬೆಳ್ತಂಗಡಿ ನ್ಯಾಯಾಲಯಕ್ಕೆ ಡಿ.೨೬ರಂದು ಹಾಜರಾಗಿದ್ದಾನೆ. ಮಧ್ಯಾಹ್ನ ೧೨ ಗಂಟೆಗೆ ಪತ್ನಿ ಮಲ್ಲಿಕಾ ಹಾಗೂ ವಕೀಲರ ಜತೆ ಬಾಡಿಗೆ ಆಟೋ ರಿಕ್ಷಾದಲ್ಲಿ ಬಂದ ಚಿನ್ನಯ್ಯ ಬೆಳ್ತಂಗಡಿ ನ್ಯಾಯಾಲಯಕ್ಕೆ ಆಗಮಿಸಿ ಬಳಿಕ ಬೆಳ್ತಂಗಡಿ ಎಸ್ಐಟಿ ಕಚೇರಿಗೆ ತೆರಳಿ ಸಹಿ ಹಾಕಿ ವಾಪಸ್ ಆಟೋ ರಿಕ್ಷಾದಲ್ಲಿ ತೆರಳಿದ್ದಾನೆ.
ಜಯಂತ್ ಕೈ ಸೇರಿದ ಎಸ್ಐಟಿ ವರದಿಯ ಪ್ರತಿ: ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣಕ್ಕೆ ಸಂಬಂಧಿಸಿ ಎಸ್ಐಟಿ ಅಧಿಕಾರಿಗಳು ಬೆಳ್ತಂಗಡಿ ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯ ಆಯ್ದ ಪ್ರತಿಗಳು ಹೋರಾಟಗಾರ ಜಯಂತ್ ಟಿ. ಅವರ ಕೈ ಸೇರಿದೆ. ಎಸ್ಐಟಿ ನ್ಯಾಯಾಲಯಕ್ಕೆ ಸಲ್ಲಿಸಿರುವ ೩,೯೨೩ ಪುಟಗಳ ವರದಿಯ ಪೈಕಿ ೧,೧೦೦ ಪುಟಗಳ ಪ್ರತಿಯನ್ನು ನ್ಯಾಯಾಲಯ ಜಯಂತ್ರಿಗೆ ನೀಡಿದೆ. ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿ ಎಸ್ಐಟಿ ನ.೨೦ರಂದು ನ್ಯಾಯಾಲಯಕ್ಕೆ ವರದಿ ಸಲ್ಲಿಸಿತ್ತು. ಈ ವರದಿಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಸೇರಿದಂತೆ ಆರು ಮಂದಿಯ ವಿರುದ್ಧ ಕ್ರಮ ಕೈಗೊಳ್ಳಲು ಎಸ್ಐಟಿ ಅವಕಾಶ ಕೋರಿತ್ತು. ಅಲ್ಲದೆ ಈ ವರದಿಯನ್ನು ಬಹಿರಂಗಗೊಳಿಸದಂತೆ ನ್ಯಾಯಾಲಯವನ್ನು ಎಸ್ಐಟಿ ಕೋರಿತ್ತು. ಬಳಿಕ ಎಸ್ಐಟಿ ನ್ಯಾಯಾಲಯಕ್ಕೆ ಸಲ್ಲಿಸಿದ್ದ ವರದಿಯ ಪ್ರತಿ ಪಡೆಯಲು ಜಯಂತ್ ಟಿ. ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಎಸ್ಐಟಿ ಕೋರಿಕೆಯ ಹಿನ್ನೆಲೆಯಲ್ಲಿ ನ್ಯಾಯಾಲಯ ಅದನ್ನು ನೀಡಲು ನಿರಾಕರಿಸಿತ್ತು. ಬಳಿಕ ಬೆಂಗಳೂರಿನ ಹಿರಿಯ ನ್ಯಾಯವಾದಿ ದೊರೈ ರಾಜು ಬೆಳ್ತಂಗಡಿ ನ್ಯಾಯಾಲಯಕ್ಕೆ ಆಗಮಿಸಿ ಜಯಂತ್ ಪರವಾಗಿ ವಾದ ಮಂಡಿಸಿದ್ದ ಎಸ್ಐಟಿ ವರದಿಯ ಪ್ರತಿಯನ್ನು ನೀಡುವಂತೆ ಮನವಿ ಮಾಡಿದ್ದರು. ವಾದ ಪುರಸ್ಕರಿಸಿದ್ದ ನ್ಯಾಯಾಲಯ ಎಸ್ಐಟಿ ವರದಿಯ ಪ್ರತಿ ನೀಡಲು ಸಮ್ಮತಿ ಸೂಚಿಸಿತ್ತು. ಅದರಂತೆ ಡಿ.೨೬ರಂದು ನ್ಯಾಯಾಲಯ ಜಯಂತ್ರಿಗೆ ಎಸ್ಐಟಿ ವರದಿಯ ಕೆಲ ಭಾಗಗಳನ್ನು ನೀಡಿದೆ.








